0

0

0

ಈ ಲೇಖನದಲ್ಲಿ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಹೇಗೆ ಹರಡುತ್ತವೆ?
3

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಹೇಗೆ ಹರಡುತ್ತವೆ?

ಸೋಂಕಿನ ಕಾರಣವನ್ನು ತಿಳಿಯದೆ ಸೋಂಕಿಗೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್ ಬಳಸಬಾರದು, ಏಕೆಂದರೆ ಇದು ಆ್ಯಂಟಿಬಯಾಟಿಕ್ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗಬಹುದು.

 

ಋತುಮಾನವು ಬೇಸಿಗೆಯಿಂದ ಮಳೆಗಾಲಕ್ಕೆ ಬದಲಾಗುತ್ತಿದ್ದಂತೆಯೇ, ಜನರಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ ಸೋಂಕಿನ ಹೆಚ್ಚಳವು ಕಂಡುಬರುತ್ತದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯು ಇನ್ನೂ ಕೂಡ ಬೆಳವಣಿಗೆಯ ಹಂತದಲ್ಲಿರುವುದ, ಇಂತಹ ಸೋಂಕುಗಳ ಪರಿಣಾಮವು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿ, ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮತ್ತು ಚೇತರಿಕೆಗೆ ಸಹಾಯ ಮಾಡಲು ಸರಿಯಾದ ಚಿಕಿತ್ಸೆಯನ್ನು ಒದಗಿಸುವುದು ಅತ್ಯಗತ್ಯ.

ಹ್ಯಾಪಿಯೆಸ್ಟ್ ಹೆಲ್ತ್, ತಜ್ಞರೊಂದಿಗೆ ಮಾತನಾಡಿದಾಗ, ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ನಡುವಿನ ವ್ಯತ್ಯಾಸ,  ಅವುಗಳನ್ನು ತಡೆಯುವುದು ಹೇಗೆ ಮತ್ತು ವೈರಲ್ ಸೋಂಕಿಗೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್‌ಗಳನ್ನು ಏಕೆ ಬಳಸಬಾರದು ಎಂಬ ಬಗ್ಗೆ ಲಭ್ಯವಾದ ಮಾಹಿತಿ ಇಲ್ಲಿದೆ.

ಬ್ಯಾಕ್ಟೀರಿಯಾದ ಸೋಂಕು

ಬ್ಯಾಕ್ಟೀರಿಯಾದ ಸೋಂಕು ರೋಗಲಕ್ಷಣಗಳನ್ನು ತೋರಿಸುವ ಮೊದಲು ನಿಧಾನವಾಗಿ ಬೆಳೆಯುತ್ತದೆ. “ಬ್ಯಾಕ್ಟೀರಿಯಾದ ಸೋಂಕು ಒಂದು ಕಪಟ ಆಕ್ರಮಣವಾಗಿದ್ದು, ಅಲ್ಲಿ ಸ್ಪಷ್ಟವಾದ ರೋಗಲಕ್ಷಣಗಳು ಆರಂಭದಲ್ಲಿ ಕಂಡುಬರುವುದಿಲ್ಲ, ಸಮಯ ತೆಗೆದುಕೊಳ್ಳುತ್ತದೆ” ಎಂದು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗಳ ಶ್ವಾಸಕೋಶತಜ್ಞ ಡಾ ಚೇತನ್ ರಾವ್ ವಡ್ಡೆಪಲ್ಲಿ ಹೇಳುತ್ತಾರೆ.

