0

0

0

ಈ ಲೇಖನದಲ್ಲಿ

Pickles Nutrition: ಉಪ್ಪಿನಕಾಯಿ ಸುವಾಸನೆ, ರುಚಿ ಜತೆಗೆ ಪೌಷ್ಟಿಕಾಂಶವೂ ಇದೆ
14

Pickles Nutrition: ಉಪ್ಪಿನಕಾಯಿ ಸುವಾಸನೆ, ರುಚಿ ಜತೆಗೆ ಪೌಷ್ಟಿಕಾಂಶವೂ ಇದೆ

ಹುದುಗುವಿಕೆಯ ಪ್ರಕ್ರಿಯೆಯಲ್ಲಿ, ಫೋಷಕಾಂಶಗಳು ಸರಳ ರೂಪಗಳಿಗೆ ವಿಘಟನೆಯಾಗಿ ಸುಲಭ ಜೀರ್ಣಕ್ರಿಯೆಗೆ ಅನುವು ಮಾಡಿಕೊಡುತ್ತದೆ.

ಉಪ್ಪಿನಕಾಯಿ: ಸುವಾಸನೆ, ರುಚಿ ಜತೆಗೆ ಪೌಷ್ಟಿಕಾಂಶವೂ ಇದೆ

ವಿಶ್ವಾದ್ಯಂತ ಒಂದು ಜನಪ್ರಿಯ ಖಾದ್ಯವಾಗಿರುವ ಉಪ್ಪಿನಕಾಯಿ  ಊಟದ ಜತೆಗೆ ಬಡಿಸಲಾಗುತ್ತದೆ. ಉಪ್ಪಿನಕಾಯಿಗಳನ್ನು ಹುಳಿ/ಆಮ್ಲೀಯ ಆಹಾರಗಳು, ಉಪ್ಪು, ಸಕ್ಕರೆ ಮತ್ತು ಮಸಾಲೆಗಳ ಸಂಯೋಜನೆಯೊಂದಿಗೆ ತಯಾರಿಸಲಾಗುತ್ತದೆ. ಇವುಗಳು ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಸೂಕ್ಷ್ಮಪೋಷಕಾಂಶಗಳಂತಹ ಅನೇಕ ಪೋಷಕಾಂಶಗಳನ್ನು ಹೊಂದಿವೆ.

ಉಪ್ಪಿನಕಾಯಿಗಳನ್ನು ಎರಡು ವಿಧಾನದಲ್ಲಿ ತಯಾರಿಸಬಹುದು, ಹುದುಗು ಬರಿಸಿದ ಉಪ್ಪಿನಕಾಯಿಗಳು ಅಥವಾ ಹುದುಗಿಸದೇ ಸಿದ್ಧಪಡಿಸಿದ ಉಪ್ಪಿನಕಾಯಿಗಳು. ಹುದುಗುಬರಿಸಿದ ಉಪ್ಪಿನಕಾಯಿಯು ಲ್ಯಾಕ್ಟಿಕ್ ಆ್ಯಸಿಡ್ ಬ್ಯಾಕ್ಟಿರಿಯಾದಿಂದಾಗಿ ನೈಸರ್ಗಿಕ ಹುದುಗುವಿಕೆಗೆ ಒಳಗಾಗುತ್ತದೆ. ಇದು ತರಕಾರಿಗಳಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸುತ್ತದೆ. ಇದರಿಂದ ಸೃಷ್ಟಿಯಾಗುವ ಆಮ್ಲೀಯ ವಾತಾವರಣವು ಉಪ್ಪಿನಕಾಯಿಯ ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರಕ್ರಿಯೆಯು ಉಪ್ಪಿನಕಾಯಿಗಳಿಗೆ ಚಪ್ಪರಿಸುವ ಸ್ವಾದವನ್ನು ನೀಡುತ್ತದೆ.

