
ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2019 ರಲ್ಲಿ ಅಧಿಕ ರಕ್ತದೊತ್ತಡದಿಂದ ಉಂಟಾದ 10.8 ದಶಲಕ್ಷ ಸಾವುಗಳಲ್ಲಿ ಎರಡು ದಶಲಕ್ಷ ಸಾವುಗಳಿಗೆ ಆಹಾರದಲ್ಲಿ ಬಳಸುವ ಉಪ್ಪಿನಿಂದ ಉಂಟಾದ ಅಧಿಕ ರಕ್ತದೊತ್ತಡ ಕಾರಣವಾಗಿದೆ.
ಮೊದಲ ಜಾಗತಿಕ ಅಧಿಕ ರಕ್ತದೊತ್ತಡದ ವರದಿಯ ಪ್ರಕಾರ, “2019 ರಲ್ಲಿ ಹೃದಯಪರಿಚಲನಾ ಸಮಸ್ಯೆಗಳಿಂದ ಸಂಭವಿಸಿದ ಒಟ್ಟು ಸಾವುಗಳಲ್ಲಿ, ಸುಮಾರು 2 ದಶಲಕ್ಷ ಸಾವುಗಳಿಗೆ, ಸೋಡಿಯಂ ಸೇವನೆಯ ಪರಿಣಾಮವಾಗಿ, 24 ಗಂಟೆಗಳ ಅವಧಿಯಲ್ಲಿ ಶಿಫಾರಸು ಮಾಡಲಾದ 1 ರಿಂದ 5 ಗ್ರಾಂಗಳಿಗಿಂತ ಅಧಿಕ ಮಟ್ಟದಲ್ಲಿ ಮೂತ್ರದ ಮೂಲಕ ಉಂಟಾಗುವ ಸೋಡಿಯಂ ವಿಸರ್ಜನೆಯೇ ಕಾರಣವಾಗಿದೆ. ಈ ಸಂಖ್ಯೆಯು ಇತರ ಯಾವುದೇ ಆಹಾರದ ಕಾರಣಕ್ಕಿಂತ ಹೆಚ್ಚಿನದ್ದಾಗಿದೆ”
ಜಾಗತಿಕ ಆಹಾರದ ಮೂಲಕ ಸೋಡಿಯಂ ಸೇವನೆಯ ಸರಾಸರಿಯು ಪ್ರತಿ ದಿನಕ್ಕೆ 4310 ಮಿಲಿ ಗ್ರಾಂ (ಪ್ರತಿ ದಿನಕ್ಕೆ 10.78ಗ್ರಾಂ) ಆಗಿತ್ತು, ಇದು WHO ಶಿಫಾರಸು ಮಾಡಿದ ಎಲ್ಲಾ ಆಹಾರ ಮೂಲಗಳಿಂದ ದಿನವೊಂದಕ್ಕೆ ಸೇವಿಸಬಹುದಾದ ಪ್ರತಿದಿನಕ್ಕೆ 2000 ಮಿಲಿ ಗ್ರಾಂಗಿಂತ (5ಗ್ರಾಂ ಗಿಂತ ಕಡಿಮೆ) ಕಡಿಮೆ ಸೋಡಿಯಂ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ವರದಿ ಆತಂಕ ವ್ಯಕ್ತಡಿಸಿದೆ.
ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಹೆಚ್ಚಿನ ಅಪಾಯಕಾರಿ ಅಂಶಗಳು
WHO ತನ್ನ ವರದಿಯಲ್ಲಿ ಅಧಿಕ ರಕ್ತದೊತ್ತಡವು ಆರೋಗ್ಯದ ಒಂದು ಸ್ಥಿತಿಯಾಗಿದ್ದು, ಸೂಕ್ತ ಆಹಾರ ಮತ್ತು ಜೀವನಶೈಲಿ ಮಾರ್ಪಾಡುಗಳೊಂದಿಗೆ ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಿದೆ. ಅಧಿಕ ರಕ್ತದೊತ್ತಡದ ಪ್ರಮುಖ ಅಪಾಯಕಾರಿ ಅಂಶಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:
ಆಹಾರದ ಮೂಲಕ ಸೋಡಿಯಂನ ಅಧಿಕ ಸೇವನೆ
ಬೊಜ್ಜು ಮತ್ತು ಅದರ ಸಹ ಅಸ್ವಸ್ಥತೆಗಳು
ಮದ್ಯ ಮತ್ತು ತಂಬಾಕು ಬಳಕೆ
ಜಡ ಜೀವನಶೈಲಿ
“ಸ್ಥೂಲಕಾಯವುಳ್ಳವರಲ್ಲಿ ಕಂಡುಬರುವ ಅಧಿಕ ರಕ್ತದೊತ್ತಡ ಸಮಸ್ಯೆಯು ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆಯೊಂದಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಡಿಸ್ ಲಿಪಿಡೀಮಿಯಾ (ಅಧಿಕ ಕೊಲೆಸ್ಟ್ರಾಲ್) ನಂತಹ ಅನೇಕ ಸ್ಥಿತಿಗಳು ಒಟ್ಟಾಗಿರುವುದನ್ನು ಮೆಟಾಬಾಲಿಕ್ ಸಿಂಡ್ರೋಮ್ ಅಥವಾ ಸಿಂಡ್ರೋಮ್ ಎಕ್ಸ್ ಎಂದು ಕರೆಯಲಾಗುತ್ತದೆ” ಎಂದು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ರಾಜೇಶ್ ಭಟ್ ಅವರು ಇತ್ತೀಚೆಗೆ ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗಿನ ಸಂವಾದದಲ್ಲಿ ತಿಳಿಸಿದರು. ಇದು ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಹೆಚ್ಚಿನ ಅಪಾಯವನ್ನು ಒತ್ತಿ ಹೇಳುತ್ತದೆ.
ವರದಿಯಲ್ಲಿ ಜನರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುವ ಇತರ ಅಂಶಗಳಾಗಿ ವಂಶವಾಹಿನಿ, ಮಾಲಿನ್ಯ, ಅತ್ಯಂತ ಕಡಿಮೆ ತಾಪಮಾನ ಮತ್ತು ಎತ್ತರದ ಪರಿಸ್ಥಿತಿಗಳನ್ನು ಪಟ್ಟಿಮಾಡಲಾಗಿದೆ.
ಉಪ್ಪು ಸ್ವಲ್ಪವೇ ಸಾಕು, ಪೊಟ್ಯಾಸಿಯಮ್ ಮತ್ತು ನೈಟ್ರೇಟ್ ಸಮೃದ್ಧ ತರಕಾರಿಗಳನ್ನು ಚೆನ್ನಾಗಿ ತಿನ್ನಿ
WHO ವರದಿಯು, ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕಾಗಿ ಸೂಕ್ತವಾದ ಆಹಾರಕ್ರಮವನ್ನು ಶಿಫಾರಸು ಮಾಡಿದೆ. ಅದು ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಪೊಟ್ಯಾಸಿಯಮ್ ಮತ್ತು ನೈಟ್ರೇಟ್ ಸಮೃದ್ಧವಾಗಿರುವ ತರಕಾರಿಗಳೊಂದಿಗೆ ರಕ್ತ ಪರಿಚಲನೆಯನ್ನು ಸುಧಾರಿಸುವ, ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತು ನಿಮ್ಮ ಹೃದಯವು ಆರೋಗ್ಯಕರ ರೀತಿಯಲ್ಲಿ ಪಂಪ್ ಮಾಡುವುದಕ್ಕೆ ನೆರವಾಗುವ ಹಣ್ಣುಗಳನ್ನು ಸೇವಿಸಲು ಒತ್ತು ನೀಡುತ್ತದೆ.