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ಓವರ್‌ಲ್ಯಾಪ್ ಆದ ಲಕ್ಷಣಗಳಲ್ಲಿ ಜ್ವರ, ಕೆಮ್ಮು ಮತ್ತು ನೆಗಡಿ ಇತ್ಯಾದಿ ಸೇರಿವೆ. “ವೈರಲ್ ಸೋಂಕುಗಳಲ್ಲಿ ಮೂಗು ಸ್ರವಿಸುವುದು ಹೆಚ್ಚು ಸಾಮಾನ್ಯವಾಗಿರುತ್ತದೆ, ಆದರೆ ಬ್ಯಾಕ್ಟೀರಿಯಾದ ಸೋಂಕಿನಲ್ಲಿ ನಿರಂತರ ಕೆಮ್ಮು ಸಾಮಾನ್ಯವಾಗಿ ಕಂಡುಬರುತ್ತದೆ” ಎಂದು ಮುಂಬೈನ ಗ್ಲೋಬಲ್ ಆಸ್ಪತ್ರೆಗಳ ಸಾಂಕ್ರಾಮಿಕ ರೋಗಗಳ ತಜ್ಞ ಡಾ ವಾಶಿಮ್ ಖೋಟ್ ಹೇಳುತ್ತಾರೆ. ಆದರೆ COVID-19 (ವೈರಲ್ ಸೋಂಕು) ಸಾಂಕ್ರಾಮಿಕದ ಸಮಯದಲ್ಲಿ ಕೆಮ್ಮು ಒಂದು ಬಹುಮುಖ್ಯ ರೋಗಲಕ್ಷಣವಾಗಿತ್ತು.

“ಅಧಿಕ ಜ್ವರ, ಹಳದಿ ಅಥವಾ ಹಸಿರು ಬಣ್ಣದ ಕಫವು ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣ ಆಗಿರಬಹುದು” ಎಂದು ಡಾ ಖೋಟ್ ಹೇಳುತ್ತಾರೆ, ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಯಾವುದೇ ಕಷ್ಟಕರ ಮತ್ತು ತ್ವರಿತ ನಿಯಮವಿಲ್ಲ ಎಂದು ಎಚ್ಚರಿಸುವ ಅವರು, “ವೈದ್ಯರ ಪರೀಕ್ಷೆಯ ಸಮಯದಲ್ಲಿ ಪತ್ತೆಯಾದ ಕ್ಲಿನಿಕಲ್ ಚಿಹ್ನೆಗಳು ಮತ್ತು ಲ್ಯಾಬ್ ಪರೀಕ್ಷೆಗಳು ಮಾತ್ರ ಎರಡರ ನಡುವಿನ ವ್ಯತ್ಯಾಸವನ್ನು ತೋರಿಸಲು ಸಹಾಯ ಮಾಡುತ್ತವೆ” ಎಂದು ಹೇಳುತ್ತಾರೆ.

ವೈರಾಣು ಸೋಂಕು

ಪ್ರತಿಯೊಂದು ವೈರಸ್ ತನ್ನದೇ ಆದ ಸೋಂಕಿನ ಮಾದರಿಯನ್ನು ಹೊಂದಿದೆ ಎಂದು ಡಾ ಖೋಟ್ ಹೇಳುತ್ತಾರೆ. “ಅವುಗಳಲ್ಲಿ ಕೆಲವು ಮೇಲ್ಭಾಗದ ಉಸಿರಾಟದ ಮಾರ್ಗದಲ್ಲಿ ಸೋಂಕನ್ನು ಉಂಟುಮಾಡಬಹುದು, ಇನ್ನು ಕೆಲವು ಕಣ್ಣು ಕೆಂಪಗಾಗಿಸುವುದು, ಅತಿಸಾರ ಅಥವಾ ಸಾಮಾನ್ಯ ಜ್ವರದಂತಹ ಲಕ್ಷಣಗಳನ್ನು ಉಂಟುಮಾಡಬಹುದು.”

ವೈರಲ್ ಸೋಂಕುಗಳ ರೋಗಲಕ್ಷಣಗಳು ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಬೆಳವಣಿಗೆಯನ್ನು ಹೊಂದುತ್ತವೆ. “ನೀವು ಬೆಳಗ್ಗೆ ಸಂಪೂರ್ಣವಾಗಿ ಚೆನ್ನಾಗಿದ್ದರೂ ಕೂಡ, ರಾತ್ರಿಯಲ್ಲಿ ಜ್ವರ ಏರಬಹುದು” ಎಂದು ಡಾ ವಡ್ಡೆಪಲ್ಲಿ ವಿವರಿಸುತ್ತಾರೆ.

