ಟ್ರಾನ್ಸ್ ಫ್ಯಾಟ್ ಭರಿತ ಆಹಾರ ಹೃದ್ರೋಗ ಕಾರಕ ಎನ್ನುವುದು ನಿಮಗೆ ಗೊತ್ತೇ? ಬ್ರ್ಯಾಂಡೆಡ್ ಆಲೂಗಡ್ಡೆ ಚಿಪ್ಸ್ ಪ್ಯಾಕ್ ಅನ್ನು ತೆರೆಯುವ ಮೊದಲು ಮೂರು ಬಾರಿ ಯೋಚಿಸಿ, ಟ್ರಾನ್ಸ್ ಫ್ಯಾಟ್ ತುಂಬಿ ಪ್ಯಾಕ್ ಮಾಡಿದ ಆಹಾರವು ಗಂಭೀರ ಹೃದಯದ ಆರೋಗ್ಯ ಸಮಸ್ಯೆಗಳಿಗೆ ಹೇಗೆ ಕಾರಣವಾಗಬಹುದು ಎಂಬ ಇನ್ನೊಂದು ಬಹಿರಂಗಗೊಂಡ ಸಂಗತಿಯಲ್ಲಿ, ಹೆಚ್ಚುವರಿ ಟ್ರಾನ್ಸ್ ಫ್ಯಾಟ್ ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಪ್ರತಿ ವರ್ಷ ಕನಿಷ್ಠ 5.4 ಲಕ್ಷ ಜನರು ಸಾಯುತ್ತಾರೆ ಎಂದು ಭಾರತ ಸರ್ಕಾರವು ಸಂಸತ್ತಿನಲ್ಲಿ ಪ್ರಕಟಿಸಿದೆ. ದೇಶದಲ್ಲಿ 4.6% ಪರಿಧಮನಿಯ ಹೃದಯ ಕಾಯಿಲೆಯ ಸಾವುಗಳು ಟ್ರಾನ್ಸ್ ಫ್ಯಾಟ್ ಸೇವನೆಗೆ ಸಂಬಂಧಿಸಿರಬಹುದು ಎಂದು ಟ್ರಾನ್ಸ್–ಫ್ಯಾಟ್ ಆಹಾರ ಹೊಂದಿರುವ ಅಪಾಯಗಳ ಕುರಿತಾದ ಪ್ರಶ್ನೆಗೆ ಸರ್ಕಾರ ನೀಡಿದ ಅಧಿಕೃತ ಉತ್ತರದಲ್ಲಿ ತಿಳಿಸಲಾಗಿದೆ.
“ಹೆಚ್ಚಿನ ಟ್ರಾನ್ಸ್–ಫ್ಯಾಟ್ ಸೇವನೆಯು ಯಾವುದೇ ಕಾರಣದಿಂದಾಗುವ ಸಾವಿನ ಅಪಾಯವನ್ನು 34% ರಷ್ಟು ಹೆಚ್ಚಿಸಿದರೆ, ಪರಿಧಮನಿಯ ಹೃದಯ ಕಾಯಿಲೆಗೆ ಸಂಬಂಧಿಸಿದ ಮರಣ ಪ್ರಮಾಣ 28% ರಷ್ಟು ಹೆಚ್ಚಾಗಬಹುದು” ಎಂದು ಸರ್ಕಾರ ಉತ್ತರಿಸಿದೆ.
ಟ್ರಾನ್ಸ್ ಫ್ಯಾಟ್ಗಳು ಯಾವುವು?
ಆಹಾರದಲ್ಲಿನ ಅಪರ್ಯಾಪ್ತ ಕೊಬ್ಬುಗಳ ಅನಾರೋಗ್ಯಕರ ರೂಪವೇ ಟ್ರಾನ್ಸ್ ಫ್ಯಾಟ್ಗಳು (ಕೊಬ್ಬುಗಳು), ಕೊಬ್ಬು ಮತ್ತು ಕೊಲೆಸ್ಟರಾಲ್ ಸಂಗ್ರಹಣೆಯ ಮೂಲಕ ಅಪಧಮನಿಗಳನ್ನು ಮುಚ್ಚಿಹಾಕುವಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ಟ್ರಾನ್ಸ್ ಫ್ಯಾಟ್ಗಳಲ್ಲಿ ಎರಡು ವಿಧಗಳಿವೆ:
- ನೈಸರ್ಗಿಕ ಟ್ರಾನ್ಸ್–ಫ್ಯಾಟ್ ಆಸಿಡ್ಗಳು, ಇವು ಕೆಂಪು ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ; ಮತ್ತು
- ಕೃತಕ ಟ್ರಾನ್ಸ್–ಫ್ಯಾಟ್ ಆಸಿಡ್ಗಳು, ಮುಖ್ಯವಾಗಿ ಸಂಸ್ಕರಿಸಿದ ಆಹಾರ ಉದ್ಯಮದಲ್ಲಿ ಬಳಸುವ ಅನಾರೋಗ್ಯಕರ ಅಡುಗೆ ಎಣ್ಣೆಗಳ ಮೂಲಕ ದೇಹವನ್ನು ಪ್ರವೇಶಿಸುತ್ತವೆ.
