ಮಕ್ಕಳಿಗೆ ಆರೋಗ್ಯಕರ ಊಟದ ಬುತ್ತಿಯನ್ನು ಸಿದ್ಧಗೊಳಿಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿದೆ. ಜಂಕ್ ಫುಡ್ ಅಲ್ಲದ ಸ್ನ್ಯಾಕ್ ಅನ್ನು ಪ್ಯಾಕ್ ಮಾಡುವಾಗ ಈ ಸಂದಿಗ್ಧತೆಯು ಹೆಚ್ಚಾಗುತ್ತದೆ. ಆಹಾರಪದಾರ್ಥಗಳಲ್ಲಿನ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳುವುದು ಅಂತಹ ಸಂದರ್ಭದಲ್ಲಿ ಸಹಕಾರಿಯಾಗುತ್ತದೆ. ಮಕ್ಕಳನ್ನು ಜಂಕ್ ಫುಡ್‌ಗಳಿಂದ ದೂರವಿಡಲು ಆರೋಗ್ಯಕರ ಆಹಾರಾಭ್ಯಾಸವನ್ನು ರೂಢಿಯಾಗಿಸುವುದು ತುಂಬಾ ಮುಖ್ಯ, ಮಾತ್ರವಲ್ಲ ಇದು ಅವರ ಒಟ್ಟಾರೆ ಆರೋಗ್ಯವನ್ನೂ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಕ್ಕಳಿಗಾಗಿ ಆರೋಗ್ಯಕರ ಆಹಾರಗಳು
“ಯಾವ ಆಹಾರವನ್ನು ಉತ್ತಮ ಮತ್ತು ಜಂಕ್ ಆಹಾರ ಎಂದು ಪರಿಗಣಿಸಲಾಗುತ್ತದೆ ಎಂಬುದನ್ನು ಪೋಷಕರು ಮುಖ್ಯವಾಗಿ ತಿಳಿದುಕೊಳ್ಳಬೇಕು. ಪ್ರೋಟೀನ್, ನಾರಿನಂಶ, ವಿಟಮಿನ್‌ಗಳು ಮತ್ತು ಖನಿಜಾಂಶವನ್ನು ಹೊಂದಿರುವ ಯಾವುದೇ ಆಹಾರ ಪದಾರ್ಥವು ಮಕ್ಕಳಿಗೆ ಉತ್ತಮ. ಇದಕ್ಕೆ ವಿರುದ್ಧವಾಗಿ, ಅಧಿಕ ಉಪ್ಪು, ಸಕ್ಕರೆ, ಪ್ರಿಸರ್ವೇಟಿವ್‌ಗಳು ಮತ್ತು ಕೊಬ್ಬಿನಂಶವನ್ನು ಹೊಂದಿರುವ ಆಹಾರವನ್ನು ಜಂಕ್ ಆಹಾರ ಎಂದು ಪರಿಗಣಿಸಲಾಗುತ್ತದೆ. ಆಹಾರಗಳ ಪೌಷ್ಠಿಕಾಂಶದ ಬಗ್ಗೆ ತಿಳಿದಿದ್ದರೆ, ಪೋಷಕರಿಗೆ ಸರಿಯಾದ ಆಹಾರವನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ” ಎಂದು ಹ್ಯಾಪಿಯೆಸ್ಟ್ ಹೆಲ್ತ್ ಆಯೋಜಿಸಿದ ದಿ ಎಡ್ಜ್ ಆಫ್ ನ್ಯೂಟ್ರಿಷನ್ ಸಮ್ಮಿಟ್‌ನಲ್ಲಿ ಮಕ್ಕಳ ಪೋಷಣೆಯ ಕುರಿತು ಮಾತನಾಡುತ್ತಾ, ಬೆಂಗಳೂರಿನ ಧೀ ಹಾಸ್ಪಿಟಲ್ಸ್‌ನ ಮಕ್ಕಳ ಸೇವಾ ವಿಭಾಗದ ನಿರ್ದೇಶಕರು, ಹಿರಿಯ ಮಕ್ಕಳ ತಜ್ಞರು ಮತ್ತು ಇಂಟೆನ್ಸಿವಿಸ್ಟ್ ಆಗಿರುವ ಡಾ ಸುಪ್ರಜಾ ಚಂದ್ರಶೇಖರ್ ಅವರು ಹೇಳಿದರು.
