ಕರುಳಿನ ಆರೋಗ್ಯ ಉತ್ತಮವಾಗಿರಲು ಮ್ಯೂಕಸ್‌ನ(ಲೋಳೆ) ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನಮ್ಮ ಜಠರಗರುಳಿನ (gastrointestinal – GI) ನಾಳವು ಒಂದು ಅದ್ಭುತ ಅಂಗ ವ್ಯವಸ್ಥೆಯಾಗಿದ್ದು, ನಾವು ಸೇವಿಸಿದ ಆಹಾರವನ್ನು ಜೀರ್ಣ ಮಾಡಿ ನಮಗೆ ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಇದು ತನ್ನಷ್ಟಕ್ಕೇ ಜೀರ್ಣವಾಗುವ ಕ್ರಿಯೆಯಲ್ಲ. ವಾಸ್ತವದಲ್ಲಿ, ಹೊಟ್ಟೆಯು GI ನಾಳದ ಒಂದು ಪ್ರಮುಖ ಅಂಗವಾಗಿದೆ. ಹೊಟ್ಟೆಯು ತನ್ನೊಳಗಿರುವ ತುಲನಾತ್ಮಕವಾಗಿ ಪ್ರಬಲವಾದ ಹೈಡ್ರೋಕ್ಲೋರಿಕ್ ಆಮ್ಲದಿಂದ ಹಾನಿಯುಂಟಾಗದಂತೆ ತಡೆದುಕೊಳ್ಳಬಲ್ಲದು. ಹೊಟ್ಟೆಯಲ್ಲಿರುವ ಪ್ರಮುಖ ರಕ್ಷಣಾ ಒಳಪದರ-ಮ್ಯೂಕಸ್‌ನಿಂದ ಇದೆಲ್ಲವೂ ಸಾಧ್ಯವಾಗಿದೆ.
ಮ್ಯೂಕಸ್ ಎಂದರೇನು ಮತ್ತು ಇದರ ಕಾರ್ಯವೇನು?
ಮ್ಯೂಕಸ್ ಎಂಬುದು ಬಾಯಿಯಲ್ಲಿನ ಲಾಲಾರಸ ಗ್ರಂಥಿಯಿಂದ, ಹೊಟ್ಟೆಯಲ್ಲಿನ ಎಪಿತೀಲಿಕ ಕೋಶಗಳಿಂದ ಮತ್ತು ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಗಾಬ್ಲೆಟ್ ಕೋಶಗಳಿಂದ ಉತ್ಪಾದನೆಯಾಗುವ, ಪ್ರಮುಖವಾಗಿ ನೀರು (90-95 ಪ್ರತಿಶತ), ಇಲೆಕ್ಟ್ರೋಲೈಟ್‌ಗಳು, ಲಿಪಿಡ್‌ಗಳು (1-2 ಪ್ರತಿಶತ) ಮತ್ತು ಪ್ರೊಟೀನ್‌ಗಳನ್ನು (ವಿಶೇಷವಾಗಿ) ಒಳಗೊಡಂತಹ ಒಂದು ಲೋಳೆಯ ಪದಾರ್ಥವಾಗಿದೆ. ನಾವು ಪ್ರತಿ ದಿನ ಸರಾಸರಿ ಸುಮಾರು 10 ಲೀಟರ್‌ಗಳಷ್ಟು ಮ್ಯೂಕಸ್ ಅನ್ನು ಉತ್ಪಾದಿಸುತ್ತೇವೆ ಮತ್ತು ಇದೊಂದು ನಿರಂತರ ಪ್ರಕ್ರಿಯೆ.
ಆಹಾರವು ಬಾಯಿಯಿಂದ GIಗೆ ಸರಾಗವಾಗಿ ಸಾಗುವುದಕ್ಕೆ ಅನುವು ಮಾಡಿಕೊಡಲು ಲೂಬ್ರಿಕೆಂಟ್‌ನಂತೆ ವರ್ತಿಸುವುದು ಇದರ ಪ್ರಮುಖ ಕೆಲಸ. ಇದು ಕರುಳಿನಲ್ಲಿ ತನ್ನ ಕೋಶಗಳ ಮೂಲಕ ಪದರವನ್ನು ರಚಿಸಿ ಯಾಂತ್ರಿಕ, ರಾಸಾಯನಿಕ ಮತ್ತು ಜೈವಿಕ ತೊಂದರೆಗಳಿಂದ ಕರುಳಿಗೆ ರಕ್ಷಣೆ ಒದಗಿಸುತ್ತದೆ. ಇದು ಮೇಲ್ಮೈ ಮಾರ್ಜಕದಂತೆ (ಸರ್ಫೇಸ್ ಕ್ಲೀನರ್) ವರ್ತಿಸಿ, ತ್ಯಾಜ್ಯ ವಸ್ತುಗಳು ಮತ್ತು ಬ್ಯಾಕ್ಟೀರಿಯಾವನ್ನು ತೊಡೆದುಹಾಕುತ್ತದೆ, ಆದರೆ ಪೋಷಕಾಂಶಗಳು ಮತ್ತು ನೀರನ್ನು ತನ್ನ ಮೂಲಕ ಹೀರಿಕೊಳ್ಳುತ್ತದೆ.
