
ನಮ್ಮಲ್ಲಿ ಬಹುತೇಕರು ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಅದರರ್ಥ ದೀರ್ಘಕಾಲದವರೆಗೆ ಕುರ್ಚಿಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅದು ನಮ್ಮ ದೈಹಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಪ್ರಾಜೆಕ್ಟ್ ಅನ್ನು ಮುಗಿಸುವ ಸಲುವಾಗಿ ನಾವು ಮಾಡಬೇಕಾದ ಕರೆಗಳು, ಪ್ರಸೆಂಟೇಶನ್‌ಗಳು ಹಾಗೂ ಕಾಫಿ ಕುಡಿಯುವುದು ಪ್ರತಿದಿನ ಕೆಲಸದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇವುಗಳಲ್ಲಿ ಪ್ರತಿಯೊಂದೂ ಬಳಲಿಕೆ, ಚಿಂತೆ ಮತ್ತು ಕುತ್ತಿಗೆ ನೋವುಗಳಿಗೆ ಕಾರಣವಾಗುವ ಮೂಲಕ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಅದಾಗ್ಯೂ, ಸಂತಸದ ಸುದ್ದಿ ಏನೆಂದರೆ, ಹೆಚ್ಚು ಶ್ರಮಪಡದೇ ಕೆಲವು ವ್ಯಾಯಾಮಗಳನ್ನು ಮಾಡಲು ಸಾಧ್ಯವಿರುವುದರಿಂದ, ಉದ್ಯೋಗದಿಂದ ಉಂಟಾಗುವ ಇಂತಹ ದುಷ್ಪರಿಣಾಮಗಳ ಅಪಾಯವನ್ನು ಕಡಿಮೆಮಾಡಬಹುದು.
ಜನರು ವ್ಯಾಯಾಮ ಮಾಡುವುದನ್ನು ನಿಲ್ಲಿಸಲು ಕಾರಣಗಳೇನು?
“ಜನರು ಇಂದಿಗೂ ದೈಹಿಕ ಫಿಟ್ನೆಸ್‌ನ ಪ್ರಯೋಜನಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಅದರಿಂದಾಗಿ ಅವರು ಗಾಯಗಳಿಗೆ ಒಳಗಾಗುತ್ತಾರೆ ಮತ್ತು ಪರಿಣಾಮವಾಗಿ ಅವರು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ನಿಲ್ಲಿಸುತ್ತಾರೆ. ಹಾಗೆಯೇ, ಸ್ನೇಹಿತರ ಕಾರಣದಿಂದಾಗಿ ಜನರು ಜಿಮ್‌ಗೆ ಸೇರಿಕೊಳ್ಳುತ್ತಾರೆ. ಸ್ವಲ್ಪ ಸಮಯದ ಬಳಿಕ ಅವರು ಜಿಮ್‌ಗೆ ಹೋಗುವುದನ್ನು ನಿಲ್ಲಿಸಲೂ ಕೂಡ ಇದೇ ಕಾರಣವಾಗಿದೆ” ಎಂದು ಬೆಂಗಳೂರಿನ ಫಿಟ್ನೆಸ್ ತರಬೇತುದಾರರಾದ ಶರಾಫ್ ಅಲಿ ಹೇಳುತ್ತಾರೆ.
“ನಾನು ಒಂದು ವರ್ಷದ ಹಿಂದೆ ಜಿಮ್ ಸದಸ್ಯತ್ವವನ್ನು ಪಡೆದುಕೊಂಡೆ, ಆದರೆ ಹೆಚ್ಚೆಂದರೆ ಐದು ಸೆಷನ್‌ಗಳಲ್ಲಿ ಪಾಲ್ಗೊಂಡಿದ್ದೇನೆ. ಜಿಮ್ ಉಪಕರಣಗಳು ಮತ್ತು ವ್ಯಾಯಮದ ದಿನಚರಿಯ ಬಗ್ಗೆ ಅರಿವಿಲ್ಲದಿರುವುದು ಅತಿ ದೊಡ್ಡ ಸಮಸ್ಯೆಯಾಗಿದೆ” ಎಂದು ಬೆಂಗಳೂರಿನ ಎಂಎನ್‌ಸಿಯ ಹಿರಿಯ ತಾಂತ್ರಿಕ ಸಲಹೆಗಾರ ಉಜ್ಮಾ ಜಬೀನ್ (22) ಹೇಳುತ್ತಾರೆ. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ವ್ಯಾಯಾಮ ಮಾಡುವುದು ಅವರಿಗೆ ಅನಾನುಕೂಲ ಮತ್ತು ಭೀತಿಯನ್ನು ಉಂಟುಮಾಡುತ್ತದೆ. ಅವರು ವ್ಯಾಯಾಮ ಮಾಡದೇ ಇರಲು ಇದೂ ಕಾರಣವಾಗಿದೆ.