ಜ್ವರ, ನೆಗಡಿ, ಸೀನುವಿಕೆ, ಮೈ-ಕೈ ನೋವು, ಕೆಮ್ಮು ಮತ್ತು ತಲೆನೋವು ಇವು ವೈರಸ್ ಸೋಂಕಿನ ಲಕ್ಷಣಗಳಾಗಿವೆ.

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಹೇಗೆ ಹರಡುತ್ತವೆ?

ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳೆರಡೂ ಗಾಳಿಯ ಮೂಲಕ ಹರಡುತ್ತವೆಯಾದರೂ ಸಹ, ಬ್ಯಾಕ್ಟೀರಿಯಾಕ್ಕಿಂತ ವೈರಸ್‌ಗಳು ಹರಡುವ ಪ್ರಮಾಣ ಹೆಚ್ಚಾಗಿರುತ್ತದೆ. “ಮನೆಯಲ್ಲಿ ಅನೇಕ ಜನರು ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅದು ವೈರಲ್ ಸೋಂಕು ಆಗಿರಬಹುದು” ಎಂದು ಎಂದು ಡಾ ಖೋಟ್ ವಿವರಿಸುತ್ತಾರೆ.

ಡೆಂಗ್ಯೂ ಮತ್ತು ಮಲೇರಿಯಾ ಸೋಂಕನ್ನು ಉಂಟುಮಾಡುವ ಸೊಳ್ಳೆಗಳಂತಹ ವಾಹಕಗಳ ಮೂಲಕವೂ ವೈರಸ್‌ಗಳು ಹರಡಬಹುದು. “ಕೈಗಳ ನೈರ್ಮಲ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಬೇರೆ ಬೇರೆ ಮೂಲಗಳಿಂದ (ಚರ್ಮ, ಮಣ್ಣು, ಇತ್ಯಾದಿ) ಬ್ಯಾಕ್ಟೀರಿಯಾಗಳು ಕೈಗಳ ಮೂಲಕ ಬಾಯಿಯನ್ನು ಪ್ರವೇಶಿಸಬಹುದು” ಎನ್ನುತ್ತಾರೆ ಡಾ ಖೋಟ್.

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವ್ಯತ್ಯಾಸ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾ, “ಒಂದು ವಾರದೊಳಗೆ ವೈರಲ್ ಫ್ಲೂ ಸೋಂಕಿನಿಂದ ಚೇತರಿಸಿಕೊಳ್ಳಬಹುದು. ಆದರೆ, ಜ್ವರ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣವಾಗಿರಬಹುದು” ಎಂದು ಮುಂಬೈನ ವೊಕಾರ್ಡ್ ಹಾಸ್ಪಿಟಲ್ಸ್‌ನ ಇಂಟರ್ನಲ್ ಮೆಡಿಸಿನ್ ತಜ್ಞರಾದ ಡಾ ಬೆಹ್ರಾಮ್ ಪರ್ದಿವಾಲ್ಲಾ ಹೇಳುತ್ತಾರೆ.

ರಕ್ತ ಪರೀಕ್ಷೆಯು, ಸೋಂಕಿನ ವಿಧ ಮತ್ತು ವಿಧಕ್ಕೆ ತಕ್ಕಂತೆ ಬದಲಾಗುವ ನಿಯತಾಂಕಗಳನ್ನು ಬಹಿರಂಗಪಡಿಸಬಹುದು. “ಬಿಳಿ ರಕ್ತ ಕಣಗಳ ಎಣಿಕೆಯು ವೈರಲ್ ಸೋಂಕುಗಳಿಗಿಂತ ಬ್ಯಾಕ್ಟೀರಿಯಾದ ಸೋಂಕಿನಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ, ಸೋಂಕು ಯಾವ ವಿಧದ್ದು, ಬ್ಯಾಕ್ಟೀರಿಯಾ ಸೋಂಕೇ ಅಥವಾ ವೈರಲ್ ಸೋಂಕೇ ಎಂಬುದನ್ನು ಅರ್ಥಮಾಡಿಕೊಳ್ಳಲು ರಕ್ತ ಪರೀಕ್ಷೆ ಅತ್ಯಗತ್ಯ” ಎಂದು ಡಾ ಪಾರ್ಡಿವಾಲ್ಲಾ ಸೇರಿಸುತ್ತಾರೆ.

