ಸ್ತನದಲ್ಲಿನ ಗೆಡ್ಡೆಯು ಕ್ಯಾನ್ಸರ್‌ನ ಭೀತಿಗೆ ಕಾರಣವಾಗುತ್ತದೆ. ಆದರೆ ಎಲ್ಲಾ ಗೆಡ್ಡೆಗಳು ಕ್ಯಾನ್ಸರ್ ಗೆಡ್ಡೆಗಳಾಗಿರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಸ್ತನದ ಸ್ವಯಂ ಪರೀಕ್ಷೆ ಅಥವಾ ಸ್ತನ ಕ್ಯಾನ್ಸರ್‌ನ ಆರಂಭಿಕ ಸ್ಕ್ರೀನಿಂಗ್ ಪ್ರಾರಂಭದಲ್ಲೇ ರೋಗನಿರ್ಣಯ ಮಾಡುವಲ್ಲಿ ನೆರವಾಗುತ್ತದೆ.
2018ರಲ್ಲಿ, ಬೆಂಗಳೂರಿನ ವೀಣಾ ಎಂ ಎಂಬವರಿಗೆ ತಮ್ಮ 30ರ ದಶಕದ ಕೊನೆಯಲ್ಲಿ ಸ್ತನದಲ್ಲಿ ನೋವಿನ ಅನುಭವ ಉಂಟಾಯಿತು. “ವೈದ್ಯರಲ್ಲಿಗೆ ಹೋದಾಗ ಅವರು ಸ್ತನದ ಸ್ವಯಂ ಪರೀಕ್ಷೆ ಮಾಡುವಂತೆ ತಿಳಿಸಿದರು, ನನ್ನ ಸ್ತನಗಳಲ್ಲಿ ಅನೇಕ ದ್ರವ ತುಂಬಿದ ಸ್ತನದ ಸಿಸ್ಟ್‌ಗಳು ಇದ್ದವು, ಬಲ ಸ್ತನದಲ್ಲಿ ನಾಲ್ಕು ಮತ್ತು ಎಡ ಸ್ತನದಲ್ಲಿ 12 ಸಿಸ್ಟ್‌ಗಳು ಇದ್ದವು. ಇದು ಕ್ಯಾನ್ಸರ್ ಇರಬಹುದೆಂದು ತಿಳಿದು ನಾನು ಭಯಪಟ್ಟೆ,” ಎಂದು ಪ್ರಸ್ತುತ 43 ವರ್ಷ ಪ್ರಾಯದ ವೀಣಾ ಅವರು ಹ್ಯಾಪಿಯಸ್ಟ್ ಹೆಲ್ತ್‌ಗೆ ಹೇಳಿದರು.
ಆಕೆಯನ್ನು ಆಂಕೋಲಾಜಿಸ್ಟ್ ಭೇಟಿಗೆ ನಿರ್ದೇಶಿಸಲಾಯಿತು ಮತ್ತು ಅಲ್ಲಿ ಅವರು ಮ್ಯಾಮೋಗ್ರಾಂ ಮತ್ತು ಸಂಪೂರ್ಣ ತಪಾಸಣೆಗೆ ಒಳಗಾಗಲು ಸೂಚಿಸಲಾಯಿತು. ತಮ್ಮ ಎರಡೂ ಸ್ತನಗಳಲ್ಲಿ ಇರುವುದು ಕ್ಯಾನ್ಸರೇತರ ದ್ರವ ತುಂಬಿದ ಸಿಸ್ಟ್‌ಗಳು ಎಂದು ತಿಳಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಸ್ತನದ ಸಿಸ್ಟ್‌ಗಳೆಂದರೆ, ಒಂದು ವಿಧದ ಗೆಡ್ಡೆಗಳಾಗಿದ್ದು, ಇವುಗಳು ಕ್ಯಾನ್ಸೇರತರ ಗೆಡ್ಡೆಗಳಾಗಿವೆ ಎಂದು ಬೆಂಗಳೂರಿನ ಸಾಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಸ್ತನ ಆಂಕೋ ಶಸ್ತ್ರಚಿಕಿತ್ಸೆ ಮತ್ತು ಬಾರಿಯಾಟಿಕ್ ಶಸ್ತ್ರಚಿಕಿತ್ಸೆಯ ಸರ್ಜಿಕಲ್ ಆಂಕೋಲಾಜಿಸ್ಟ್ ಆಗಿರುವ ಡಾ ನಂದಾ ರಜನೀಶ್ ಅವರು ಹೇಳುತ್ತಾರೆ.
