ಮಧುಮೇಹ ಇರುವವರು ಡೆಂಗ್ಯೂ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅದರಿಂದ ತೀವ್ರ ಪರಿಣಾಮ ಉಂಟಾಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ದೇಹದ ತೂಕ, ಅಧಿಕ ರಕ್ತದೊತ್ತಡ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಮಧುಮೇಹ ಹೊಂದಿರುವ ಜನರಲ್ಲಿ ಡೆಂಗ್ಯೂ ಆಕ್ರಮಣಕಾರಿ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಉರಿಯೂತ ಮಾತ್ರವಲ್ಲದೆ, ಡೆಂಗ್ಯೂ ಕಾರಣದಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿಯೂ ಏರಿಳಿತ ಉಂಟಾಗಬಹುದು. ಮಧುಮೇಹ ಹೊಂದಿರುವ ಜನರಲ್ಲಿ, ಡೆಂಗ್ಯೂ ಜ್ವರವು ರಕ್ತದಲ್ಲಿ ಗ್ಲೂಕೋಸ್ ಏರಿಳಿತಗಳನ್ನು ಉಂಟುಮಾಡಿ, ಹಸಿವಿಗೆ ಸಂಬಂಧಿಸಿದಂತೆ ಹೆಚ್ಚುವರಿ ಅಪಾಯಕ್ಕೆ ಕಾರಣವಾಗಬಹುದು.
“ಮಧುಮೇಹ ಹೊಂದಿರುವವರು ತಮ್ಮ ಸಕ್ಕರೆ ಮಟ್ಟ ಮತ್ತು ಪ್ಲೇಟ್‌ಲೆಟ್ ಎಣಿಕೆಯ ಮೇಲೆ ನಿಗಾ ಇಡಬೇಕು” ಎಂದು ಮುಂಬೈನ S L ರಹೇಜಾ ಆಸ್ಪತ್ರೆಯ ಹಿರಿಯ ಡಯಾಬಿಟಾಲಜಿಸ್ಟ್ ಡಾ. ಅನಿಲ್ ಭೋರಸ್ಕರ್ ಎಚ್ಚರಿಸುತ್ತಾರೆ. ಮಧುಮೇಹ ಇದ್ದು ಈಗಾಗಲೇ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಕಾಯಿಲೆಗಳಂತಹ ಪರಿಸ್ಥಿತಿಗಳಿಂದ ಬಳಲುತ್ತಿರುವವರು ತೊಡಕುಗಳಿಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಅವರು ಹೇಳುತ್ತಾರೆ.
PLOS One ನಲ್ಲಿ ಪ್ರಕಟವಾದ ಮೆಟಾ-ವಿಶ್ಲೇಷಣೆಯು (ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ ಪ್ರಕಟಿಸಿದ ಪೀರ್-ರಿವ್ಯೂಡ್ ಜರ್ನಲ್) ಕೇಸ್ ಕಂಟ್ರೋಲ್ ಸ್ಟಡೀಸ್ ಮತ್ತು ಒಂಬತ್ತು ರೆಟ್ರೋಸ್ಪೆಕ್ಟಿವ್ ಕೋಹಾರ್ಟ್ ಅಧ್ಯಯನಗಳು, ಸಹ-ರೋಗಸ್ಥಿತಿಗಳಾದ ಹೃದಯರಕ್ತನಾಳದ ಕಾಯಿಲೆ, ಉಸಿರಾಟದ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಮತ್ತು ವೃದ್ಧಾಪ್ಯಗಳು ತೀವ್ರವಾದ ಡೆಂಗ್ಯೂಗೆ ಕಾರಣವಾಗಬಹುದು ಎಂದು ತೋರಿಸಿವೆ.
ಮಧುಮೇಹ ಮತ್ತು ಡೆಂಗ್ಯೂ: ರಕ್ತದಲ್ಲಿನ ಕಡಿಮೆ ಸಕ್ಕರೆಯ ಮಟ್ಟದ ಸಂದರ್ಭಗಳನ್ನು ಗಮನಿಸಿ
ತೀವ್ರ ಜ್ವರದ ಸಮಯದಲ್ಲಿ ರೋಗಿಯ ಆಹಾರ ಸೇವನೆಯು ಸಂಪೂರ್ಣವಾಗಿ ಸೀಮಿತವಾಗಿರುತ್ತದೆ ಮತ್ತು ರೋಗಿಯು ಸಾಕಷ್ಟು ಆಹಾರವನ್ನು ತಿನ್ನಲು ಸಾಧ್ಯವಾಗದೆ ನಿಶ್ಯಕ್ತಿಗೆ ಒಳಗಾಗುತ್ತಾನೆ. ಇಂತಹ ರೋಗಿಗಳು ಔಷಧಿಗಳನ್ನಷ್ಟೇ ಸೇವಿಸುತ್ತಾ ಇದ್ದರೆ, ಅದು ಕೂಡಾ ಬಾಯಿಯ ಮೂಲಕ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅವರಲ್ಲಿ ಆಗಾಗ ಹೈಪೋಗ್ಲೈಸೆಮಿಯಾ ಕಂಡುಬರಬಹುದು, ಇದು ಅಪಾಯಕಾರಿ ಪರಿಸ್ಥಿತಿ” ಎಂದು ಡಾ ಭೋರಸ್ಕರ್ ಎಚ್ಚರಿಸುತ್ತಾರೆ.
ಸಂಪೂರ್ಣ ರಕ್ತದ ಎಣಿಕೆ ಅಥವಾ CBC ಪರೀಕ್ಷೆಯು, ಬಿಳಿ ರಕ್ತ ಕಣಗಳ ಎಣಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಪ್ಲೇಟ್‌ಲೆಟ್ ಎಣಿಕೆ(ಪ್ರಮಾಣ) ಕಡಿಮೆಯಾದಾಗ ಬಿಳಿಯ ರಕ್ತಕಣಗಳು ಹೆಚ್ಚಾಗುತ್ತವೆ. ಪ್ಲೇಟ್‌ಲೆಟ್ ಎಣಿಕೆ ತೀವ್ರವಾಗಿ ಇಳಿಯುತ್ತಿದ್ದರೆ ಮತ್ತು 50,000 ರ ನಿರ್ಣಾಯಕ ಮಟ್ಟಕ್ಕಿಂತ ಕಡಿಮೆಯಾದರೆ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು ಮತ್ತು ಪ್ಲೇಟ್‌ಲೆಟ್‌ಗಳ ಪೂರೈಕೆಯ (ವರ್ಗಾವಣೆ) ಜೊತೆಗೆ IV ದ್ರವಗಳನ್ನು ನೀಡಬೇಕಾಗುತ್ತದೆ.
“ಈ ಪರಿಸ್ಥಿತಿಯನ್ನು ಎದುರಿಸುವ ಯಾರೇ ಆದರೂ ಜಾಗರೂಕರಾಗಿರಬೇಕು, ಅದರಲ್ಲೂ ಮಧುಮೇಹ ಹೊಂದಿರುವ ವ್ಯಕ್ತಿಯಾಗಿದ್ದರೆ ಇನ್ನಷ್ಟು ಜಾಗೃತರಾಗಿರಬೇಕು, ಏಕೆಂದರೆ ಮಧುಮೇಹ ಹೊಂದಿರುವ ಜನರಲ್ಲಿ ಅವರ ಪ್ರಾಣಾಧಾರ ಅಂಶಗಳನ್ನು ಚೆನ್ನಾಗಿ ನಿರ್ವಹಿಸಬೇಕಾಗುತ್ತದೆ.
ಮಧುಮೇಹವು ಡೆಂಗ್ಯೂ ತೊಡಕುಗಳನ್ನು ಹೆಚ್ಚಿಸಬಹುದೇ?