ಯಾವುದನ್ನು ದೈಹಿಕ ಚಟುವಟಿಕೆ ಎನ್ನುತ್ತೇವೆ?
“ನಡಿಗೆ, ಜಾಗಿಂಗ್, ಈಜು, ನೃತ್ಯ (ಬಹುಶಃ ಜುಂಬಾ) ಅಥವಾ ವರ್ಕ್ ಔಟ್‌ಗಳು ಎಲ್ಲಾ ರೀತಿಯ ದೈಹಿಕ ಚಟುವಟಿಕೆಗಳಾಗಿವೆ” ಎಂದು ಬೆಂಗಳೂರಿನ ಆರೋಗ್ಯ ಮತ್ತು ಫಿಟ್‌ನೆಸ್ ಕೇಂದ್ರವಾದ ಕಲ್ಟ್ ಫಿಟ್‌ನ ಸುಧಾರಿತ ವೈಯುಕ್ತಿಕ ತರಬೇತುದಾರ ಕ್ಲಿಂಟನ್ ಎಂ ಹೇಳುತ್ತಾರೆ.
ವ್ಯಾಯಾಮವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವುದು ಹೇಗೆ?
ಜಿಮ್‌ಗೆ ಹೋಗಲು ಹೆಚ್ಚಿನ ಸಮಯ ವ್ಯಯವಾಗುತ್ತದೆ ಎಂದರೆ ಅದೇ ರೀತಿಯ ಫಲಿತಾಂಶಗಳನ್ನು ಸಾಧಿಸಲು ಕೆಲಸ ಮಾಡಲು ನಡಿಗೆ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮತ್ತು ಗಾರ್ಡನಿಂಗ್‌ನಂತಹ ಚಟುವಟಿಕೆಗಳನ್ನು ಮಾಡಿ. ವ್ಯಾಯಾಮವಲ್ಲದ ಚಟುವಟಿಕೆ ಥರ್ಮೋಜೆನೆಸಿಸ್, ಒಂದು ಪ್ರಕ್ರಿಯೆಯಾಗಿದೆ, ಅದು ನಡಿಗೆ, ನಿದ್ದೆ ಮತ್ತು ತಿನ್ನುವಂತಹ ಚಟುವಟಿಕೆಯ ಮೂಲಕ ಕ್ಯಾಲೋರಿಗಳನ್ನು ವ್ಯಯಿಸಲು ನೆರವಾಗುತ್ತದೆ (NEAT ಎಂದೂ ಕರೆಯುತ್ತಾರೆ). ಆದ್ದರಿಂದ ಬಿಡುವಿಲ್ಲದ ಜೀವನದಲ್ಲಿ ವ್ಯಾಯಾಮವನ್ನು ಅವಿಭಾಜ್ಯ ಅಂಗವಾಗಿಸುವುದು ಎಂದರೆ NEAT ಅನ್ನು ಅನುಸರಿಸುವುದಾಗಿದೆ.
ಪರಿಣಾಮಕಾರಿ ಬೆಳಗ್ಗಿನ ದಿನಚರಿ ಪ್ರಮುಖ ಪಾತ್ರವಹಿಸುತ್ತದೆ
- “ಬೆಳಗ್ಗೆ ಬೇಗ ಏಳುವುದರಿಂದ ಅನೇಕ ಪ್ರಯೋಜನಗಳಿವೆ. ಹಾಸಿಗೆಯಿಂದ ಎದ್ದು ಬೆಳಗಿನ ನಡೆಯುವುದರಿಂದ ನಿಮ್ಮ ದೇಹವು ವಿಟಮಿನ್ ಡಿ ಅನ್ನು ಹೀರಿಕೊಳ್ಳಲು ಮತ್ತು ನಿಮ್ಮ ಮೆದುಳಿಗೆ ಆಕ್ಸಿಜನ್ ಅನ್ನು ಪೂರೈಸಲು ಸಾಧ್ಯವಾಗುತ್ತದೆ” ಎಂದು ಕ್ಲಿಂಟನ್ ಹೇಳುತ್ತಾರೆ.
