0

0

0

ವಿಷಯಗಳಿಗೆ ಹೋಗು

ಆಫ್ರಿಕನ್ ಹಂದಿ ಜ್ವರ ಮನುಷ್ಯರಿಗೆ ಅಪಾಯಕರಿ ಅಲ್ಲ: ತಜ್ಞರು
69

ಆಫ್ರಿಕನ್ ಹಂದಿ ಜ್ವರ ಮನುಷ್ಯರಿಗೆ ಅಪಾಯಕರಿ ಅಲ್ಲ: ತಜ್ಞರು

ಆಫ್ರಿಕನ್ ಹಂದಿ ಜ್ವರವು ಹಂದಿಗಳಲ್ಲಿ ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ, ಹರಡುವಿಕೆಯನ್ನು ನಿಯಂತ್ರಿಸಲು ಅವುಗಳನ್ನು ಕೊಲ್ಲಲಾಗುತ್ತದೆ, ನಂತರ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಸಾಮಾನ್ಯ ಹಂದಿ ಜ್ವರದಂತೆ, ಇದು ಮನುಷ್ಯರಿಗೆ ಹರಡುವುದಿಲ್ಲ

ಆಫ್ರಿಕನ್ ಹಂದಿ ಜ್ವರ

ಆಫ್ರಿಕನ್ ಹಂದಿ ಜ್ವರವು ಹಂದಿಗಳಲ್ಲಿ ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ, ಹರಡುವಿಕೆಯನ್ನು ನಿಯಂತ್ರಿಸಲು ಅವುಗಳನ್ನು ಕೊಲ್ಲಲಾಗುತ್ತದೆ, ನಂತರ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಸಾಮಾನ್ಯ ಹಂದಿ ಜ್ವರದಂತೆ, ಇದು ಮನುಷ್ಯರಿಗೆ ಹರಡುವುದಿಲ್ಲ

ಕೇರಳದ ಕಣ್ಣೂರಿನ ಕನಿಚಾರ್‌ನಲ್ಲಿರುವ ಹಂದಿ ಫಾರಂನಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ. ಆ ಬಳಿಕ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹಂದಿಗಳನ್ನು ಕೊಲ್ಲಲು ಆದೇಶಿಸಿದರು ಮತ್ತು ಫಾರಂ ಸುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದರು. ಇದಲ್ಲದೆ,  ಹಂದಿ ಫಾರಂನಿಂದ 10 ಕಿಲೋಮೀಟರ್ ದೂರದ ಪ್ರದೇಶವನ್ನು ರೋಗದ ಕಣ್ಗಾವಲು ವಲಯ ಎಂಬುದಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಒಂದು ಫಾರಂನಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹ್ಯಾಪಿಯೆಸ್ಟ್ ಹೆಲ್ತ್‌ಗೆ ತಿಳಿಸಿದ್ದಾರೆ. ಆಗಸ್ಟ್ 18 ರಂದು ಫಲಿತಾಂಶಗಳು ಬಂದವು ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಮರುದಿನ ಹಂದಿಗಳನ್ನು ಕೊಲ್ಲಲಾಯಿತು, ಆಫ್ರಿಕನ್ ಹಂದಿ ಜ್ವರಕ್ಕೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲವಾದ್ದರಿಂದ, ಹಂದಿಗಳನ್ನು ಕೊಲ್ಲುವುದು ಹರಡುವಿಕೆಯನ್ನು ನಿಯಂತ್ರಿಸುವ ಏಕೈಕ ಆಯ್ಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು.

