ಅನಾರೋಗ್ಯಕರ ಕೊಬ್ಬು ಮತ್ತು ಟ್ರಾನ್ಸ್-ಫ್ಯಾಟ್‌ಗಳು ಅಧಿಕವಾಗಿರುವ ಆಹಾರಗಳ ಅದರಲ್ಲೂ ಜಂಕ್ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಜಾಗತಿಕ ಮಟ್ಟದಲ್ಲಿ ಹೃದ್ರೋಗದ ಸಮಸ್ಯೆಗೆ ಕಾರಣವಾಗಿದೆ. ಆರೋಗ್ಯಕರ ಹೃದಯ ಸ್ನೇಹಿ ಮತ್ತು ಸಕ್ರಿಯ ಜೀವನಶೈಲಿಯನ್ನು ಅನುಸರಿಸುವುದು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವಾಗಿದೆ.
ಆರೋಗ್ಯಕರ ಆಹಾರ ಸೇವನೆ ಮತ್ತು ತಿನ್ನುವ ಅಭ್ಯಾಸಗಳನ್ನು ಹೊಂದಿರುವುದು ಮುಖ್ಯ, ಯಾಕೆಂದರೆ, ನಾವು ಸೇವಿಸುವ ಸಣ್ಣಪುಟ್ಟ ಆಹಾರಗಳೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಬೆಂಗಳೂರು ಮೂಲದ ಆಹಾರತಜ್ಞರಾದ ಪಲಕ್ ಟಿ ಪುನಮಿಯ ಅವರು ಹೇಳುತ್ತಾರೆ.
ಸ್ಯಾಚುರೇಟಡ್ ಮತ್ತು ಟ್ರಾನ್ಸ್‌ಫ್ಯಾಟ್‌ಗಳಂತಹ ಅತ್ಯಂತ ಅನಾರೋಗ್ಯಕರ ಅಂಶಗಳನ್ನು ಅಥವಾ ಅಧಿಕ ಉಪ್ಪನ್ನು ಹೊಂದಿರುವ ಆಹಾರಪದಾರ್ಥಗಳ ಸೇವನೆಯು ಹೃದ್ರೋಗ ಸಮಸ್ಯೆಗಳನ್ನು ತಂದೊಡ್ಡುವ ಅಪಾಯ ಹೆಚ್ಚು. ಈ ಆಹಾರಗಳು ಬೊಜ್ಜು ಮತ್ತು ಮಧುಮೇಹವನ್ನೂ ಉಂಟುಮಾಡುತ್ತದೆ, ಅದು ಹೃದ್ರೋಗಗಳಿಗೆ ಕಾರಣವಾಗಬಹುದು.
“ಉತ್ತಮ ಆಹಾರವು ಸಮತೋಲಿತ ಪ್ರಮಾಣದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳೊಂದಿಗೆ, ಅಪರೂಪಕ್ಕೆ ಸೇವಿಸಬಹುದಾದ ಚಿಕನ್, ಮೀನು ಮತ್ತು ಮೊಟ್ಟೆಗಳಂತಹ ಮಾಂಸಾಹಾರಿ ಆಹಾರಗಳನ್ನು ಒಳಗೊಂಡಿರುತ್ತದೆ” ಎಂದು ಮುಂಬೈನ SRV ಹಾಸ್ಪಿಟಲ್ಸ್‌ನ ಹೃದ್ರೋಗ ಸಲಹೆಗಾರರಾದ ಡಾ ಜೈದೀಪ್ ರಾಜೇಬಹದೂರ್ ಅವರು ಹೇಳುತ್ತಾರೆ.