ಕ್ಯಾನ್ಸರೇತರ ಗೆಡ್ಡೆಗಳು ಸ್ತನದಲ್ಲಿದ್ದರೆ ರೋಗನಿರ್ಣಯ
ವ್ಯಕ್ತಿಯು ಸ್ತನದಲ್ಲಿ ಗೆಡ್ಡೆಗಳೊಂದಿಗೆ ಬಂದಿದ್ದರೆ, ತ್ರಿವಳಿ ಪರೀಕ್ಷೆ ಎಂದು ಕರೆಯಲಾಗುವ ಪ್ರೋಟೋಕಾಲ್ ಒಂದನ್ನು ಅನುಸರಿಸಲಾಗುತ್ತದೆ. ಮೊದಲನೇ ಹಂತದಲ್ಲಿ ಸ್ತನದ ವೈದ್ಯಕೀಯ ಪರೀಕ್ಷೆ ಮತ್ತು ಇದರ ನಂತರ ಇಮೇಜಿಂಗ್ ಮಾಡಲಾಗುತ್ತದೆ. “40 ವರ್ಷದ ಒಳಗಿನ ಮಹಿಳೆಯರಿಗೆ ಅಲ್ಟ್ರಾಸೌಂಡ್ ಮಾಡಲಾಗುತ್ತದೆ, ಹಾಗೆಯೇ 40 ವರ್ಷದ ಮೇಲಿನ ಮಹಿಳೆಯರಿಗೆ ಮ್ಯಾಮೋಗ್ರಾಂ ಮತ್ತು ಅಲ್ಟ್ರಾಸೌಂಡ್ ಎರಡನ್ನೂ ನಡೆಸಲಾಗುತ್ತದೆ. ಯಾವುದೇ ರೀತಿಯ ಅಸಹಜತೆ ಅಥವಾ ವಿಚಲನ ಕಂಡುಬಂದಲ್ಲಿ, ಗೆಡ್ಡೆಯ ವಿಧವನ್ನು ತಿಳಿಯಲು ಮತ್ತು ಮುಂದಿನ ರೋಗನಿರ್ಣಯಕ್ಕಾಗಿ ಅಂಗಾಂಶ ಬಯಾಪ್ಸಿಯನ್ನು ನಡೆಸಲಾಗುತ್ತದೆ” ಎಂದು ಬೆಂಗಳೂರಿನ ಸೈಟೆಕೇರ್ ಹಾಸ್ಪಿಟಲ್‌ನ ಹಿರಿಯ ಸಮಾಲೋಚಕರು ಮತ್ತು ಸ್ತನ ಆಂಕೋಲಾಜಿಯ ನಿರ್ದೇಶಕರಾಗಿರುವ ಡಾ ಪೂವಮ್ಮ ಅವರು ಹೇಳುತ್ತಾರೆ.
ಕ್ಯಾನ್ಸರೇತರ ಗೆಡ್ಡೆಗಳು ಸ್ತನ ಕ್ಯಾನ್ಸರ್‌ಗಿಂತ ಹೇಗೆ ಭಿನ್ನವಾಗಿರುತ್ತವೆ?
ಡಾ. ರಜನೀಶ್ ಅವರು ಹೇಳುವ ಪ್ರಕಾರ, 50 ವರ್ಷದ ಒಳಗಿನ ಋತುಮತಿಯಾಗುವ ಮಹಿಳೆಯರಲ್ಲಿ ಕ್ಯಾನ್ಸರೇತರ ಗೆಡ್ಡೆಗಳು ಅತಿ ಸಾಮಾನ್ಯ. ಅವುಗಳು ಚಲಿಸುತ್ತವೆ, ಆದರೆ ಕ್ಯಾನ್ಸರ್ ಗೆಡ್ಡೆಗಳು ಸ್ತನದಲ್ಲಿ ಒಂದೇ ಸ್ಥಳಕ್ಕೆ ಅಂಟಿಕೊಂಡಿರುತ್ತವೆ. ಇದನ್ನು ವೈದ್ಯರು ಸುಲಭವಾಗಿ ಗುರುತಿಸಬಲ್ಲರು ಮತ್ತು ಕ್ಯಾನ್ಸರ್ ಮತ್ತು ಕ್ಯಾನ್ಸರೇತರ ಗೆಡ್ಡೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಂಗಾಂಶ ಬಯಾಪ್ಸಿಯನ್ನು ನಡೆಸಲಾಗುತ್ತದೆ.
