ಬೆಂಗಳೂರು ಮೂಲದ ತೇಜಸ್ವಿನಿ ಲಕ್ಷ್ಮೇಶ್ವರ್ ಅವರ ಸಕ್ಕರೆ ಮಟ್ಟವು ಮೂರು ವರ್ಷಗಳ ಹಿಂದೆ 280 ಕ್ಕೆ ಏರಿದಾಗ, ಅವರ ವೈದ್ಯರು ಅವರಿಗೆ ಔಷಧೋಪಚಾರ ಶುರು ಮಾಡಿದರು ಮತ್ತು ಊಟದ ಪ್ರಮಾಣ ಕಡಿಮೆ ಮಾಡುವಂತೆ ಶಿಫಾರಸು ಮಾಡಿದರು. ಮಾತ್ರವಲ್ಲದೆ ಆಲೂಗಡ್ಡೆಯನ್ನು ಸೇವಿಸದೇ ಇರಲು ಹೇಳಿದರು – ಆದರೆ ಈ ಆಹಾರ ಕ್ರಮ ಮೂರು ತಿಂಗಳು ಮಾತ್ರ ಆಗಿತ್ತು.
ಆ ನಂತರ, ಲಕ್ಷ್ಮೇಶ್ವರ್ ತಮ್ಮ ಆಹಾರದಲ್ಲಿ ಆಲೂಗಡ್ಡೆಯನ್ನು ಮಿತವಾಗಿ ಬಳಸಲು ಆರಂಭಿಸಿದರು ಮತ್ತು ಊಟದ ಮೇಲಿನ ನಿಯಂತ್ರಣವನ್ನು ಮುಂದುವರಿಸಿದರು. ಅವರು ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ನಡಿಗೆಯನ್ನು ಆರಂಭಿಸಿದರು ಮತ್ತು ತಮ್ಮ ಆಹಾರದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ದೂರವಿರಿಸಿದರು. ನಿಧಾನವಾಗಿ, ಅವರ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರಲು ಪ್ರಾರಂಭಿಸಿತು ಮತ್ತು ಸಾಮಾನ್ಯ ವ್ಯಾಪ್ತಿಯಲ್ಲಿತ್ತು. ಒಂಬತ್ತು ತಿಂಗಳ ಅವಧಿಯಲ್ಲಿ, ಅವರು 13 ಕೆಜಿ ತೂಕವನ್ನು ಇಳಿಸಿಕೊಂಡರು, ಔಷಧಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. ಈಗಲೂ ಅವರು ಮಸಾಲಾ ದೋಸೆಯ ಜೊತೆಗೆ ಆಲೂಗಡ್ಡೆ ಪಲ್ಯ ತಿನ್ನುತ್ತಾರೆ, ಆದರೆ ಅತಿಯಾಗಿ ತಿನ್ನುವುದಿಲ್ಲ. “ಮುಖ್ಯವಾಗಿ ನೀವು ಆಲೂಗಡ್ಡೆ ಸೇವನೆಯ ಪ್ರಮಾಣವನ್ನು ನಿಯಂತ್ರಿಸಬೇಕು, ಸಮತೋಲಿತ ಆಹಾರವನ್ನು ಸೇವಿಸಬೇಕು, ಸಕ್ಕರೆ ಮಟ್ಟ ಏರಿಕೆಯಾಗಬಾರದು” ಎಂದು 46 ವರ್ಷದ ಲಕ್ಷ್ಮೇಶ್ವರ್ ವಿವರಿಸುತ್ತಾರೆ.