“ಹೊಟ್ಟೆಯಲ್ಲಿ ಹುಣ್ಣುಗಳು ಉಂಟಾಗದಂತೆ ಮತ್ತು ಹಾನಿಯಾಗದಂತೆ ಮ್ಯೂಕಸ್ ರಕ್ಷಣೆ ನೀಡುತ್ತದೆ. ಇನ್ನು ಕರುಳಿನೊಳಗಿನ ಮ್ಯೂಕಸ್ ಪದರವು ಎಂಟಿರೋಸೈಟ್‌ಗಳ ಮೇಲೆ ರಕ್ಷಣಾತ್ಮಕ ಪರಿಣಾಮವನ್ನು ಹೊಂದಿದೆ” ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟೆರಾಲಜಿಸ್ಟ್ ಮತ್ತು ಹೆಪಾಟಾಲಾಜಿಸ್ಟ್ ಆಗಿರುವ ಡಾ ರಾಜ್ ವಿಘ್ನ ವೇಣುಗೋಪಾಲ್ ಅವರು ಹೇಳುತ್ತಾರೆ.
ಕೇವಲ ಕರುಳನ್ನು ರಕ್ಷಿಸುವುದು ಮಾತ್ರವಲ್ಲದೇ ಇದು ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತದೆ. ಬಿಲಿಯನುಗಟ್ಟಲೆ ಬ್ಯಾಕ್ಟೀರಿಯಾಗಳು ನಮ್ಮ ಕರುಳಿನಲ್ಲಿ ವಾಸಿಸುತ್ತವೆ. ಇವುಗಳನ್ನು ಕರುಳಿನ ಮೈಕ್ರೋಬಯೋಟಾ ಎಂದು ಕರೆಯಲಾಗುತ್ತದೆ. ಮ್ಯೂಕಸ್ ಪದರವು ಈ ಸೂಕ್ಷ್ಮಾಣುಜೀವಿಗಳಿಗೆ ಪೋಷಕಾಂಶಗಳನ್ನು ನೀಡುವುದಲ್ಲದೇ ಅವುಗಳು ವಾಸಿಸಲು ಸ್ಥಳವನ್ನೂ ನೀಡುತ್ತದೆ.
“ನಮ್ಮ ಕರುಳಿನಲ್ಲಿ ವಾಸಿಸುವ ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಆಹಾರದ ನಾರಿನಂಶವನ್ನು ಸಣ್ಣ ಸರಪಳಿಯ ಫ್ಯಾಟಿ ಆಮ್ಲಗಳನ್ನಾಗಿ (SCFA) ಪರಿವರ್ತಿಸುತ್ತದೆ, ಇವುಗಳು ಎಂಟೆರೋಸೈಟ್‌ಗಳ (ಕರುಳಿನಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಕೋಶಗಳು) ಪ್ರಮುಖ ಪೋಷಕಾಂಶಗಳಾಗಿವೆ ಹಾಗೂ ಕೋಶಗಳು ಜೊತೆಯಾಗಿದ್ದುಕೊಂಡು ಬಿಗಿಯಾದ ರಚನೆಯನ್ನು (ಕೋಶಗಳ ನಡುವಿನ ಅಂತರ) ಕಾಯ್ದುಕೊಳ್ಳಲು ಇವುಗಳು ಅತ್ಯಗತ್ಯ” ಎಂದು ವೇಣುಗೋಪಾಲ್ ಅವರು ಹೇಳುತ್ತಾರೆ.
