ದೇಶಾದ್ಯಂತ ಡೆಂಗ್ಯೂ ಪ್ರಕರಣಗಳ ಭಾರೀ ಏರಿಕೆ ಕಂಡುಬರುತ್ತಿವೆ. ಡೆಂಗ್ಯೂ ಕಾಯಿಲೆ ವಿಶಿಷ್ಟ ಲಕ್ಷಣಗಳು ಕಂಡು ಬಂದಾಗಲೂ ತಪ್ಪು-ಋಣಾತ್ಮಕ ಡೆಂಗ್ಯೂ ಪರೀಕ್ಷಾ ವರದಿಗಳು ಬಂದಿದ್ದನ್ನು ವೈದ್ಯರು ಗಮನಿಸಿದ್ದಾರೆ. ಈ ರೀತಿಯ ತಪ್ಪಾದ ಪರೀಕ್ಷಾ ಫಲಿತಾಂಶಗಳು ಕಳವಳಕಾರಿಯಾಗಿವೆ.
ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದರೂ ಪರೀಕ್ಷೆಯು ವೈರಸ್ ಅನ್ನು ಪತ್ತೆಹಚ್ಚದಿದ್ದಾಗ ತಪ್ಪಾದ-ಋಣಾತ್ಮಕ(ನೆಗೆಟಿವ್) ಫಲಿತಾಂಶಗಳು, ಧನಾತ್ಮಕ (ಪಾಸಿಟಿವ್) ವರದಿಯ ಬದಲಿಗೆ ನಕಾರಾತ್ಮಕ ವರದಿಗಳು ಬಂದಿವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇದೇ ರೀತಿಯ ಸಮಸ್ಯೆಗಳು ಕಂಡುಬಂದಿದ್ದನ್ನು ನಾವಿಲ್ಲಿ ನೆನೆಯಬಹುದು. ತಪ್ಪಾದ ವರದಿಗಳು ಗೊಂದಲವನ್ನು ಸೃಷ್ಟಿಸುತ್ತವೆ.
ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಮತ್ತು ಚಿಕಿತ್ಸೆಯನ್ನು ನೀಡುವಾಗ ರೋಗಲಕ್ಷಣಗಳ ಮೇಲೆ ಗಮನ ನೀಡುವುದರಿಂದ ತಪ್ಪಾದ ವರದಿಗಳು ಅಥವಾ ನೆಗಟಿವ್ ರಿಪೋರ್ಟ್‌ಗಳು ಬಂದರೂ ಚಿಕಿತ್ಸೆ ನೀಡುವಾಗ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇತ್ತೀಚಿಗೆ ಬೆಂಗಳೂರಿನ ಐದು ವರ್ಷದ ಬಾಲಕನಿಗೆ ಜ್ವರ, ಗಂಟಲು ನೋವು, ತಲೆನೋವು, ಮೈಯಾಲ್ಜಿಯಾ ಮತ್ತು ಹಸಿವಿನ ಕೊರತೆಯಂತಹ ಲಕ್ಷಣಗಳು ಕಾಣಿಸಿಕೊಂಡವು. ಆಗ ಪ್ಯಾರಸಿಟಮಾಲ್ ಮತ್ತು ಲೋಜೆಂಜಸ್‌ಗಳಂತಹ ಮೌಖಿಕ ಔಷಧಿಗಳನ್ನು ಸೂಚಿಸಲಾಯಿತು, ಆದರೆ ಐದು ದಿನಗಳ ನಂತರವೂ ರೋಗಲಕ್ಷಣಗಳು ಕಡಿಮೆಯಾಗದಿದ್ದಾಗ ಪೋಷಕರು ಹೆಚ್ಚಿನ ಚಿಕಿತ್ಸೆ ಮಾಡಿಸಲು ಯೋಚಿಸಿದರು.