ಹುದುಗುವಿಕೆ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳು ಸರಳವಾಗಿ ವಿಘಟನೆಗೊಂಡು ಕರುಳಿನಲ್ಲಿ ಅವುಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ ಎಂದು ಪಾಂಡಿಚೇರಿಯ ಆಹಾರತಜ್ಞರಾದ ಜನನಿ ಜಿ.ವಿ. ಅವರು ಹೇಳುತ್ತಾರೆ. ಉಪ್ಪಿನಕಾಯಿಯನ್ನು ಹುದುಗುಬರಿಸದೇ ತಯಾರಿಸುವ ಪ್ರಕ್ರಿಯೆಯಲ್ಲಿ, ವಿನೆಗರ್ ಹಾಕಿದ ಉಪ್ಪುನೀರು ಬಳಸಿ ಅವುಗಳನ್ನು  ಸಂರಕ್ಷಿಸಲಾಗುತ್ತದೆ.

ಕ್ಯಾಬೇಜ್, ಮೂಲಂಗಿ, ಸಿಹಿಗೆಣಸು, ಕ್ಯಾರೆಟ್, ಬೆಳ್ಳುಳ್ಳಿ, ಈರುಳ್ಳಿ ಮತ್ತು ಶುಂಠಿ ಇತ್ಯಾದಿಗಳು ತರಕಾರಿ ಬಳಸಿ ತಯಾರಿಸಿದ ಉಪ್ಪಿನಕಾಯಿಗಳಿಗೆ ಉದಾಹರಣೆಗಳಾದರೆ, ಆಲಿವ್‌ಗಳು, ಡುರಿಯನ್ ಹಣ್ಣು, ನಿಂಬೆ, ಮಾವು, ಪೀಚ್, ಚೆರಿ ಮತ್ತು ಪ್ಲಮ್ ಮುಂತಾದವು ಹಣ್ಣುಗಳಿಂದ ತಯಾರಿಸಿದ ಉಪ್ಪಿನಕಾಯಿಗಳಿಗೆ ಉದಾಹರಣೆಗಳಾಗಿವೆ.

ಚೆನ್ನೈನ ಶಾಂತಿಗಿರಿ ಆಯುರ್ವೇದ ಮತ್ತು ಸಿದ್ಧ ಆಸ್ಪತ್ರೆಯ ಆಯುರ್ವೇದ ತಜ್ಞರಾದ ಡಾ ಕವಿತಾ ದೇವ್ ಅವರು ಉಪ್ಪಿನಕಾಯಿಗಳಿಂದ ಉಂಟಾಗುವ ಪ್ರಯೋಜನಗಳನ್ನು ವಿವರಿಸುತ್ತಾರೆ:

ಜೀರ್ಣ ಕ್ರಿಯೆ: ಉಪ್ಪಿನಕಾಯಿಯು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರೊಂದಿಗೆ, ಕರುಳಿನ ಕಾರ್ಯವನ್ನು ಉತ್ತೇಜಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

ರೋಗ ನಿರೋಧಕ ಶಕ್ತಿಗೆ ಉತ್ತೇಜನ: ಇವುಗಳು ಉತ್ತಮ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಮುಕ್ತ  ರ್‍ಯಾಡಿಕಲ್‌ಗಳ ವಿರುದ್ಧ ಕಾರ್ಯನಿರ್ವಹಿಸುತ್ತವೆ, ಮತ್ತು ದೇಹವನ್ನು ಸೋಂಕಿನಿಂದ ರಕ್ಷಿಸುತ್ತವೆ. ಇವುಗಳಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಬೆಂಬಲಿಸುತ್ತದೆ.

ಉರಿಯೂತ ನಿರೋಧಕ ಗುಣಲಕ್ಷಣಗಳು: ಅರಿಶಿನ, ಶುಂಠಿ ಅಥವಾ ಬೆಳ್ಳುಳ್ಳಿಯಿಂದ ಮಾಡಿದಂತಹ ಉಪ್ಪಿನಕಾಯಿಗಳು ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇವುಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತವೆ.

