
ಪ್ಯಾರಸಿಟಮಾಲ್ ಜ್ವರ ಅಥವಾ ದೈಹಿಕ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ.ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆ ಅಪಾಯವನ್ನು ಉಂಟುಮಾಡುತ್ತದೆ. ಅಲ್ಲದೆ ಔಷಧಿ ಚೀಟಿ ಇಲ್ಲದೆಯೂ ಸಹ, ಗ್ರಾಹಕರಿಗೆ ಔಷಧವು ಲಭ್ಯವಾಗುತ್ತಿರುವುದು ಅದರ ದುರುಪಯೋಗ ಅಥವಾ ಅತಿಯಾದ ಬಳಕೆಯ ಸಂಭಾವ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಸೆಟಾಮಿನೋಫೆನ್ ವಿಷವನ್ನು ಪ್ಯಾರಸಿಟಮಾಲ್ ವಿಷತ್ವ (PP) ಅಥವಾ ಅಸೆಟಾಮಿನೋಫೆನ್ ವಿಷವಾಗುವಿಕೆ ಎಂದು ಕೂಡ ಕರೆಯಲಾಗುತ್ತದೆ, ಇದು ಔಷಧದ ಮಿತಿಮೀರಿದ ಸೇವನೆಯಿಂದ ಉಂಟಾಗುತ್ತದೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP) ನವೆಂಬರ್ 2022 ರಲ್ಲಿ ಮೊದಲ ಬಾರಿಗೆ ಮಕ್ಕಳಲ್ಲಿ ಪ್ಯಾರಸಿಟಮಾಲ್ ವಿಷದ ಪ್ರಮಾಣಿತ ಚಿಕಿತ್ಸಾ ಶಿಫಾರಸುಗಳನ್ನು ಪ್ರಕಟಿಸಿತು. ಪ್ಯಾರಸಿಟಮಾಲ್ ಹೆಚ್ಚಾಗಿ ಬಳಕೆಯಾಗುತ್ತಿರುವ ಮತ್ತು ವೈದ್ಯರ ಚೀಟಿ ಇಲ್ಲದೆ ಸುಲಭವಾಗಿ ಪಡೆಯಬಹುದಾದ ಜ್ವರನಿವಾರಕ ಮತ್ತು ನೋವು ನಿವಾರಕವಾಗಿದೆ (ನೋವು ಮತ್ತು ಜ್ವರದ ತೀವ್ರತೆಯನ್ನು ಕಡಿಮೆ ಮಾಡುವ ಔಷಧ) ಎಂದು ಉಲ್ಲೇಖಿಸಿದೆ.
ಭಾರತದಲ್ಲಿ, ಸ್ವಯಂ–ವಿಷದ ಬಗ್ಗೆ ಸಾಕಷ್ಟು ವರದಿಗಳಿಲ್ಲ. ಆದರೂ, ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಅನಿಯಂತ್ರಿತ ಫಾರ್ಮ್ಯುಲೇಶನ್ (ಔಷಧಿ) ಲಭ್ಯತೆಯು ಅನಪೇಕ್ಷಿತ ವಿಷತ್ವದ ಹೆಚ್ಚಳಕ್ಕೆ ಕಾರಣವಾಗಿದೆ. ನಿರ್ಲಕ್ಷ್ಯದ ಬಳಕೆ ಅಥವಾ ಉದ್ದೇಶಪೂರ್ವಕ ಮಿತಿಮೀರಿದ ಸೇವನೆಯಿಂದ ಪ್ಯಾರಸಿಟಮಾಲ್ ವಿಷತ್ವ (PP) ಉಂಟಾಗಬಹುದು.
ಪ್ಯಾರಸಿಟಮಾಲ್ ಡ್ರಾಪ್ಸ್ ಮತ್ತು ಸಿರಪ್ ಅನ್ನು ಸರಿಯಾಗಿ ಬಳಸುವುದು ಹೇಗೆ ಎಂದು ಪೋಷಕರು ಅರ್ಥಮಾಡಿಕೊಳ್ಳದಿರುವುದೇ ಮಕ್ಕಳ ವೈದ್ಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಎಂದು ಐಎಪಿ ಪ್ರಕಟಿಸಿದ ಮಾರ್ಗಸೂಚಿಗಳ ಸಹ–ಲೇಖಕಿ ಡಾ. ಸುಪ್ರಜಾ ಚಂದ್ರಶೇಖರ್ ಹೇಳುತ್ತಾರೆ.