ಆರೋಗ್ಯಕರ ಹೃದಯ – ನೀವು ತ್ಯಜಿಸಬೇಕಾದ ಆಹಾರಗಳ ಪಟ್ಟಿ
1. ಕೆಂಪು ಮಾಂಸ
ಕೆಂಪು ಮಾಂಸವು ಹೆಚ್ಚಿನ ಮಟ್ಟದ LDS (ಕಡಿಮೆ ಸಾಂದ್ರತೆ ಲಿಪೋಪ್ರೊಟೀನ್‌ಗಳು ಅಥವಾ ಕೆಟ್ಟ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್‌ಗಳನ್ನು (ಒಂದು ಬಗೆಯ ಕೊಬ್ಬು) ಹೊಂದಿರುವುದರಿಂದ ಹೃದಯಕ್ಕೆ ಹಾಳು ಎಂದು ಪರಿಗಣಿಸಲಾಗಿದೆ ಎಂದು ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ವ್ಯಾಸ್ಕುಲರ್ ಸರ್ಜನ್ ಆಗಿರುವ ಡಾ ತೇಜಸ್ವಿನಿ ಎನ್ ಮಾರ್ಲಾ ಅವರು ಹೇಳುತ್ತಾರೆ. ಕೆಂಪು ಮಾಂಸದ ಸೇವನೆಯು ದೀರ್ಘಾವಧಿಯಲ್ಲಿ ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. “ಇದರ ಬದಲಿಗೆ ನೀವು ಚಿಕನ್ ಅಥವಾ ಮೀನಿನಿಂದ ತಯಾರಿಸಿದ ಆಹಾರ ಖಾದ್ಯಗಳನ್ನು ಸೇವಿಸಬಹುದು, ಇದರಲ್ಲಿ ಸಾಕಷ್ಟು ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಅನ್‌ಸ್ಯಾಚುರೇಟಡ್ ಫ್ಯಾಟಿ ಆಮ್ಲಗಳನ್ನು ಹೊಂದಿರುತ್ತದೆ”ಎಂದು ರಾಜೇಬಹದ್ದೂರ್ ಹೇಳುತ್ತಾರೆ.
ಮಾಂಸಾಹಾರಿ ಆಹಾರದಲ್ಲಿ ಕೇವಲ ಮಾಂಸವನ್ನು ಮಾತ್ರವೇ ಸೇವಿಸಿ ಮತ್ತು ಚರ್ಮ ಮತ್ತು ಇತರ ಅಂಗಗಳನ್ನು ಸೇವಿಸದಿರಿ, ಯಾಕೆಂದರೆ ಇವುಗಳು ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ ಎಂದು ಡಾ ಮಾರ್ಲಾ ಹೇಳುತ್ತಾರೆ.
2. ಬ್ರೆಡ್ ಮತ್ತು ಇತರ ಬೇಕರಿ ಪದಾರ್ಥಗಳು
ಪುನಾಮಿಯಾ ಅವರ ಪ್ರಕಾರ ಮನೆಯಲ್ಲೇ ಬೇಕ್ ಮಾಡಿದ ಆಹಾರವು ಉತ್ತಮ ಆಯ್ಕೆಯ ಆದರೆ ನೀವು ಹೊರಗಿನಿಂದ ಅವುಗಳನ್ನು ತಂದರೆ ಅವುಗಳನ್ನು ಸಂಸ್ಕರಿಸಲಾಗಿರುತ್ತದೆ ಮತ್ತು ಅನಾರೋಗ್ಯಕರ ಹಾಗೂ ಅಧಿಕ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಮೈದಾವನ್ನು ಅದರಲ್ಲಿ ಬಳಸಿರುತ್ತಾರೆ. “ಇದರ ಬದಲಿಗೆ ಧಾನ್ಯದ ಬ್ರೆಡ್ ಅಥವಾ ಬ್ರೌನ್ ಬ್ರೆಡ್ ಅಥವಾ ಮೈದಾ ಮುಕ್ತ ಬ್ರೆಡ್ ಅನ್ನು ಬಳಸಬಹುದು” ಎಂದು ಡಾ ರಾಜೇಬಹದೂರ್ ಹೇಳುತ್ತಾರೆ.
ಬ್ರೆಡ್ ಮತ್ತು ಇತರ ಬೇಕರಿ ಉತ್ಪನ್ನಗಳನ್ನು ದೂರವಿರಿಸುವುದು ಉತ್ತಮ ಎಂಬುದು ತಜ್ಞರ ಸಲಹೆ. “ಬ್ರೆಡ್‌ನ ಬಾಳಿಕೆಯನ್ನು ಹೆಚ್ಚಿಸಲು ಮತ್ತು ಮೃದುಗೊಳಿಸಲು ಅದಕ್ಕೆ ಸಕ್ಕರೆ ಮತ್ತು ಇತರ ಪದಾರ್ಥಗಳನ್ನು ಸೇರಿಸುತ್ತಾರೆ. ಇದು ನಿಮ್ಮ ನಿಯಮಿತ ಚಯಾಪಚಯ ಆವೃತ್ತಿಗೆ ಅಡಚಣೆ ಉಂಟುಮಾಡಿ, ದೀರ್ಘಾವಧಿಯಲ್ಲಿ ನಿಮ್ಮ ದೇಹ ಮತ್ತು ಚಯಾಪಚಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎನ್ನುತ್ತಾರೆ ಮಾರ್ಲಾ.