ಆಲೂಗಡ್ಡೆಯು ಅಧಿಕ ಕಾರ್ಬೋಹೈಡ್ರೇಟ್‌ಯುಕ್ತ ತರಕಾರಿಯಾಗಿದ್ದು, ಅದು ಚಪ್ಪರಿಸುವ ಫ್ರೆಂಚ್ ಫ್ರೈಗಳು, ಗರಿಗರಿಯಾದ ಪಕೋಡಗಳು, ಮೇಲೋಗರಗಳು ಅಥವಾ ಪಲ್ಯದ ರೂಪದಲ್ಲಿ ನಮ್ಮ ಊಟದಲ್ಲಿ ಅನೇಕ ರೂಪದಲ್ಲಿ ಸೇರಿಕೊಳ್ಳುತ್ತದೆ. ಆದರೆ ಆರೋಗ್ಯಕರ ಆಹಾರ, ಸೂಕ್ತವಾದ ಸಕ್ಕರೆ ಮಟ್ಟ ಮತ್ತು ತೂಕವನ್ನು ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ, ಆಲೂಗಡ್ಡೆಯ ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ (GI) ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಪರಿಗಣಿಸಿ ಮಧುಮೇಹ ಹೊಂದಿರುವ ಜನರಿಗೆ ಆಲೂಗಡ್ಡೆಯನ್ನು ಶಿಫಾರಸು ಮಾಡುವುದಿಲ್ಲ. ಆದರೆ, ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಆಲೂಗಡ್ಡೆಯನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಅಷ್ಟೇನೂ ಆತಂಕಕಾರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮಧುಮೇಹ ಇರುವವರು ಆಲೂಗಡ್ಡೆಯನ್ನು ಹೇಗೆ ಸೇವಿಸಬಹುದು?
ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಎಂಡೋಕ್ರೈನಾಲಜಿಸ್ಟ್ ಮತ್ತು ಸಹ ಪ್ರಾಧ್ಯಾಪಕ ಡಾ ಬೆಲಿಂಡಾ ಜಾರ್ಜ್, “ರೊಟ್ಟಿ, ಚಪಾತಿ ಅಥವಾ ಅನ್ನದೊಂದಿಗೆ ಆಲೂಗಡ್ಡೆ ಪಲ್ಯವನ್ನು ಸೇವಿಸುವುದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಬದಲಿಗೆ, ಆಲೂಗಡ್ಡೆಯನ್ನು ಮೀನು ಮತ್ತು ಮಾಂಸದಂತಹ ಪ್ರೋಟೀನ್-ಭರಿತ ಪದಾರ್ಥಗಳೊಂದಿಗೆ ಸೇವಿಸುವುದು ಉತ್ತಮ” ಎಂದು ಸಲಹೆ ನೀಡುತ್ತಾರೆ.
“ಆಲೂಗಡ್ಡೆಯ ಗ್ಲೈಸೆಮಿಕ್ ಇಂಡೆಕ್ಸ್ (GI) ತುಲನಾತ್ಮಕವಾಗಿ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟದ ತ್ವರಿತ ಹೆಚ್ಚಳಕ್ಕೆ ಇದು ಕಾರಣವಾಗಬಹುದು. ಆದರೆ ಸೇವಿಸುವ ಪ್ರಮಾಣ, ಅಡುಗೆಯ ವಿಧಾನ ಮತ್ತು ಆ ಆಹಾರಕ್ಕೆ ವ್ಯಕ್ತಿಯ ವೈಯಕ್ತಿಕ ಪ್ರತಿಕ್ರಿಯೆಯಂತಹ ಅಂಶಗಳ ಆಧಾರದ ಮೇಲೆ ಸಕ್ಕರೆಯ ಹೆಚ್ಚಳದಲ್ಲಿ ವ್ಯತ್ಯಾಸಗಳಾಗಬಹುದು” ಎಂದು ದೆಹಲಿ ಮೂಲದ ಪೌಷ್ಟಿಕತಜ್ಞ ಅವ್ನಿ ಕೌಲ್ ಅವರು ಹೇಳುತ್ತಾರೆ.