“ತೀವ್ರ ಮೈಯಾಲ್ಜಿಯಾದಿಂದ ಬಾಲಕನಿಗೆ ನಡೆಯಲು ತೊಂದರೆಯಾಗಿತ್ತು ಮತ್ತು ಡಿಹೈಡ್ರೇಶನ್/ ನಿರ್ಜಲೀಕರಣವೂ ಆಗಿತ್ತು” ಎಂದು ಬೆಂಗಳೂರಿನ ಆತ್ರೇಯಾ ಆಸ್ಪತ್ರೆಯ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ ನಾರಾಯಣಸ್ವಾಮಿ ಎಸ್ ಹೇಳುತ್ತಾರೆ. ಬಾಲಕನ ರೋಗಲಕ್ಷಣಗಳನ್ನು ಗಮನಿಸಿ ಅವನಿಗೆ ಡೆಂಗ್ಯೂ ಇರಬಹುದು ಎಂದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಡೆಂಗ್ಯೂ ಪತ್ತೆಹಚ್ಚಲು ನಡೆಸಿದ ರ‍್ಯಾಪಿಡ್ ಮತ್ತು ELISA ಪರೀಕ್ಷೆಗಳಲ್ಲಿ ಬಾಲಕನ ವರದಿಗಳು ನೆಗಟಿವ್ ಎಂದು ಬಂತು. ವೈದ್ಯರ ಕ್ಲಿನಿಕಲ್ ಅನುಮಾನಗಳು ಅದನ್ನು ಡೆಂಗ್ಯೂ ಎಂದು ಹೇಳುತ್ತಿದ್ದರೆ ನಕಾರಾತ್ಮಕ ವರದಿ ಬಂದಿದ್ದು ಅಚ್ಚರಿ ಮೂಡಿಸಿತ್ತು.
ELISA – ಪ್ರತಿಜನಕ ಮತ್ತು/ಅಥವಾ ರೋಗಕಾರಕದ ವಿರುದ್ಧ ಪ್ರತಿಕಾಯದ ಉಪಸ್ಥಿತಿಯನ್ನು ಪತ್ತೆಹಚ್ಚುವ ಸ್ಕ್ರೀನಿಂಗ್ ಪರೀಕ್ಷೆ – ಡೆಂಗ್ಯೂಗೆ ಅತ್ಯಂತ ನಿರ್ದಿಷ್ಟವಾದ ಪರೀಕ್ಷೆ ಎಂದು ಹೇಳಲಾಗುತ್ತದೆ.
ಈ ನೆಗಟಿವ್ ರಿಪೋರ್ಟ್ ಹೊರತಾಗಿ ಹುಡುಗನ ಬ್ಲಡ್ ಕೌಂಟ್ ರಿಪೋರ್ಟ್ ಪ್ರಕಾರ ಪ್ಲೇಟ್ಲೆಟ್ ಎಣಿಕೆಗಳಲ್ಲಿ ಕುಸಿತವಾಗಿತ್ತು. ಸಾಮಾನ್ಯ 1.5 ಲಕ್ಷದಿಂದ 5 ಲಕ್ಷ ಪ್ಲೇಟ್‌ಲೆಟ್‌ಗಳಿಗೆ ವಿರುದ್ಧವಾಗಿ 1 ಲಕ್ಷ ಕೌಂಟ್ ಹೊಂದಿದ್ದು, ಪ್ರತಿ ಮೈಕ್ರೋಲೀಟರ್‌ಗೆ ಸಾಮಾನ್ಯ 4,500 ರಿಂದ 11,000 WBC ಇರಬೇಕಾದಲ್ಲಿ ಹುಡುಗನ ಬಿಳಿ ರಕ್ತ ಕಣಗಳು (WBC ಗಳು) 1,000 ಕ್ಕಿಂತ ಕಡಿಮೆ ಇದ್ದವು.
ಈ ಸಂದರ್ಭದಲ್ಲಿ, ಅದು ಡೆಂಗ್ಯೂ ಅಥವಾ ಡೆಂಗ್ಯೂ ತರಹದ ಜ್ವರವಾಗಿದ್ದಿರಬಹುದು, ಆದರೆ ಹುಡುಗನಿಗೆ ಕೆಂಜೆಷನ್ ಅಂತೂ ಇತ್ತು.
ರೋಗನಿರ್ಣಯ/ವರದಿಯ ಪ್ರಕಾರ ಅದೊಂದು ಅಜ್ಞಾತ ಜ್ವರವಾಗಿದ್ದು IV ದ್ರವಗಳು ಮತ್ತು ನೋವು ನಿವಾರಕಗಳನ್ನು ಒಳಗೊಂಡಿರುವ ರೋಗಲಕ್ಷಣದ ಚಿಕಿತ್ಸೆಯನ್ನು ಹುಡುಗನಿಗೆ ನೀಡಲಾಯಿತು. ಡೆಂಗ್ಯೂ ಚೇತರಿಕೆಯ ಸಮಯದಲ್ಲಿ ಪೌಷ್ಟಿಕಾಂಶ ಮುಖ್ಯವಾಗಿದ್ದು, ಡೆಂಗ್ಯೂ-ಜ್ವರದ ಸಮಯದಲ್ಲಿ ಸೇವಿಸುವ ಆಹಾರದಲ್ಲಿ ಕಡಿಮೆ-ಕೊಬ್ಬಿನ ಅಂಶ ಮತ್ತು ಹೆಚ್ಚಿನ ದ್ರವ ಸೇವನೆಯ ಅಗತ್ಯವಿರುತ್ತದೆ.
ಮೂರು ದಿನಗಳಲ್ಲಿ ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಮಾಡಲಾಯಿತು.
ತಪ್ಪು, ನಕಾರಾತ್ಮಕ ಫಲಿತಾಂಶಗಳಿಗೆ ಕಾರಣವೇನು?
ದೆಹಲಿಯ ಸ್ಯಾನೇಟಿವ್ ಹೆಲ್ತ್‌ಕೇರ್‌ನ ಸಮಾಲೋಚಕರು, ಮತ್ತು ಸಾಂಕ್ರಾಮಿಕ ರೋಗ ತಜ್ಞರಾದ ಡಾ ಛವಿ ಗುಪ್ತಾ ಅವರ ಪ್ರಕಾರ, ತಪ್ಪು-ಋಣಾತ್ಮಕ ವರದಿಗಳಿಗೆ ಕಾರಣವಾಗುವ ಅಂಶಗಳು ಪರೀಕ್ಷೆಯಲ್ಲಿನ ಯಾವುದೇ ದೋಷ, ಮಾದರಿ ಸಂಗ್ರಹಣೆ, ಪರೀಕ್ಷಾ ಕಿಟ್‌ಗಳ ಅಸಮರ್ಪಕತೆ ಮತ್ತು ಬಳಸಿದ ಡೆಂಗ್ಯೂ ಆಂಟಿಜೆನ್ ಮತ್ತು ಡೆಂಗ್ಯೂ ಆಂಟಿಬಾಡಿಯ ಗುಣಮಟ್ಟವನ್ನು ಒಳಗೊಂಡಿರುತ್ತದೆ.
“ಆರಂಭಿಕ ಐದು ದಿನಗಳಲ್ಲಿ, ವೈರಸ್ ದೇಹದಲ್ಲಿ ಪರಿಚಲನೆಯಾಗುತ್ತಿರುತ್ತವೆ. ಆದ್ದರಿಂದ ಇದು ಆ್ಯಂಟಿಜೆನ್/ಪ್ರತಿಜನಕದೊಂದಿಗೆ ರೋಗನಿರ್ಣಯ ಮಾಡಬೇಕು. ಆ ನಂತರ ಪ್ರತಿಜನಕ ಕಡಿಮೆಯಾಗುತ್ತದೆ ಮತ್ತು ಆ್ಯಂಟಿಬಾಡಿಗಳು ಹೆಚ್ಚಾಗುತ್ತದೆ. ರ‍್ಯಾಪಿಡ್ ಟೆಸ್ಟ್ ಕಿಟ್ ಅನ್ನು ಬುದ್ಧಿವಂತಿಕೆಯಿಂದ ಬಳಸಬೇಕು.
