ಮಧುಮೇಹ ನಿರ್ವಹಣೆಯಲ್ಲಿ ಸಣ್ಣಪುಟ್ಟ ವಿಷಯಗಳು ಕೂಡಾ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದ ಗುರಿಯನ್ನು ಹಾಳುಗೆಡಹಬಹುದು. ಮಧುಮೇಹ ಸ್ನೇಹಿ ಸ್ನ್ಯಾಕ್‌ಗಳ ಆಯ್ಕೆಯ ನಂತರವೂ ಆರೋಗ್ಯಕರ ಡಿಪ್‌ಗಳ ಬದಲಿಗೆ ಜನರು ಕೆಚಪ್‌ಗಳು ಮತ್ತು ಸಲಾಡ್ ಡಿಪ್‌ಗಳಂತಹ ಸಂಸ್ಕರಿಸಿ ಪ್ಯಾಕ್ ಮಾಡಲಾದ ಡಿಪ್‌ಗಳನ್ನು ಬಳಸಿ ತಮ್ಮ ರಕ್ತದ ಗ್ಲೂಕೋಸ್ ಅನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಮಧುಮೇಹ ನಿರ್ವಹಣೆ ಪ್ಲಾನ್‌ಗಳ ಮೇಲೆ ಡಿಪ್‌ಗಳ ಪರಿಣಾಮ
ಈ ಡಿಪ್‌ಗಳು(ಮಿಶ್ರಣ/ಚಟ್ನಿ) ಅಥವಾ ಕಾಂಡಿಮೆಂಟ್‌ಗಳು ಸಂರಕ್ಷಕಗಳು ಮಾತ್ರವಲ್ಲದೇ ಟ್ರಾನ್ಸ್‌ಫ್ಯಾಟ್‌ಗಳು ಮತ್ತು ಸಕ್ಕರೆಯನ್ನೂ ಹೊಂದಿದ್ದು ಇವು ಸಕ್ಕರೆ ಮಟ್ಟವನ್ನು ಹೆಚ್ಚಿಸಿ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.
“ಟೊಮೆಟೋ ಕೆಚಪ್ ಅನ್ನು ದಿನನಿತ್ಯ ಸೇವಿಸುವ ಜನರು ಅದರಲ್ಲಿರುವ ಕಾರ್ನ್ ಸಿರಪ್ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ವಿಚಾರವನ್ನು ತಿಳಿದಿರುವುದಿಲ್ಲ” ಎಂದು ವೈಟ್‌ಫೀಲ್ಡ್ ಮಣಿಪಾಲ್ ಆಸ್ಪತ್ರೆಯ ಡಯಾಬಿಟಿಸ್ ಮತ್ತು ಎಂಡೋಕ್ರೈನಾಲಜಿ ಸಲಹೆಗಾರರಾದ ಡಾ ಶ್ರೀದೇವಿ ಅತ್ಲುರಿ ಹೇಳುತ್ತಾರೆ.
ಮೇಯೋನೈಸ್, ಪೀನಟ್ ಬಟರ್ ಚೀಸ್ ಡಿಪ್ಸ್‌ನಂತಹ ಕಾಂಡಿಮೆಂಟ್‌ಗಳೊಂದಿಗೆ ಸ್ನ್ಯಾಕ್‌ಗಳ ಸೇವನೆ ಒಳ್ಳೆಯದಲ್ಲ, ಯಾಕೆಂದರೆ, ಇದರಲ್ಲಿ ಕೊಬ್ಬಿನಾಮ್ಲಗಳು (ಫ್ಯಾಟಿ ಆಸಿಡ್) ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅಲ್ಲದೇ ಹೆಚ್ಚು ಕ್ಯಾಲರಿ ಹೊಂದಿರುವ ಆಹಾರಗಳು ತೂಕ ಹೆಚ್ಚಳಕ್ಕೆ ಕಾರಣವಾಗಿ ಅನಾರೋಗ್ಯಕರ ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಧುಮೇಹ ತಜ್ಞರಾದ ಡಾ ಅಶ್ವಿತಾ ಶ್ರುತಿ ದಾಸ್ ಅವರು ಹೇಳುವಂತೆ, ಮಧುಮೇಹಿಗಳು ಅಧಿಕ ಸೋಡಿಯಂ ಮತ್ತು ಸಕ್ಕರೆಯುಕ್ತ ಸಂರಕ್ಷಕಗಳನ್ನು ಹೊಂದಿರುವ ಅನಾರೋಗ್ಯಕರ ಆಹಾರಗಳನ್ನು ನಿರಂತರವಾಗಿ ಸೇವಿಸುತ್ತಿದ್ದರೆ, ಅಧಿಕ ರಕ್ತದೊತ್ತಡ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಮತ್ತು ಇತರ ಸಹವರ್ತಿ ರೋಗಗಳಿಗೆ ಅವುಗಳು ಕಾರಣವಾಗಿ ಮಧುಮೇಹಿಗಳಿಗೆ ಅಪಾಯ ಉಂಟುಮಾಡಬಹುದು.