- ನಿಮ್ಮ ನೋವುಗಳನ್ನು ಕಡಿಮೆಮಾಡಲು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿ. “ಬೆಳಗ್ಗೆ ಹತ್ತು ನಿಮಿಷಗಳ ಕಾಲ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದು ರಕ್ತ ಸಂಚಾರವನ್ನು ಸುಗಮಗೊಳಿಸಿ ನೋವುಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ” ಎಂದು ಅಲಿ ಹೇಳುತ್ತಾರೆ. ಕೀಲುಗಳು ಸೇರಿದಂತೆ ಇಡೀ ದೇಹವನ್ನು ಸ್ಟ್ರೆಚ್ ಮಾಡುವುದನ್ನು ಒಳಗೊಂಡಿರುವ ಡೈನಾಮಿಕ್ ಸ್ಟ್ರೆಚ್‌ಗಳನ್ನು ಬೆಳಗ್ಗೆ ಮಾಡಬಹುದು.
- ವಾರಾಂತ್ಯದಲ್ಲಿ ಕ್ರಿಕೆಟ್, ಬ್ಯಾಂಡ್ಮಿಂಟನ್ ಅಥವಾ ಫುಟ್‌ಬಾಲ್‌ನಂತಹ ಆಟಗಳನ್ನು ಆಡುವುದು ನಾವು ಸಕ್ರಿಯವಾಗಿರುವುದರ ಜೊತೆಗೆ ಕ್ಯಾಲರಿಗಳನ್ನು ವ್ಯಯಿಸಲು ಸಹಾಯ ಮಾಡುತ್ತದೆ.
- ಆಟೋಮೊಬೈಲ್ ಬದಲಿಗೆ ಸೈಕಲ್ ಬಳಕೆ. ನೀವು ಖರೀದಿಗೆ ಅಥವಾ ಯಾವುದೇ ಕೆಲಸಕ್ಕಾಗಿ ಹೊರಗಡೆ ಹೊರಟಾಗ ಆಟೋಮೊಬೈಲ್ ಬಳಸುವ ಬದಲು ನಡೆಯಿರಿ ಅಥವಾ ಸೈಕಲ್ ಅನ್ನು ಬಳಸಿ.ಇದು ಕಾಲಿನ ಸ್ನಾಯುಗಳಾದ ಕ್ವಾಡ್‌ಗಳು, ಗ್ಲುಟ್‌ಗಳು, ಮಂಡಿರಜ್ಜುಗಳು ಮತ್ತು ಕಾಲ್ವ್‌ಗಳಿಗೆ ನೆರವಾಗುತ್ತದೆ. ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಉಪಾಯವಾಗಿದೆ.
- “ಲಿಫ್ಟ್‌ಗಳ ಬದಲಿಗೆ ಸಾಧ್ಯವಾದಷ್ಟು ಮೆಟ್ಟಿಲುಗಳನ್ನು ಬಳಸುವುದು ಉತ್ತಮ. ಕುಳಿತುಕೊಂಡು ಮಾಡುವ ಕೆಲಸಗಳಲ್ಲಿ, ಗ್ಲುಟ್‌ಗಳು, ತೊಡೆಗಳು, ಬೆನ್ನು, ಭುಜಗಳು ಮತ್ತು ಕುತ್ತಿಗೆ ಹೆಚ್ಚು ಬಳಲುತ್ತವೆ. ವ್ಯಕ್ತಿ ಸಕ್ರಿಯ ವಿರಾಮವನ್ನು ತೆಗೆದುಕೊಳ್ಳದೆಯೇ, ಹೆಚ್ಚಿನ ಸಮಯ ಕುಳಿತುಕೊಳ್ಳುವ ಜೀವನಶೈಲಿಯನ್ನು ಮುಂದುವರಿಸಿದರೆ, ಸ್ವಲ್ಪ ಸಮಯದ ನಂತರ ಸ್ನಾಯುಗಳು ದುರ್ಬಲಗೊಳ್ಳುತ್ತವೆ, ಇದು ಕೀಲುನೋವು, ಮೊಣಕಾಲು ನೋವು, ಬೆನ್ನು ನೋವು, ಬಾಗಿದ ಭುಜದ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ಅಲಿ ಮತ್ತು ಕ್ಲಿಂಟನ್ ಇಬ್ಬರೂ ಹೇಳುತ್ತಾರೆ.