“ಆಫ್ರಿಕನ್ ಹಂದಿ ಜ್ವರವನ್ನು ನಿರ್ವಹಿಸುವ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನ ಅಂದರೆ, ಸೋಂಕಿತ ಪ್ರದೇಶದಿಂದ ಹಂದಿ ಮಾಂಸವನ್ನು ಮಾರಾಟ ಮಾಡದಿರುವುದು ಅಥವಾ ಸೇವಿಸದಿರುವುದು. ಇದು ಹೆಚ್ಚು ಸಾಂಕ್ರಾಮಿಕ ರೋಗವಾಗಿರುವುದರಿಂದ, ಸೋಂಕಿತ ಫಾರ್ಮ್‌ನಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಮತ್ತು ನಂತರ ಹಂದಿಗಳ ಶವವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವಂತೆ ನಿರ್ದೇಶಿಸಲಾಗುತ್ತದೆ” ಎಂದು ಕೇರಳದ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ (KVASU), ಶಿಕ್ಷಣ ಮತ್ತು  ಸಂಶೋಧನೆಯ ನಿರ್ದೇಶಕಿ ಡಾ ಸಿ ಲತಾ ಹೇಳುತ್ತಾರೆ.

ಆಫ್ರಿಕನ್ ಹಂದಿ ಜ್ವರ ಎಂದರೇನು?

ಆಫ್ರಿಕನ್ ಹಂದಿ ಜ್ವರವು ಹಂದಿಗಳ ಮೇಲೆ ಪರಿಣಾಮ ಬೀರುವ ಮಾರಣಾಂತಿಕ ವೈರಸ್ ಕಾಯಿಲೆಯಾಗಿದೆ. ಆಹಾರ ಭದ್ರತೆ, ಜೀವನೋಪಾಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಂದಿಗಳಲ್ಲಿ  ಹಸಿವಿನ ಕೊರತೆ, ದೌರ್ಬಲ್ಯ ಮತ್ತು ಹಠಾತ್ ಸಾವಿನಂತಹ ರೋಗಲಕ್ಷಣಗಳು ಕಂಡು ಬರುತ್ತವೆ ಎಂಬುದಾಗಿ ಯುನೈಟೆಡ್ ಸ್ಟೇಟ್ಸ್‌ನ ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ ಹೇಳುತ್ತದೆ.

ಆಫ್ರಿಕನ್ ಹಂದಿ ಜ್ವರ ಮತ್ತು ಸಾಮಾನ್ಯ ಹಂದಿ ಜ್ವರದ ನಡುವಿನ ವ್ಯತ್ಯಾಸ

“ಆಫ್ರಿಕನ್ ಹಂದಿ ಜ್ವರವು ಹಂದಿಗಳು ಮತ್ತು ಕಾಡುಹಂದಿಗಳಿಗೆ ಮಾತ್ರ ಪರಿಣಾಮ ಬೀರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ.  ಇದಲ್ಲದೆ, ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಹೆಚ್ಚು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದರೂ, ಅವುಗಳಿಂದ ಮನುಷ್ಯರಿಗೆ ಹರಡುವುದಿಲ್ಲ ಮತ್ತು ಇದು ಸಾಮಾನ್ಯವಾಗಿ ಹಂದಿ ಜ್ವರ ಎಂದು ಕರೆಯಲ್ಪಡುವ H1N1 ಇನ್‌ಫ್ಲುಯೆಂಜಾಗೆ ಸಂಬಂಧಿಸಿಲ್ಲ. ಆಫ್ರಿಕನ್ ಹಂದಿ ಜ್ವರವು ವಿಭಿನ್ನ ಕಾಯಿಲೆಯಾಗಿದೆ. ಇದು DNA ವೈರಸ್ ಮತ್ತು ಸುಲಭವಾಗಿ ರೂಪಾಂತರಗೊಳ್ಳುವುದಿಲ್ಲ ಮತ್ತು ಹಂದಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಹಂದಿ ಜ್ವರ ಅಥವಾ H1N1 ವೈರಸ್, ಹಂದಿಗಳಿಂದ ಮನುಷ್ಯರಿಗೆ ಬಹಳ ಅಪರೂಪಕ್ಕೆ ಹರಡುತ್ತದೆ ಏಕೆಂದರೆ ಇದರಲ್ಲಿ ವೈರಸ್ ರೂಪಾಂತರಗಳು ನಡೆಯುತ್ತಲೇ ಇರುತ್ತವೆ. ಆದರೆ ಸಾಮಾನ್ಯ ಹಂದಿ ಜ್ವರವು ಮನುಷ್ಯರಿಂದ ಮನುಷ್ಯರಿಗೂ ಸಹ ಹರಡಬಹುದು” ಎಂದು ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ (ಸಾಂಕ್ರಾಮಿಕ ರೋಗಗಳು) ಡಾ ನೆಟ್ಟೋ ಜಾರ್ಜ್ ಅವರು ಹೇಳುತ್ತಾರೆ.