ಸಹ-ಸೋಂಕು: ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಏಕಕಾಲದಲ್ಲಿ ದಾಳಿ ಮಾಡಿದಾಗ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಕೆಲವೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ, ಇದನ್ನು ಸಹ-ಸೋಂಕು ಎಂದು ಕರೆಯಲಾಗುತ್ತದೆ. “ನೀವು ವೈರಲ್  ಕಾರಣದಿಂದ ಮೇಲ್ಭಾಗದ ಶ್ವಾಸ ಮಾರ್ಗದ ಸೋಂಕನ್ನು ಹೊಂದಿದ್ದರೆ,  ಅಲ್ಲಿ ಅಧಿಕಪ್ರಮಾಣದ ಬ್ಯಾಕ್ಟೀರಿಯಾ ಸೋಂಕು ಕೂಡ ಬೆಸೆದಿರಬಹುದು, ಇದು ಸಹ-ಸೋಂಕಿಗೆ ಕಾರಣವಾಗುತ್ತದೆ” ಎಂದು ಡಾ ಪಾರ್ಡಿವಾಲ್ಲಾ ವಿವರಿಸುತ್ತಾರೆ.

ಅನುಪಮ್ (ಹೆಸರು ಬದಲಿಸಲಾಗಿದೆ), ಹೈದರಾಬಾದ್ ಮೂಲದ ವೈದ್ಯಕೀಯ ಕಾಲೇಜು ವಿದ್ಯಾರ್ಥಿ, ಮೇ 2023 ರಲ್ಲಿ ಗ್ಯಾಸ್ಟ್ರೋಎಂಟರೈಟಿಸ್ (ಜಠರ ಕರುಳಿನ) ಮತ್ತು ಜ್ವರದ ಅನಿರ್ದಿಷ್ಟ ರೋಗಲಕ್ಷಣಗಳನ್ನು ಹೊಂದಿದ್ದರು. ಅವರು ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಿದ್ದರು, ತಪಾಸಣೆಯಲ್ಲಿ ಅವರಿಗೆ ಟೈಫಾಯಿಡ್ ಇದೆ ಎಂದು ಪತ್ತೆಯಾಯಿತು.

ಆದರೆ ಅವರ ಸ್ಥಿತಿ ಹದಗೆಟ್ಟಿತು, ಅವರು ಆ್ಯಂಟಿಬಯಾಟಿಕ್‌ಗಳಿಗೆ ಸ್ಪಂದಿಸಲಿಲ್ಲ, ಅವರನ್ನು ಐಸಿಯುಗೆ ದಾಖಲಿಸಲಾಯಿತು. ಅವರ ಜ್ವರವು ಏರುತ್ತಾ ಹೋಯಿತು, ಬಿಳಿಯ ರಕ್ತಕಣಗಳ ಎಣಿಕೆಯು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿತ್ತು, ಅವರ ಪ್ಲೇಟ್ಲೆಟ್ ಸಂಖ್ಯೆ ಕೂಡ ಕುಸಿಯಿತು. ಹೆಚ್ಚಿನ ತಪಾಸಣೆಯ ನಂತರ, ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಯಿತು, ಡೆಂಗ್ಯೂ ಒಂದು ವೈರಲ್ ಸೋಂಕು. “ನಾವು ಎರಡೂ ಸೋಂಕುಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ನಂತರ, ಅವರ ಸ್ಥಿತಿ ಸುಧಾರಿಸಿತು” ಎಂದು ಅನುಪಮ್‌ಗೆ ಚಿಕಿತ್ಸೆ ನೀಡಿದ ಡಾ ವಡ್ಡೆಪಲ್ಲಿ ಹೇಳುತ್ತಾರೆ.

