
ವೈಯುಕ್ತಿಕ ಆರೈಕೆಯಲ್ಲಿ ಪೋಷಣೆಯು ಅತ್ಯಂತ ಹೆಚ್ಚು ಚರ್ಚಿಸಲಾದ ವಿಷಯವಾಗಿದೆ, ಆದರೆ ಇದರ ಬಗೆಗೆ ಅನೇಕ ತಪ್ಪುಕಲನೆಗಳಿದ್ದು ಅವುಗಳನ್ನು ತೊಡೆದುಹಾಕಬೇಕಾಗಿದೆ. ಜುಲೈ 12 ರಂದು ನಡೆದ ಹ್ಯಾಪಿಯೆಸ್ಟ್ ಹೆಲ್ತ್‌ನ ದಿ ಎಡ್ಜ್ ಆಫ್ ನ್ಯೂಟ್ರಿಷನ್ ಸಮ್ಮಿಟ್ ಶೃಂಗಸಭೆಯಲ್ಲಿ ಸೈಂಟ್ ಜಾನ್ಸ್ ರಿಸರ್ಜ್ ಇನ್ಸ್‌ಟಿಟ್ಯೂಟ್‌ನಲ್ಲಿ ನ್ಯೂಟ್ರಿಷನ್ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ ರೆಬೆಕಾ ಕುರಿಯನ್ ರಾಜ್ ಅವರು, ಪೋಷಣೆಯ ಮೂಲಭೂತ ಅಂಶಗಳಿಗೆ ಹಿಂದಿರುಗುವ ಅಗತ್ಯವಿದೆ. ಆರೋಗ್ಯಕರ ದೇಹಕ್ಕೆ ಅವಶ್ಯಕವಾದ ಸೂಕ್ತ ಆಹಾರಗಳನ್ನು ಆಯ್ಕೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಇಲ್ಲಿ ಅವರು ಆಹಾರ ಮತ್ತು ಪೋಷಣೆಯ ಬಗೆಗಿರುವ ಸಾಮಾನ್ಯ ತಪ್ಪುಕಲ್ಪನೆಗಳನ್ನು ಅಲ್ಲಗಳೆದು ಸರಿಯಾದ ಮಾಹಿತಿ ನೀಡಿದ್ದಾರೆ:
ತಪ್ಪು ಕಲ್ಪನೆ 1: ಮೊಟ್ಟೆಯ ಹಳದಿ ಭಾಗವು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ
ವಾಸ್ತವಾಂಶ: ಮೊಟ್ಟೆಯ ಹಳದಿಭಾಗವು ಅಧಿಕ ಕೊಲೆಸ್ಟ್ರಾಲ್ ಹೊಂದಿದೆ.ಆದರೆ ಇದರರ್ಥ ಕೇವಲ ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದಲ್ಲ. ನಿಮ್ಮ ಸಂಪೂರ್ಣ ಆಹಾರಕ್ರಮ ಹೇಗಿದೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ.
ತಪ್ಪು ಕಲ್ಪನೆ 2: ಗರ್ಭಿಣಿ ಮಹಿಳೆಯರು ಇಬ್ಬರ ಊಟ ಮಾಡಬೇಕು
ವಾಸ್ತವಾಂಶ: ಗರ್ಭಿಣಿ ಮಹಿಳೆಯರು ಎಷ್ಟು ತಿನ್ನುತ್ತಾರೆ ಎಂಬುದು ಮುಖ್ಯವಲ್ಲ. ಆರೋಗ್ಯಕರ ಗರ್ಭಧಾರಣೆಗೆ ಯಾವೆಲ್ಲಾ ಪೋಷಕಾಂಶಗಳು ಅಗತ್ಯ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಗರ್ಭಿಣಿ ಮಹಿಳೆಯರು ತಮಗೆ ಪೋಷಣೆಯನ್ನು ಒದಗಿಸುವ ವೈವಿಧ್ಯಮಯವಾದ ಆಹಾರವನ್ನು ಸೇವಿಸಬೇಕು.
ತಪ್ಪು ಕಲ್ಪನೆ 3: ಕ್ರೀಡಾಪಟುಗಳು ಹೆಚ್ಚು ಪ್ರೋಟೀನ್ ಸೇವಿಸಬೇಕು
ವಾಸ್ತವಾಂಶ: ಕ್ರೀಡಾಪಟುಗಳಿಗೆ ಅಧಿಕ ಪ್ರೋಟೀನ್‌ಗಳ ಅಗತ್ಯವಿದೆ, ಆದರೆ ಅವರು ಸಾಕಷ್ಟು ವ್ಯಾಯಾಮ ಮಾಡದೆ ಬರೀ ಪ್ರೊಟೀನ್ ಸೇವನೆಯಿಂದ ಪ್ರಯೋಜನವಿಲ್ಲ.
ತಪ್ಪು ಕಲ್ಪನೆ 4: ತೀವ್ರವಾದ ವರ್ಕ್‌ಔಟ್‌ಗಳಿಂದ ಮಾತ್ರವೇ ತೂಕ ಇಳಿಸಲು ಸಾಧ್ಯ
ವಾಸ್ತವಾಂಶ: ಇಲ್ಲ, ತೂಕ ಇಳಿಸಲು ಸಮತೋಲಿತ ಆಹಾರ ಸೇವನೆ ಮತ್ತು ನಾವು ಮಾಡುವ ವ್ಯಾಯಾಮ ಎರಡೂ ಗಣನೆಗೆ ಬರುತ್ತವೆ.
ತಪ್ಪು ಕಲ್ಪನೆ 5: ವರ್ಕ್‌ಔಟ್‌ಗೆ ಮೊದಲು ಮತ್ತು ನಂತರ ಸ್ನ್ಯಾಕ್ಸ್ ಸೇವಿಸಬೇಕು
ವಾಸ್ತವಾಂಶ: ಹೌದು, ವರ್ಕ್ಔಟ್ ಮೂಲಕ ಸ್ನಾಯುಗಳನ್ನು ಬಲಗೊಳಿಸಬೇಕಾದರೆ, ನಿಮ್ಮ ಸ್ನಾಯುಗಳನ್ನು ಹೆಚ್ಚಿಸುವ ಮತ್ತು ಅವುಗಳಿಗೆ ಸಾಕಷ್ಟು ಶಕ್ತಿ ತುಂಬವ ಸ್ನ್ಯಾಕ್‌ಗಳಿವೆ.
ತಪ್ಪು ಕಲ್ಪನೆ 6: ಮೂತ್ರಪಿಂಡ ಸಮಸ್ಯೆ ಉಳ್ಳವರು ಬಾಳೆ ಹಣ್ಣು ತಿನ್ನಬಾರದು
ವಾಸ್ತವಾಂಶ: ಮೂತ್ರಪಿಂಡ ಸಮಸ್ಯೆ ಉಳ್ಳವರು ಬಾಳೆಹಣ್ಣು ಸೇವಿಸಬಹುದು, ಆದರೆ, ಕೇವಲ ಬಾಳೆಹಣ್ಣು ಮಾತ್ರವಲ್ಲದೇ ಸಂಪೂರ್ಣ ಆಹಾರಕ್ರಮದಲ್ಲಿನ ಪೊಟ್ಯಾಶಿಯಂ ಪ್ರಮಾಣದ ಬಗ್ಗೆ ಗಮನಹರಿಸಬೇಕಾಗುತ್ತದೆ.