ಮಣಿಪಾಲ್ ಆಸ್ಪತ್ರೆಯ, ಆಂತರಿಕ ಔಷಧಿ ವಿಭಾಗದ ಕನ್ಸಲ್ಟೆಂಟ್ ಮತ್ತು ಡಯಾಬಿಟಾಲಜಿಸ್ಟ್ ಡಾ. ಪ್ರಮೋದ್ ವಿ ಸತ್ಯಾ ಅವರು, ಹೆಮರಾಜಿಕ್ ಜ್ವರ ಮತ್ತು ಶಾಕ್ ಸಿಂಡ್ರೋಮ್ ಈ ಎರಡೂ ಪರಿಸ್ಥಿತಿಗಳು ಪ್ಲೇಟ್‌ಲೆಟ್ ಎಣಿಕೆಗಳು ತೀರಾ ಕಡಿಮೆ ಇರುವಾಗ ಡೆಂಗ್ಯೂನಲ್ಲಿ ಕಾಣಿಸಿಕೊಳ್ಳುವ ಅತಿದೊಡ್ಡ ತೊಡಕುಗಳಾಗಿವೆ ಎಂದು ವಿವರಿಸುತ್ತಾರೆ.
ಡೆಂಗ್ಯೂ ಹೆಮರಾಜಿಕ್ ಜ್ವರ ಅಂದರೆ, ರಕ್ತನಾಳಗಳು ಅಥವಾ ಕ್ಯಾಪಿಲ್ಲರಿಗಳಿಂದ ದೇಹಕ್ಕೆ ರಕ್ತ ಸೋರಿಕೆಯಾಗುವ ಮತ್ತು ಶ್ವಾಸಕೋಶ, ಹೊಟ್ಟೆ, ಪಿತ್ತಕೋಶ, ಯಕೃತ್ತಿನೊಳಗೆ ನೀರು ಸಂಗ್ರವಾಗುವ ಒಂದು ರೋಗಸ್ಥಿತಿ. ಈ ಪರಿಸ್ಥಿತಿಯಲ್ಲಿ ರಕ್ತದೊತ್ತಡ ತೀವ್ರವಾಗಿ ಕುಸಿಯುತ್ತದೆ, ಇದನ್ನು ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದು ಕರೆಯುತ್ತಾರೆ.
ಚಿಕಿತ್ಸಾ ಕ್ರಮ:
ತೀವ್ರ ಡೆಂಗ್ಯೂ ಬಾಧಿತ ವ್ಯಕ್ತಿಗೆ IV ದ್ರವಗಳನ್ನು ನೀಡಲಾಗುತ್ತದೆ, ಪ್ಲೇಟ್‌ಲೆಟ್ ವರ್ಗಾವಣೆ ಇದು ರಕ್ತದಲ್ಲಿನ ಸಕ್ಕರೆ ಅಂಶಗಳ ಮೇಲೆ ಪರಿಣಾಮ ಬೀರದ ಒಂದು ಸಾಮಾನ್ಯ ಚಿಕಿತ್ಸೆಯಾಗಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಸ್ಟೀರಾಯ್ಡ್‌ಗಳನ್ನು ಸಹ ನೀಡಲಾಗುತ್ತದೆ ಇದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುತ್ತವೆ.
ಇತರ ಯಾವುದೇ ಸೋಂಕಿನಂತೆಯೇ, ಡೆಂಗ್ಯೂನಲ್ಲಿಯೂ ಸಹ ರಕ್ತದಲ್ಲಿನ ಸಕ್ಕರೆಯ ಅಂಶಗಳು ಹೆಚ್ಚಾಗಬಹುದು ಎಂದು ಡಾ. ಸತ್ಯಾ ಹೇಳುತ್ತಾರೆ. ಯಾವುದೇ ಸೋಂಕು ಅಥವಾ ಉರಿಯೂತವು ಸಾಮಾನ್ಯವಾಗಿ ಒತ್ತಡದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ, ಆದರೆ ಮಧುಮೇಹ ಇರುವವರಲ್ಲಿ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಆಗುತ್ತದೆ ಅಥವಾ ಆಗುವುದಿಲ್ಲ ಅನ್ನುವುದಕ್ಕೆ ಬಲವಾದ ಆಧಾರಗಳಿಲ್ಲ.