ಡೆಂಗ್ಯೂ ವೈರಸ್ ವಿರುದ್ಧ IgM ಮತ್ತು IgG ಪ್ರತಿಕಾಯಗಳ(ಆ್ಯಂಟಿಬಾಡಿ) ಉಪಸ್ಥಿತಿಯು ಸೋಂಕನ್ನು ಸೂಚಿಸುತ್ತದೆ. IgM ಪ್ರತಿಕಾಯಗಳು ಪ್ರಸ್ತುತ ಸೋಂಕು ಎಂದರ್ಥ, IgG ಪ್ರತಿಕಾಯಗಳು ವ್ಯಕ್ತಿಯು ಇತ್ತೀಚಿನ ದಿನಗಳಲ್ಲಿ ಸೋಂಕನ್ನು ಹೊಂದಿದ್ದನ್ನು ತೋರಿಸುತ್ತವೆ. ” ಎಂದು ಡಾ ಗುಪ್ತಾ ಹೇಳುತ್ತಾರೆ.
ಡಾ ಅನಿಕೇತ್ ಮುಲೆ, ಸಲಹೆಗಾರರು, ಆಂತರಿಕ ಔಷಧ, ವೊಕಾರ್ಡ್ ಹಾಸ್ಪಿಟಲ್ಸ್, ಮೀರಾ ರೋಡ್, ಮುಂಬೈ ಅವರು “ಪ್ರಕರಣದ ಸನ್ನಿವೇಶವನ್ನು ಆಧರಿಸಿ ಪರೀಕ್ಷೆಗಳನ್ನು ಎಚ್ಚರಿಕೆಯಿಂದ ಆದೇಶಿಸಬೇಕು” ಎನ್ನುತ್ತಾರೆ. ಟೆಸ್ಟ್ ಮಾಡುವ ದಿನವೂ ಮುಖ್ಯವಾಗಿದೆ. ಆರಂಭಿಕ ದಿನಗಳಲ್ಲಿ ಆ್ಯಂಟಿಜೆನ್ ಪರೀಕ್ಷೆಗಳನ್ನು ಮಾಡಿಸಿದರೆ ಮತ್ತು ಆ್ಯಂಟಿಬಾಡಿ ರೂಪುಗೊಳ್ಳಲು ಐದರಿಂದ ಏಳು ದಿನಗಳನ್ನು ತೆಗೆದುಕೊಂಡರೆ ಆಗ ತಪ್ಪು ನಕಾರಾತ್ಮಕತೆ ವರದಿ ಬರುವ ಸಾಧ್ಯತೆಯಿದೆ. NS1 ಆ್ಯಂಟಿಜೆನ್ ಟೆಸ್ಟ್, ಆರಂಭಿಕ ಹಂತಗಳಲ್ಲಿ ಪರೀಕ್ಷಿಸಿದರೆ ಮಾತ್ರ ಪರಿಣಾಮಕಾರಿಯಾಗಿ ಸೋಂಕನ್ನು ಪತ್ತೆ ಹಚ್ಚುತ್ತದೆ – ಅಂದರೆ, ರೋಗಲಕ್ಷಣಗಳು ಕಂಡುಬರುವ ಆರಂಭಿಕ ಏಳು ದಿನಗಳಲ್ಲಿ ಇದು ಪರಿಣಾಮಕಾರಿ. ರ‍್ಯಾಪಿಡ್ ಟೆಸ್ಟ್ ಮಾಡುವಾಗ ಯಾವ ಪರೀಕ್ಷೆಯನ್ನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಕೊರತೆ ಮತ್ತು ಲ್ಯಾಬ್‌ನಲ್ಲಿನ ಕೆಲವು ತಾಂತ್ರಿಕ ದೋಷಗಳು ಸುಳ್ಳು-ಋಣಾತ್ಮಕ ವರದಿಗಳಿಗೆ ಕಾರಣವಾಗಬಹುದು ಎಂದು ಡಾ ಗುಪ್ತಾ ಹೇಳುತ್ತಾರೆ. ಹೆಚ್ಚಿನ ಅನುಮಾನಗಳಿದ್ದರೆ, ಅನುಮೋದಿತ ELISA ಕಿಟ್‌ನೊಂದಿಗೆ ದೃಢೀಕರಣ ಪರೀಕ್ಷೆಗಳನ್ನು ಮಾಡಬಹುದು.