3. ಐಸ್ ಕ್ರೀಂ ಮತ್ತು ಚಾಕೋಲೇಟ್‌ಗಳು
ಐಸ್ ಕ್ರೀಂ ಮತ್ತು ಚಾಕೋಲೇಟ್‌ಗಳು ಅಧಿಕ ಸಕ್ಕರೆ, ಕಾರ್ಬೋಹೈಡ್ರೇಟ್‌ಗಳು ಮತ್ತು ಕೆಟ್ಟ ಕೊಬ್ಬನ್ನು ಹೊಂದಿರುತ್ತದೆ. ಇವುಗಳಲ್ಲಿ ಹೆಚ್ಚಿನವು ಕ್ಯಾಲರಿಗಳನ್ನು (ಕಡಿಮೆ ಅಥವಾ ಶೂನ್ಯ ಪೌಷ್ಠಿಕಾಂಶ ಮೌಲ್ಯ) ಹೊಂದಿರುವುದಿಲ್ಲ, ಇವುಗಳನ್ನು ಕರಗಿಸಲು ಸಾಧ್ಯವಾಗುವುದಿಲ್ಲ ಮತ್ತು ಕ್ರಮೇಣ ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚಾಕೋಲೇಟ್‌ಗಳು ಅಥವಾ ಐಸ್‌ಕ್ರೀಂ ಅನ್ನು ಅಪರೂಪಕ್ಕೊಮ್ಮೆ ಸೇವಿಸಬಹುದು, ಆದರೆ ಇದು ನಿಮ್ಮ ಆಹಾರದ ಭಾಗವಾಗಬಾರದು ಎಂದು ಡಾ ರಾಜೇಬಹದ್ದೂರ್ ಎಚ್ಚರಿಸುತ್ತಾರೆ.
ತಿಂಗಳಿಗೆ ಒಂದು ಬಾರಿ ಒಂದು ಸ್ಕೂಪ್‌ನಷ್ಟು ಐಸ್‌ಕ್ರೀಂ ಸೇವಿಸಬಹುದು ಎಂದು ಡಾ ಮಾರ್ಲ ಸಲಹೆ ನೀಡುತ್ತಾರೆ. “ಸಂಸ್ಕರಿಸಿದ, ಪ್ಯಾಕ್ ಮಾಡಲಾದ ಈ ಐಸ್‌ಪ್ಯಾಕ್ರೀಂ ಸೇವನೆಯನ್ನು ಮಿತಗೊಳಿಸಿದಷ್ಟು ಒಳ್ಳೆಯದು ಅಥವಾ ಸೇವಿಸದೇ ಇದ್ದರೆ ಇನ್ನೂ ಉತ್ತಮ” ಎನ್ನುತ್ತಾರೆ ಪುನಾಮಿಯ.
4. ಎಣ್ಣೆ
ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುವ ಎಣ್ಣೆಯನ್ನು ಸೇವಿಸದಿರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಉದಾಹರಣೆಗೆ ತೆಂಗಿನೆಣ್ಣೆಯು ಅಧಿಕ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದ್ದು ಇದು ನಿಮ್ಮ LDL ಕೊಲೆಸ್ಟ್ರಾಲ್ ಮಟ್ಟಗಳನ್ನು ಹೆಚ್ಚಿಸಬಹುದು. “ಗಾಣದ ಎಣ್ಣೆಯು ಒಳ್ಳೆಯ ಕೊಲೆಸ್ಟ್ರಾಲ್ (HDL)) ಮಟ್ಟವನ್ನು ಹೆಚ್ಚಿಸುವುದರಿಂದ ಹೃದ್ರೋಗ ಹೊಂದಿರುವವರು ಇದನ್ನು ಬಳಸುವುದು ಉತ್ತಮ” ಎಂದು ಪುನಾಮಿಯಾ ಹೇಳುತ್ತಾರೆ.