ಮಧುಮೇಹ ನಿರ್ವಹಣೆ – ಮನೆಯಲ್ಲಿ ಸಿದ್ಧಪಡಿಸಿದ ಡಿಪ್‌ಗಳನ್ನು ಬಳಸಿ
ಕೆಚಪ್ ಬಾಟಲ್‌ಗಳು ಮತ್ತು ಪ್ಯಾಕೇಜ್‌ಗಳು ಮಧುಮೇಹ-ಸ್ನೇಹಿಯಾಗಿವೆಯೇ ಎಂಬುದನ್ನು ಅವುಗಳ ಪದಾರ್ಥಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಓದಿ ನಂತರವೇ ಬಳಸುವುದು ಸೂಕ್ತ. ಆದರೆ ಮನೆಯಲ್ಲಿಯೇ ಸಿದ್ಧಪಡಿಸಿದ ಡಿಪ್‌ಗಳನ್ನು ಬಳಸುವುದು ಇದಕ್ಕಿಂತಲೂ ಉತ್ತಮ ಮತ್ತು ಹೆಚ್ಚು ಮಧುಮೇಹ ಸ್ನೇಹಿ ಆಯ್ಕೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.
“ತಾಜಾ ಟೊಮೆಟೋ ಬಳಸಿ ಸಿದ್ಧಪಡಿಸಿದ ಟೊಮೆಟೋ ಚಟ್ನಿ, ನೆಲಕಡಲೆ ಚಟ್ನಿ ಅಥವಾ ಅಧಿಕ GI ಹೊಂದಿದ ಗೆಡ್ಡೆ ತರಕಾರಿಗಳನ್ನು ಹೊರತುಪಡಿಸಿದ ಇತರ ಯಾವುದೇ ತರಕಾರಿಗಳನ್ನು ಬಳಸಿ ತಯಾರಿಸಿದವುಗಳ ಸೇವನೆಯೇ ಉತ್ತಮ” ಎಂದು ಡಾ ಅತ್ಲುರಿ ಹೇಳುತ್ತಾರೆ.
ಆಹಾರತಜ್ಞರಾದ ನಿಧಿ ನಿಗಮ್ ಅವರ ಪ್ರಕಾರ, ನೈಸರ್ಗಿಕ ಮತ್ತು ಕಡಿಮೆ ಕ್ಯಾಲರಿಯುಳ್ಳ ಪದಾರ್ಥಗಳಾದ ಬೆಣ್ಣೆಹಣ್ಣು, ಟೊಮೆಟೊ, ಬೀಜಗಳನ್ನು ಬಳಸಿ ಮಾಡಿದ ಆರೋಗ್ಯಕರ ಮತ್ತು ರುಚಿಕರ ಡಿಪ್‌ಗಳನ್ನು ಬಳಸುವುದು ಉತ್ತಮ.
“ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಮಧುಮೇಹ ಸ್ನೇಹಿ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ಡಿಪ್‌ಗಳು ಶ್ರೇಷ್ಠ” ಎಂದು ಆಹಾರತಜ್ಞರಾದ ದೀಪಲೇಖ ಬ್ಯಾನರ್ಜಿ ಹೇಳುತ್ತಾರೆ.
ಆರೋಗ್ಯಕರ ಸಹಖಾದ್ಯಗಳಾದ ಹಮ್ಮಸ್ (ಕಡಲೆ ಡಿಪ್), ತಹೀನಿ (ಎಳ್ಳು ಡಿಪ್), ಸಾಲ್ಸಾ (ಟೊಮೆಟೊ, ಈರುಳ್ಳಿ ಮತ್ತು ಕಾಳು ಮೆಣಸು ಬಳಸಿ ತಯಾರಿಸಿದ ಮೆಕ್ಸಿಕನ್ ಡಿಪ್), ಮಸೂರ ಮತ್ತು ತರಕಾರಿಗಳನ್ನು ಬಳಸಿ ಮಾಡಿದ ಡಿಪ್‌ಗಳನ್ನು ಬಳಸಿ ಎಂದು ಆಹಾರತಜ್ಞೆ ದೀಪಲೇಖ ಬ್ಯಾನರ್ಜಿ ಸೂಚಿಸುತ್ತಾರೆ. ಈ ಎಲ್ಲಾ ಪದಾರ್ಥಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಉತ್ತಮ ಹೀರಿಕೊಳ್ಳುವಿಕೆಗೆ ನೆರವಾಗಿ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ” ಎಂದು ಅವರು ಹೇಳುತ್ತಾರೆ.