ಔಷಧಿಗಳು ವೈದ್ಯರ ಚೀಟಿ ಇಲ್ಲದೆ (OTC) ಲಭ್ಯವಾಗುವುದು ಮತ್ತು ಜನರು ಡೋಸೇಜ್ ಬಗ್ಗೆ ಅರಿವಿನ ಕೊರತೆಯನ್ನು ಹೊಂದಿರುವುದರ ಬಗ್ಗೆಯೂ ವೈದ್ಯಕೀಯ ಸಮುದಾಯ ಚಿಂತಿತವಾಗಿದೆ.
ಪ್ರಸ್ತುತ ಲಭ್ಯವಿರುವ ಪ್ಯಾರಸಿಟಮಾಲ್ ಸಿರಪ್ ಬಾಟಲಿಗಳ ಚೈಲ್ಡ್ಪ್ರೂಫ್ ಕ್ಯಾಪ್ಗಳ ಮೂಲಕ ಉದ್ದೇಶಪೂರ್ವಕವಲ್ಲದ ವಿಷವನ್ನು ತಡೆಯಬಹುದು ಎಂದು ಮಾರ್ಗದರ್ಶಿ ಸೂತ್ರಗಳ ಪ್ರಮುಖ ಲೇಖಕ ಮತ್ತು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ. ಬರನ್ವಾಲ್ ಹೇಳುತ್ತಾರೆ
“ಔಷಧಿಗಳನ್ನು ಮಕ್ಕಳ ಕೈಗೆಟಕದಂತೆ ದೂರವಿಡಬೇಕು. ಮಾತ್ರವಲ್ಲದೆ ಪೋಷಕರು ನಿಗದಿತ ಡೋಸ್ ಅನ್ನು ಅನುಸರಿಸಬೇಕು ಮತ್ತು ಅದನ್ನು ಮೀರಬಾರದು. ಪ್ಯಾರಸಿಟಮಾಲ್ ಡೋಸ್ ಅನ್ನು ನಾಲ್ಕರಿಂದ ಐದು ಗಂಟೆಗಳ ಒಳಗೆ ಪುನರಾವರ್ತಿಸಬಾರದು” ಎಂದು ಡಾ ಬರನ್ವಾಲ್ ಹೇಳುತ್ತಾರೆ.
ರೋಗಲಕ್ಷಣಗಳನ್ನು ಗಮನಿಸುವುದು ಮತ್ತು ಪ್ಯಾರಸಿಟಮಾಲ್ ಮಿತಿಮೀರಿದರೆ ಚಿಕಿತ್ಸೆ ಹೇಗೆ
ಅಧಿಕ ಸೇವನೆಯ ರೋಗಲಕ್ಷಣಗಳಲ್ಲಿ – ಕಿರಿಕಿರಿ, ವಾಕರಿಕೆ, ವಾಂತಿ, ಗ್ಯಾಸ್ಟ್ರೈಟಿಸ್ – ಅಂದರೆ ಕಿಬ್ಬೊಟ್ಟೆಯಲ್ಲಿ ನೋವು ಮತ್ತು ಕಿರಿಕಿರಿ ಇತ್ಯಾದಿ ರೋಗಲಕ್ಷಣಗಳನ್ನು ಹೊಂದಿರಬಹುದು.
ವಿಷತ್ವದ ರೋಗಲಕ್ಷಣಗಳು ಬಹಳ ವಿಳಂಬವಾಗಿ ಕಾಣಿಸಿಕೊಳ್ಳಬಹುದು ಮತ್ತು ಅವು ನಿರ್ದಿಷ್ಟ ರೂಪದಲ್ಲಿ ಇಲ್ಲದಿರಬಹುದು” ಎಂದು ಡಾ.ಸುಪ್ರಜಾ ಚಂದ್ರಶೇಖರ್ ಹೇಳುತ್ತಾರೆ.