ಆದರೆ, ಡಾ ಮಾರ್ಲಾ ಅವರ ಪ್ರಕಾರ ಯಾವ ಎಣ್ಣೆಯೂ ಉತ್ತಮವಲ್ಲ, ಅಡುಗೆಗೆ ನೀವು ಯಾವ ಎಣ್ಣೆಯನ್ನು ಬಳಸಿದರೂ ಅದನ್ನು ಮಿತ ಪ್ರಮಾಣದಲ್ಲಿ ಉಪಯೋಗಿಸಬೇಕು ಎಂದು ಅವರು ಹೇಳುತ್ತಾರೆ.
5. ಉಪ್ಪು
ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದಷ್ಟೂ ಒಳ್ಳೆಯದು, ಈಗಾಗಲೇ ಹೃದ್ರೋಗ ಇರುವವರು ಉಪ್ಪನ್ನು ಸೇವಿಸದಿರುವುದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ. “ಉಪ್ಪಿನ ಸೇವನೆ ಕನಿಷ್ಠವಾಗಿರಬೇಕು ಯಾಕೆಂದರೆ, ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್ ರಕ್ತನಾಳದಲ್ಲಿ ಸರಿಪಡಿಸಲಾಗದ ಹಾನಿ ಉಂಟು ಮಾಡುತ್ತದೆ” ಎಂದು ಮಾರ್ಲಾ ಹೇಳುತ್ತಾರೆ.
ಹೃದ್ರೋಗಿಗಳು ಉಪ್ಪನ್ನು ಸೇವಿಸಬಾರದು, ಇದರ ಬದಲಿಗೆ ಅವರು ಆಹಾರ ಅಥವಾ ಹಣ್ಣುಗಳಿಗೆ ಸೀಸನಿಂಗ್ ಮಾಡಲು ಆರಿಗ್ಯಾನೋ, ನಿಂಬೆರಸ, ಕರಿಮೆಣಸು ಅಥವಾ ತುಸು ವಿನೆಗರ್ ಅನ್ನು ಹಾಕಿ ಆಹಾರದ ಸ್ವಾದವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಪುನಾಮಿಯ ಹೇಳುತ್ತಾರೆ.
6. ಶೀತಲೀಕೃತ, ಪ್ಯಾಕ್ ಮಾಡಲಾದ ಆಹಾರಪದಾರ್ಥಗಳು ಮತ್ತು ಫಾಸ್ಟ್ ಫುಡ್
“ನಾವು ಖರೀದಿಸುವ ಫಾಸ್ಟ್ ಫುಡ್, ಪ್ಯಾಕ್ ಮಾಡಲಾದ ಮತ್ತು ಶೀತಲೀಕೃತ ಆಹಾರಪದಾರ್ಥಗಳಿಗೆ MSG (ಮೋನೋಸೋಡಿಯಂ ಗ್ಲುಟಾಮೇಟ್/ಅಜಿನೋಮೋಟೋ) ಸೇರಿಸಲಾಗಿರುತ್ತದೆ. ಅಲ್ಲದೇ ಪೂರ್ವ ಸಿದ್ಧ ಆಹಾರಗಳು ಅಧಿಕ ಉಪ್ಪಿನಂಶವನ್ನು ಹೊಂದಿರುತ್ತದೆ ಮತ್ತು ಇದು ಹೃದಯಕ್ಕೆ ಒಳ್ಳೆಯ ಆಹಾರವಲ್ಲ” ಎನ್ನುತ್ತಾರೆ ಪುನಾಮಿಯಾ.