ತಹೀನಿ ಡಿಪ್ ಅನ್ನು ಒಮೆಗಾ 3 ಫ್ಯಾಟಿ ಆಮ್ಲಭರಿತವನ್ನಾಗಿ ಮಾಡಲು ಹುರಿದ ಎಳ್ಳಿನ ಬೀಜಗಳನ್ನು ಪೇಸ್ಟ್ ಮಾಡಿ ನಂತರ ಇದಕ್ಕೆ ತುಸು ಆಲಿವ್ ಎಣ್ಣೆ, ಬೆಳ್ಳುಳ್ಳಿ ಮತ್ತು ನಿಂಬೆರಸ ಸೇರಿಸಿ ಎಲ್ಲವನ್ನೂ ಮೊಸರಿಗೆ ಹಾಕಿ ಮಿಶ್ರಣ ಮಾಡಿ. ಈ ಕಹಿ-ಹುಳಿ ಡಿಪ್ ಕ್ಯಾಲ್ಸಿಯಂನ ಉತ್ತಮ ಮೂಲ ಮತ್ತು ಎಳ್ಳಿನಲ್ಲಿ ಸಮತೋಲಿತ ಪ್ರಮಾಣದ ಒಮೆಗಾ 3,6,9 ಫ್ಯಾಟಿ ಆಮ್ಲಗಳನ್ನು ಹೊಂದಿದೆ.
ಅಂತೆಯೇ, ಹಮ್ಮಸ್ ಎಂಬ ಮಧ್ಯಪ್ರಾಚ್ಯ ಡಿಪ್ ಮೂಲ ರೆಸಿಪಿ ಹೊರತಾಗಿ ಅನೇಕ ಆರೋಗ್ಯಕರ ವೈವಿಧ್ಯತೆಗಳನ್ನು ಒಳಗೊಂಡಿದೆ. ಬೇಯಿಸಿದ ಕಡಲೆ ಜೊತೆಗೆ ಬೆಳ್ಳುಳ್ಳಿ, ತಹೀನಿ ಪೇಸ್ಟ್, ಆಲಿವ್ ಎಣ್ಣೆ ಮತ್ತು ಉಪ್ಪನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ.
ಹಸಿರು ಟೊಮೆಟೋವನ್ನು ಹುರಿದು ತಯಾರಿಸಿದ ಇದರ ಪೌಷ್ಠಿಕಾಂಶಯುಕ್ತ ಇನ್ನೊಂದು ರೂಪವಾದ ಹಸಿರು ಟೊಮೆಟೋ ಹಮ್ಮಸ್ ವಿಟಮಿನ್ ಎ ಇಂದ ಸಮೃದ್ಧವಾಗಿದೆ. ಅಲ್ಲದೇ ಇದು ಪೊಟ್ಯಾಷಿಯಂನ ಉತ್ತಮ ಮೂಲವಾಗಿದ್ದು ಸೋಡಿಯಂನ ಪರಿಣಾಮವನ್ನು ತಟಸ್ಥಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಬ್ಯಾನರ್ಜಿ ಹೇಳುತ್ತಾರೆ.
ಅದೇ ರೀತಿ, ಇವುಗಳನ್ನು ಪೌಷ್ಠಿಕಾಂಶ ಮತ್ತು ರುಚಿಯನ್ನು ಹೆಚ್ಚಿಸಲು ಕೆಂಪು ಕ್ಯಾಪ್ಸಿಕಂ ಹಮ್ಮಸ್, ಬೀಟ್‌ರೂಟ್, ಈರುಳ್ಳಿ ಎಲೆ ಸಾಲ್ಸಾ, ಮೊಸರು ಮತ್ತು ಚೆರಿ ಟೊಮೆಟೋ ಡಿಪ್, ಹಾಗೂ ಹೂಕೋಸು ಕಡಲೆ ಹಮ್ಮಸ್‌ನಂತಹ ಇತರ ಪೌಷ್ಠಿಕಾಂಶಯುಕ್ತ ಮತ್ತು ಆ್ಯಂಟಿ ಆಕ್ಸಿಡೆಂಟ್‌ಭರಿತ ಡಿಪ್‌ಗಳನ್ನು ತಯಾರಿಸಬಹುದು.