“ಕ್ಯಾನ್ಸರೇತರ ಗೆಡ್ಡೆಗಳು ಕಿರಿಕಿರಿ ಉಂಟುಮಾಡುತ್ತಿರುತ್ತವೆ ಆದರೆ ಅವುಗಳು ಸ್ತನ ಕ್ಯಾನ್ಸರ್‌ನಂತಹ ತೀವ್ರ ಸಂಕೀರ್ಣತೆಗಳಿಗೆ ಕಾರಣವಾಗುವುದಿಲ್ಲ. ಹೆಚ್ಚಿನವು ಸೌಮ್ಯವಾಗಿ ಇರುತ್ತವೆ ಮತ್ತು ಇವುಗಳಿಗೆ ಚಿಕಿತ್ಸೆ ನೀಡಬಹುದು”, ಎಂದು ಡಾ ಪೂವಮ್ಮ ಅವರು ಹೇಳುತ್ತಾರೆ.
ಸಾಮಾನ್ಯವಾಗಿ ಜನರು ಸ್ತನ ನೋವು(ಮಾಸ್ಟಾಲ್ಜಿಯಾ) ಮತ್ತು ಸ್ತನ ಕ್ಯಾನ್ಸರ್ ನಡುವೆ ಜನರು ಗೊಂದಲಕ್ಕೊಳಗಾಗಿ ನೋವಿನಿಂದ ಕೂಡಿದ ಗೆಡ್ಡೆಯ ಬಗ್ಗೆ ಮಾತನಾಡಲು ವೈದ್ಯರನ್ನು ಭೇಟಿ ಮಾಡುತ್ತಾರೆ, ಮಸ್ಟಾಲ್ಜಿಯಾ ಎಂಬುದು ಮಹಿಳೆಯರು ತಮ್ಮ ಋತುಚಕ್ರದ ಸಂದರ್ಭದಲ್ಲಿ ಅನುಭವಿಸುವ ಸ್ತನದ ನೋವಿನ ಸಾಮಾನ್ಯ ಸ್ಥಿತಿಯಾಗಿದೆ ಎಂದು ಡಾ ರಜನೀಶ್ ಹೇಳುತ್ತಾರೆ,.
ಆದರೂ, ಹೆಚ್ಚಿನ ಕ್ಯಾನ್ಸರ್‌ಯುಕ್ತ ಗೆಡ್ಡೆಗಳು ನೋವುರಹಿತವಾಗಿರುತ್ತವೆ ಮತ್ತು ರೋಗನಿರ್ಣಯವನ್ನು ವಿಳಂಬಗೊಳಿಸುತ್ತದೆ. ಸ್ತನದಲ್ಲಿ ಯಾವುದೇ ಅಸಜದ ಬೆಳವಣಿಗೆಯಿದ್ದ ಸಂದರ್ಭದಲ್ಲಿ ನೋವು ಉಂಟಾಗುವ ತನಕ ಕಾಯಬಾರದು ಎಂದು ವೈದ್ಯರು ಹೇಳುತ್ತಾರೆ.
ಸ್ತನದಲ್ಲಿ ಕ್ಯಾನ್ಸರೇತರ ಗೆಡ್ಡೆಗಳು ಉಂಟಾಗಲು ಕಾರಣವೇನು?
“ಗೆಡ್ಡೆಗಳು ಸ್ತನದ ಬೆಳವಣಿಗೆಯ ಒಂದು ಭಾಗವಾಗಿದೆ, ಸ್ತನಗಳು ಸ್ಥಿರವಾಗಿರುವುದಿಲ್ಲ ಮತ್ತು ಪ್ರತಿ ತಿಂಗಳು ಅವುಗಳು ಬೆಳವಣಿಗೆಯಾಗುತ್ತವೆ, ಇದನ್ನು ನಾವು ಅಸಹಜ ಎಂದು ಹೇಳುವುದಿಲ್ಲ ಬದಲಾಗಿ ಸಹಜ ಬೆಳವಣಿಗೆಯಲ್ಲಿ ವಿಚಲನ ಎನ್ನುತ್ತೇವೆ,” ಎಂದು ಡಾ ಪೂವಮ್ಮ ಅವರು ಹೇಳುತ್ತಾರೆ.