ವರದಿಗಳ ಫಲಿತಾಂಶ ಯಾವುದೇ ಇದ್ದರೂ ಕೆಲವೊಮ್ಮೆ ಅದನ್ನು ಲೆಕ್ಕಿಸದೆ ರೋಗಲಕ್ಷಣಗಳನ್ನು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.
ಸಾರಾಂಶ:
♦ ಡೆಂಗ್ಯೂ ವರದಿಗಳಲ್ಲಿ ಸುಳ್ಳು-ಋಣಾತ್ಮಕ ಫಲಿತಾಂಶ ಬಂದ ವರದಿಯಾಗಿವೆ.
♦ ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದರೂ ಪರೀಕ್ಷೆಯುಲ್ಲಿ ವೈರಸ್ ಪತ್ತೆಹಚ್ಚದಿದ್ದಾಗ ತಪ್ಪು-ನೆಗಟಿವ್ ಫಲಿತಾಂಶಗಳು ಬಂದಿವೆ.
♦ ಪರೀಕ್ಷೆಯಲ್ಲಿ ದೋಷ, ಮಾದರಿ ಸಂಗ್ರಹಣೆ, ಪರೀಕ್ಷಾ ಕಿಟ್‌ಗಳ ಅಸಮರ್ಪಕತೆ ಮತ್ತು ಬಳಸಿದ ಡೆಂಗ್ಯೂ ಆ್ಯಂಟಿಜೆನ್ ಮತ್ತು ಡೆಂಗ್ಯೂ ಆ್ಯಂಟಿಬಾಡಿಗಳ ಗುಣಮಟ್ಟ ತಪ್ಪು-ಋಣಾತ್ಮಕ ವರದಿಗಳಿಗೆ ಕಾರಣಗಳಾಗಿವೆ.
♦ ಡೆಂಗ್ಯೂಗೆ ಸಂಬಂಧಿಸಿದ ಟೆಸ್ಟ್‌ಗಳಲ್ಲಿ ರ‍್ಯಾಪಿಡ್ ಡೆಂಗ್ಯೂ IgG ಆ್ಯಂಟಿಬಾಡಿ ಟೆಸ್ಟ್, ರ‍್ಯಾಪಿಡ್ ಡೆಂಗ್ಯೂ IgM ಆ್ಯಂಟಿಬಾಡಿ ಟೆಸ್ಟ್, ಡೆಂಗ್ಯೂ ELISA ಟೆಸ್ಟ್, ಡೆಂಗ್ಯೂ ಜ್ವರ NS1 ಆ್ಯಂಟಿಜೆನ್ ಪರೀಕ್ಷೆ ಮತ್ತು ಡೆಂಗ್ಯೂ RT-PCR ಟೆಸ್ಟ್‌ಗಳು ಸೇರಿವೆ.
♦ ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಮತ್ತು ರೋಗಲಕ್ಷಣದ ಚಿಕಿತ್ಸೆಗೆ ಗಮನ ನೀಡಲಾಗುತ್ತದೆ.