ಮಧುಮೇಹ ಹೊಂದಿರುವ ಜನರಿಗೆ ಡೆಂಗ್ಯೂ ಎಚ್ಚರಿಕೆ
“ಡೆಂಗ್ಯೂ ಜ್ವರದಿಂದ ಪೀಡಿತ ಜನರಲ್ಲಿ ರಕ್ತಸ್ರಾವವಾಗುವ ಅಪಾಯದ ದೃಷ್ಟಿಯಿಂದ, ಯಾವುದೇ ರೀತಿಯ ರಕ್ತ ತೆಳುಕಾರಕ ಔಷಧಿಗಳನ್ನು ಅವರು ಬಳಸುತ್ತಿದ್ದರೆ ಅವನ್ನು ನಿಲ್ಲಿಸಬೇಕಾಗುತ್ತದೆ” ಎಂದು ಡಯಾಬಿಟಾಲಾಜಿಸ್ಟ್ ಡಾ. ಅಶ್ವಿತಾ ಶ್ರುತಿ ದಾಸ್ ಹೇಳುತ್ತಾರೆ.
“ಮಧುಮೇಹ ಹೊಂದಿರುವ ವ್ಯಕ್ತಿಯು ಡೆಂಗ್ಯೂ ಜ್ವರದ ಸಮಯದಲ್ಲಿ ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮೇಲ್ವಿಚಾರಣೆ ಮಾಡಬೇಕು ಮತ್ತು ಅದಕ್ಕೆ ಅನುಗುಣವಾಗಿ ಇನ್ಸುಲಿನ್ ಅನ್ನು ಪಡೆಯಬೇಕು, ಮೌಖಿಕ ಔಷಧಿಗಳನ್ನು ತಪ್ಪಿಸುವುದು ಉತ್ತಮ” ಎಂದು ಡಾ. ಭೋರಸ್ಕರ್ ಹೇಳುತ್ತಾರೆ.
“ರಕ್ತ ಹೆಪ್ಪುಗಟ್ಟುವಿಕೆ ದುರ್ಬಲಗೊಂಡಿರುವ ಕಾರಣಕ್ಕಾಗಿ, ಮೌಖಿಕ ಔಷಧಿಗಳನ್ನು ಕಡಿಮೆ ಮಾಡುವುದು ಉತ್ತಮ, ಸಕ್ಕರೆಯ ಮಟ್ಟ ಅಧಿಕವಾಗಿದ್ದರೆ ರೋಗಿಯನ್ನು ಇನ್ಸುಲಿನ್ ಮೇಲೆ ಇಡುವುದು ಉತ್ತಮ ಏಕೆಂದರೆ ಟ್ಯಾಬ್ಲೆಟ್‌ಗಳಿಗಿಂತ/ಮೌಖಿಕ ಔಷಧಿಗಳಿಗಿಂತ, ಇನ್ಸುಲಿನ್ ಪರಿಣಾಮವು ಸಾಕಷ್ಟು ಉತ್ತಮವಾಗಿರುತ್ತದೆ” ಎಂದು ಡಾ. ಭೋರಸ್ಕರ್ ಹೇಳುತ್ತಾರೆ.
ರೋಗಿಯಲ್ಲಿ ತೀವ್ರ ಪ್ರಮಾಣದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗಿದ್ದರೆ, ಆಗಾಗ ರಕ್ತಸ್ರಾವವಾಗಬಹುದು; ಜಠರ ಅನ್ನನಾಳ ಪ್ರದೇಶದಲ್ಲಿ ರಕ್ತಸ್ರಾವವಾಗಬಹುದು. ರಕ್ತ ಸ್ರಾವ ಮತ್ತು ನಿರ್ಜಲೀಕರಣದಿಂದಾಗಿ ರೋಗಿಯು ಆಘಾತಕ್ಕೆ ಒಳಗಾಗಬಹುದು.