ಪೋಷಕಾಂಶದ ಬಣ್ಣದ ಸೂತ್ರ
ಮಕ್ಕಳಲ್ಲಿ ಸಾಮಾನ್ಯವಾಗಿ ಕಬ್ಬಿಣಾಂಶ, ವಿಟಮಿನ್ ಡಿ, ವಿಟಮಿನ್ ಬಿ 12, ಸತು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳ ಕೊರತೆಯನ್ನು ಕಾಣಬಹುದು, ಇದು ರೋಗನಿರೋಧಕಶಕ್ತಿಯನ್ನು ಕಡಿಮೆ ಮಾಡಿ ಅವರು ಮಲಬದ್ಧತೆ, ಅಲರ್ಜಿಗೆ ತುತ್ತಾಗುವಂತೆ, ಮತ್ತು ಸಣ್ಣವಯಸ್ಸಿನಲ್ಲಿ ಪ್ರೌಢಾವಸ್ಥೆಗೆ ಬರುವಂತೆ ಮಾಡುತ್ತದೆ ಎಂದು ಡಾ ಚಂದ್ರಶೇಖರ್ ಅವರು ಹೇಳಿದರು.
“ಲೆಗ್ಯೂಮ್‌ಗಳು, ಮಾಂಸಗಳು ಮತ್ತು ಬೀಜಗಳಂತಹ ಕಡು ಬಣ್ಣದ ಆಹಾರಗಳು (ವಿಶೇಷವಾಗಿ ಹಸಿರು, ಕೆಂಪು ಮತ್ತು ಕಂದು) ಕಬ್ಬಿಣಾಂಶವನ್ನು ಹೇರಳವಾಗಿ ಹೊಂದಿರುತ್ತವೆ ಮತ್ತು ಅತ್ಯುತ್ತಮ ಆರೋಗ್ಯಕ್ಕಾಗಿ ಮಕ್ಕಳು ಇಂತಹ ಆಹಾರಗಳನ್ನು ಆಯ್ಕೆ ಮಾಡುವಂತೆ ಕಲಿಸಬೇಕು. ಅಲ್ಲದೇ ಮಕ್ಕಳು ಸಕ್ಕರೆ, ಉಪ್ಪು, ಮೈದಾ ಮತ್ತು ಬಿಳಿ ಅಕ್ಕಿ ಮುಂತಾದ ಬಿಳಿ ಬಣ್ಣದ ಆಹಾರವನ್ನು ಸೇವಿಸಬಾರದು” ಎಂದು ಅವರು ವಿವರಿಸಿದರು.
ಇದರೊಂದಿಗೆ ಮಕ್ಕಳ ತಿನ್ನುವ ಮತ್ತು ಆಡುವ ಅಭ್ಯಾಸದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ಹೊಂದಿರಬೇಕು ಎಂದು ಡಾ ಚಂದ್ರಶೇಖರ್ ಅವರು ಹೇಳಿದ್ದಾರೆ. “ಆರೋಗ್ಯಕರ ಆಹಾರದ ಅಭ್ಯಾಸ ಬೆಳೆಸಿಕೊಳ್ಳಲು ತಿನ್ನುವ ಪರಿಸರವೂ ಮುಖ್ಯವಾಗುತ್ತದೆ. ಆರೋಗ್ಯಕರವಾಗಿ ತಿನ್ನುವ ಅಭ್ಯಾಸವನ್ನು ರೂಪಿಸುವುದು ಮತ್ತು ಅದನ್ನು ಪಾಲಿಸಲು ಅಭ್ಯಸಿಸುವುದು ಅವರ ಆರೋಗ್ಯದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಮಕ್ಕಳು ತಮ್ಮ ಕುಟುಂಬದೊಂದಿಗೆ ಮತ್ತು ಪ್ರಕೃತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕು. ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮೇಲೆ ಹೆಚ್ಚಿನ ಸಮಯವನ್ನು ಕಳೆಯುವುದು ಅವರಲ್ಲಿ ಆಲಸ್ಯದ ಜೀವನಶೈಲಿಯನ್ನು ಬೆಳೆಸುತ್ತದೆ ಮತ್ತು ಅವರ ಆಹಾರದ ಆಯ್ಕೆಗಳು ಕಳಪೆಯಾಗಿರುತ್ತವೆ, ಇದು ಬೊಜ್ಜು ಬೆಳವಣಿಗೆಯಾಗಲು ಕಾರಣವಾಗಬಹುದು” ಎಂಬುದು ಅವರ ಮಾತು.