“ಮಧುಮೇಹ ಹೊಂದಿರುವ ಜನರು ಆಲೂಗಡ್ಡೆಯನ್ನು ಸೇವಿಸಬಹುದು, ಆದರೆ ಸೇವಿಸುವ ಪ್ರಮಾಣ ಮತ್ತು ಆಹಾರ ತಯಾರಿಕೆಯ ವಿಧಾನಗಳು ಇಲ್ಲಿ ಮುಖ್ಯವಾಗುತ್ತವೆ” ಎಂಬುದು ಅವರ ಎಚ್ಚರಿಕೆಯ ಮಾತು.
ಮಧುಮೇಹ ಇರುವವರು ಎಷ್ಟು ಆಲೂಗಡ್ಡೆಯನ್ನು ಸುರಕ್ಷಿತವಾಗಿ ಸೇವಿಸಬಹುದು?
“ವೈಯಕ್ತಿಕ ಸಹಿಷ್ಣುತೆಯನ್ನು ಆಧರಿಸಿ ಪ್ರಮಾಣವು ಬದಲಾಗುತ್ತದೆ. ಆದರೆ ಮಧುಮೇಹಿಗಳು ಸಾಮಾನ್ಯವಾಗಿ ಅರ್ಧದಿಂದ ಒಂದು ಕಪ್ ತನಕ ಬೇಯಿಸಿದ, ಪಿಷ್ಟರಹಿತ ಆಲೂಗಡ್ಡೆಯನ್ನು ಸೇವಿಸಬಹುದು. ನೀವು ಮಧುಮೇಹ ಇದ್ದರೆ ಆಲೂಗಡ್ಡೆಯನ್ನು ಸೇವಿಸುವ ಮೊದಲು ಯಾವಾಗಲೂ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ ಮತ್ತು ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಬೇಕು” ಎಂದು ಅವರು ಹೇಳುತ್ತಾರೆ.
ಆಲೂಗಡ್ಡೆಯ ಗ್ಲೈಸೆಮಿಕ್ ಸೂಚ್ಯಂಕವನ್ನು ಹೇಗೆ ಕಡಿಮೆ ಮಾಡಬಹುದು?
“ಮಧುಮೇಹ ಇರುವವರು ಆಲೂಗಡ್ಡೆಯನ್ನು ತಮ್ಮ ಆಹಾರದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬಾರದು. ಆದರೆ ಅವರು ತಮ್ಮ ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡಲು ಮಾರ್ಗಗಳಿವೆ” ಎಂದು ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ಮುಖ್ಯ ಪೌಷ್ಟಿಕತಜ್ಞರಾದ ಸೌಮಿತಾ ಬಿಸ್ವಾಸ್ ಹೇಳುತ್ತಾರೆ.
“ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ತಿನ್ನುವುದರಿಂದ ನಾರಿನಂಶ ದೇಹವನ್ನು ಸೇರುತ್ತದೆ, ಈ ಮೂಲಕ ಮಧುಮೇಹ ಇರುವವರು ಆಲೂಗಡ್ಡೆಯ ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡಿಕೊಳ್ಳಬಹುದು, ಆಲೂಗಡ್ಡೆಯನ್ನು ಕುದಿಸುವುದರಿಂದಲೂ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಆಗುತ್ತದೆ” ಎಂದು ಬಿಸ್ವಾಸ್ ವಿವರಿಸುತ್ತಾರೆ. ಇದಲ್ಲದೆ, ಜರ್ನಲ್ ಆಫ್ ದಿ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್‌ನಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಕಾರ, ಆಹಾರದ ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡಲು ಬಯಸುವ ವ್ಯಕ್ತಿಗಳು ಆಲೂಗಡ್ಡೆಯನ್ನು ಮೊದಲು ಬೇಯಿಸಬೇಕು, ನಂತರ ಅವುಗಳನ್ನು ತಣ್ಣಗಾಗಿಸಿ ಅಥವಾ ಮತ್ತೆ ಬಿಸಿ ಮಾಡಿ ಸೇವಿಸಬಹುದು. ಅಧಿಕ ಗ್ಲೈಸೆಮಿಕ್ ಸೂಚ್ಯಂಕದಿಂದ ತೊಂದರೆಯಾಗದಂತೆ ಮಾಡಲು, ಸಾಕಷ್ಟು ತರಕಾರಿಗಳು ಮತ್ತು ಪ್ರೋಟೀನ್ ಹೊಂದಿರುವ ಆಹಾರದ ಜೊತೆಗೆ ಆಲೂಗಡ್ಡೆಯನ್ನು ಸೇರಿಸಿ ಆಹಾರ ತಯಾರಿಸಬೇಕು.