ಹೆಪಟೊಟಾಕ್ಸಿಸಿಟಿಯನ್ನು ತಡೆಗಟ್ಟಲು N–ಅಸಿಟೈಲ್ಸಿಸ್ಟೈನ್ (ಎನ್ಎಸಿ), ಆಂಟಿ ಇನ್ಫ್ಯೂಷನ್ (ಪರಿಣಾಮಕಾರಿ ಪ್ರತಿವಿಷ) ಅನ್ನು ಬಳಸಬೇಕು ಎಂದು ಮಾರ್ಗಸೂಚಿಯು ಉಲ್ಲೇಖಿಸುತ್ತದೆ. ತೀವ್ರವಾದ ಪಿತ್ತಜನಕಾಂಗದ ವೈಫಲ್ಯ, ಯಕೃತ್ತಿನ ಕಸಿ ಅಥವಾ ಮರಣವನ್ನು ತಡೆಗಟ್ಟುವುದು ಮತ್ತು ಯಾವುದೇ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
NAC ಸೇರಿಸಿದ 18 ಗಂಟೆಗಳ ಒಳಗೆ (ಪೂರ್ಣಗೊಳ್ಳುವ ಎರಡು ಗಂಟೆಗಳ ಮೊದಲು), ರಕ್ತದ ಪ್ಯಾರಸಿಟಮಾಲ್ ಮಟ್ಟವನ್ನು ಪರೀಕ್ಷಿಸಲು ರಕ್ತದ ಮಾದರಿಯನ್ನು ಕಳುಹಿಸಬೇಕು ಎಂದು ಮಾರ್ಗಸೂಚಿಯು ಹೇಳುತ್ತದೆ. ಎಲೆಕ್ಟ್ರೋಲೈಟ್ ಮಟ್ಟವನ್ನು ವಿಶ್ಲೇಷಿಸಬೇಕು ಮತ್ತು ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳನ್ನು ಸಹ ಕೈಗೊಳ್ಳಬೇಕು.
ಪ್ಯಾರಸಿಟಮಾಲ್ ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಾಗ ಸುರಕ್ಷಿತವಾಗಿರುತ್ತದೆ. ಆದರೆ ಹದಿಹರೆಯದವರು ಪ್ಯಾರಸಿಟಮಾಲ್ ಅನ್ನು ದುರುಪಯೋಗಪಡಿಸಿಕೊಂಡ ಪ್ರಕರಣಗಳಿವೆ ಮತ್ತು ಇದನ್ನು ತಡೆಯುವ ಅಗತ್ಯವಿದೆ ಎಂದು ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸುಪ್ರಜಾ ಅವರು ಹೇಳುತ್ತಾರೆ.
ಪ್ಯಾರಸಿಟಮಾಲ್ ಡ್ರಾಪ್ಸ್ ಮತ್ತು ಸಿರಪ್ – ಇವೆರಡೂ ಬೇರೆ ಬೇರೆ
ಡ್ರಾಪ್ಸ್, ಸಿರಪ್ಗಳಿಗಿಂತ ಹೆಚ್ಚು ಪ್ರಬಲವಾಗಿರುತ್ತವೆ. “1 ಮಿಲಿ ಪ್ಯಾರಸಿಟಮಾಲ್ ಡ್ರಾಪ್ಸ್, 100 ಮಿಗ್ರಾಂ ಸಿರಪ್ ಗೆ ಸಮಾನವಾಗಿರುತ್ತದೆ, ಆದರೆ ಪ್ಯಾರಸಿಟಮಾಲ್ ಸಿರಪ್ಗಳಲ್ಲಿ, ಸೂತ್ರೀಕರಣವನ್ನು ಅವಲಂಬಿಸಿ, 5 ಮಿಲಿ ಯು 120 ಮಿಗ್ರಾಂ ಅಥವಾ 250 ಮಿಗ್ರಾಂಗೆ ಸಮಾನವಾಗಿರುತ್ತದೆ. ಔಷಧದ ಅತಿಯಾದ ಬಳಕೆ ಯಕೃತ್ತನ್ನು ಹಾನಿಗೊಳಿಸುತ್ತದೆ” ಎಂದು ಡಾ ಸುಪ್ರಜಾ ಹೇಳುತ್ತಾರೆ.