ಫ್ರೆಂಚ್ ಫ್ರೈಗಳು, ಡೋನಟ್ಸ್, ಆಲೂಗಡ್ಡೆ ಚಿಪ್ಸ್, ವೇಫರ್ಗಳು, ಕುಕೀಸ್ ಮತ್ತು ಬಿಸ್ಕತ್ತುಗಳು ಸೇರಿದಂತೆ ಬೇಯಿಸಿದ ಮತ್ತು ಕರಿದ ಆಹಾರ ಪದಾರ್ಥಗಳು, ಸಂಸ್ಕರಿಸಿದ ಮತ್ತು ಪ್ಯಾಕೆಜ್ ಆಹಾರಗಳಲ್ಲಿ ಟ್ರಾನ್ಸ್–ಫ್ಯಾಟ್ ಹೆಚ್ಚು ಇರುತ್ತದೆ .
ಟ್ರಾನ್ಸ್ ಫ್ಯಾಟ್ ಆಸಿಡ್ಗಳ ಮುಖ್ಯ ಮತ್ತು ಏಕೈಕ ಮೂಲವೆಂದರೆ, ಕೆಲವು ಆಹಾರ ತಯಾರಕರು (ಕೆಲವು ರೆಸ್ಟೋರೆಂಟ್ಗಳನ್ನು ಒಳಗೊಂಡಂತೆ) ಬಳಸುವ ಭಾಗಶಃ ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳು. ಈ ಎಣ್ಣೆಯ ಬಳಕೆಗೆ ಮುಖ್ಯ ಕಾರಣ:
- ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು; ಮತ್ತು
- ಎಣ್ಣೆಯ ಶೆಲ್ಫ್ ಲೈಫ್ (ಬಾಳಿಕೆ) ಅನ್ನು ಹೆಚ್ಚಿಸುವುದು.
ಹೈಡ್ರೋಜನೀಕರಣ ಅಂದರೆ, ಕೋಣೆಯ ಉಷ್ಣಾಂಶದಲ್ಲಿ, ಸಸ್ಯ ಜನ್ಯ ತೈಲಗಳಿಗೆ ಹೈಡ್ರೋಜನ್ ಅನಿಲವನ್ನು ಸೇರಿಸಿ, ದ್ರವ ಕೊಬ್ಬನ್ನು ಘನ ಕೊಬ್ಬಾಗಿ ಪರಿವರ್ತಿಸಲು ಬಿಸಿ ಮಾಡುವ ಒಂದು ಪ್ರಕ್ರಿಯೆಯಾಗಿದೆ.
ಟ್ರಾನ್ಸ್ ಫ್ಯಾಟ್ಗಳು ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ
ಟ್ರಾನ್ಸ್–ಫ್ಯಾಟ್–ಸಮೃದ್ಧ ಆಹಾರವು ಬಹು ಹೃದಯರಕ್ತನಾಳದ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್, ಕೋಲ್ಕತ್ತಾದ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪ್ರೊ. ಡಾ. P. S ಬ್ಯಾನರ್ಜಿ ಅವರು ಹ್ಯಾಪಿಯೆಸ್ಟ್ ಹೆಲ್ತ್ನೊಂದಿಗೆ ನಡೆಸಿದ ಇಮೇಲ್ ಸಂವಾದದ ವೇಳೆ ಹೇಳಿದರು.