ಬ್ಯಾಕ್ಟೀರಿಯಾ vs ವೈರಲ್ ಸೋಂಕು: ಚಿಕಿತ್ಸೆ ಮತ್ತು ತಡೆಗಟ್ಟುವಿಕೆ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತಡೆಗಟ್ಟಲು (ವಿಶೇಷವಾಗಿ ಜ್ವರದ ಸಮಯದಲ್ಲಿ) ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು:

  • ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು
  • ಆರೋಗ್ಯಕರ ಆಹಾರವನ್ನು ಸೇವಿಸುವುದು
  • ನಿಯಮಿತವಾಗಿ ವ್ಯಾಯಾಮ ಮಾಡುವುದು
  • ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿಯ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು
  • ಲಸಿಕೆಯನ್ನು ಪಡೆಯುವುದು

ನ್ಯುಮೋಕಾಕಲ್ ಲಸಿಕೆ (ಸ್ಟ್ರೆಪ್ಟೋಕಾಕಸ್ ನ್ಯುಮೋನಿಯಾ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯುಮೋನಿಯಾಕ್ಕೆ ನೀಡಲಾಗುತ್ತದೆ) ಮತ್ತು ವರ್ಷಕ್ಕೆ ಒಂದು ಬಾರಿ ತೆಗೆದುಕೊಳ್ಳುವ ಇನ್ ಫ್ಲುಯೆನ್ಸ ಲಸಿಕೆಗಳಂತಹ ಚುಚ್ಚುಮದ್ದುಗಳು ಸೋಂಕಿನ ಸಾಧ್ಯತೆ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡಾ ವಡ್ಡೆಪಲ್ಲಿ ಹೇಳುತ್ತಾರೆ.

“ಆ್ಯಂಟಿಬಯಾಟಿಕ್‌ಗಳನ್ನು ನೀಡುವುದೇ ಬ್ಯಾಕ್ಟೀರಿಯಾದ ಸೋಂಕಿಗೆ ಚಿಕಿತ್ಸೆ ನೀಡುವ ಪ್ರಮುಖ ವಿಧಾನವಾಗಿದೆ” ಎಂದು ಡಾ ವಡ್ಡೆಪಲ್ಲಿ ಹೇಳುತ್ತಾರೆ. ಆದರೆ, ವೈರಲ್ ಸೋಂಕುಗಳಿಗೆ ಆ್ಯಂಟಿಬಯಾಟಿಕ್‌ ಮೂಲಕ ಚಿಕಿತ್ಸೆ ನೀಡಲಾಗುವುದಿಲ್ಲ. ಯಾವುದೇ ಸೋಂಕಿಗೆ ಅದರ ಕಾರಣವನ್ನು ಕಂಡುಹಿಡಿಯದೆ ಚಿಕಿತ್ಸೆಗಾಗಿ ಆ್ಯಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದು ಹೆಚ್ಚಿನವರಿಗೆ ಅಭ್ಯಾಸವಾಗಿ ಹೋಗಿದೆ, ಇದು ತಪ್ಪು, ಇದರಿಂದಾಗಿ ಆ್ಯಂಟಿಬಯಾಟಿಕ್‌ ಪ್ರತಿರೋಧತೆ ಬೆಳೆಯಬಹುದು ಎಂದು ಅವರು ಹೇಳುತ್ತಾರೆ.