“ವೈದ್ಯರು ದಿನಕ್ಕೆ ನಾಲ್ಕು ಬಾರಿ ಪ್ಯಾರಸಿಟಮಾಲ್ ಸಿರಪ್ 3.5 ಮಿಲಿ ಸಿರಪ್ ನೀಡುವಂತೆ ಸಲಹೆ ನೀಡಬಹುದು. ಆದರೆ ಪೋಷಕರು ಹೆಚ್ಚು ಡೋಸ್ ಡ್ರಾಪ್ಸ್ ನೀಡುವ ಸಾಧ್ಯತೆಯಿದೆ” ಎಂದು ವೈದ್ಯರು ಹೇಳುತ್ತಾರೆ. ಮೆಡಿಕಲ್ ಶಾಪ್ ನಲ್ಲಿ ಕೆಲವೊಮ್ಮೆ ರೋಗಿಗಳಿಗೆ ಸಿರಪ್ ಬದಲಿಗೆ ಡ್ರಾಪ್ಸ್ ಅನ್ನು ನೀಡುತ್ತಾರೆ, ಇದಕ್ಕೆ ಅರಿವಿನ ಕೊರತೆ ಕಾರಣ.
ಮಗುವಿನ ತೂಕ ಒಂದು ಕೆಜಿ ಇದ್ದಾಗ, ಪ್ಯಾರಸಿಟಮಾಲ್ ಡೋಸ್ 150 ಮಿಗ್ರಾಂಗಿಂತ ಹೆಚ್ಚಿದ್ದರೆ, ಪ್ಯಾರಸಿಟಮಾಲ್ ವಿಷತ್ವ ಸಂಭವಿಸಬಹುದು.
ವ್ಯಾಕ್ಸಿನೇಷನ್ ಭೇಟಿಗಳ ಸಮಯದಲ್ಲಿ, ಡಾ. ಸುಪ್ರಜಾ ಅವರು ಪ್ಯಾರಸಿಟಮಾಲ್ ಡ್ರಾಪ್ಸ್ ಮತ್ತು ಸಿರಪ್ ನಡುವಿನ ವ್ಯತ್ಯಾಸದ ಬಗ್ಗೆ ಪೋಷಕರಿಗೆ ಸಲಹೆ ನೀಡುತ್ತಾ, “ಡ್ರಾಪ್ ಎಂದಿಗೂ 1 ಮಿಲಿ ದಾಟಬಾರದು ಮತ್ತು ಮಗು 8 ಕೆಜಿ ದಾಟಿದ ನಂತರ ಡ್ರಾಪ್ಸ್ ನಿಲ್ಲಿಸಬೇಕು. ಪೋಷಕರು 1 ಮಿಲಿಗಿಂತ ಹೆಚ್ಚು ನೀಡಿದ್ದರೆ ಅಥವಾ ಯಾವುದೇ ಗೊಂದಲವಿದ್ದರೆ [ಡೋಸೇಜ್ ಬಗ್ಗೆ], ಪೋಷಕರು ವೈದ್ಯರನ್ನು ಸಂಪರ್ಕಿಸಬೇಕು” ಎಂದು ಮುಂಬೈನ ವಾಶಿಯಲ್ಲಿರುವ ಫೋರ್ಟಿಸ್ ಹಿರಾನಂದಾನಿ ಆಸ್ಪತ್ರೆಯ ಆಂತರಿಕ ಔಷಧದ ನಿರ್ದೇಶಕ ಡಾ.ಫಾರಾ ಇಂಗಲೆ ಹೇಳುತ್ತಾರೆ.