“ಆರೋಗ್ಯಕರ ಆಹಾರದ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಫೈಬರ್ ಪ್ರೋಟೀನ್‌ಗಳು ಮತ್ತು ಖನಿಜಗಳನ್ನು ಸಮೃದ್ಧವಾಗಿ ಹೊಂದಿರುವ ಹೆಚ್ಚಿನ ಮತ್ತು ಸಮತೋಲಿತ ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು” ಎಂದು ಕಳೆದ ವಾರ ಹ್ಯಾಪಿಯೆಸ್ಟ್ ಹೆಲ್ತ್‌ಗೆ ನೀಡಿದ ಟೆಲಿಫೋನ್ ಸಂದರ್ಶನದಲ್ಲಿ ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಯ ಕಾರ್ಡಿಯೋ ಥೋರಾಸಿಕ್ ವ್ಯಾಸ್ಕುಲರ್ ಶಸ್ತ್ರಚಿಕಿತ್ಸಕ ಡಾ. ತೇಜಸ್ವಿ ಎನ್ ಮಾರ್ಲಾ ಹೇಳಿದರು. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸೋಡಿಯಂ ಬಳಕೆಯನ್ನು ಕಡಿಮೆ ಮಾಡುವುದು ಅತ್ಯಂತ ಸುಲಭದ ಮಾರ್ಗವಾಗಿದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ.
ಕುತೂಹಲಕಾರಿ ವಿಷಯವೆಂದರೆ ನೈಟ್ರೇಟ್ ಸಮೃದ್ಧ ಆಹಾರದ ಹೆಚ್ಚಿನ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತೊಂದು ಆರೋಗ್ಯಕರ ಆಹಾರ ವಿಧಾನವಾಗಿದೆ. ನೈಟ್ರಿಕ್ ಆಕ್ಸೈಡ್ ನಮ್ಮ ದೇಹದ ನೈಸರ್ಗಿಕ ರಕ್ತದೊತ್ತಡ ನಿಯಂತ್ರಕವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಇದಕ್ಕೆ ಕರುಳಿನ ಬ್ಯಾಕ್ಟೀರಿಯಾವಲ್ಲ, ಬದಲಿಗೆ ಬಾಯಿಯ ಬ್ಯಾಕ್ಟೀರಿಯಾ ಕಾರಣವಾಗಿದೆ. ಅದು ಹಸಿರು ಎಲೆ ತರಕಾರಿಗಳ ನೈಟ್ರೇಟ್ ಅನ್ನು ನೈಟ್ರಿಕ್ ಆಕ್ಸೈಡ್ ಆಗಿ ವಿಭಜಿಸಿ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ನಮ್ಮ ಅಪಧಮನಿಗಳನ್ನು ಸುತ್ತುವರಿದಿರುವ ನಾಳೀಯ ಒಳಪದರ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ, ಆದರೆ ಇದು ಹೆಚ್ಚಾಗಿ ನೈಟ್ರೇಟ್-ಸಮೃದ್ಧ ಆಹಾರ, ಮುಖ್ಯವಾಗಿ ತರಕಾರಿಗಳಿಂದ ಬಾಯಿಯ ಬ್ಯಾಕ್ಟೀರಿಯಾದ ಮೂಲಕ ವಿಭಜನೆಯಾಗುತ್ತದೆ. ನೈಟ್ರಿಕ್ ಆಕ್ಸೈಡ್ ಅಪಧಮನಿಗಳು ಮತ್ತು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಇದು ನಿಮ್ಮ ರಕ್ತದೊತ್ತಡದ ನಿಯಂತ್ರಣ ಮತ್ತು ನಿಮ್ಮ ದೇಹದಲ್ಲಿ ಸರಾಗ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೈಟ್ರಿಕ್ ಆಕ್ಸೈಡ್ ಪಾತ್ರದ ಕುರಿತು ಈ ಹಿಂದೆ ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗೆ ಮಾತನಾಡಿದ್ದ ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ಸ್, ಮಿಲ್ಲರ್ಸ್ ರಸ್ತೆಯ ಕಾರ್ಡಿಯಾಲಜಿ ಕನ್ಸಲ್ಟೆಂಟ್ ಡಾ.ಸುನೀಲ್ ದ್ವಿವೇದಿ ಹೇಳಿದರು.