ಸ್ತನದಲ್ಲಿನ ಗೆಡ್ಡೆಗಳ ವಿಧಗಳು
ಸ್ತನದಲ್ಲಿನ ಗೆಡ್ಡೆಗಳು ವಿವಿಧ ಪ್ರಕಾರದ್ದಾಗಿರುತ್ತವೆ, ಅವುಗಳೆಂದರೆ ಕ್ಯಾನ್ಸರೇತರ, ಕ್ಯಾನ್ಸರ್ ಪೂರ್ವ ಮತ್ತು ಕ್ಯಾನ್ಸರ್‌ಯುಕ್ತ ಗೆಡ್ಡೆಗಳು ಎಂದು ಚೆನ್ನೈನ MGM ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಸಮಾಲೋಚಕರು, ಸ್ತನ ತಜ್ಞರು ಆಗಿರುವ ಡಾ ಕೃತಿ ಕ್ಯಾಥರಿನ್ ಕಬೀರ್ ಅವರು ಹೇಳುತ್ತಾರೆ.
- ಫೈಬ್ರೋಡೆನೋಮಾ – ಮಹಿಳೆಯರಲ್ಲಿ ಕಾಣಬಹುದಾದ ಅತ್ಯಂತ ಸಾಮಾನ್ಯ ಪ್ರಕಾರದ ಗೆಡ್ಡೆಗಳು, ಸಿಸ್ಟ್‌ಗಳ ಜೊತೆಗೆ ಇರುತ್ತವೆ. ಇವುಗಳು ಸೌಮ್ಯ ಮತ್ತು ಕ್ಯಾನ್ಸರೇತರ ಗೆಡ್ಡೆಗಳಾಗಿದ್ದು ಗ್ಲಾಂಡ್ಯುಲಾರ್, ಸ್ಟ್ರೋಮಲ್ ಅಥವಾ ಎಪಿಥೀಲಿಯಲ್ ಕೋಶಗಳಿಂದ ಮಾಡಲ್ಪಟ್ಟಿರುತ್ತವೆ.
- ಸಿಸ್ಟ್‌ಗಳು– ಸಿಸ್ಟ್‌ಗಳು ದ್ರವಭರಿತ ಗೆಡ್ಡೆಗಳಾಗಿದ್ದು, ಇವುಗಳು ವಿವಿಧ ಗಾತ್ರಗಳಲ್ಲಿ ಇರಬಹುದು. ಅವುಗಳು ಕ್ಯಾನ್ಸರೇತರ ಮತ್ತು ಅವುಗಳ ಗಾತ್ರವನ್ನು ಆಧರಿಸಿ ವೈದ್ಯರು ದ್ರವವನ್ನು ಸೂಜಿಯ ಮೂಲಕ ತೆಗೆಯಬೇಕೆ ಅಥವಾ ಉಳಿಸಬೇಕೆ ಎಂಬುದನ್ನು ನಿರ್ಧರಿಸುತ್ತಾರೆ.
- ಉರಿಯೂತದ/ಸೋಂಕುಯುಕ್ತ ಸಿಸ್ಟ್‌ಗಳು – ಕೆಲವೊಮ್ಮೆ ಸೋಂಕುಗಳು ಅಥವಾ ಸ್ವಯಂ ಪ್ರತಿರೋಧ ಸ್ಥಿತಿಗಳು ಕೂಡಾ ಸ್ತನಗಳಲ್ಲಿ ಗೆಡ್ಡೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದು.