ಸಕಾಲದಲ್ಲಿ ಮಗುವಿನ ಜೀವರಕ್ಷಣೆ
ಡಾ. ಸುಪ್ರಜಾ ಅವರು ಹತ್ತು ವರ್ಷಗಳ ಹಿಂದೆ ಆರು ತಿಂಗಳ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಿದ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ, “ಮಗುವಿಗೆ [ಒಂಬತ್ತು ಕಿಲೋ ತೂಕದ] ಜ್ವರವಿತ್ತು ಮತ್ತು ಪೋಷಕರು ಕೇವಲ 36 ಗಂಟೆಗಳಲ್ಲಿ ಎರಡು 5 ಮಿಲಿ ಬಾಟಲಿ ಪ್ಯಾರಸಿಟಮಾಲ್ ಡ್ರಾಪ್ಸ್ ಅನ್ನು ಮಗುವಿಗೆ ನೀಡಿದ್ದರು. ಅವರು ಮೂರನೇ ಬಾಟಲಿಯನ್ನು ಖರೀದಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿದರು ಮತ್ತು ಅತಿಯಾದ ಬಳಕೆಯ ಬಗ್ಗೆ ಅವರಿಗೆ ತಿಳಿಸಲಾಯಿತು. ಮಗುವನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ದಾಗ, ಆಕೆಗೆ ಸಕ್ಕರೆ ಪ್ರಮಾಣ ಕಡಿಮೆ ಇತ್ತು ಮತ್ತು ಮಗು ತುಂಬಾ ಚಡಡಿಸುತ್ತಿತ್ತು” ಎಂದು ಡಾ.ಸುಪ್ರಜಾ ಹೇಳುತ್ತಾರೆ. ಪ್ಯಾರಸಿಟಮಾಲ್ ಡ್ರಾಪ್ಸ್ ಕೊಟ್ಟರೂ ಜ್ವರ ಏಕೆ ಕಡಿಮೆಯಾಗಲಿಲ್ಲ ಮತ್ತು ಮಗು ಯಾಕೆ ಕಿರಿಕಿರಿಗೊಳ್ಳುತ್ತಿದೆ ಎಂದು ಪೋಷಕರು ಕೇಳಿದ್ದರು.
ಈ ಪ್ರಕರಣದಲ್ಲಿ, ಮಗುವಿಗೆ ಜ್ವರ ಬಂದಾಗ ಆಹಾರವನ್ನು ನೀಡಲಿಲ್ಲ ಮತ್ತು ಬಾಯಿಯ ಮೆಖೇನ ಗ್ಲೂಕೋಸ್ ಸೇವನೆಯು ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಪೋಷಕರು ನೀಡಿದ್ದ ಹೆಚ್ಚಿನ ಪ್ರಮಾಣದ ಪ್ಯಾರಸಿಟಮಾಲ್ ಅವಳ ಯಕೃತ್ತಿನ ಕಾರ್ಯದ ಮೇಲೆ ಪರಿಣಾಮ ಬೀರಿತ್ತು. ತ್ವರಿತ ಮತ್ತು ತೀವ್ರ ಚಿಕಿತ್ಸೆಯ ಬಳಿಕ ಮಗು ಬದುಕುಳಿಯಿತು.
ಪ್ಯಾರಸಿಟಮಾಲ್ನ ಒಂದು ಡೋಸ್ ನಂತರ ಮಗುವಿನ ಜ್ವರ ಕಡಿಮೆಯಾಗದಿದ್ದರೆ ಪೋಷಕರು ಆಗಾಗ್ಗೆ ಗೊಂದಲ ಮತ್ತು ಒತ್ತಡವನ್ನು ಅನುಭವಿಸುತ್ತಾರೆ ಎಂದು ಡಾ ಬರನ್ವಾಲ್ ಹೇಳುತ್ತಾರೆ. “ಜ್ವರವನ್ನು ಕಡಿಮೆ ಮಾಡಲು, ಪೋಷಕರು ಪ್ರಿಸ್ಕ್ರಿಪ್ಷನ್ ಇಲ್ಲದೆ ಅಲ್ಪಾವಧಿಯಲ್ಲಿ ಬಹು ಔಷಧಿಗಳನ್ನು ಬಳಸಬಾರದು. ಸಂದೇಹವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ” ಎಂದು ಅವರು ಹೇಳುತ್ತಾರೆ.
ಕಳೆದ ಎರಡು ವರ್ಷಗಳಲ್ಲಿ, ಡಾ. ಸುಪ್ರಜಾ ಅವರು ಪ್ಯಾರಸಿಟಮಾಲ್ ವಿಷತ್ವದ ಕಾರಣ ನಾಲ್ಕು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವುದನ್ನು ಕಂಡಿದ್ದರು; ಎಲ್ಲವೂ ಸ್ವಯಂ–ಹಾನಿ ಪ್ರಕರಣಗಳು. ಒಂದು ಪ್ರಕರಣದಲ್ಲಿ, ಹದಿಹರೆಯದ ಮಗು ಪ್ಯಾರಸಿಟಮಾಲ್ ಸೇರಿದಂತೆ ಅನೇಕ ಔಷಧಿಗಳನ್ನು ಸೇವಿಸಿತ್ತು. ವಯಸ್ಸಾದವರಲ್ಲಿ ಅಥವಾ ಹದಿಹರೆಯದವರಲ್ಲಿ ಉದ್ದೇಶಪೂರ್ವಕ ಮಿತಿಮೀರಿದ ಸೇವನೆಯ ಸಂದರ್ಭದಲ್ಲಿ, ಮನೋವೈದ್ಯಕೀಯ ಸಮಾಲೋಚನೆಯನ್ನು ಪಡೆಯಬಹುದು ಎಂದು ಮಾರ್ಗಸೂಚಿಗಳು ಸೂಚಿಸುತ್ತವೆ.