ತಯಾರಿಕೆಯಲ್ಲಿ ಎಚ್ಚರಿಕೆ:
"ಭಾರತೀಯರು ಹೆಚ್ಚಾಗಿ ತಮ್ಮ ತರಕಾರಿ ಪದಾರ್ಥಗಳ ಜೊತೆಗೆ ಆಲೂಗಡ್ಡೆಯನ್ನು ಸೇರಿಸುತ್ತಾರೆ ಮತ್ತು ಅದನ್ನು ಅನ್ನದಿಂದ ತಯಾರಿಸಿದ ತಿಂಡಿಯೊಂದಿಗೆ ಸೇವಿಸುತ್ತಾರೆ – ಇದು ಉತ್ತಮ ಕ್ರಮ ಅಲ್ಲ” ಎಂದು ಬಿಸ್ವಾಸ್ ನೆನಪಿಸುತ್ತಾರೆ.
ಆಹಾರದ ಯೋಜನೆ:
ಆಲೂಗಡ್ಡೆಯ ಸಣ್ಣ ಪ್ರಮಾಣವನ್ನು ನಿಮ್ಮ ಊಟದಲ್ಲಿ ಸೇರಿಸುವುದು ಉತ್ತಮ ವಿಧಾನ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಇದಲ್ಲದೆ, “ಆಲೂಗಡ್ಡೆಗಳನ್ನು ಹುರಿಯುವ ಬದಲು, ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಗ್ಲೈಸೆಮಿಕ್ ಪರಿಣಾಮವನ್ನು ಕಡಿಮೆ ಮಾಡಲು ಬೇಯಿಸುವುದು, ಕುದಿಸುವುದು ಅಥವಾ ಆವಿಯಲ್ಲಿ ಬೇಯಿಸುವುದು ಉತ್ತಮ, ಮಾತ್ರವಲ್ಲದೆ, ಆಲೂಗಡ್ಡೆಗಳನ್ನು ಸೇವಿಸಿದಾಗ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಉತ್ತಮವಾದ, ಕಡಿಮೆ-ಗ್ಲೈಸೆಮಿಕ್ ಹೊಂದಿರುವ ಆಹಾರವನ್ನು ಸೇವಿಸುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಕೌಲ್ ಸೂಚಿಸುತ್ತಾರೆ.
ತಜ್ಞರ ಅಭಿಪ್ರಾಯ:
ಮಧುಮೇಹ ಇರುವವರು ಯಾವಾಗಲೂ ತಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತಾ ಇರಬೇಕು ಮತ್ತು ಆಲೂಗಡ್ಡೆ ತಿನ್ನುವ ಮೊದಲು ಪ್ರಮಾಣೀಕೃತ ಆಹಾರ ತಜ್ಞರಿಂದ ಸಲಹೆ ಪಡೆಯಬೇಕು.
ಮಧುಮೇಹಿಗಳಿಗೆ ಆಲೂಗಡ್ಡೆಯ ಆಹಾರ ತಯಾರಿಕೆಗೆ ಸಲಹೆಗಳು
ಕಡಿಮೆ- GI ಆಲೂಗಡ್ಡೆ ಪ್ರಭೇದಗಳನ್ನು ಆಯ್ಕೆಮಾಡಿ: ಕೆಲವು ಆಲೂಗಡ್ಡೆ ಪ್ರಭೇದಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತವೆ. “ಉದಾಹರಣೆಗೆ, ಪಿಷ್ಟದ ಬಿಳಿ ಆಲೂಗಡ್ಡೆಗಳಿಗೆ ಹೋಲಿಸಿದರೆ, ಗೆಣಸು ಮತ್ತು ಹೊಸ ಆಲೂಗಡ್ಡೆಗಳು ಸಾಮಾನ್ಯವಾಗಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತವೆ” ಎಂದು ಕೌಲ್ ವಿವರಿಸುತ್ತಾರೆ.
ಎಣ್ಣೆಯಲ್ಲಿ ಕರಿಯಬೇಡಿ: ಆಲೂಗಡ್ಡೆಗಳನ್ನು ಎಣ್ಣೆಯಲ್ಲಿ ಕರಿಯಬೇಡಿ, ಏಕೆಂದರೆ ಸೇರಿಸಿದ ಕೊಬ್ಬು ಮತ್ತು ಅಡುಗೆಯ ಅಧಿಕ ತಾಪಮಾನವು ಅವುಗಳ GI ಅನ್ನು ಹೆಚ್ಚಿಸುತ್ತದೆ.
ಸರಿಯಾದ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಿ: ನೀವು ಆಲೂಗಡ್ಡೆಯನ್ನು ಅಡುಗೆಯಲ್ಲಿ ಹೇಗೆ ಬಳಸುತ್ತೀರಿ ಎಂಬುದು ಅವುಗಳ GI ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. “ಆಲೂಗಡ್ಡೆಯ ನೈಸರ್ಗಿಕ ನಾರಿನಂಶವನ್ನು ಸಂರಕ್ಷಿಸುವ ಮತ್ತು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಅಡುಗೆ ವಿಧಾನಗಳನ್ನು ಆರಿಸಿಕೊಳ್ಳಿ” ಎಂದು ಕೌಲ್ ಶಿಫಾರಸು ಮಾಡುತ್ತಾರೆ.
ನೀವು ಹೀಗೆ ಮಾಡಬಹುದು:
ಕುದಿಸುವುದು: ಇತರ ಅಡುಗೆ ವಿಧಾನಗಳಿಗಿಂತ, ಆಲೂಗಡ್ಡೆಯನ್ನು ಬೇಯಿಸುವ ವಿಧಾನದ ಮೂಲಕ ಕಡಿಮೆ GI ಅನ್ನು ನಿರ್ವಹಿಸಬಹುದು. “ಅವುಗಳ ನಾರಿನ ಅಂಶವನ್ನು ಕಾಪಾಡಿಕೊಳ್ಳಲು ಅವುಗಳನ್ನು ಅತಿಯಾಗಿ ಬೇಯಿಸಬೇಡಿ” ಎಂದು ಕೌಲ್ ಎಚ್ಚರಿಸುತ್ತಾರೆ.
ಬೇಕಿಂಗ್: ಆಲೂಗಡ್ಡೆಯನ್ನು ಅವುಗಳ ಸಿಪ್ಪೆ ಸಹಿತ ಬೇಯಿಸುವುದು ನಾರಿನಂಶ ಮತ್ತು ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾರಿನಂಶವು ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಸ್ಟೀಮಿಂಗ್: ಆಲೂಗಡ್ಡೆಯ ನಾರಿನ ಅಂಶವನ್ನು ಕಾಪಾಡಿಕೊಳ್ಳಲು ಮತ್ತು ಅದರ GI ಅನ್ನು ಕಡಿಮೆ ಮಾಡಲು, ಹಬೆಯಲ್ಲಿ ಬೇಯಿಸುವುದು ಇನ್ನೊಂದು ಅಡುಗೆ ವಿಧಾನವಾಗಿದೆ.
ಪ್ರೋಟೀನ್ ಮತ್ತು ನಾರಿನಂಶದ ಜೊತೆ ಸೇರಿಸುವುದು: ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು, ಪ್ರೋಟೀನ್ ಅಥವಾ ನಾರಿನಂಶವಿರುವ ತರಕಾರಿಯೊಂದಿಗೆ ಆಲೂಗಡ್ಡೆಯನ್ನು ಸೇವಿಸಬೇಕು.
ಸೇವನೆಯ ಪ್ರಮಾಣ ನಿಯಂತ್ರಿಸಿ: ಕಡಿಮೆ GI ನಿರ್ವಹಿಸಿ ತಯಾರಿಸುವ ವಿಧಾನದ ಜೊತೆಗೆ, ಸೇವಿಸುವ ಪ್ರಮಾಣದ ಮೇಲಿನ ನಿಯಂತ್ರಣವೂ ಸಹ ಅತ್ಯಗತ್ಯ. ಆಲೂಗಡ್ಡೆಯನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಬೇರೆ ಕಡಿಮೆ – GI ಆಹಾರಗಳನ್ನು ಸೇರಿಸಿ: ನಿಮ್ಮ ಊಟವನ್ನು, ಕಡಿಮೆ- GI ಇರುವ ಬೇರೆ ಆಹಾರಗಳೊಂದಿಗೆ ನೀವು ಸಂಯೋಜಿಸಿದರೆ, ಅದು ಒಟ್ಟಾರೆ ಗ್ಲೈಸೆಮಿಕ್ ಪರಿಣಾಮವನ್ನು ಸಮತೋಲನಗೊಳಿಸುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ನಿಗಾ ಇರಲಿ: ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಯಾವಾಗಲೂ ಮೇಲ್ವಿಚಾರಣೆ ಮಾಡಬೇಕು ಮತ್ತು ವಿವಿಧ ಆಹಾರಗಳು ವೈಯಕ್ತಿಕವಾಗಿ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಧುಮೇಹ ನಿರ್ವಹಣೆಗಾಗಿ ಅವರು ವೈದ್ಯರು ಮತ್ತು ಆಹಾರ ತಜ್ಞರ ಸಲಹೆ ಪಡೆಯಬೇಕು.
ಸಾರಾಂಶ
· ಆಲೂಗಡ್ಡೆಯಲ್ಲಿರುವ ಅಧಿಕ ಗ್ಲೈಸೆಮಿಕ್ ಸೂಚ್ಯಂಕವನ್ನು ಬೇಯಿಸಿ ಅಥವಾ ಬೇಕ್ ಮಾಡಿ ಕಡಿಮೆ ಮಾಡಿಕೊಳ್ಳಬಹುದು. ನಾರಿನಂಶವಿರುವ ತರಕಾರಿಗಳ ಜೊತೆಗೆ ಸೇರಿಸಿ ತಯಾರಿಸಿದ ಆಲೂಗಡ್ಡೆಯ ಆಹಾರ ಪದಾರ್ಥಗಳನ್ನು ಮಧುಮೇಹ ಇರುವವರು ಸೇವಿಸಬಹುದು.
· ಮಧುಮೇಹ ಹೊಂದಿರುವ ಜನರು ಇತರ ರೀತಿಯ ಕಾರ್ಬೋಹೈಡ್ರೇಟ್‌ಗಳೊಂದಿಗೆ ಆಲೂಗಡ್ಡೆಯನ್ನು ಸೇವಿಸಬಾರದು.
· ಮಧುಮೇಹ ಇರುವ ಜನರು ತಮ್ಮ ಆಹಾರದಲ್ಲಿ ಆಲೂಗಡ್ಡೆಯ ಸೇವನೆಯ ಪ್ರಮಾಣದ ಬಗ್ಗೆ ಜಾಗರೂಕರಾಗಿರಬೇಕು.