ರೆಡಿ-ಮೇಡ್ ಕೆಚಪ್ ಬದಲಿಗೆ ಈರುಳ್ಳಿ, ಟೊಮೆಟೊ, ಸಸ್ಯಗಳ ಎಲೆಗಳು, ಕೊತ್ತಂಬರಿ ಎಲೆಗಳು ಮತ್ತು ನಿಂಬೆರಸ ಹಾಕಿದ ತಾಜಾ ಮತ್ತು ಹುಳಿಯಾದ ಸಾಲ್ಸಾ ಎಂಬ ಮೆಕ್ಸಿಕನ್ ರೆಸಿಪಿ ಬಳಸಿ ಎಂದು ನಿಗಮ್ ಹೇಳುತ್ತಾರೆ.
ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೊಪ್ಪು ಇದರೊಂದಿಗೆ ಉಪ್ಪು, ಹಸಿಮೆಣಸು ಹಾಗೂ ಆಮ್‌ಚೂರ್ ಪೌಡರ್ ಅನ್ನು ಬ್ಲೆಂಡ್ ಮಾಡಿ ಅದಕ್ಕೆ ಮೊಸರನ್ನು ಸೇರಿಸಿದರೆ ಮಧುಮೇಹ ಸ್ನೇಹಿ ಸ್ನ್ಯಾಕ್‌ಗಳಿಗೆ ಇನ್ನೊಂದು ಆರೋಗ್ಯಕರ ಡಿಪ್ ಸಿದ್ಧವಾಗುತ್ತದೆ. ಈ ಡಿಪ್ ಸುಟ್ಟ ಹಪ್ಪಳ, ವೆಜ್ಜಿ ಸ್ಟಿಕ್ಸ್ (ಕ್ಯಾರಟ್ ಮತ್ತು ಸೌತೆಕಾಯಿ) ಮತ್ತು ಗ್ರಿಲ್ ಮಾಡಿದ ಕಬಾಬ್‌ನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ನಿಗಮ್ ವಿವರಿಸುತ್ತಾರೆ.
ಇದನ್ನೇ ಇನ್ನೊಂದು ವಿಧಾನದಲ್ಲಿ ,ಆರೋಗ್ಯಕರ ಕೊಬ್ಬನ್ನು ಹೊಂದಿರುವ ಎಳ್ಳು ಮತ್ತು ಅಗಸೆ ಬೀಜಗಳೊಂದಿಗೆ ಬೆಳ್ಳುಳ್ಳಿ, ಉಪ್ಪು, ಹಸಿಮೆಣಸು ರುಬ್ಬಿ ಮೊಸರಿನೊಂದಿಗೆ ಮಿಶ್ರಣ ಮಾಡಿದರೆ ಅದ್ಭುತವಾದ ಆರೋಗ್ಯಕರ ಡಿಪ್ ತಯಾರಾಗುತ್ತದೆ. ಇದು ಕೂಡಾ ವೆಜ್ಜಿ ಸ್ಟಿಕ್ಸ್, ಹೆಸರು ಬೇಳೆ ಹಪ್ಪಳ, ತೇಪ್ಲಾ, ಖಾಕ್ರ ಮೇಥಿ, ಮಖಾನಾ ಮತ್ತು ಬೇಲ್‌ಪುರಿಯಂತಹ ಸ್ನ್ಯಾಕ್ಸ್ ಜೊತೆಗೆ ನೆಚ್ಚಿಕೊಳ್ಳಲು ರುಚಿಯಾಗಿರುತ್ತದೆ.
ಬೀಜಗಳಿಂದ ತಯಾರಿಸುವ ಡಿಪ್‌ಗಳು ಪ್ರೊಟೀನ್ ಮತ್ತು ಉತ್ತಮ ಕೊಬ್ಬನ್ನು ದೇಹಕ್ಕೆ ನೀಡುವುದು ಮಾತ್ರವಲ್ಲದೇ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ. ಶೂನ್ಯ ಕ್ಯಾಲರಿಯ ಪ್ಯಾಕೇಜ್ ಅಥವಾ ಸಂಸ್ಕರಿಸಿದ ಡಿಪ್‌ಗಳಿಗೆ ಹೋಲಿಸಿದರೆ, ಮನೆಯಲ್ಲಿ ತಯಾರಿಸಿದ ಡಿಪ್‌ಗಳಿಂದ ನೀವು ಸ್ನಾಯುಗಳಿಗೆ ಅಗತ್ಯವಿರುವ ಪ್ರೊಟೀನ್ ಅನ್ನು ಪಡೆಯಬಹುದು ಎನ್ನುತ್ತಾರೆ ನಿಗಮ್.