ಭಾರತದ 4.6 ದಶಲಕ್ಷ ಜನರನ್ನು ಉಳಿಸಬಲ್ಲ ಅಧಿಕ ರಕ್ತದೊತ್ತಡದ ಸೂಕ್ತ ನಿರ್ವಹಣೆ
ಸೂಕ್ತವಾದ ಅಧಿಕ ರಕ್ತದೊತ್ತಡದ ನಿರ್ವಹಣಾ ವಿಧಾನವನ್ನು ಅನುಸರಿಸುವುದರಿಂದ 2040 ರ ವೇಳೆಗೆ ಭಾರತದಲ್ಲಿ ಕನಿಷ್ಠ 4.6 ದಶಲಕ್ಷ ಜನರ ಜೀವವನ್ನು ಉಳಿಸಬಹುದು ಎನ್ನುವುದನ್ನು ವರದಿ ಹೈಲೈಟ್ ಮಾಡುತ್ತದೆ. ಭಾರತದಲ್ಲಿ 2019 ರಲ್ಲಿ ಹೃದಯಪರಿಚಲನಾ ಕಾಯಿಲೆಯಿಂದ ಉಂಟಾದ 25,66,000 ಸಾವುಗಳಲ್ಲಿ 52 ಪ್ರತಿಶತ ಸಾವಿಗೆ ಅಧಿಕ ರಕ್ತದೊತ್ತಡ ಕಾರಣವಾಗಿದೆ. ಅಧಿಕ ರಕ್ತದೊತ್ತಡದ ಹೃದ್ರೋಗದಿಂದ ಉಂಟಾಗುವ ಎಲ್ಲಾ ಸಾವುಗಳ ಹೊರತಾಗಿ, ಹೃದ್ರೋಗಗಳು ಮತ್ತು ಪಾರ್ಶ್ವವಾಯುಗಳಿಂದ ಉಂಟಾಗುವ ಒಟ್ಟು ಸಾವುಗಳಲ್ಲಿ 53 ಪ್ರತಿಶತಕ್ಕೂ ಹೆಚ್ಚು ಸಾವುಗಳಿಗೆ ಅಧಿಕ ರಕ್ತದೊತ್ತಡ ಕಾರಣವಾಗಿದೆ.
ರಕ್ತದೊತ್ತಡವನ್ನು ಸ್ವಾಭಾವಿಕವಾಗಿ ನಿಯಂತ್ರಿಸಲು ಸಲಹೆಗಳು
ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಿ
ಜಂಕ್ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ
ಆರೋಗ್ಯಕರ ದೇಹದ ತೂಕವನ್ನು ಕಾಯ್ದುಕೊಳ್ಳಿ
ನಿಮ್ಮ ಆಹಾರದಲ್ಲಿ ಉಪ್ಪಿನ ಬಳಕೆ ಕಡಿಮೆಯಾಗಿರಲಿ
ಶಾಂತವಾಗಿ ಮತ್ತು ನೆಮ್ಮದಿಯಿಂದಿರಲು ಪ್ರಯತ್ನಿಸಿ
ಆರೋಗ್ಯಕರ ನಿದ್ರಾ ವೇಳಾಪಟ್ಟಿಯನ್ನು ಅನುಸರಿಸಿ
ಸಾರಾಂಶ
ಪ್ರಪಂಚದಾದ್ಯಂತ ಹೃದಯಪರಿಚಲನಾ ಕಾಯಿಲೆಗಳಿಂದ ಉಂಟಾಗುವ ಸಾವಿನ ಪ್ರಮುಖ ಕಾರಣಗಳಲ್ಲಿ ಅಧಿಕ ರಕ್ತದೊತ್ತಡವು ಒಂದಾಗಿದೆ. ಆಹಾರದಲ್ಲಿ ಅಧಿಕ ಸೋಡಿಯಂನ ಸೇವನೆ, ತಂಬಾಕು ಸೇವನೆ ಮತ್ತು ಮದ್ಯ ಸೇವನೆಯು ಅಧಿಕ ರಕ್ತದೊತ್ತಡ ಸಂಬಂಧಿತ ತೊಡಕುಗಳಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಅಧಿಕ ರಕ್ತದೊತ್ತಡವನ್ನು ಸುಲಭವಾದ ರೀತಿಯಲ್ಲಿ ನಿಯಂತ್ರಿಸಲು ನೆರವಾಗುತ್ತದೆ ಎಂಬುದನ್ನು ವರದಿ ಉಲ್ಲೇಖಿಸುತ್ತದೆ.