“ಆಫ್ರಿಕನ್ ಹಂದಿ ಜ್ವರದ ಸೋಂಕಿತ ಹಂದಿಗಳನ್ನು ಕೊಂದು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಆದರೆ ಸಾಮಾನ್ಯ ಹಂದಿ ಜ್ವರದ ಸಂದರ್ಭದಲ್ಲಿ ಹಂದಿ ಮಾಂಸವನ್ನು ಸರಿಯಾಗಿ ನಿರ್ವಹಿಸಿ ಮತ್ತು ಸರಿಯಾಗಿ ಬೇಯಿಸಿದರೆ ಅದನ್ನು ಸುರಕ್ಷಿತವಾಗಿ ಸೇವಿಸಬಹುದು. ಕೇರಳದಲ್ಲಿ, ಹಂದಿಮಾಂಸವನ್ನು ಸಾಮಾನ್ಯವಾಗಿ ಚೆನ್ನಾಗಿ ಬೇಯಿಸಲಾಗುತ್ತದೆ. ರಾಜ್ಯದಲ್ಲಿ ಹಿಂದೆ ಕಾಣಿಸಿಕೊಂಡಿದ್ದ ಹಂದಿ ಜ್ವರ ಸಂಕ್ರಾಮಿಕದ ಸಮಯದಲ್ಲಿ ಇದೇ ಕಾರಣದಿಂದ ಅದನ್ನು ಹತ್ತಿಕ್ಕಲು ಸಾಧ್ಯವಾಯಿತು” ಎಂದು ಎಂದು ಡಾ ಲತಾ ಅವರು ಹೇಳುತ್ತಾರೆ.

ಹಂದಿ ಜ್ವರ ಎಂದರೇನು?

ಹಂದಿಜ್ವರವು ಇನ್‌ಫ್ಲುಯೆಂಜಾ A ವೈರಸ್‌ನ ಉಪ-ಪ್ರಕಾರ ಆಗಿದೆ ಎಂದು ಮಣಿಪಾಲ್ ಆಸ್ಪತ್ರೆಯ, ಸಮಾಲೋಚಕರಾದ ಡಾ ನೇಹಾ ಮಿಶ್ರಾ ಹೇಳುತ್ತಾರೆ. A, B, C ಮತ್ತು D.  ಹೀಗೆ ನಾಲ್ಕು ವಿಧದ ಇನ್‌ಫ್ಲುಯೆಂಜಾ ವೈರಸ್‌ಗಳು ಇವೆ ಎಂದು ಅವರು ವಿವರಿಸುತ್ತಾರೆ – “ಇವುಗಳಲ್ಲಿ, ಇನ್‌ಫ್ಲುಯೆಂಜಾ A ಮತ್ತು B ಹೆಚ್ಚಿನ ಋತುಮಾನ ಸಂಬಂಧಿತ ಜ್ವರ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿವೆ. H1N1 ಮತ್ತು H3N2 ನಲ್ಲಿ ಸಾಮಾನ್ಯವಾಗಿ ಕಂಡುಬರುವುದು ಇನ್‌ಫ್ಲುಯೆಂಜಾ A ವಿಧ. H1N1 ಅನ್ನು ಸಾಮಾನ್ಯವಾಗಿ ಹಂದಿ ಜ್ವರ ಎಂದು ಕರೆಯಲಾಗುತ್ತದೆ” ಎಂದು ಅವರು ವಿವರಿಸುತ್ತಾರೆ.

