
ಬೆಂಗಳೂರಿನ ಪ್ರತಿಭೆಗಳನ್ನು ಗುರುತಿಸುವ (talent acquisition) ವಿಶೇಷಜ್ಞರಾದ ವಿದ್ಯಾನಾಯರ್ ಅವರು ತಮ್ಮ ದೈನಂದಿನ ಪಾನೀಯವಾಗಿ ಚಹಾಕ್ಕಿಂತ ಕಾಫಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು, ಪ್ರತಿದಿನ ಕನಿಷ್ಠ ಏಳು ಕಪ್ ಕಾಫಿಯನ್ನು ಸೇವಿಸುತ್ತಿದ್ದರು. ಕೊನೆಗೆ, ಅತಿಯಾದ ಕೆಫೀನ್‌ನಿಂದಾಗಿ ರಾತ್ರಿ ನಿದ್ರೆ ಮಾಡುವಲ್ಲಿ ಸಮಸ್ಯೆ ಎದುರಿಸಲಾರಂಭಿಸಿದರು. ಆದರೆ, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಒಬ್ಬ ಆಯುರ್ವೇದ ತಜ್ಞರ ಶಿಫಾರಸ್ಸಿನ ಮೇರೆಗೆ ಅವರು ಒಂದು ವಿಶೇಷ ಚಹಾ (chai latte)ವನ್ನು ತಮ್ಮ ಸಂಜೆಯ ಪಾನೀಯಕ್ಕೆ ಪರ್ಯಾಯವಾಗಿ ಕಂಡುಕೊಂಡರು. ಅಲ್ಲಿಂದ ಇಲ್ಲಿವರೆಗೆ ಅವರು ಪ್ರತಿ ಸಂಜೆ ತಮ್ಮದೇ ಆದ ವಿಶೇಷ ಚಹಾ ತಯಾರಿಸುತ್ತಿದ್ದಾರೆ
ಅಡಾಪ್ಟೋಜೆನ್‌ಗಳು ಮತ್ತು ಗಿಡಮೂಲಿಕೆಗಳ ಮಿಶ್ರಣದಿಂದ ಸಿದ್ಧಪಡಿಸುವ ಪೇಯವು, ಉತ್ತಮ ಒತ್ತಡ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. “ಇದು ದೇಹವನ್ನು ಆಹ್ಲಾದತೆಯನ್ನು ಒದಗಿಸುವ ಚಹಾ ಆಗಿದ್ದು ಸಂಜೆ ಮತ್ತು ಕೆಲವೊಮ್ಮೆ ಮಲಗುವ ಮೊದಲು ಕುಡಿಯುವುದು ಲಾಭದಾಯಕವೆನಿಸಿದೆ. ನನ್ನ ನಿದ್ರೆಯ ಗುಣಮಟ್ಟವೂ ಸುಧಾರಿಸಿದೆ ಎಂದು ನಾನು ಭಾವಿಸುತ್ತೇನೆ” ಎಂದು 40 ರ ವಯೋಮಾನದ ನಾಯರ್ ಅವರು ಹೇಳುತ್ತಾರೆ. ಅವರು ಈ ಆಯುರ್ವೇದ ಅಶ್ವಗಂಧ ಟೀ ಲ್ಯಾಟೆಯನ್ನು ಉತ್ತಮ ನಿದ್ರೆಗೆ ಮತ್ತು ಒತ್ತಡ ನಿವಾರಣೆಗೆ ಹೊಸ ಮಾರ್ಗವೆಂದು ಕರೆಯುತ್ತಾರೆ.