ಆದರೆ ನಮ್ಮ ದೇಹದಲ್ಲಿ ಉಂಟಾಗುವ ಇತರ ಸಂಗತಿಗಳಂತೆ ನಮ್ಮ ಆಹಾರಾಭ್ಯಾಸಗಳು, ಕರುಳಿನ ಸೂಕ್ಷ್ಮಾಣುಜೀವಿಗಳು ಮತ್ತು ರೋಗಕಾರಕಗಳು ಈ ಮ್ಯೂಕಸ್ ಪದರದ ಸಂಶ್ಲೇಷಣೆ, ಸಂಯೋಜನೆ, ಪ್ರವೇಶ್ಯತೆ ಮತ್ತು ಅವನತಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ನಿಮ್ಮ ಮ್ಯೂಕಸ್ ಪದರವನ್ನು ಹಾನಿಗೊಳಿಸುವ ಸಂಗತಿಗಳು
ಸೋಂಕು, ಕೆಟ್ಟ ಜೀವನಶೈಲಿ ಆಯ್ಕೆಗಳು ಅಥವಾ ದೀರ್ಘಕಾಲಿಕ ಆರೋಗ್ಯಸಮಸ್ಯೆ ಮುಂತಾದ ಅನೇಕ ಕಾರಣಗಳಿಂದಾಗಿ ಕರುಳಿನ ಮ್ಯೂಕಸ್ ಪದರವು ಕ್ಷೀಣಿಸಬಹುದು. ಅಧಿಕ ಕೊಬ್ಬಿನಂಶ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಹಾಗೂ ಕಡಿಮೆ ನಾರಿನಂಶ ಇರುವಂತಹ ಪಾಶ್ಚಾತ್ಯ ಆಹಾರವು ಕರುಳು ಮತ್ತು ಅದರ ಮ್ಯೂಕಸ್ ಪದರಕ್ಕೆ ಉತ್ತಮವಲ್ಲ ಎಂದು ಹೆಚ್ಚಿನ ಸಂಶೋಧನೆಗಳು ಹೇಳುತ್ತವೆ.
cftr ನಂತಹ ವಂಶವಾಹಿ ಅಭಿವ್ಯಕ್ತಿ ಕಡಿಮೆಯಾದಾಗ ಹಾಗೂ ಫ್ಯಾಟಿ ಆಸಿಡ್ ಸಿಂಥೇಸ್‌ನಂತಹ ಕಿಣ್ವಗಳ ಉತ್ಪಾದನೆ ಕಡಿಮೆಯಾದಾಗ ಮ್ಯೂಕಸ್ ಪದರದ ದಪ್ಪ ಮತ್ತು ಸ್ನಿಗ್ಧತೆ ಕಡಿಮೆಯಾಗಿ ಇದು ಉಂಟಾಗುತ್ತದೆ. ಮಾತ್ರವಲ್ಲ, ಗಾಬ್ಲೆಟ್ ಕೋಶಗಳು ಹಾಗೂ ಲೋಳೆಗೆ ತೊಡಕುಂಟುಮಾಡುವ ಬ್ಯಾಕ್ಟೀರಿಯಾದ ಸಂಖ್ಯೆ ಹೆಚ್ಚಾದಾಗ ಮ್ಯೂಕಸ್ ಉತ್ಪಾದನೆ ದುರ್ಬಲಗೊಳ್ಳುತ್ತದೆ.
ಮ್ಯೂಕಸ್ ಒಳಪದರದ ಅವನತಿಯಿಂದ ಇದರಲ್ಲಿ ವಾಸಿಸುವ ಬ್ಯಾಕ್ಟೀರಿಯಾ ಮತ್ತು ರೋಗಕಾರಕ ಸೂಕ್ಷ್ಮಾಣುಜೀವಿಗಳು ಕರುಳಿನ ಒಳಪದರಕ್ಕೆ ಪ್ರವೇಶಿಸಿ ಕರುಳಿನ ಸೋಂಕು ಮತ್ತು ಉರಿಯೂತಗಳಿಗೆ ಕಾರಣವಾಗುತ್ತದೆ. ಮ್ಯೂಕಸ್ ಪದರದಲ್ಲಿನ ಬದಲಾವಣೆಯು ಕರುಳಿನ ಉರಿಯೂತದ ಅಸ್ವಸ್ಥತೆ, ಸಿಸ್ಟಿಕ್ ಫೈಬ್ರೋಸಿಸ್, ಅಲ್ಸರೇಟಿವ್ ಕೋಲಿಟಿಸ್, ದೊಡ್ಡಕರುಳಿನ ಕ್ಯಾನ್ಸರ್, ಅಮೀಬಿಯಾಸಿಸ್, ಕಾಲರಾ, ಸೀಲಿಯಾಕ್ ಅಸ್ವಸ್ಥತೆ ಮತ್ತು ಆಹಾರದ ಅಲರ್ಜಿಗಳಿಂದಲೂ ಉಂಟಾಗುತ್ತದೆ.