ಡೆಂಗ್ಯೂ ಅನ್ನು ಹಿಮ್ಮೆಟ್ಟಿಸಲು ದ್ರವಗಳನ್ನು ಕುಡಿಯಿರಿ
ಡೆಂಗ್ಯೂ ಜ್ವರದ ವಿರುದ್ಧ ಹೋರಾಡುತ್ತಿರುವ ಜನರು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಸಾಕಷ್ಟು ದ್ರವಾಹಾರ ಸೇವಿಸುವುದು ಉತ್ತಮ. ಅವರು ಲವಣಯುಕ್ತ ಪಾನೀಯ ಸೇವನೆಯನ್ನು ಹೆಚ್ಚಿಸಬೇಕು, ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಜ್ವರವನ್ನು ಕಡಿಮೆ ಮಾಡಲು ಪ್ಯಾರೆಸಿಟಮಾಲ್ ಔಷಧಿಯನ್ನು ತೆಗೆದುಕೊಳ್ಳಬಹುದು.
“ನಿರ್ಜಲೀಕರಣ ಅಥವಾ ದೇಹದಲ್ಲಿನ ದ್ರವಾಂಶವನ್ನು ಕಾಪಾಡಿಕೊಳ್ಳಲು, ಸಿಹಿ ಸೇರಿಸದ ತಾಜಾ ರಸಗಳು, ಎಳನೀರು ಅಥವಾ ನಿಂಬೆ ರಸವನ್ನು ಉಪ್ಪಿನೊಂದಿಗೆ ಸೇರಿಸಿ ಸೇವಿಸಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ” ಎಂದು ಡಾ ಭೋರಸ್ಕರ್ ಹೇಳುತ್ತಾರೆ.
ಮಧುಮೇಹ ಹೊಂದಿರುವ ಜನರು, ಅದರಲ್ಲೂ ವಿಶೇಷವಾಗಿ ವಯಸ್ಸಾದವರು ಸೊಳ್ಳೆ ಕಡಿತವನ್ನು ತಪ್ಪಿಸಲು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ನಿಂತ ನೀರಿನಲ್ಲಿ, ಅಪಾಯಕಾರಿ ಕೊಳಚೆಯಲ್ಲಿ ಸೊಳ್ಳೆಗಳು ಬೆಳೆಯದಂತೆ ತಮ್ಮ ಪ್ರದೇಶವನ್ನು ಸ್ವಚ್ಛವಾಗಿಡಬೇಕು.
ಸಾರಾಂಶ:
ಮಧುಮೇಹದ ಸಹ-ರೋಗಸ್ಥಿತಿ ಮತ್ತು ಡೆಂಗ್ಯೂ ಜ್ವರ ಇರುವವರು ತಮ್ಮ ಸಕ್ಕರೆಯ ಮಟ್ಟವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮೇಲ್ವಿಚಾರಣೆ ಮಾಡಬೇಕು.
ರಕ್ತ ತೆಳುಕಾರಕ ಔಷಧಿಯನ್ನು (ಬ್ಲಡ್ ಥಿನ್ನರ್ಸ್) ಪಡೆಯುತ್ತಿರುವ ಜನರು, ರಕ್ತಸ್ರಾವ ಮತ್ತು ಡೆಂಗ್ಯೂ ಶಾಕ್ ಸಿಂಡ್ರೋಮ್ ಅಪಾಯವನ್ನು ತಪ್ಪಿಸಲು, ಅಂತಹ ಔಷಧಿಗಳನ್ನು ನಿಲ್ಲಿಸಬೇಕು. ರಕ್ತಸ್ರಾವ ಮತ್ತು ಡೆಂಗ್ಯೂ ಶಾಕ್ ಸಿಂಡ್ರೋಮ್ ಪರಿಸ್ಥಿತಿಗಳಿಗೆ ಸಕಾಲಿಕ ಚಿಕಿತ್ಸೆ ನೀಡದಿದ್ದರೆ ಅವು ಮಾರಕವಾಗಬಹುದು.
ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಜನರು ಸಾಕಷ್ಟು ದ್ರವಾಂಶಗಳನ್ನು ಸೇವಿಸಬೇಕು. ತೀವ್ರ ಸಂದರ್ಭಗಳಲ್ಲಿ ಅವರಿಗೆ IV ದ್ರಾವಣಗಳು ಮತ್ತು ಪ್ಲೇಟ್‌ಲೆಟ್ ವರ್ಗಾವಣೆಯ ಅಗತ್ಯವಿರುತ್ತದೆ.