- ಫಿಲ್ಲೋಡ್ಸ್ ಗೆಡ್ಡೆ –ಫಿಲ್ಲಾಯ್ಡ್ ಗೆಡ್ಡೆಗಳು ಅಪುರೂಪದ ಸೌಮ್ಯ ಗೆಡ್ಡೆಗಳಾಗಿದ್ದು ಸ್ತನದ ಸಂಯೋಜಕ ಅಂಗಾಂಶದಲ್ಲಿ ರೂಪುಗೊಳ್ಳುತ್ತವೆ. ಇವುಗಳು ಇತರ ಪ್ರದೇಶಗಳಿಗೂ ಹರಡಬಹುದು. ಈ ಗೆಡ್ಡೆಗಳ ಸಣ್ಣ ಭಾಗವು ಕ್ಯಾನ್ಸರ್ ಆಗಬಹುದು.
- ಕ್ಯಾನ್ಸರ್‌ಪೂರ್ವ ಗೆಡ್ಡೆಗಳು – ಇವುಗಳು ಅಸಹಜ ಕೋಶಗಳ ಗೆಡ್ಡೆಗಳಾಗಿದ್ದು, ಸ್ತನದಲ್ಲಿ ಮಾತ್ರವೇ ಇರುತ್ತವೆ. ಇವು ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಬಹುದಾದ್ದರಿಂದ ಇವುಗಳನ್ನು ತೆಗೆದುಹಾಕಲು ಸೂಚಿಸಲಾಗುತ್ತದೆ.
ಅಡೆನೋಸಿಸ್ ಅಥವಾ ಮ್ಯಾಮರಿ ಡಕ್ಟ್ ಎಕ್ಟೇಸಿಯಾ ಎಂಬುದು ಇನ್ನೊಂದು ವಿಧದ ಸ್ತನದ ಗೆಡ್ಡೆಯಾಗಿದ್ದು, ಇದು ಹಾನಿಕಾರಕವಾಗಿರುವುದಿಲ್ಲ, ಯುವತಿಯರಲ್ಲಿ ಅಡೆನೋಸಿಸ್ ಅಭಿವೃದ್ಧಿಯಾದರೆ, ಹಾಲು ಉತ್ಪಾದಿಸುವ ಗ್ರಂಥಿಗಳ ಮೇಲೆ ಪರಿಣಾಮ ಬೀರಿ ಅವುಗಳು ದೊಡ್ಡದಾಗುತ್ತವೆ ಎಂದು ಡಾ.ರಜನೀಶ್ ಅವರು ಹೇಳುತ್ತಾರೆ. “ಸ್ತನಕ್ಕೆ ಉಂಟಾಗುವ ಆಕಸ್ಮಿಕ ಹಾನಿಯು ಫ್ಯಾಟ್ ನೆಕ್ರೋಸಿಸ್ ಎಂಬ ಕ್ಯಾನ್ಸರ್ ಅಲ್ಲದ ಗೆಡ್ಡೆಯ ರಚನೆಗೆ ಕಾರಣವಾಗಬಹುದು,” ಎಂದು ಡಾ ರಜನೀಶ್ ಹೇಳುತ್ತಾರೆ.
ಸ್ತನದಲ್ಲಿನ ಕ್ಯಾನ್ಸರೇತರ ಗೆಡ್ಡೆಗಳಿಗೆ ಚಿಕಿತ್ಸೆ
“ಸಣ್ಣ ಗಾತ್ರದ ಗೆಡ್ಡೆಗಳು ದೇಹಕ್ಕೆ ತೊಂದರೆ ಉಂಟುಮಾಡುವುದಿಲ್ಲ, ಆದರೆ 4 ಸೆಂಮೀ ಮೇಲಿನ ಗೆಡ್ಡೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗುತ್ತದೆ” ಎಂದು ಡಾ ಕಬೀರ್ ಹೇಳುತ್ತಾರೆ.
“ನೀರು ತುಂಬಿದ ಸಿಸ್ಟ್‌ಗಳಲ್ಲಿ, ಸಣ್ಣ ಗಾತ್ರದವುಗಳಿಂದ ಯಾವ ತೊಂದರೆ ಉಂಟಾಗುವುದಿಲ್ಲ. ದೊಡ್ಡ ಸಿಸ್ಟ್‌ಗಳಲ್ಲಿನ ದ್ರವವನ್ನು ಸೂಜಿಯ ಮೂಲಕ ತೆಗೆಯಲಾಗುತ್ತದೆ. ಸೋಂಕುಯುಕ್ತ ಅಥವಾ ಉರಿಯೂತದಂತಹ ಗೆಡ್ಡೆಗಳಿಗೆ ಔಷಧಿಯನ್ನು ನೀಡಲಾಗುತ್ತದೆ” ಎಂದು ಅವರು ವಿವರಿಸುತ್ತಾರೆ.