“ವೈದ್ಯರ ಸಲಹೆ ಇಲ್ಲದೆ, ಸರಿಯಾಗಿ ತಪಾಸಣೆ ಮಾಡಿಕೊಳ್ಳದೆ, ಆ್ಯಂಟಿಬಯಾಟಿಕ್‌ ತೆಗೆದುಕೊಳ್ಳುವ ಸ್ವಯಂ ಚಿಕಿತ್ಸೆಯು ಬ್ಯಾಕ್ಟೀರಿಯಾದ ಪ್ರತಿರೋಧಕ ಬೆಳವಣಿಗೆಗೆ ಕಾರಣವಾಗುತ್ತದೆ, ಇದೇ ಕಾರಣದಿಂದ ಲಭ್ಯವಿರುವ ಆ್ಯಂಟಿಬಯಾಟಿಕ್‌ನಿಂದಾಗಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ. ಇದನ್ನು ಆ್ಯಂಟಿಬಯಾಟಿಕ್‌ ಪ್ರತಿರೋಧ ಎಂದು ಕರೆಯಲಾಗುತ್ತದೆ. ಹೀಗಾಗಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ”  ಎನ್ನುವುದು ಡಾ ವಡ್ಡೆಪಲ್ಲಿ ಅವರ ಅನುಭವದ ನುಡಿ.

“ವೈರಲ್ ಸೋಂಕಿನ ಸಮಯದಲ್ಲಿ ಜ್ವರ ಮತ್ತು ಶೀತವನ್ನು ನಿರ್ವಹಿಸಲು, ಶರೀರದ ಉಷ್ಣತೆಯನ್ನು ತಗ್ಗಿಸಲು ನಿಮ್ಮ ತಲೆಯ ಮೇಲೆ ತಣ್ಣನೆಯ ಟವೆಲ್ ಹಾಕಿಕೊಳ್ಳಿ ಮತ್ತು ವೈದ್ಯರನ್ನು ಸಂಪರ್ಕಿಸಿ. ಸಾಕಷ್ಟು ದ್ರವಾಹಾರ ಸೇವಿಸಿ, ನಿಮ್ಮಷ್ಟಕ್ಕೆ ನೀವೆ ಆ್ಯಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳಬೇಡಿ” ಎಂದು ಡಾ ಪಾರ್ಡಿವಾಲ್ಲಾ ಸಲಹೆ ನೀಡುತ್ತಾರೆ.

ಸಾರಾಂಶ:

  • ವೈರಲ್ ಸೋಂಕಿನ ಲಕ್ಷಣಗಳು ತ್ವರಿತವಾಗಿ ಪ್ರಕಟವಾಗುತ್ತವೆ, ಆದರೆ ಬ್ಯಾಕ್ಟೀರಿಯಾದ ಸೋಂಕಿನ ಲಕ್ಷಣಗಳು ನಿಧಾನಗತಿಯ ಬೆಳವಣಿಗೆಯನ್ನು ಹೊಂದಿರುತ್ತವೆ. ಆದರೆ, ರೋಗಲಕ್ಷಣಗಳು ಕೆಲವೊಮ್ಮೆ ಓವರ್‌ಲ್ಯಾಪ್ ಆಗಿ ಒಟ್ಟಿಗೆ ಕಾಣಿಸಿಕೊಳ್ಳಬಹುದು.
  • ದೀರ್ಘಾವಧಿಯವರೆಗೆ ಇರುವ ಕೆಲವು ರೋಗಲಕ್ಷಣಗಳು ಬ್ಯಾಕ್ಟೀರಿಯಾದ ಸೋಂಕನ್ನು ಸೂಚಿಸಬಹುದು, ಏಕೆಂದರೆ ವೈರಲ್ ಸೋಂಕು ಸಾಮಾನ್ಯವಾಗಿ ಒಂದು ವಾರದೊಳಗೆ ಕಡಿಮೆಯಾಗುತ್ತದೆ.
  • ಯಾವುದೇ ಸೋಂಕಿಗೆ ಅದರ ಕಾರಣವನ್ನು ತಿಳಿಯದೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್‌ಗಳನ್ನು ಬಳಸಬಾರದು, ಏಕೆಂದರೆ ಇದು ಆ್ಯಂಟಿಬಯಾಟಿಕ್‌ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗುತ್ತದೆ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

12 − 1 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