ಮಗುವಿನ ಪರಿಪೂರ್ಣ ಆಹಾರ
ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶವು ದೊರೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಲು ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ನೀಡುವುದರ ಮಹತ್ವವನ್ನು ಗಮನಿಸುವಂತೆ ಡಾ ಚಂದ್ರಶೇಖರ್ ಅವರು ಹೇಳುತ್ತಾರೆ. ಅವರ ಪ್ರಕಾರ ಸಮತೋಲಿತ ಆಹಾರವು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
- ಆಹಾರದ ಕಾಲುಭಾಗದಷ್ಟು ಧಾನ್ಯಗಳು ಮತ್ತು ಸಿರಿಧಾನ್ಯಗಳು
- ಆಹಾರದ ಕಾಲುಭಾಗದಷ್ಟು ತೊಗರಿಬೇಳೆ, ಸೋಯಾ, ಬೀಜಗಳು, ಮಾಂಸ, ಮೊಟ್ಟೆ, ಕೋಳಿ ಮತ್ತು ಮೀನು ಮುಂತಾದ ಪ್ರೋಟೀನ್‌ಗಳು. ಅದರಲ್ಲೂ ಲೀನ್ ಪ್ರೋಟೀನ್‌ಗಳು ಮಕ್ಕಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
- ಆಹಾರದ ಕಾಲುಭಾಗದಷ್ಟು ಹಸಿರು ಸೊಪ್ಪು, ಪಿಷ್ಠ, ಕೆಂಪು ಕಿತ್ತಳೆ, ಬೀನ್ಸ್ ಮತ್ತು ಇತರವುಗಳನ್ನು ಒಳಗೊಂಡ ತರಕಾರಿಗಳು. ಮಕ್ಕಳಿಗೆ ಎಲ್ಲಾ ರೀತಿಯ ಸೂಕ್ಷ್ಮ ಪೋಷಕಾಂಶಗಳು ದೊರೆಯಲು ಈ ತರಕಾರಿಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು.
- ಆಹಾರದ ಕಾಲು ಭಾಗದಷ್ಟು ಹಣ್ಣುಗಳು. ಹಣ್ಣಿನ ರಸ ಅಥವಾ ಸ್ಮೂಥಿಗಳಿಗೆ ಬದಲಾಗಿ ಸಂಪೂರ್ಣ ಹಣ್ಣು ತಿನ್ನುವುದು ಉತ್ತಮ.
- ಒಂದು ಕಪ್‌ನಷ್ಟು ಯಾವುದೇ ಹಾಲಿನ ಉತ್ಪನ್ನ. ಅತ್ಯುತ್ತಮ ಆರೋಗ್ಯಕ್ಕಾಗಿ ಮನೆಯಲ್ಲೇ ತಯಾರಿಸಿದ ತಾಜಾ ಪದಾರ್ಥಗಳು ಒಳ್ಳೆಯದು.
ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಯಾವುದೇ ಆಹಾರ ಪದಾರ್ಥವು (ಭಾರತೀಯ ಅಥವಾ ಪಾಶ್ಚಾತ್ಯ ಯಾವುದಾದರೂ) ಆರೋಗ್ಯಕರ ಖಾದ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಸಂಪೂರ್ಣ ಧಾನ್ಯದ ಹೊರಪದರ ಮತ್ತು ಪ್ರಿಸರ್ವೇಟಿವ್‌ಗಳು ಇಲ್ಲದಿರುವ ಮನೆಯಲ್ಲೇ ತಯಾರಿಸಿದ ಪಿಝ್ಝಾ ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಪೂರಿ ಮತ್ತು ಆಲೂಗಿಂತ ಆರೋಗ್ಯಕರ ಆಯ್ಕೆಯಾಗುತ್ತದೆ ಎನ್ನುತ್ತಾರೆ ಅವರು.