ಈ ಗೆಡ್ಡೆಗಳು ಕ್ಯಾನ್ಸರ್ ಆಗಿ ಬದಲಾಗಬಹುದೇ?
“ಫೈಬ್ರೋಡೆನೋಮಾ ಮತ್ತು ಸಿಸ್ಟ್‌ಗಳು ಕ್ಯಾನ್ಸರೇತರ ಗೆಡ್ಡೆಗಳಾಗಿವೆ. ಆದರೆ ಪ್ಯಾಪಿಲರಿ ಗೆಡ್ಡೆಗಳಂತಹ ಕ್ಯಾನ್ಸರ್ ಪೂರ್ವ ಗೆಡ್ಡೆಗಳು ಕ್ಯಾನ್ಸರ್ ಆಗಿ ಬದಲಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸ್ತನದಲ್ಲಿರುವ ಯಾವುದೇ ರೀತಿಯ ಗೆಡ್ಡೆಗಳನ್ನು ನಿರ್ಲಕ್ಷಿಸುವುದು ಮುಖ್ಯ” ಎಂದು ಡಾ ಕಬೀರ್ ಎಚ್ಚರಿಸುತ್ತಾರೆ.
ವೈದ್ಯರನ್ನು ಯಾವಾಗ ಭೇಟಿಯಾಗಬೇಕು?
“ಗೆಡ್ಡೆಗಳು ಉಂಟಾಗುವುದನ್ನು ತಡೆಗಟ್ಟಲಾಗದು, ಆದರೆ ಆರಂಭಿಕ ಹಂತದಲ್ಲಿ ಪತ್ತೆಯಾದಾಗ ಇದನ್ನು ಪರಿಹರಿಸಿಕೊಳ್ಳಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿ ಸ್ಕ್ರೀನಿಂಗ್ ಮಾಡುವುದರಿಂದ ಗೆಡ್ಡೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ನೆರವಾಗುತ್ತದೆ. ಸ್ವಯಂ-ಸ್ತನ ಪರೀಕ್ಷೆ ಬಗೆಗಿನ ಜಾಗೃತಿಯು ಮೊದಲ ಹಂತ. ಮಹಿಳೆಯರು ತಮ್ಮ ಋತುಚಕ್ರದ ಮೂರರಿಂದ ಐದು ದಿನಗಳ ನಂತರ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. ಯಾವುದೇ ಅಸಹಜತೆ ಕಂಡುಬಂದಲ್ಲಿ ವೈದ್ಯರನ್ನು ಭೇಟಿಮಾಡಿ ಪರೀಕ್ಷಿಸಿಕೊಳ್ಳಬೇಕು” ಎಂದು ಡಾ ಕಬೀರ್ ಹೇಳುತ್ತಾರೆ.
ಸಾರಾಂಶ
ಸ್ತನದ ಗೆಡ್ಡೆಗಳು ಕ್ಯಾನ್ಸರೇತರವೂ ಆಗಿರಬಹುದು. ಪರೀಕ್ಷೆ ನಡೆಸಿದ ನಂತರದ ರೋಗನಿರ್ಣಯವು ಗೆಡ್ಡೆಯು ಹಾನಿಕಾರಕವಲ್ಲದ್ದೇ ಅಥವಾ ಮಾರಣಾಂತಿಕವೇ ಎಂಬುದನ್ನು ಸಾಬೀತುಪಡಿಸುತ್ತದೆ. ಸ್ತನದಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಅದನ್ನು ಕಡೆಗಣಿಸಬಹುದು ಮತ್ತು ಸ್ವಯಂ ಸ್ತನ ಪರೀಕ್ಷೆಯು ಆರಂಭಿಕ ರೋಗನಿರ್ಣಯಕ್ಕೆ ನೆರವಾಗುತ್ತದೆ. 40 ವರ್ಷದ ನಂತರ ವರ್ಷಕ್ಕೊಂದು ಬಾರಿ ಮ್ಯಾಮೋಗ್ರ್ಯಾಫಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.