“ಸೀಲಿಯಾಕ್ ಅಸ್ವಸ್ಥತೆಯಲ್ಲಿ, ಕರುಳಿನಲ್ಲಿರುವ ಎಪಿಥೀಲಿಯಲ್ ಕೋಶಗಳಿಗೆ ಹಾನಿಯುಂಟಾಗಿ ಮ್ಯೂಕಸ್ ಪದರವು ತೆಳುವಾಗುತ್ತದೆ” ಎಂದು ನವದೆಹಲಿಯ ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಗ್ಯಾಸ್ಟ್ರೋ ಎಂಟೆರಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ ಗೋವಿಂದ್ ಮಖಾರಿಯಾ ಅವರು ಹೇಳುತ್ತಾರೆ.
ಆರೋಗ್ಯಕರ ಕರುಳಿನ ಮ್ಯೂಕಸ್ ಪದರ
ನಮ್ಮ ಕರುಳಿನ ಮ್ಯೂಕಸ್ ಪದರವು ಅನೇಕ ಕಾರಣಗಳಿಂದ ಹಾನಿಗೆ ಒಳಗಾದರೂ, ಆರೋಗ್ಯಕರ ಆಹಾರಾಭ್ಯಾಸ, ಮದ್ಯ ಮತ್ತು ಕೆಫಿನ್ ಸೇವನೆಯನ್ನು ಕಡಿಮೆಗೊಳಿಸುವುದು, ವ್ಯಾಯಾಮ ಮತ್ತು ಪ್ರೊಬಯಾಟಿಕ್ಸ್ ಸೇವನೆಯಂತಹ ಆರೋಗ್ಯಕರ ಜೀವನಶೈಲಿಯನ್ನು ಅಭ್ಯಾಸ ಮಾಡುವುದರಿಂದ ಕರುಳಿನಲ್ಲಿ ಆರೋಗ್ಯಕರವಾದ ಮ್ಯೂಕಸ್ ಬೆಳವಣಿಗೆಯನ್ನು ಉತ್ತೇಜಿಸಬಹುದು ಎಂದು ಸಂಶೋಧನೆಯು ಸಾಬೀತುಪಡಿಸುತ್ತದೆ.
ಮೆಡಿಟೇರನಿಯನ್ ಆಹಾರಾಭ್ಯಾಸಗಳು ಆರೋಗ್ಯಕರ ಕರುಳಿನ ಪದರವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ, ಆದರೆ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಲೆಗ್ಯೂಮ್‌ಗಳು ಮತ್ತು ಬೀಜಗಳನ್ನು ಒಳಗೊಂಡ ವೈವಿಧ್ಯಮಯ ಆಹಾರಸೇವನೆಯಿಂದ ಇದೇ ಪರಿಣಾಮವನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ನಾರಿನಂಶ ಸೇವನೆಯಿಂದಲೂ ಕರುಳಿನ ಮ್ಯೂಕಸ್ ಉತ್ಪಾದನೆಯನ್ನು ಹೆಚ್ಚಿಸಬಹುದು, ಯಾಕೆಂದರೆ ಕರುಳಿನ ಬ್ಯಾಕ್ಟೀರಿಯಾ ಉತ್ಪಾದಿಸುವ ಸಣ್ಣ ಸರಪಳಿಯ ಫ್ಯಾಟಿ ಆಮ್ಲಗಳನ್ನು ಕರುಳಿನ ಕೋಶಗಳು ಶಕ್ತಿಯ ಮೂಲವನ್ನಾಗಿ ಬಳಸಿಕೊಳ್ಳುತ್ತವೆ. ನಮ್ಮ ಆಹಾರದಲ್ಲಿನ ನಾರಿನಂಶವು ನಮ್ಮ ಕರುಳಿನ ಬ್ಯಾಕ್ಟೀರಿಯಾದ ಪ್ರಮುಖ ಆಹಾರಗಳಲ್ಲಿ ಒಂದು.
ಇತರ ಜೀವನಶೈಲಿ ಬದಲಾಣೆಗಳಾದ ತಂಬಾಕು ಸೇವನೆಯನ್ನು ತ್ಯಜಿಸುವುದು, ಸಾಕಷ್ಟು ನೀರು ಕುಡಿಯುವುದು ಮುಂತಾದವುಗಳನ್ನು ಪಾಲಿಸಬೇಕು ಯಾಕೆಂದರೆ, ಉತ್ತಮ ಮಾನಸಿಕ ಆರೋಗ್ಯ ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಇದು ಅತ್ಯವಶ್ಯಕ.