ಅಶ್ವಗಂಧ, ನೈಸರ್ಗಿಕ ಅಡಾಪ್ಟೋಜೆನ್
ಅಡಾಪ್ಟೋಜೆನ್‌ಗಳು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುವಂತಹ ಗಿಡಮೂಲಿಕೆಗಳ ಒಂದು ಗುಂಪಾಗಿದೆ. ಅಶ್ವಗಂಧ ಇಂತಹ ಒಂದು ಚಿಕಿತ್ಸಕ ಅಡಾಪ್ಟೋಜೆನಿಕ್ ಮೂಲಿಕೆಯಾಗಿದ್ದು ಇದನ್ನು ಜಾಗತಿಕವಾಗಿ “ಇಂಡಿಯನ್ ಗಿನ್ಸೆಂಗ್ (ದೈಹಿಕ ಮತ್ತು ಮಾನಸಿಕ ಸಹನಶೀಲತೆಯನ್ನು ಅಭಿವೃದ್ಧಿಪಡಿಸುವ ಮೂಲಿಕೆ) ಎಂದು ಕರೆಯಲಾಗುತ್ತದೆ.
“ಅಶ್ವಗಂಧವು ದೇಹದ ಕಾರ್ಟಿಸೋಲ್ (ಒತ್ತಡ ಸೃಷ್ಟಿಸುವ ಹಾರ್ಮೋನ್) ಮಟ್ಟವನ್ನುಕಡಿಮೆ ಮಾಡಲು ಸಹಾಯಮಾಡುತ್ತದೆ, ಇದರಿಂದಾಗಿ ಒತ್ತಡಕ್ಕೆ ಸ್ಪಂದನೆಯೂ ಕಡಿಮೆಯಾಗುತ್ತದೆ” ಎಂದು ಮುಂಬೈನ ಪೌಷ್ಟಿಕಾಂಶ ಸಲಹೆಗಾರರೂ ಮತ್ತು ಸಮಗ್ರ ಆರೋಗ್ಯ ತಜ್ಞರಾದ ಫೈಜಾ ಹೇಳುತ್ತಾರೆ. ಒತ್ತಡ ಪ್ರತಿರೋಧವನ್ನು ಹೆಚ್ಚಿಸುವ ಮೂಲಕ ಅಶ್ವಗಂಧ ಒತ್ತಡ ಮತ್ತು ಆತಂಕ ಹಾಗೂ ಅದರ ಪರಿಣಾಮಗಳನ್ನು ತಗ್ಗಿಸಲು ಕೂಡ ಸಹಾಯ ಮಾಡುತ್ತದೆ ಎಂಬುದನ್ನು ಸಹ ತೋರಿಸಿಕೊಟ್ಟಿದ್ದಾರೆ.
“ಅಶ್ವಗಂಧವುತನ್ನ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳಿಂದಾಗಿ ನೈಸರ್ಗಿಕ ಮನಸ್ಸು ಧೃಡವಾಗಿಸುವ ಪರಿಕರದಂತೆ (mood stabiliser) ಕಾರ್ಯ ನಿರ್ವಹಿಸುತ್ತದೆ” ಎಂದು ದೆಹಲಿಯ ಕ್ಲಿನಿಕಲ್ ಪೌಷ್ಟಿಕ ತಜ್ಞೆ ಮತ್ತು ವಿಶೇಷ ಕ್ರೀಡಾ ಪೌಷ್ಟಿಕ ತಜ್ಞೆ ರಿಧಿಮಾ ಬಾತ್ರಾ ಹೇಳುತ್ತಾರೆ.
ಉತ್ತಮ ನಿದ್ರೆಗೆ ಸಲಹೆ – ಉಗುರು ಬೆಚ್ಚಗಿನ ಹಾಲಿನಲ್ಲಿ ಅಶ್ವಗಂಧವನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಿ
ಇಷ್ಟೇ ಅಲ್ಲದೆ, ಅಶ್ವಗಂಧ ನಿದ್ರೆಯ ಗುಣಮಟ್ಟದ ಮೇಲೆ ಧನಾತ್ಮಕ ಪ್ರಭಾವ ಬೀರುವಲ್ಲಿಯೂ ಸಹಾಯಕವಾಗಬಹುದು
ಅಶ್ವಗಂಧ ಚಹಾ ತಯಾರಿಸುವ ವಿಧಾನ:
ಬೇಕಾಗುವ ಸಾಮಗ್ರಿಗಳು
- ನಿಮ್ಮ ಆಯ್ಕೆಯ ಒಂದು ಕಪ್ ಹಾಲು. ಪಾಕ ವಿಧಾನ ವಿವರಣೆಯಲ್ಲಿ ನಾವು ಬಾದಾಮಿ ಹಾಲನ್ನು ಆಯ್ಕೆ ಮಾಡಿಕೊಂಡಿದ್ದೇವೆ
- 1/2 ಚಮಚ ಪುಡಿ ಮಾಡಿದ ಅಶ್ವಗಂಧ
- 2 ಹಸಿರು ಏಲಕ್ಕಿ
- 1/2 ಚಮಚ ಪುಡಿ ಮಾಡಿದ ಚಕ್ಕೆ (ದಾಲ್ಚಿನ್ನಿ)
- 2 ಇಂಚಿನಷ್ಟು ತಾಜಾ ಶುಂಠಿ
- ಚಿಟಿಕೆ ಜಾಕಾಯಿ ಪುಡಿ
ವಿಧಾನ
5-10 ನಿಮಿಷದವರೆಗೆ ಹಾಲನ್ನು ಮಂದ ಉರಿಯಲ್ಲಿ ಬಿಸಿಮಾಡಿ. ಹಾಲು ಬಿಸಿಯಾದ ನಂತರ ಅಶ್ವಗಂಧ, ಚಕ್ಕೆ, ಏಲಕ್ಕಿ, ಶುಂಠಿ ಮತ್ತು ಜಾಕಾಯಿ ಬೆರೆಸಿ. ಒಲೆಯಿಂದ ಕೆಳಗಿಳಿಸುವ ಮುನ್ನ ಮತ್ತೆ 5 ನಿಮಿಷ ಕುದಿಸಿ. ಅಂತಿಮವಾಗಿ ಚಹಾದಲ್ಲಿ 1 ಚಮಚ ಕಂದು ಬೆಲ್ಲವನ್ನು ಬೆರೆಸಿ. ಬಿಸಿಯಾಗಿ ಚಹಾ ಕುಡಿಯಲು ನೀಡಿ.
ತಜ್ಞರ ಅನಿಸಿಕೆ
ಸಾಂಪ್ರದಾಯಿಕವಾಗಿ, ಅಶ್ವಗಂಧದ ಒಣಗಿದ ಮತ್ತು ಪುಡಿ ಮಾಡಿದ ಬೇರನ್ನು ತುಪ್ಪ ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಸಾಮಾನ್ಯ ಆರೋಗ್ಯ ರಕ್ಷಣೆಗಾಗಿ ಸೇವಿಸಲಾಗುತ್ತದೆ.
ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಮತ್ತು ರೋಗನಿರೋಧಕ ಮತ್ತು ನ್ಯೂರೋ ಎಂಡೋಕ್ರೈನ್ ವ್ಯವಸ್ಥೆಗಳ ನಡುವಿನ ಅಸಮತೋಲನವನ್ನು ಸರಿಪಡಿಸಲು ಅಶ್ವಗಂಧ ಚಹಾ ಸಹಾಯಮಾಡುತ್ತದೆ ಎಂದು ಕೇರಳದ ಆಯುರ್ವೇದ ತಜ್ಞೆ ಡಾ.ಅಹನಾ ನಂಬಿಯಾರ್ ಹೇಳುತ್ತಾರೆ.
ಅತಿಯಾದಾಗ ಅಮೃತವೂ ವಿಷವಾಗುತ್ತದೆ
ಅಶ್ವಗಂಧವನ್ನು ದಿನಕ್ಕೆ 250-500 ಮೀಲಿಗ್ರಾಂ ನಂತೆ ಸೂಕ್ತ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂದು ಡಾ ನಂಬಿಯಾರ್ ಎಚ್ಚರಿಸುತ್ತಾರೆ.
“ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು, ಹಾಗೂ ಸ್ವಯಂ ನಿರೋಧಕ ಅಸ್ವಸ್ಥತೆಗಳಿರುವವರು ಅಶ್ವಗಂಧದ ಸೇವನೆಯಿಂದ ದೂರ ಉಳಿಯಬೇಕು” ಎಂದು ಕೂಡ ಅವರು ಹೇಳುತ್ತಾರೆ.