ಮಕ್ಕಳಿಗೆ ನೀಡಬಹುದಾದ ಪ್ರಮಾಣ
ಮಕ್ಕಳಲ್ಲಿ ಪ್ಯಾರಸಿಟಮಾಲ್‌ನ ಗರಿಷ್ಠ ದೈನಂದಿನ ಡೋಸ್ ಪ್ರತಿ ಕೆಜಿಗೆ 60 ಮಿಗ್ರಾಂ (ಎಲ್ಲಾ ಡೋಸ್‌ಗಳನ್ನು ಒಟ್ಟಿಗೆ ಸೇರಿಸಿ).
“ಆದರೆ ಸ್ಥೂಲಕಾಯದ ಮಕ್ಕಳಲ್ಲಿ, ನಾವು ತೂಕವನ್ನು ಪರಿಗಣಿಸಲಾಗುವುದಿಲ್ಲ ಬದಲಿಗೆ ನಾವು ದೇಹದ ಆದರ್ಶ ತೂಕವನ್ನು ಪರಿಗಣಿಸಬೇಕಾಗಿದೆ. ಉದಾಹರಣೆಗೆ, 10 ವರ್ಷ ವಯಸ್ಸಿನ ಮಗುವಿಗೆ ಸುಮಾರು 35 ಕೆಜಿ ತೂಕವಿರಬೇಕು. ಆದರೆ, 50 ಕೆಜಿ ಇದ್ದರೆ, ನಾವು ಅದನ್ನು 35 ಕೆಜಿ ಎಂದು ಪರಿಗಣಿಸಬೇಕು, ”ಎಂದು ಡಾ ಸುಪ್ರಜಾ ಹೇಳುತ್ತಾರೆ.
ಯಾವುದು ಅತಿಯಾದ ಬಳಕೆ ಅಲ್ಲ?
ವಯಸ್ಕರಲ್ಲಿ, ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ದಿನಕ್ಕೆ 500 ಮಿಗ್ರಾಂ ಪ್ಯಾರಸಿಟಮಾಲ್‌ನ ಆರರಿಂದ ಎಂಟು ಮಾತ್ರೆಗಳನ್ನು ಶಿಫಾರಸು ಮಾಡಿದರೆ ಉತ್ತಮ, (ದೇಹದ ತೂಕವನ್ನು ಅವಲಂಬಿಸಿ) ಮತ್ತು ಇದು ದಿನಕ್ಕೆ ಮೂರರಿಂದ ನಾಲ್ಕು ಗ್ರಾಂ ಔಷಧಿ ಸೇವನೆಗೆ ಸಮಾನವಾಗಿರುತ್ತದೆ ಎಂದು ಡಾ ಇಂಗಳೆ ಹೇಳುತ್ತಾರೆ.
ಯಾವುದೇ ಯಕೃತ್ತಿನ ಸಮಸ್ಯೆಗಳಿಲ್ಲದ ವಯಸ್ಕರು ದಿನಕ್ಕೆ ನಾಲ್ಕು ಗ್ರಾಂಗಳಿಗಿಂತ ಹೆಚ್ಚು ಪ್ಯಾರಸಿಟಮಾಲ್ ಅನ್ನು ಸೇವಿಸಿದರೆ, ಅದನ್ನು ಮಿತಿಮೀರಿದ ಪ್ರಮಾಣ ಎಂದು ಕರೆಯಲಾಗುತ್ತದೆ. “ಯಕೃತ್ತಿನ ಚಟುವಟಿಕೆಯ ಸಮಸ್ಯೆಗಳಿದ್ದರೆ, ನಾವು ಪ್ಯಾರಸಿಟಮಾಲ್ ಅನ್ನು ನೀಡುವುದಿಲ್ಲ” ಎಂದು ಅವರು ಹೇಳುತ್ತಾರೆ.
ಅಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ಪ್ಯಾರಸಿಟಮಾಲ್ ಸೇವಿಸುವ ಮೂಲಕ ಸ್ವಯಂ–ಹಾನಿ ಮಾಡಿಕೊಳ್ಳುವ ಪ್ರಯತ್ನದ ಹಿನ್ನೆಲೆ ಇರುವ, ಮುಂಬೈನ 35 ವರ್ಷದ ಮಹಿಳೆಯೊಬ್ಬರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದ ಪ್ರಕರಣವನ್ನು ಡಾ ಇಂಗಳೆ ನೆನಪಿಸಿಕೊಳ್ಳುತ್ತಾರೆ. ಆಕೆಗೆ ಯಕೃತ್ತಿನ ಕಸಿ ಮಾಡಬೇಕಾಯಿತು..
ಡಾ. ಇಂಗೇಲ್ ಪ್ರಕಾರ, ಮಿತಿಮೀರಿದ ಸೇವನೆಯು ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ, ಆದರೆ ಒಂದು ಅಥವಾ ಎರಡು ದಿನಗಳಲ್ಲಿ, ವ್ಯಕ್ತಿಯು ವಾಕರಿಕೆ, ಅನಾರೋಗ್ಯದ ಭಾವನೆ, ವಾಂತಿ, ಯಕೃತ್ತು ಇರುವ ಬಲ ಕಿಬ್ಬೊಟ್ಟೆಯಲ್ಲಿ ಅಸ್ವಸ್ಥತೆ, ಅಧಿಕ ರಕ್ತದೊತ್ತಡ ಮತ್ತು ಬೆವರುವಿಕೆಯನ್ನು ಅನುಭವಿಸಬಹುದು. “ಇದು ಕಾಮಾಲೆಗೆ ಕಾರಣವಾಗಬಹುದು. ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ” ಎಂದು ಅವರು ಹೇಳುತ್ತಾರೆ, ಪ್ಯಾರಸಿಟಮಾಲ್ ವಿಷವು ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಕುಸಿತವನ್ನು ಉಂಟುಮಾಡುವುದರ ಜೊತೆಗೆ ಯಕೃತ್ತು ಮತ್ತು ಮೂತ್ರಪಿಂಡವನ್ನು ಸಂಭಾವ್ಯವಾಗಿ ಹಾನಿಗೊಳಿಸುತ್ತದೆ.
ಸಾರಾಂಶ
ಪ್ಯಾರಸಿಟಮಾಲ್ ಸೇರಿದಂತೆ ಯಾವುದೇ ಔಷಧವನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ಡಾ ಇಂಗೇಲ್ ಉಲ್ಲೇಖಿಸಿದ್ದಾರೆ
- ವೈದ್ಯರನ್ನು ಸಂಪರ್ಕಿಸದೆ ಏಕಕಾಲದಲ್ಲಿ ಎರಡಕ್ಕಿಂತ ಹೆಚ್ಚು ಪ್ಯಾರಸಿಟಮಾಲ್ ತೆಗೆದುಕೊಳ್ಳಬೇಡಿ
- ಪ್ಯಾರಸಿಟಮಾಲ್ ಬಳಸಿದರೂ ಜ್ವರ ಕಡಿಮೆಯಾಗುತ್ತಿಲ್ಲವೇ? ವೈದ್ಯರನ್ನು ಸಂಪರ್ಕಿಸಿ. ಔಷಧವನ್ನು ಅತಿಯಾಗಿ ಬಳಸಬೇಡಿ
- ನೀವು ಯಕೃತ್ತು ಅಥವಾ ಮೂತ್ರಪಿಂಡದ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ, ಪ್ಯಾರಸಿಟಮಾಲ್ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ
- ಲೇಬಲ್‌ಗಳನ್ನು ಓದಿ. ಪ್ಯಾರಸಿಟಮಾಲ್ ಸೂತ್ರೀಕರಣಗಳು 500 ಮಿಗ್ರಾಂ ಮತ್ತು 650 ಮಿಗ್ರಾಂಗಳಲ್ಲಿ ಲಭ್ಯವಿದೆ