- ನೀವು ಇಪ್ಪತ್ತೈದು ನಿಮಿಷಗಳ ಕಾಲ ಕುಳಿತುಕೊಂಡು ಕೆಲಸವನ್ನು ಮಾಡಿದ್ದರೆ, ಮುಂದಿನ ಐದು ನಿಮಿಷಗಳನ್ನು ಕಾಲ ನಿಲ್ಲಲು, ನಡೆಯಲು ಅಥವಾ ಸ್ಟ್ರೆಚ್ ಮಾಡಲು ಬಳಸಿ.
- “ನೃತ್ಯವು ಕ್ಯಾಲೊರಿಗಳನ್ನು ವ್ಯಯಿಸಲು ನೆರವಾಗುವುದರೊಂದಿಗೆ, ಒತ್ತಡವನ್ನು ಕಡಿಮೆಮಾಡುವ ಅತ್ಯುತ್ತಮ ವಿಧಾನವಾಗಿದೆ” ಎಂದು ಕ್ಲಿಂಟನ್ ಹೇಳುತ್ತಾರೆ.
- ಕೊನೆಯದಾಗಿ, ಧ್ಯಾನದ ಮೂಲಕ ಮೆದುಳಿನ ವ್ಯಾಯಾಮ ಮಾಡಲು ಮರೆಯಬೇಡಿ. ಕೆಲವು ನಿಮಿಷಗಳ ಕಾಲ ಕಣ್ಣನ್ನು ಮುಚ್ಚಿಕೊಳ್ಳುವುದು ಮತ್ತು ದೀರ್ಘವಾಗಿ ಉಸಿರಾಡುವುದನ್ನೂ ಕೂಡ ಧ್ಯಾನವೆಂದು ಪರಿಗಣಿಸಲಾಗುತ್ತದೆ. “ಆದ್ದರಿಂದ ಮುಂದಿನ ಬಾರಿ ನೀವು ಬಸ್‌ಗೆ ಕಾಯುವಾಗ ಅಥವಾ ಮೈಕ್ರೋವೇವ್‌ನಲ್ಲಿ ಆಹಾರ ಬಿಸಿಯಾಗುವವರೆಗೆ ಕಾಯುವಾಗ ನಿಮ್ಮ ಕಣ್ಣುಗಳನ್ನು ಮುಚ್ಚಿ ದೀರ್ಘ ಉಸಿರಾಟವನ್ನು ನಡೆಸಿ” ಎನ್ನುತ್ತಾರೆ ಕ್ಲಿಂಟನ್.
ಇನ್ನೂ ಇದೆ
ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ವ್ಯಾಯಾಮದ ಒಂದು ರೂಪವಾಗಿದೆ ಎನ್ನುವ ಕ್ಲಿಂಟನ್, “ ಸಕ್ರಿಯ ಮತ್ತು ಆರೋಗ್ಯಕರ ಜೀವನಶೈಲಿಯು ಊಟವನ್ನು ತಪ್ಪಿಸದಿರುವುದು, ಮಲಗುವ ಎರಡು ಗಂಟೆಗಳ ಮೊದಲು ಊಟವನ್ನು ಮಾಡುವುದು, ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಇತ್ಯಾದಿ ಬಳಸದಿರುವುದು, ಉತ್ತಮ ಭಂಗಿ ಮತ್ತು ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ. ಜೀವನದಲ್ಲಿ ವ್ಯಾಯಾಮವನ್ನು ಭಾಗವಾಗಿಸಿಕೊಳ್ಳುವುದು ಆರೋಗ್ಯಕರವಾದ ಜೀವನ ಮತ್ತು ಮೂಲಭೂತ ದಿನಚರಿಗಳ ಅನುಸರಣೆಗೆ ನೆರವಾಗುತ್ತದೆ” ಎಂದು ವಿವರಿಸುತ್ತಾರೆ.