ಮಕ್ಕಳಲ್ಲಿ ಪೋಷಕಾಂಶಗಳ ಅವಶ್ಯಕತೆ
ಒಂದು ಮಗುವು ವಿವಿಧ ಬಗೆಯ ಮತ್ತು ಎಲ್ಲಾ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡ ಆಹಾರವನ್ನು ಸೇವಿಸಬೇಕು ಎಂದು ಬೆಂಗಳೂರಿನ ಸೈಂಟ್ ಜಾನ್ಸ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನಲ್ಲಿ ನ್ಯೂಟ್ರಿಷನ್ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ರೆಬೆಕಾ ರಾಜ್ ಅವರು ಹೇಳುತ್ತಾರೆ. “ಮಕ್ಕಳು ಕಾಮನಬಿಲ್ಲಿನ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಎಲ್ಲಾ ರೀತಿಯ ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯಬಹುದು. ಅವರು ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಕೊಬ್ಬಿನಂಶ ಹೊಂದಿರುವ ಆಹಾರ ಸೇವಿಸಬೇಕು ಆದರೆ ಅಧಿಕ ಕಾರ್ಬೋಹೈಡ್ರೇಟ್‌ಸೇವನೆಯನ್ನು ಮಾಡಬಾರದು” ಎಂದು ಅವರು ಹೇಳುತ್ತಾರೆ.
ಇದರೊಂದಿಗೆ ಮಕ್ಕಳು ದಿನಕ್ಕೆ ಎರಡರಿಂದ ಮೂರು ರೀತಿಯ ಹಣ್ಣುಗಳನ್ನು ತಿನ್ನಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ. ದೊಡ್ಡವರಂತೆಯೇ, ಮಕ್ಕಳಿಗೂ ಕೂಡಾ ಪ್ರತಿ ದಿನಕ್ಕೆ ಅರ್ಧ ಕಿಲೋದಷ್ಟು ಹಣ್ಣುಗಳು ಮತ್ತು ತರಕಾರಿಗಳ ಅಗತ್ಯವಿದೆ ಇದನ್ನು ಬೆಳಗ್ಗಿನ ತಿಂಡಿಗೆ ಮಾತ್ರ ಸೀಮಿತಗೊಳಿಸಲದೇ ದಿನ ಪೂರ್ತಿ ಕೊಡಬಹುದು ಎಂದು ಅವರು ಹೇಳುತ್ತಾರೆ.
‘53210′ ತತ್ವವನ್ನು ಅನುಸರಿಸುವುದು ಸಾಕಷ್ಟು ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಖಾತ್ರಿಪಡಿಸುತ್ತದೆ ಎಂದು ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್‌ನ ಮುಖ್ಯ ಆಹಾರ ತಜ್ಞರಾದ ಡಾ ಪ್ರಿಯಾಂಕಾ ರೋಹಟ್ಗಿ ಅವರು ಹೇಳುತ್ತಾರೆ. ಈ ಪರಿಕಲ್ಪನೆಯ ಪ್ರಕಾರ, ಮಕ್ಕಳ ದಿನಚರಿಯು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
- ಐದು ಬಾರಿ ಹಣ್ಣುಗಳು ಮತ್ತು ತರಕಾರಿಗಳ ಸೇವನೆ
- 3 ಹೊತ್ತಿನ ಸಮತೋಲಿತ ಊಟ
- 2 ಗಂಟೆಗಳ ತನಕದ ಸ್ಕ್ರೀನ್ ಟೈಮ್
- 1 ಗಂಟೆ ದೈಹಿಕ ಚಟುವಟಿಕೆ.