ಅಲ್ಲದೇ ಮೊಸರು ಮತ್ತು ಪನೀರ್ ಜೊತೆಗೆ ಸಸ್ಯಗಳ ಎಲೆಗಳು ಮತ್ತು ಕಡಲುಪ್ಪು ಸೇರಿಸಿ ತಯಾರಿಸಿದ ಪೇಸ್ಟ್‌ನಂತಹ ಪ್ರೊಟೀನ್‌ಭರಿತ ಹಮ್ಮಸ್ ಅನ್ನು ತಯಾರಿಸಿ ಅದನ್ನು ಗರಿಗರಿ ರೋಟಿಗಳ ಮೇಲೆ ಹಚ್ಚಿ ಸೇವಿಸಲು ನಿಗಮ್ ಸೂಚಿಸುತ್ತಾರೆ.
ಸ್ನ್ಯಾಕ್ ಮತ್ತು ಡಿಪ್‌ಗಳನ್ನು ಲಕ್ಷ್ಯವಿಟ್ಟು ಸೇವಿಸಿ
ಸ್ನ್ಯಾಕ್ ಮತ್ತು ಡಿಪ್ ಎರಡನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ತುಂಬಾ ಮುಖ್ಯ. ಎರಡರಲ್ಲಿ ಯಾವೊಂದು ಹೆಚ್ಚು ಅಥವಾ ಕಡಿಮೆ ಆಗಬಾರದು ಎನ್ನುತ್ತಾರೆ ತಜ್ಞರು.
“ಬ್ರೂಕೋಲಿ ಫ್ರಿಟರ್‌ಗಳು, ಓಟ್ಸ್ ನ್ಯಾಚೋಸ್ ರೋಲ್‌ಗಳು ಹಾಗೂ ಸಿರಿಧಾನ್ಯ ಅಥವಾ ರಾಗಿ ಚಿಪ್ಸ್ ಅನ್ನು ಎಣ್ಣೆ ಬಳಸದೆ ಏರ್ ಫ್ರೈಯರ್‌ನಲ್ಲಿ ತಯಾರಿಸಬಹುದು” ಎಂದು ಬ್ಯಾನರ್ಜಿ ಸಲಹೆ ನೀಡುತ್ತಾರೆ.
ಸ್ನ್ಯಾಕ್ಸ್ ಅನ್ನು ಎರಡು ಊಟಗಳ ಮಧ್ಯೆ ಸೇವಿಸಬೇಕೇ ಹೊರತು ಊಟಕ್ಕೆ ಮೊದಲು ಅಥವಾ ನಂತರದಲ್ಲಿ ಅಲ್ಲ. ಮಧುಮೇಹಿಗಳು ಫಿಟ್ ಆಗಿರಲು ಮತ್ತು ಹೆಚ್ಚುವರಿ ಕ್ಯಾಲರಿಗಳನ್ನು ಕರಗಿಸಲು ನಡಿಗೆ ಹಾಗೂ ವ್ಯಾಯಾಮ ಕೂಡ ಮುಖ್ಯ ಎನ್ನುತ್ತಾರೆ ದಾಸ್.
ಸಾರಾಂಶ
ಮಧುಮೇಹ ಹೊಂದಿದವರು ಪೌಷ್ಠಿಕಾಂಶಯುಕ್ತ ಮತ್ತು ಆರೋಗ್ಯಕರ ಡಿಪ್‌ಗಳನ್ನು ನೈಸರ್ಗಿಕ ಹಾಗೂ ಕಡಿಮೆ GI ಪದಾರ್ಥಗಳನ್ನು ಬಳಸಿ ಮನೆಯಲ್ಲೇ ತಯಾರಿಸಿ ಸೇವಿಸುವುದು ಉತ್ತಮ. ಅಲ್ಲದೇ, ಅವರು ಕ್ಯಾಲರಿ ಲೆಕ್ಕ ಮೀರದ ನಾರಿನಂಶಭರಿತ ಬೀಜಗಳನ್ನು ಆರೋಗ್ಯಕರ ಹಾಗೂ ಕಡಿಮೆ ಕ್ಯಾಲರಿ ಸ್ನ್ಯಾಕ್‌ಗಳೊಂದಿಗೆ ಜೊತೆಯಾಗಿ ಸೇವಿಸಬೇಕು ಮತ್ತು ಸ್ನ್ಯಾಕ್‌ಗಳನ್ನು ಎರಡು ಊಟದ ನಡುವಿನಲ್ಲಿ ಹಾಗೂ ಮಿತಿಯಲ್ಲಿ ಸೇವಿಸಬೇಕು