“ಟ್ರಾನ್ಸ್–ಫ್ಯಾಟ್–ಭರಿತ ಆಹಾರವನ್ನು ಸೇವಿಸುವುದರಿಂದಾಗುವ ಮುಖ್ಯ ಅಪಾಯಗಳೇ ಹೃದಯಾಘಾತ, ಪಾರ್ಶ್ವವಾಯು ಮತ್ತು ಪರಿಧಮನಿಯ ಕಾಯಿಲೆಗಳು” ಎಂದು ಅವರು ಹೇಳುತ್ತಾರೆ.
“ ಟ್ರಾನ್ಸ್–ಫ್ಯಾಟ್–ಭರಿತ ಆಹಾರವು ಪರಿಧಮನಿಯ ಅಪಧಮನಿಗಳಲ್ಲಿ ಅಡ್ಡಿ ಉಂಟುಮಾಡಿ ತ್ವರಿತವಾಗಿ ಹೃದಯಾಘಾತದ ಅಪಾಯಕ್ಕೆ ಕಾರಣವಾಗಬಹುದು” ಎಂದು ಪಂಜಾಬ್ನ ಬಟಿಂಡಾದ AIIMSನ ಬೋಧನಾ ವಿಭಾಗದ ಸದಸ್ಯ ಮತ್ತು ಬಟಿಂಡಾದ ಕಿಶೋರಿ ರಾಮ್ ಆಸ್ಪತ್ರೆ ಮತ್ತು ಡಯಾಬಿಟಿಸ್ ಕೇರ್ ಸೆಂಟರ್ನ ಸಲಹೆಗಾರ ವೈದ್ಯ ಡಾ ವಿಠಲ್ ಕೆ ಗುಪ್ತಾ ಹೇಳುತ್ತಾರೆ.
“ಟ್ರಾನ್ಸ್–ಫ್ಯಾಟಿ ಆಸಿಡ್ ಕಡಿಮೆ–ಸಾಂದ್ರತೆಯ ಲಿಪೊಪ್ರೋಟೀನ್ (LDL) ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಅದೇ ಸಮಯದಲ್ಲಿ ರಕ್ತದಲ್ಲಿ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್ (HDL) ಪ್ರಮಾಣವನ್ನು ತಗ್ಗಿಸುತ್ತದೆ. LDL ಅನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ನಿಮ್ಮ ಅಪಧಮನಿಗಳಲ್ಲಿ ಕೊಬ್ಬಿನ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನಿಮ್ಮ ಹೃದಯಲ್ಲಿನ ರಕ್ತ ಪರಿಚಲನೆಯನ್ನು ತಡೆಯುತ್ತದೆ. HDL ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಯಕೃತ್ತಿಗೆ ಸಾಗಿಸಿ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಅವರು ಹೇಳುತ್ತಾರೆ.
ಟ್ರಾನ್ಸ್ ಫ್ಯಾಟ್, ಸಂಸ್ಕರಿತ ಆಹಾರ ಉದ್ಯಮ ಮತ್ತು ನಿಯಂತ್ರಕರ ಪಾತ್ರ
ಸಂಸ್ಕರಿಸಿದ ಆಹಾರ ಉದ್ಯಮ ಮತ್ತು WHO ನಂತಹ ಆರೋಗ್ಯ ನಿಯಂತ್ರಕರು ಆಹಾರ ವ್ಯವಸ್ಥೆಯಲ್ಲಿ ಹೆಚ್ಚುವರಿ ಟ್ರಾನ್ಸ್ ಫ್ಯಾಟ್ ಬಳಕೆಯ ವಿರುದ್ಧ ಬಲವಾದ ಕ್ರಮ ಕೈಗೊಂಡಿದ್ದಾರೆ ಎಂದು ಪ್ರೊಫೆಸರ್ ಡಾ ಗುಪ್ತಾ ಹೇಳುತ್ತಾರೆ.
“ಒಬ್ಬ ವ್ಯಕ್ತಿಯ ಕೊಬ್ಬಿನ ಒಟ್ಟು ಸೇವನೆಯು, ಪ್ರತಿದಿನದ ಒಟ್ಟು ಕ್ಯಾಲೋರಿ ಸೇವನೆಯ 30% ಕ್ಕಿಂತ ಕಡಿಮೆ ಇರಬೇಕು” ಎಂದು ಪ್ರೊಫೆಸರ್ ಡಾ ಬ್ಯಾನರ್ಜಿ ಹೇಳುತ್ತಾರೆ.
ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಈ 30% ರಲ್ಲಿ, ಟ್ರಾನ್ಸ್ ಫ್ಯಾಟಿ ಆಸಿಡ್ ಸೇವನೆಯು 1% ಮೀರಬಾರದು, ಎಂದು WHO ಮಾರ್ಗಸೂಚಿ ಹೇಳುತ್ತದೆ.
ಶತಕೋಟಿಯಷ್ಟು ಜನರು ಇನ್ನೂ ಟ್ರಾನ್ಸ್–ಫ್ಯಾಟ್–ಭರಿತ ಆಹಾರಕ್ಕೆ ಒಡ್ಡಿಕೊಂಡಿದ್ದಾರೆ ಎಂದು WHO ಇತ್ತೀಚೆಗೆ ಹೇಳಿದೆ. ಈ ನಿಟ್ಟಿನಲ್ಲಿ ಅದು ಒಂಬತ್ತು ದೇಶಗಳನ್ನು (16 ರಲ್ಲಿ) ಹೆಸರಿಸಿದೆ– ಅವು ಆಸ್ಟ್ರೇಲಿಯಾ, ಅಜೆರ್ಬೈಜಾನ್, ಭೂತಾನ್, ಈಕ್ವೆಡಾರ್, ಈಜಿಪ್ಟ್, ಇರಾನ್, ನೇಪಾಳ, ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ. ಪರಿಧಮನಿಯ ಹೃದಯ ಕಾಯಿಲೆಯ ಹೆಚ್ಚಳಕ್ಕೆ ಕಾರಣವಾಗಿರುವ, ಸಂಸ್ಕರಿತ ಆಹಾರದಲ್ಲಿನ ಟ್ರಾನ್ಸ್ ಕೊಬ್ಬನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಿರ್ದಯ ಮನೋಭಾವವನ್ನು ಅಳವಡಿಸಿಕೊಳ್ಳಲು, 2023 ರ ವೇಳೆಗೆ ಜಾಗತಿಕ ಆಹಾರದಿಂದ ಟ್ರಾನ್ಸ್ ಫ್ಯಾಟ್ ಅನ್ನು ತೊಡೆದುಹಾಕಲು ಸಂಸ್ಥೆಯು ತನ್ನ 2018 ರ ಮನವಿಯನ್ನು ಪುನರುಚ್ಚರಿಸಿದೆ.
ಭಾರತ ಸರ್ಕಾರವು ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು (ನಿಷೇಧ ಮತ್ತು ಮಾರಾಟದ ಮೇಲಿನ ನಿರ್ಬಂಧಗಳು) ತಿದ್ದುಪಡಿ ಮಾಡುವ ಮೂಲಕ ದೇಶದಲ್ಲಿ ಟ್ರಾನ್ಸ್–ಫ್ಯಾಟ್ ಬಳಕೆಯನ್ನು ಕಡಿಮೆ ಮಾಡಲು WHO- ಸೂಚಿಸಿದ ನೀತಿಯನ್ನು ಈಗಾಗಲೇ ಜಾರಿಗೆ ತಂದಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ (ಆಹಾರ ಉತ್ಪನ್ನಗಳ ಮತ್ತು ಆಹಾರ ಪೂರಕಗಳ ಗುಣಮಟ್ಟ) ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ ವಿಚಾರ ಗಮನಾರ್ಹವಾಗಿದೆ. ಖಾದ್ಯ ತೈಲಗಳು, ಕೊಬ್ಬುಗಳು ಮತ್ತು ಖಾದ್ಯ ತೈಲಗಳನ್ನು ಒಳಗೊಂಡಿರುವ ಆಹಾರ ಉತ್ಪನ್ನಗಳಲ್ಲಿ ಮತ್ತು ಕೈಗಾರಿಕಾ ಟ್ರಾನ್ಸ್ ಫ್ಯಾಟ್ ಹೊಂದಿರುವ ಆಹಾರಗಳಲ್ಲಿನ ಟ್ರಾನ್ಸ್ ಫ್ಯಾಟ್ ತೂಕವು 2% ಕ್ಕಿಂತ ಹೆಚ್ಚಾಗದಂತೆ ಇರಿಸುವುದು ಮುಖ್ಯ ಗುರಿಯಾಗಿದೆ ಎಂದು ಅದು ಹೇಳಿದೆ.
“ಈ ತಿದ್ದುಪಡಿಗಳು 1 ಜನವರಿ 2022 ರಿಂದ ಜಾರಿಗೆ ಬಂದಿವೆ” ಎಂದು ವರದಿಯು ಹೇಳುತ್ತದೆ.