“ಮೂಲತಃ ಈ  ವೈರಸ್ ಹಂದಿಗಳಿಂದ ರೂಪಾಂತರಗೊಂಡು ಮನುಷ್ಯರಿಗೆ ಬಂದಿತು ಈ ಕಾರಣದಿಂದ ಸೋಂಕನ್ನು ಹಂದಿ ಜ್ವರ ಎಂದು ಕರೆಯಲಾಯಿತು.  ಅದರ ಮೂಲದಿಂದಾಗಿ, ಇದನ್ನು ಆರಂಭದಲ್ಲಿ ಹಂದಿ ಜ್ವರ ಎಂದು ಕರೆಯಲಾಗುತ್ತಿತ್ತು. ಈಗ ಅದು ಮನುಷ್ಯರಿಗೆ ಹರಡಿದೆ, ನಾವು ಅದನ್ನು H1N1 ವೈರಸ್ ಎಂದು ಕರೆಯುತ್ತೇವೆ” ಎಂದು ಡಾ ಜಾರ್ಜ್ ವಿವರಿಸುತ್ತಾರೆ,

US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಹಂದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ H1N1v ಮತ್ತು H3N2v ನಂತಹ ಇನ್‌ಫ್ಲುಯೆಂಜಾ ವೈರಸ್‌ಗಳು ಜನರಲ್ಲಿ ಪತ್ತೆಯಾದಾಗ, ಅವುಗಳನ್ನು ‘ವೇರಿಯಂಟ್’ ಫ್ಲೂ ವೈರಸ್‌ಗಳು ಎಂದು ಕರೆಯಲಾಗುತ್ತದೆ.

ಹಂದಿ ಜ್ವರ ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಹಂದಿ ಜ್ವರ ಬಾಧಿತರು ಸಾಮಾನ್ಯವಾಗಿ ಜ್ವರದ ಸೌಮ್ಯ ಲಕ್ಷಣಗಳನ್ನು ತೋರಿಸಿದರೆ, ಕೆಲವು ಜನರು ಸೋಂಕಿನ ತೀವ್ರ ಸ್ವರೂಪದ ಅಪಾಯವನ್ನು ಹೊಂದಿರುತ್ತಾರೆ ಎಂದು ಡಾ ಮಿಶ್ರಾ ಹೇಳುತ್ತಾರೆ. ಇದು ಚಿಕ್ಕ ಮಕ್ಕಳು, ಹಿರಿಯ ವಯಸ್ಕರು, ಗರ್ಭಿಣಿಯರು ಮತ್ತು ದೀರ್ಘಾವಧಿಯ ಮಧುಮೇಹ, ದೀರ್ಘಕಾಲದ ಯಕೃತ್ತಿನ ಕಾಯಿಲೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಅಥವಾ ಕಿಮೊಥೆರಪಿಗೆ ಒಳಗಾಗುವ ಜನರಂತಹ ರೋಗನಿರೋಧಕ ಶಕ್ತಿಯ ಕೊರತೆ ಹೊಂದಿರುವ ಜನರನ್ನು ಸಹ ಬಾಧಿಸಬಹುದು.

ಜ್ವರ, ಕೆಮ್ಮು, ಶೀತ, ಗಂಟಲು ನೋವು, ಸುಸ್ತು, ತಲೆನೋವು ಮತ್ತು ಶರೀರದ ನೋವು ಇವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳಾಗಿವೆ. “ಹಂದಿ ಜ್ವರವು ಸಾಮಾನ್ಯವಾಗಿ ಸ್ವಯಂ-ಸೀಮಿತಗೊಳಿಸುವ ಕಾಯಿಲೆಯಾಗಿದ್ದು, ಹೆಚ್ಚಾಗಿ, ಇದು ಮೇಲ್ಭಾಗದ ಶ್ವಾಸೇಂದ್ರಿಯ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಅಪರೂಪದ ಸಂದರ್ಭಗಳಲ್ಲಿ, ಹಿನ್ನೆಲೆಯ ಸಹ-ರೋಗ ಪರಿಸ್ಥಿತಿಯ ಸಂದರ್ಭಗಳಲ್ಲಿ ಕೆಳಗಿನ ಶ್ವಾಸೇಂದ್ರಿಯ ಭಾಗಗಳಿಗೆ ಸೋಂಕು ಹರಡಬಹುದು” ಎಂದು ಡಾ ಮಿಶ್ರಾ ಹೇಳುತ್ತಾರೆ.

ಸಾಮಾನ್ಯ ಜನರಲ್ಲಿ ಹಂದಿ ಜ್ವರದ ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ ಎಂದು ಡಾ ಜಾರ್ಜ್ ಹಂಚಿಕೊಳ್ಳುತ್ತಾರೆ. “ಕೆಲವರಲ್ಲಿ ಮೂಗಿನಿಂದ ನೀರಿಳಿಯುವುದು, ಮತ್ತು ಗಂಟಲು ನೋವು ಇರಬಹುದು” ಎಂದು ಅವರು ವಿವರಿಸುತ್ತಾರೆ. ಇದು ಹೆಚ್ಚು ತೀವ್ರವಾಗಬಹುದು, ಆದರೆ ಹೀಗಾಗುವುದು ಅಪರೂಪ ಎಂದೂ ಅವರು ವಿವರಿಸುತ್ತಾರೆ.

ಹಂದಿಗಳಿಂದ ಮನುಷ್ಯರಿಗೆ ಜ್ವರ ಬರಬಹುದೇ?

ಹಂದಿಜ್ವರದ ವಿಷಯಕ್ಕೆ ಬಂದಾಗ, ಋತುಮಾನಗಳಿಗೆ ಸಂಬಂಧಿಸಿದ ಜ್ವರವು ಹೇಗೆ ಹರಡುತ್ತದೆಯೋ ಅದೇ ರೀತಿಯಲ್ಲಿ ಉಸಿರಾಟದ ಸ್ರವಿಸುವಿಕೆಯ ಮೂಲಕ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಪ್ರಾಣಿಗಳಿಗೆ ಹರಡಬಹುದು ಎಂದು ಡಾ ಮಿಶ್ರಾ ವಿವರಿಸುತ್ತಾರೆ. ಸೋಂಕಿತ ಮೂಗಿನ ಹನಿಗಳನ್ನು ಹೊಂದಿರುವ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಮತ್ತು ನಂತರ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವ ಮೂಲಕ ಸೋಂಕು ಹರಡಬಹುದು ಎಂದು CDC ಹೇಳುತ್ತದೆ.

H1N1 ವೈರಸ್‌ನ ಮಾನವನಿಂದ ಮನುಷ್ಯನಿಗೆ ಹರಡುವ ಬಗ್ಗೆ ಮಾತನಾಡುತ್ತಾ, “ನೀವು ಸೋಂಕಿತ ವ್ಯಕ್ತಿಯೊಂದಿಗೆ ಮುಖಾಮುಖಿಯಾಗಿ ಅಂದರೆ ಸಮೀಪದಲ್ಲಿ ನಿಂತು ಮಾತನಾಡುತ್ತಿದ್ದರೆ, ಸೂಕ್ಷ್ಮಜೀವಿಗಳು ನೇರವಾಗಿ ನಿಮ್ಮ ಮೂಗು ಮತ್ತು ಬಾಯಿಗೆ ಪ್ರವೇಶಿಸಬಹುದು” ಎಂದು ಡಾ ಜಾರ್ಜ್ ಹೇಳುತ್ತಾರೆ.

ಸಾರಾಂಶ

ಕೇರಳದ ಕಣ್ಣೂರಿನಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ. ಈ ರೋಗವು ಹಂದಿಗಳಿಗೆ ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕವಾಗಿದ್ದರೂ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಏಕೆಂದರೆ ಇದು ಹಂದಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