ತೂಕ ನಷ್ಟ: ಉಪ್ಪಿನಕಾಯಿಗಳು ಕಡಿಮೆ ಕ್ಯಾಲರಿಗಳು ಮತ್ತು ಕೊಬ್ಬಿನಂಶವನ್ನು ಹೊಂದಿದ್ದು, ಬಾಯಿಚಪಲವನ್ನು ಕಡಿಮೆಗೊಳಿಸಿ ದೀರ್ಘ ಅವಧಿಯ ತನಕ ಹೊಟ್ಟೆ ತುಂಬಿದಂತಹ ಅನುಭವ ನೀಡುತ್ತವೆ.

ದೋಷಗಳನ್ನು ಸಮತೋಲನಗೊಳಿಸುತ್ತದೆ: ದೇಹದಲ್ಲಿನ ಎಲ್ಲಾ ಮೂರು ವಿಧದ ದೋಷಗಳನ್ನು (ವಾತ, ಕಫ ಮತ್ತು ಪಿತ್ತ) ಸಮತೋಲನಗೊಳಿಸಲು ಉಪ್ಪಿನಕಾಯಿಯು ಸಹಕಾರಿಯಾಗಿದೆ. ಉದಾಹರಣೆಗೆ, ಹುಳಿ ಉಪ್ಪಿನಕಾಯಿಗಳು ವಾತವನ್ನು ಸಮತೋಲನಗೊಳಿಸುತ್ತದೆ, ಮಸಾಲೆಯುಕ್ತ ಉಪ್ಪಿನಕಾಯಿಗಳು ಕಫವನ್ನು ಸಮತೋಲನಗೊಳಿಸುತ್ತದೆ ಮತ್ತು ಸಿಹಿಯಾದ ಉಪ್ಪಿನಕಾಯಿಗಳು ಪಿತ್ತ ವನ್ನು ಸಮತೋಲನಗೊಳಿಸುತ್ತದೆ.

ಪ್ರೋಬಯೋಟಿಕ್‌ಗಳಂತೆ ಕಾರ್ಯನಿರ್ವಹಿಸುತ್ತವೆ

ಜನನಿ ಅವರು ಹೇಳುವಂತೆ, “ನೈಸರ್ಗಿಕ ಪದಾರ್ಥಗಳಿಂದ ಹುದುಗುಬರಿಸಿದ ಉಪ್ಪಿನಕಾಯಿಗಳು ಕರುಳಿನ ಆರೋಗ್ಯಕ್ಕೆ ನೆರವಾಗುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ”.

ಉಪ್ಪಿನಕಾಯಿ ಪ್ರಕ್ರಿಯೆಗೆ ಕಾರಣವಾಗುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ, ಅವುಗಳು ಪ್ರೊಬಯೋಟಿಕ್ ಗುಣಲಕ್ಷಣಗಳನ್ನು ಹೊಂದಿವೆ, ಹೊಟ್ಟೆಯಲ್ಲಿ ಸೋಂಕು ಉಂಟಾಗದಂತೆ ತಡೆಗಟ್ಟುತ್ತದೆ, ಮೂತ್ರಾಂಗ ಮತ್ತು ಜನನೇಂದ್ರಿಯಕ್ಕೆ ಸಂಬಂಧಿಸಿದ ಸೋಂಕನ್ನು ತಡೆಗಟ್ಟುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುತ್ತದೆ ಎಂದು  2020 ರಲ್ಲಿ ಜರ್ನಲ್ ಆಫ್ ಫಂಕ್ಷನಲ್ ಫುಡ್ಸ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ.

ಮಿತಿಯಲ್ಲಿ ಸೇವಿಸುವುದು ಮುಖ್ಯ

ಉಪ್ಪಿನಕಾಯಿಗಳು ಊಟದೊಂದಿಗೆ ಸವಿಯಲು ರುಚಿಕರವಾದರೂ, ಅವುಗಳ ಅಡ್ಡಪರಿಣಾಮಗಳಿಂದ ದೂರವಿರಲು ಅವುಗಳನ್ನು ಒಂದು ಮಿತಿಯಲ್ಲಿ ಸೇವಿಸಬೇಕು. ಅದಕ್ಕಾಗಿ ಡಾ ದೇವ್ ಅವರು ಈ ಕೆಳಗಿನ ಮಾರ್ಗಸೂಚಿಗಳನ್ನು ನೀಡಿದ್ದಾರೆ:

ಇವುಗಳು ಅಧಿಕ ಉಪ್ಪನ್ನು ಹೊಂದಿರುತ್ತವೆ ಮತ್ತು ಅಧಿಕ ಉಪ್ಪಿನ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಬಹುದು. ಆದ್ದರಿಂದ ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಮಿತಿಯೊಳಗೆ ಸೇವನೆ ಮಾಡಬೇಕು.

ಪಿತ್ತ ದೋಷವು ದೇಹದ ಉಷ್ಣಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ, ಪಿತ್ತ ದೋಷ ಉಳ್ಳವರು ಹುಳಿ ಮತ್ತು ಅಧಿಕ ಉಪ್ಪು ಹೊಂದಿರುವ ಉಪ್ಪಿನಕಾಯಿಗಳ ಸೇವನೆಯನ್ನು ಮಿತೆಗೊಳಿಸಬೇಕು. ಇಲ್ಲದಿದ್ದರೆ, ಆಮ್ಲೀಯತೆ, ಎದೆಯುರಿ ಮತ್ತು ಉರಿಯೂತದಂತಹ ಸಮಸ್ಯೆಗಳು ಉಂಟಾಗಬಹುದು.

ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿರುವವರು (ಹೊಟ್ಟೆಯ ಪದರದ ಉರಿಯೂತ), ಹುಣ್ಣು ಅಥವಾ ಇರಿಟೇಬಲ್ ಬವೆಲ್ ಸಿಂಡ್ರೋಮ್ (ಐಬಿಎಸ್) ಉಪ್ಪಿನಕಾಯಿ ಸೇವನೆಯನ್ನು ಮಿತಿಗೊಳಿಸಬೇಕು. ಕ್ರಮೇಣ ಇದು ಹೊಟ್ಟೆಯ ಕಿರಿಕಿರಿ, ಹೊಟ್ಟೆಯುಬ್ಬರ, ಹೊಟ್ಟೆಯ ಆಮ್ಲದ ರಿಫ್ಲಕ್ಸ್, ಅಥವಾ ಅನಿಲಗಳ ರಚನೆಗೆ ಕಾರಣವಾಗುತ್ತದೆ. ಇದರೊಂದಿಗೆ ಹುದುಗು ಬರಿಸಿದ ಆಹಾರವನ್ನು ಅಧಿಕವಾಗಿ ಸೇವಿಸಿದರೆ,ಹೊಟ್ಟೆಯಲ್ಲಿನ ಜೀವಿಗಳ ಅಸಮತೋಲನಕ್ಕೆ ಕಾರಣವಾಗಬಹುದು.

ಕೆಲವರಿಗೆ , ಅಧಿಕ ಉಪ್ಪಿನಕಾಯಿ ಸೇವನೆಯಿಂದ ಚರ್ಮದಲ್ಲಿ ಕಿರಿಕಿರಿ ಉಂಟಾಗಬಹುದು.

ಅಧಿಕ ಉಪ್ಪಿನಂಶವು ವಿಶೇಷವಾಗಿ ಮೂತ್ರಪಿಂಡದ ಸಮಸ್ಯೆ ಉಳ್ಳವರಲ್ಲಿ ಮೂತ್ರಪಿಂಡದ ಕಾರ್ಯವನ್ನು ಹದಗೆಡಿಸಬಹುದು.

ಗಮನಿಸಬೇಕಾದ ವಿಷಯಗಳು 

ನೈಸರ್ಗಿಕ ಪದಾರ್ಥಗಳಿಂದ ಮಾಡಿದಂತಹ ವಿನೆಗರ್ ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಆದರೂ, ಮಧುಮೇಹ ಹೊಂದಿದವರು ಇದನ್ನು ಮಿತಿಯಲ್ಲಿ ಸೇವಿಸಬೇಕು” ಎಂದು ಜನನಿ ಹೇಳುತ್ತಾರೆ.

ಉಪ್ಪಿನಕಾಯಿಯನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂದು ವಿವರಿಸುತ್ತಾ, ಇವುಗಳ ಸೇವನೆಯನ್ನು ದಿನಕ್ಕೆ ಎರಡುಬಾರಿ ಮಾತ್ರವೇ ಮಾಡಬೇಕು ಎನ್ನುತ್ತಾರೆ ಡಾ ಜನನಿಯವರು. ನಿರಂತರವಾಗಿ ಉಪ್ಪಿನಕಾಯಿಯನ್ನು ತಿನ್ನುವ ಬಯಕೆಯು  ದೇಹವು ನಿರ್ಜಲೀಕೃತವಾಗಿರುವುದರ ಅಥವಾ ಅಡ್ರಿನಲ್ ಕೊರತೆಯ ಸಮಸ್ಯೆಯನ್ನು  ಸೂಚಿಸುತ್ತಿರಬಹುದು(ಅಡ್ರಿನಲ್ ಗ್ರಂಥಿಯಿಂದ ಹಾರ್ಮೋನುಗಳ ಉತ್ಪತ್ತಿ ಕುಂಠಿತವಾಗುವುದು). ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಿ.

ಉಪ್ಪಿನಕಾಯಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಲ್ಲಿರುವಂತಹ ಅಧಿಕ ಉಪ್ಪಿನ ಅಂಶವು ಬಾಯಾರಿಕೆ ಮತ್ತು ನಿರ್ಜಲೀಕರಣವನ್ನು ಹೆಚ್ಚಿಸಬಹುದು.

ಗರ್ಭಿಣಿಯರ ಬಯಕೆಗಳು

ಗರ್ಭಿಣಿ ಮಹಿಳೆಯರಿಗೆ ಉಪ್ಪಿನಕಾಯಿಗಳನ್ನು ತಿನ್ನುವ ಬಯಕೆ ಉಂಟಾಗಬಹುದು ಮತ್ತು ಇದಕ್ಕೆ ಕಾರಣವೂ ಇದೆ. ಇದರಲ್ಲಿರುವ ಆಮ್ಲೀಯ ಅಂಶ ಮತ್ತು ಉಪ್ಪಿನ ರುಚಿಯು ಗರ್ಭಧಾರಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಕಂಡುಬರುವ ವಾಕರಿಕೆ ಮತ್ತು ವಾಂತಿಯನ್ನು ನಿವಾರಿಸಲು ನೆರವಾಗುತ್ತದೆ ಎಂದು ಡಾ ದೇವ್ ಅವರು ಹೇಳುತ್ತಾರೆ.

ಅಲ್ಲದೇ, ಗರ್ಭಧಾರಣೆಯಲ್ಲಿ ಹುಳಿ ತಿನ್ನಬಯಸುವ ಮಹಿಳೆಯರು ಹುಳಿ ರುಚಿಯ ಉಪ್ಪಿನಕಾಯಿಗಳನ್ನು ಸೇವಿಸಿ ಸಂತೃಪ್ತರಾಗಬಹುದು ಎಂದು ಅವರು ಹೇಳುತ್ತಾರೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಉಪ್ಪಿನಕಾಯಿ ತಿನ್ನುವ ಬಯಕೆ ಉಂಟಾಗುವುದಿಲ್ಲ. ಗರ್ಭಾವಸ್ಥೆಯ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಯು ಉಪ್ಪಿನಕಾಯಿ ತಿನ್ನುವ ಬಯಕೆಗೆ ಕಾರಣವಾಗಬಹುದು.

ಶೇಖರಣೆ 

ಇದನ್ನು ಶುದ್ಧವಾದ ಮತ್ತು ಗಾಳಿಯಾಡದ ಭರಣಿಯಲ್ಲಿ ಶೇಖರಿಸಿ ಇಡುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಫುಡ್ ಆಂಡ್ ಎಗ್ರಿಕಲ್ಚರ್ ಆರ್ಗನೈಸೇಶನ್ ಆಫ್ ದಿ ಯುನೈಟಡ್ ನೇಷನ್ಸ್‌ ಪ್ರಕಾರ, ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾದಿಂದ ಹುದುಗು ಬರಿಸಿದ ಉಪ್ಪಿನಕಾಯಿಗಳು ಆಹಾರ ವಿಷ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

3 + eleven =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