ರೆಡಿ ಟು ಈಟ್ ಆಹಾರಗಳು, ಪ್ಯಾಕೇಜ್ ಜ್ಯೂಸ್‌ಗಳು, ಪೂರ್ವ ಸಿದ್ಧ ಆಹಾರಗಳು, ಸಾಲ್ಟಡ್ ಬಟರ್, ಫಾಸ್ಟ್ ಫುಡ್, ಸಂಸ್ಕರಿಸಿದ ಚೀಸ್ ಮತ್ತು ಸಂಸ್ಕರಿಸಿದ ಮಾಂಸ ಮುಂತಾದವು ಅಧಿಕ ಕೊಲೆಸ್ಟ್ರಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ಸೇವಿಸಬಾರದು. ಸಾಸ್‌ಗಳು ಮತ್ತು ಉಪ್ಪಿನಕಾಯಿ ಕೂಡಾ ಇದಕ್ಕೆ ಹೊರತಲ್ಲ. ಅವುಗಳು ಅಧಿಕ ಉಪ್ಪು ಮತ್ತು ಇತರ ಸಂರಕ್ಷಕಗಳಂತಹ ಬೇಡದ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಇವುಗಳ ಸೇವನೆ ಯಾವತ್ತಿಗೂ ಒಳ್ಳೆಯದಲ್ಲ. ಕೆಲವೊಮ್ಮೆ ಈ ಆಹಾರಗಳನ್ನು ನಾವು ಮತ್ತೆ ಬಿಸಿ ಮಾಡುತ್ತೇವೆ, ಅವು ಆರೋಗ್ಯದ ಮಟ್ಟಿಗೆ ಅತ್ಯಂತ ಹಾನಿಕಾರಕ ಎನ್ನುತ್ತಾರೆ ಡಾ ರಾಜೇಬಹದ್ದೂರ್.
7. ಗೆಡ್ಡೆ ತರಕಾರಿಗಳು
ಮರಗೆಣಸು, ಆಲೂಗೆಡ್ಡೆ ಸಿಹಿಗೆಣಸು ಮುಂತಾದ ಗೆಡ್ಡೆ ತರಕಾರಿಗಳು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ಹೊಂದಿರುತ್ತವೆ. ಆದ್ದರಿಂದ, ಇದನ್ನು ಸಾಮಾನ್ಯವಾಗಿ ಬದಿಗಿಡುವುದು ಉತ್ತಮ ಎಂಬುದು ತಜ್ಞರ ಸಲಹೆ. “ಆಹಾರದಲ್ಲಿ ಅನಿವಾರ್ಯವಾಗಿ ಬಳಸಬೇಕಾದ ಸಂದರ್ಭದಲ್ಲಿ ಇದನ್ನು ಕರಿಯುವ ಬದಲು ಬೇಯಿಸಿ ಸೇವಿಸುವುದು ಉತ್ತಮ. ಕೆಲವರಿಗೆ ಇದುವೇ ಮುಖ್ಯ ಆಹಾರವಾಗಿರಬಹುದು, ಅಂಥವರು ಅವುಗಳನ್ನು ಕರಿದು ತಿನ್ನುವ ಬದಲಿಗೆ ಬೇಯಿಸಿ ಸೇವಿಸಲು ನಾವು ಸೂಚಿಸುತ್ತೇವೆ ಎಂದು ಡಾ ಮಾರ್ಲಾ ಹೇಳುತ್ತಾರೆ.
8. ಸಕ್ಕರೆ
ಡಾ ಅಧಿಕ ಸಕ್ಕರೆ ಹೊಂದಿರುವ ಯಾವುದೇ ಆಹಾರ ಪದಾರ್ಥ ದೀರ್ಘಾವಧಿಯಲ್ಲಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆಯುಕ್ತ ಪಾನೀಯಗಳು ಮತ್ತು ಸಕ್ಕರೆಯುಕ್ತ ಆಹಾಗಳನ್ನೂ ಸೇವಿಸಬಾರದು ಎಂದು ರಾಜೇಬಹದೂರ್ ಅವರು ಹೇಳುತ್ತಾರೆ. “ಬೆಲ್ಲ, ಫ್ರಕ್ಟೋಸ್, ಕಾರ್ನ್ ಸಿರಪ್ ಮತ್ತು ಸಕ್ಕರೆ (ಸರಳ ಕಾರ್ಬೋಹೈಡ್ರೇಟ್‌ಗಳು) ಸೇವನೆ ಒಳ್ಳೆಯದಲ್ಲ. ಬದಲಿಗೆ ಧಾನ್ಯಗಳು ಮತ್ತು ತರಕಾರಿಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಆಹಾರದಲ್ಲಿ ಸೇವಿಸಬೇಕು ಎಂದು ಪುನಾಮಿಯಾ ಹೇಳುತ್ತಾರೆ.