- 0 ಜಂಕ್ ಮತ್ತು HFSS (ಅಧಿಕ ಕೊಬ್ಬು, ಉಪ್ಪು ಮತ್ತು ಸಕ್ಕರೆಯುಕ್ತ) ಆಹಾರಗಳು
ಮಕ್ಕಳಲ್ಲಿ ಆರೋಗ್ಯಕರ ಆಹಾರಾಭ್ಯಾಸಗಳನ್ನು ಬೆಳೆಸುವುದು
ಮಕ್ಕಳ ಬೆಳವಣಿಗೆಯ ವೇಗ ಮತ್ತು ಹಸಿವಿನ ಬಾಧೆಗೆ ಗಮನಕೊಡುವುದು ಮುಖ್ಯ ಎನ್ನುತ್ತಾರೆ ಡಾ ರೋಹಟ್ಗಿ. ಮಕ್ಕಳ ಪೋಷಕರಾದ ನಾವು ಅವರಿಗೆ ರೋಲ್ ಮಾಡೆಲ್‌ಗಳಾಗಿದ್ದು ನಾವು ಏನು ಹೇಳುತ್ತೇವೋ ಅದರಂತೆ ನಡೆದುಕೊಳ್ಳಬೇಕು. ಮಕ್ಕಳು ರುಚಿಯಾದ ಮತ್ತು ತೃಪ್ತಿ ನೀಡುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಪೋಷಕರು ಆಹಾರವನ್ನು ಬಹುಮಾನವನ್ನಾಗಿ ಪರಿಗಣಿಸಬಾರದು ಮತ್ತು ಮಕ್ಕಳು ಸರಿಯಾದ ಸಮಯಕ್ಕೆ ತಮ್ಮ ಊಟವನ್ನು ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.
ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದರ ಬಗ್ಗೆ ಹೇಳುತ್ತಾ, ಸ್ವಲ್ಪ ನಿಯಂತ್ರಣ ಮತ್ತು ಸಕ್ರಿಯ ಜೀವನಶೈಲಿಯು ಪ್ರಮುಖವಾದುದು, ನಿಯಮಿತವಾಗಿ ಹೊರಗೆ ತಿನ್ನುವುದು ಮಕ್ಕಳಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆಗೆ ಕಾರಣವಾಗಬಹುದು ಎಂದು ಡಾ ರೋಹಟ್ಗಿಯವರು ಎಚ್ಚರಿಸುತ್ತಾರೆ.
ಸಾರಾಂಶ
- ತಮ್ಮ ಮಕ್ಕಳಿಗೆ ಸರಿಯಾದ ಪೋಷಕಾಂಶವನ್ನು ಒದಗಿಸಲು ಪೋಷಕರು ಆಹಾರ ಪದಾರ್ಥಗಳಲ್ಲಿನ ಪೋಷಕಾಂಶದ ಬಗ್ಗೆ ತಿಳಿದುಕೊಂಡಿರಬೇಕು.
- ಮಕ್ಕಳು ಪ್ರಕೃತಿ ಮತ್ತು ತಮ್ಮ ಕಟುಂಬದೊಡನೆ ಗುಣಮಟ್ಟದ ಸಮಯವನ್ನು ಕಳೆಯಬೇಕು, ಟಿವಿ ಅಥವಾ ಮೊಬೈಲ್ ಪರದೆಯಲ್ಲಿ ಹೆಚ್ಚಿನ ಸಮಯ ಕಳೆಯುವುದು ಅವರ ಕಳಪೆ ಮಟ್ಟದ ಆಹಾರದ ಆಯ್ಕೆಗೆ ಕಾರಣವಾಗಿ ನಿಧಾನವಾಗಿ ಅವರಲ್ಲಿ ಬೊಜ್ಜು ಉಂಟಾಗಲು ಕಾರಣವಾಗುತ್ತದೆ.
- ಒಂದು ಮಗುವಿಗೆ ದಿನಕ್ಕೆ ಅರ್ಧ ಕಿಲೋದಷ್ಟು ಹಣ್ಣುಗಳು ಮತ್ತು ತರಕಾರಿಗಳ ಅಗತ್ಯವಿರುತ್ತದೆ ಮತ್ತು ಇದನ್ನು ಪೂರ್ತಿ ದಿನದಲ್ಲಿ ಕೊಡಬಹುದಾಗಿದೆ.
- ಆಹಾರದಲ್ಲಿನ ಅವಶ್ಯಕ ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯಲು ಮಕ್ಕಳು ಕಾಮನಬಿಲ್ಲಿನ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು.