ಮಧುಮೇಹಿಗಳು ರಕ್ತದಾನ ಮಾಡಬಹುದೇ ಎನ್ನುವ ಪ್ರಶ್ನೆಯಂತೂ ಇದ್ದೆ ಇದೆ. ರಕ್ತದಾನವು ವಿಶ್ವಾದ್ಯಂತ ಅಸಂಖ್ಯಾತ ಜೀವಗಳನ್ನು ಉಳಿಸುವ ಪರೋಪಕಾರದ ಕಾರ್ಯವಾಗಿದೆ. ಆದರೆ ಕೆಲವು ನಿರ್ಬಂಧಗಳಿಂದಾಗಿ ಟೈಪ್1 ಮತ್ತು ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ರಕ್ತದಾನ ಮಾಡಲು ಸಾಧ್ಯವಾಗದಿರಬಹುದು. ಸೂಕ್ತವಾದ ಸಿದ್ಧತೆಗಳು ಮತ್ತು ದಾನದ ನಂತರ ಪಾಲಿಸಬೇಕಾದ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳೊಂದಿಗೆ ರಕ್ತದ ಸಕ್ಕರೆ ನಿಯಂತ್ರಣವು ದಾನಿ ಮತ್ತು ಸ್ವೀಕೃತಿದಾರರಿಗೆ ದಾನ ಪ್ರಕ್ರಿಯೆಯನ್ನು ಸುರಕ್ಷಿತಗೊಳಿಸುತ್ತದೆ. ಹಾಗೆಯೇ, ಮಧುಮೇಹದಿಂದ ಬಳಲುತ್ತಿರುವವರಿಂದ ರಕ್ತವನ್ನು ಸ್ವೀಕರಿಸಿದ ಕಾರಣಕ್ಕೆ ರಕ್ತವನ್ನು ಪಡೆದವರಿಗೆ ಮಧುಮೇಹ ಉಂಟಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಜೊತೆಗೆ, ಇತ್ತೀಚಿನ ಸಂಶೋಧನೆಗಳ ಪ್ರಕಾರ ರಕ್ತದಾನದ ನಂತರ ಕುಂಠಿತವಾಗುವ ದೇಹದ ಕಬ್ಬಿಣದ ಮಟ್ಟ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸುವುದರೊಂದಿಗೆ ತಾತ್ಕಾಲಿಕವಾಗಿ ಇನ್ಸುಲಿನ್ ಉತ್ಪಾದನೆ ಮತ್ತು ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸುತ್ತದೆ.
ಮಧುಮೇಹಿಗಳು ರಕ್ತದಾನವನ್ನು ಮಾಡಬಹುದೇ?
ನಗರದ ಅನೇಕ ಬ್ಲಡ್‌ಬ್ಯಾಂಕ್‌ಗಳು ದಾನಿಗಳು ಮಧುಮೇಹದಿಂದ ಬಳಲುತಿದ್ದರೆ ಅಥವಾ ಔಷಧಿಗಳನ್ನು ಸೇವಿಸುತ್ತಿದ್ದರೆ ಅವರಿಂದ ರಕ್ತವನ್ನು ಸ್ವೀಕರಿಸುವುದಿಲ್ಲ ಎಂದು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಹೆಮಟೊಲಜಿ, ಹೆಮಟೊ-ಆಂಕೊಲಾಜಿ, ಪೀಡಿಯಾಟ್ರಿಕ್ ಹೆಮಟೊ-ಆಂಕೊಲಾಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ವಿಭಾಗದ ಹಿರಿಯ ಕನ್ಸಲ್ಟೆಂಟ್ ಆಗಿರುವ ಡಾ. ಅನೂಪ್ ಪಿ ಹೇಳುತ್ತಾರೆ. “ಈ ರೀತಿ ನಿರ್ಬಂಧಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ರಕ್ತದ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲಾದ ವ್ಯಕ್ತಿಯಿಂದ ತೆಗೆದುಕೊಂಡ ರಕ್ತವು ಸ್ವೀಕೃತಿದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ವ್ಯಕ್ತಿಯೊಬ್ಬ ಮಧುಮೇಹ ನಿರೋಧಕ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ರಕ್ತದಲ್ಲಿರುವ ಅದರ ಅಂಶ ಸ್ವೀಕೃತಿದಾರರ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುವುದು ಬರೀ ಊಹೆ. ಉತ್ತಮವಾಗಿ ನಿಯಂತ್ರಿಸಲಾದ ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಂದ ಬ್ಲಡ್ ಬ್ಯಾಂಕ್ ರಕ್ತ ಸ್ವೀಕರಿಸಿದರೆ, ಅವರು ರಕ್ತದಾನ ಮಾಡಬಹುದು” ಎಂದು ಅವರು ಹೇಳುತ್ತಾರೆ.
ದಾನಿ ಮತ್ತು ಸ್ವೀಕೃತಿದಾರರ ಯೋಗಕ್ಷೇಮಕ್ಕಾಗಿ ಬ್ಲಡ್‌ಬ್ಯಾಂಕ್‌ಗಳು ಸಾಮಾನ್ಯವಾಗಿ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿರುವವರಿಂದ ರಕ್ತವನ್ನು ಸ್ವೀಕರಿಸಲು ಹಿಂಜರಿಯುತ್ತವೆ. ಟೈಪ್ 1 ಮತ್ತು ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಲ್ಲಿ ರಕ್ತದ ಗ್ಲೂಕೋಸ್ ಮಟ್ಟವು ಏರುಪೇರಾಗುವ ಸಾಧ್ಯತೆಯಿರುವುದರಿಂದ ರಕ್ತದಾನದ ಅರ್ಹತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೊಚ್ಚಿಯ ಕೆಎಂಕೆ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್, ಎಂಡೋಕ್ರೈನಾಲಜಿ ಮತ್ತು ಮಧುಮೇಹ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ, ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಸಲಹೆಗಾರ ಡಾ. ವಿನಾಯಕ್ ಹಿರೇಮಠ್ ಹೇಳುತ್ತಾರೆ. “ಹಾಗೆಯೇ, ಮಧುಮೇಹ ಮತ್ತು ಸಂಬಂಧಿತ ತೊಡಕುಗಳನ್ನು ನಿಯಂತ್ರಿಸಲು ಬಳಸುವ ಕೆಲವು ಔಷಧಗಳು ರಕ್ತದಾನ ಮಾಡುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದಾದ್ದರಿಂದ. ಸಾಮಾನ್ಯವಾಗಿ ರಕ್ತದಾನ ಮಾಡಲು ಶಿಫಾರಸು ಮಾಡಲಾಗುವುದಿಲ್ಲ ಏಕೆಂದರೆ ಅದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ವಿವರಿಸುತ್ತಾರೆ.
ಟೈಪ್ 1 ಮಧುಮೇಹ ಮತ್ತು ರಕ್ತದಾನ
ಸಾಮಾನ್ಯವಾಗಿ ಮಕ್ಕಳಲ್ಲಿ ಅಥವಾ ಯುವಕರಲ್ಲಿ ಕಂಡುಬರುವ ಟೈಪ್ 1 ಮಧುಮೇಹಕ್ಕೆ ದೈನಂದಿನ ಇನ್ಸುಲಿನ್ ನಿರ್ವಹಣೆ ಬೇಕಾಗುತ್ತದೆ. “ರಕ್ತದ ಸಕ್ಕರೆಯ ಮಟ್ಟದಲ್ಲಿ ಏರಿಳಿತ ಮತ್ತು ಇತರ ಸಂಬಂಧಿತ ತೊಡಕುಗಳಿಂದ (ರೆಟಿನೋಪತಿ, ನ್ಯೂರೋಪತಿ, ಹೃದಯಪರಿಚಲನಾ ಪರಿಸ್ಥಿತಿಗಳು ಮತ್ತು ಸೋಂಕಿಗೆ ಒಳಗಾಗುವಿಕೆ), ಈ ಸ್ಥಿತಿಯಿಂದ ಬಳಲುತ್ತಿರುವವರು ರಕ್ತದಾನದ ಸಮಯದಲ್ಲಿ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಾರೆ” ಎನ್ನುತ್ತಾರೆ ಡಾ.ಹಿರೇಮಠ್.
ಜೊತೆಗೆ, ಅವರ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಇರುವ ಸಾಧ್ಯತೆಯಿದೆ, ಇದು ಸ್ವೀಕೃತಿದಾರರ ರಕ್ತದ ಸಕ್ಕರೆ ಮಟ್ಟವನ್ನು ಸೈದ್ಧಾಂತಿಕವಾಗಿ ಕಡಿಮೆ ಮಾಡುತ್ತದೆ ಎಂದು ಡಾ. ಅನೂಪ್ ವಿವರಿಸುತ್ತಾರೆ. “ಹಾಗೆಯೇ, ಇದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಸುರಕ್ಷತೆಯ ದೃಷ್ಟಿಯಿಂದ, ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರಿಂದ ಬ್ಲಡ್‌ಬ್ಯಾಂಕ್‌ಗಳು ರಕ್ತವನ್ನು ಸ್ವೀಕರಿಸುವುದಿಲ್ಲ” ಎಂದು ಅವರು ಹೇಳುತ್ತಾರೆ.
ಟೈಪ್ 2 ಮಧುಮೇಹ ಮತ್ತು ರಕ್ತದಾನ
ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ವಿಧಿಸಲಾಗುವ ರಕ್ತದಾನದ ನಿರ್ಬಂಧಗಳು ಕಾಯಿಲೆಯ ತೀವ್ರತೆ ಮತ್ತು ಅವರ ಚಿಕಿತ್ಸೆಯ ಯೋಜನೆಯನ್ನು ಅವಲಂಬಿಸಿರುತ್ತದೆ ಎಂದು ಡಾ.ಹಿರೇಮಠ್ ಹೇಳುತ್ತಾರೆ. “ಅವರು ಅನಿಯಂತ್ರಿತ ಮಧುಮೇಹದೊಂದಿಗೆ ಇತರ ಸಂಬಂಧಿತ ಸಹಹರಡುವಿಕೆಗಳನ್ನು ಹೊಂದಿದ್ದರೆ, 350 ರಿಂದ 400 ml ರಕ್ತವನ್ನು ತೆಗೆಯುವುದು ಕೆಲವೊಮ್ಮೆ ಅಸ್ಥಿರತೆ ಅಥವಾ ತಲೆತಿರುಗುವಿಕೆಗೆ ಕಾರಣವಾಗಬಹುದು” ಎಂದು ಡಾ. ಅನೂಪ್ ಹೇಳುತ್ತಾರೆ.
“ಬ್ಲಡ್‌ಬ್ಯಾಂಕ್ ಅಗತ್ಯತೆಗಳು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿರುತ್ತದೆ. ಒಂದು ಪ್ರದೇಶದಲ್ಲಿ ನಿರ್ದಿಷ್ಟ ರಕ್ತದ ಗುಂಪಿನ ಕೊರತೆಯಿದ್ದರೆ, ಅವರು ಮಧುಮೇಹದಿಂದ ಬಳಲುತ್ತಿರುವವರ ರಕ್ತವನ್ನು ಸ್ವೀಕರಿಸಬಹುದು. ಆದರೆ, ಸಾಕಷ್ಟು ಲಭ್ಯತೆ ಇದ್ದರೆ, ಅವರು ಅದನ್ನು ನಿರಾಕರಿಸಬಹುದು” ಎಂದು ಅವರು ಹೇಳುತ್ತಾರೆ.
ಮಧುಮೇಹ ಮತ್ತು ರಕ್ತದಾನ: ಮಾರ್ಗಸೂಚಿಗಳು ಏನು ಹೇಳುತ್ತವೆ?
ರಾಷ್ಟ್ರೀಯ ಕಾನೂನುಗಳು ಮತ್ತು ಸಂಸ್ಥೆಗಳು ದಾನಿ ಮತ್ತು ಸ್ವೀಕೃತಿದಾರರ ಯೋಗಕ್ಷೇಮಕ್ಕಾಗಿ ರಕ್ತದಾನಕ್ಕೆ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿವೆ. ವಿವಿಧ ದೇಶಗಳು ಅನುಸರಿಸುವ ಕೆಲವು ಅಗತ್ಯ ಮಾರ್ಗಸೂಚಿಗಳು ಈ ಕೆಳಕಂಡಂತಿವೆ:
ನ್ಯಾಶನಲ್ ಬ್ಲಡ್ ಟ್ರಾನ್ಸ್‌ಫ್ಯೂಶನ್ ಕೌನ್ಸಿಲ್, ಭಾರತ (National Blood Transfusion Council, Indi)
- ಆಹಾರಪದ್ಧತಿ ಅಥವಾ ಮೌಖಿಕ ಔಷಧಗಳಿಂದ ಸ್ಥಿತಿಯನ್ನು ನಿಯಂತ್ರಿಸಿದ್ದರೆ ಮಧುಮೇಹದಿಂದ ಬಳಲುತ್ತಿರುವವರು ರಕ್ತದಾನ ಮಾಡಬಹುದು.
- ಇನ್ಸುಲಿನ್ ಅವಲಂಬಿತರು ರಕ್ತದಾನ ಮಾಡುವಂತಿಲ್ಲ.
♦ ಅಮೇರಿಕನ್ ರೆಡ್ ಕ್ರಾಸ್ ಸೊಸೈಟಿ (American Red Cross Society)
- ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯುತ್ತಿದ್ದರೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ ಮಾತ್ರ ರಕ್ತದಾನ ಮಾಡಬಹುದು.
ಎನ್‌ಎಚ್‌ಎಸ್ ಬ್ಲಡ್ ಮತ್ತು ಟ್ರಾನ್ಸ್‌ಪ್ಲಾಂಟ್ (NHS Blood and Transplant, UK)
- ಮಧುಮೇಹದಿಂದ ಬಳಲುತ್ತಿರುವವರು ಕೇವಲ ಆಹಾರದ ಮೂಲಕ ಸ್ಥಿತಿಯನ್ನು ನಿಯಂತ್ರಿಸಿದರೆ ಅಥವಾ ನಾಲ್ಕು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಡೋಸ್ ಬದಲಾಯಿಸದೇ ಒಂದೇ ಔಷಧಗಳನ್ನು ಸೇವಿಸುತ್ತಿದ್ದರೆ ರಕ್ತದಾನ ಮಾಡಬಹುದು.
- ನಿಯಮಿತವಾಗಿ ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿರುವವರು ಅಥವಾ ಕಳೆದ ನಾಲ್ಕು ವಾರಗಳಲ್ಲಿ ಇನ್ಸುಲಿನ್ ತೆಗೆದುಕೊಂಡಿರುವವರು ರಕ್ತದಾನ ಮಾಡಲು ಸಾಧ್ಯವಿಲ್ಲ.
- ಹೃದಯಾಘಾತ ಮತ್ತು ಇತರ ಸಂಬಂಧಿತ ಸಹಹರಡುವಿಕೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ.
ಸಾರಾಂಶಗಳು
- ಮಧುಮೇಹದಿಂದ ಬಳಲುತ್ತಿರುವವರಿಗೆ ರಕ್ತವನ್ನು ದಾನ ಮಾಡುವುದು ಸವಾಲಾಗಬಹುದು, ಏಕೆಂದರೆ ಹಲವಾರು ಬ್ಲಡ್‌ಬ್ಯಾಂಕ್‌ಗಳು ಅವರಿಂದ ರಕ್ತವನ್ನು ಸ್ವೀಕರಿಸುವುದಿಲ್ಲ. ಆದರೆ, ರಕ್ತದ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಿರುವವರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ರಕ್ತದಾನವನ್ನು ಮಾಡಲು ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ.
- ಮಧುಮೇಹ ಮತ್ತು ಅದರ ಸಹಹರಡುವಿಕೆ ರೋಗಗಳನ್ನು ನಿಯಂತ್ರಿಸಲು ಬಳಸುವ ಕೆಲವು ಔಷಧಗಳು ರಕ್ತದಾನ ಮಾಡುವವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.
- ಬ್ಲಡ್‌ಬ್ಯಾಂಕ್‌ಗಳ ಅಗತ್ಯತೆಗಳು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ನಿರ್ದಿಷ್ಟ ರಕ್ತದ ಗುಂಪಿನ ಕೊರತೆಯಿದ್ದರೆ ಅವರು ಮಧುಮೇಹದಿಂದ ಬಳಲುತ್ತಿರುವವರಿಂದ ರಕ್ತವನ್ನು ಸ್ವೀಕರಿಸಬಹುದು.
- ಮಧುಮೇಹದಿಂದ ಬಳಲುತ್ತಿರುವವರು ಹೈಪೊಗ್ಲೈಸೇಮಿಯಾದಂತಹ ತೊಡಕುಗಳನ್ನು ತಡೆಗಟ್ಟಲು ರಕ್ತದಾನ ಮಾಡುವ ಮೊದಲು ಮತ್ತು ನಂತರ ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಜೊತೆಗೆ, ಅವರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಇಂಜೆಕ್ಷನ್ ಸೈಟ್‌ನಲ್ಲಿ ಸೋಂಕಿನ ಚಿಹ್ನೆಗಳು ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.