ಆಹಾರದ ಪ್ಯಾಕೆಟ್ಗಳ ಮೇಲೆ ಜಾಗೃತಿ ಮತ್ತು ಎಚ್ಚರಿಕೆಯ ಚಿಹ್ನೆಗಳು ಆವಶ್ಯಕ
“ಆಹಾರ ಪ್ಯಾಕೆಟ್ಗಳ ಮೇಲೆ ಸರಿಯಾದ ಎಚ್ಚರಿಕೆಯ ಚಿಹ್ನೆಗಳು ಇರಬೇಕು. ಈ ಮೂಲಕ ಗ್ರಾಹಕರು ತಮ್ಮ ಆಹಾರದಲ್ಲಿನ ಕೊಬ್ಬಿನ ಆಮ್ಲಗಳು, ಅದರಲ್ಲೂ ವಿಶೇಷವಾಗಿ ಟ್ರಾನ್ಸ್ ಫ್ಯಾಟ್ ಪ್ರಮಾಣದ ಬಗ್ಗೆ ಸ್ಪಷ್ಟ ಅರಿವು ಹೊಂದಲು ಸಾಧ್ಯವಾಗುತ್ತದೆ” ಎಂದು ಪ್ರೊಫೆಸರ್ ಡಾ ಗುಪ್ತಾ ಅವರು ಹೇಳುತ್ತಾರೆ.
ಪೌಷ್ಠಿಕಾಂಶದ ಮೌಲ್ಯದ ಆಧಾರದ ಮೇಲೆ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳಿಗೆ ಹೆಲ್ತ್ ಸ್ಟಾರ್ ರೇಟಿಂಗ್ (HSR) ಅನ್ನು ಜಾರಿಗೆ ತರಲು ಭಾರತ ಸರ್ಕಾರ ನಿರ್ಧರಿಸಿದ್ದರೂ, ಅಗ್ಗದ ಅನಾರೋಗ್ಯಕರ ಆಹಾರವನ್ನು ಗ್ರಾಹಕರಿಗೆ ವಿತರಿಸಲು ಉತ್ಪಾದಕರು ಇನ್ನಷ್ಟು ಅಡ್ಡಹಾದಿ ಕಂಡುಕೊಳ್ಳಬಹುದು ಎಂದು ಅವರು ಹೇಳುತ್ತಾರೆ. ಸ್ಟಾರ್ ರೇಟಿಂಗ್, ಪ್ರತಿ 100 ಗ್ರಾಂ ಆಹಾರದಲ್ಲಿನ ವಿವಿಧ ಪದಾರ್ಥಗಳು ಮತ್ತು ಪೋಷಕಾಂಶಗಳ ಆಧಾರದ ಮೇಲೆ ಪ್ರತಿ ಆಹಾರ ಪದಾರ್ಥವನ್ನು ಮೌಲ್ಯಮಾಪನ ಮಾಡುತ್ತದೆ.
“ಆಹಾರ ತಯಾರಕರು ತಮ್ಮ ಸ್ವಂತ ವ್ಯವಹಾರ ಲೆಕ್ಕಾಚಾರಗಳ ಆಧಾರದ ಮೇಲೆ ಟ್ರಾನ್ಸ್ ಕೊಬ್ಬು ಸೇರಿದಂತೆ ಹಾನಿಕಾರಕ ಪದಾರ್ಥಗಳನ್ನು ಮರೆಮಾಚಿ, ಕೆಲವು ‘ಆರೋಗ್ಯಕರ‘ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಉತ್ತಮ ಸ್ಟಾರ್ ರೇಟಿಂಗ್ ಅನ್ನು ಪಡೆಯಬಹುದು, ಹಾಗಾಗಿ ಸ್ಟಾರ್ ರೇಟಿಂಗ್ಗಳ ಬದಲಿಗೆ ಸರಿಯಾದ ಎಚ್ಚರಿಕೆಯ ಲೇಬಲ್ಗಳನ್ನು ಮುಂಭಾಗದಲ್ಲಿ ಮುದ್ರಿಸಿದರೆ ಉತ್ತಮ” ಎಂದು ಪ್ರೊ.ಡಾ.ಗುಪ್ತಾ ಹೇಳುತ್ತಾರೆ.
“ಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಆರೋಗ್ಯ ಜಾಗೃತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ ಎಂದು ಪ್ರೊ.ಡಾ. ಬ್ಯಾನರ್ಜಿ ಹೇಳುತ್ತಾರೆ. ಹೃದಯರಕ್ತನಾಳದ ಕಾಯಿಲೆಯನ್ನು ದೂರವಿಡುವಲ್ಲಿ, ಆರೋಗ್ಯಕರ ಜೀವನಶೈಲಿಯ (ಸಮತೋಲಿತ ಆಹಾರ, ವ್ಯಾಯಾಮ ಮತ್ತು ತಂಬಾಕು ಬಳಕೆ ಸೇರಿದಂತೆ) ಜೊತೆಗೆ ಟ್ರಾನ್ಸ್–ಫ್ಯಾಟ್‌ಭರಿತ ಆಹಾರದಿಂದ ಆರೋಗ್ಯದ ಮೇಲಾಗುವ ಅಪಾಯಗಳನ್ನು ಮುಖ್ಯವಾಗಿ ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು” ಎಂದು ಅವರು ಹೇಳುತ್ತಾರೆ.
“ನೈಸರ್ಗಿಕ ಟ್ರಾನ್ಸ್ ಫ್ಯಾಟ್, ಹೈಡ್ರೋಜನೀಕರಿಸಿದ ತೈಲಕ್ಕಿಂತ ಕಡಿಮೆ ಹಾನಿಕಾರಕವಾಗಿದೆ (ಕೃತಕವಾಗಿ ಮಾಡಿದ ಟ್ರಾನ್ಸ್ ಫ್ಯಾಟ್). ಟ್ರಾನ್ಸ್ ಫ್ಯಾಟ್ಗಳು ಯಾವುದೇ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ ಮತ್ತು ಅವುಗಳ ಬಳಕೆಗೆ ಸುರಕ್ಷಿತ ಮಟ್ಟ ಎಂಬುದು ಯಾವುದೂ ಇಲ್ಲ. ಹೃದಯರಕ್ತನಾಳದ ಕಾಯಿಲೆಗಳಿಂದ ಸುರಕ್ಷಿತವಾಗಿರಲು, ಟ್ರಾನ್ಸ್ ಫ್ಯಾಟ್‌ಭರಿತ ಪ್ಯಾಕೇಜ್ ಆಹಾರ ಸೇವಿಸದೆ ಇರುವುದು ಉತ್ತಮ” ಎಂದು ಪ್ರೊ.ಡಾ.ಗುಪ್ತಾ ಹೇಳುತ್ತಾರೆ.
ಸಾರಾಂಶ:
- ಭಾರತದಲ್ಲಿ ಹೃದಯ–ಆರೋಗ್ಯ–ಸಂಬಂಧಿತ ಕನಿಷ್ಠ 4.6% ನಷ್ಟು ಮರಣಗಳಿಗೆ ಟ್ರಾನ್ಸ್–ಫ್ಯಾಟಿ ಆಸಿಡ್ಗಳು ಕಾರಣವಾಗಿವೆ.
- ದೈನಂದಿನ ಕೊಬ್ಬು ಸೇವನೆಯ ಪ್ರಮಾಣವು ದೈನಂದಿನ ಕ್ಯಾಲೊರಿ ಸೇವನೆಯ 30 ಪ್ರತಿಶತವನ್ನು ಮೀರಬಾರದು ಮತ್ತು ಟ್ರಾನ್ಸ್–ಫ್ಯಾಟ್ ಒಟ್ಟು ಸೇವನೆಯ ಒಂದು ಶೇಕಡಾಕ್ಕಿಂತ ಕಡಿಮೆ ಇರಬೇಕು ಎಂದು WHO ಮಾರ್ಗಸೂಚಿ ಹೇಳುತ್ತದೆ.
- ಎಲ್ಲಾ ಸಂಸ್ಕರಿಸಿದ ಆಹಾರಗಳು, ಮುಖ್ಯವಾಗಿ ಬೇಕ್ ಮಾಡಿದ ಮತ್ತು ಕರಿದ ಪದಾರ್ಥಗಳು, ಟ್ರಾನ್ಸ್ ಫ್ಯಾಟ್ ಅನ್ನು ಹೊಂದಿರಬಹುದು
- ಭಾಗಶಃ ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳು, ಆಹಾರ ಮೂಲದ ಮುಖ್ಯ ಟ್ರಾನ್ಸ್ ಫ್ಯಾಟ್ಗಳಾಗಿವೆ.