ದೇಹದಲ್ಲಿ ಯೂರಿಕ್ ಆಮ್ಲದ ಪಾತ್ರ ಬಹುಚರ್ಚಿತ ವಿಷಯ. ಕೆಲವು ಸಂಶೋಧನೆಗಳು ಅದರ ಆ್ಯಂಟಿಆಕ್ಸಿಡೆಂಟ್ ಗುಣಲಕ್ಷಣಗಳು ನ್ಯೂರಾನ್‌ಗಳನ್ನು ರಕ್ಷಿಸುತ್ತವೆ ಎಂದು ಹೇಳಿದರೆ, ಇನ್ನು ಕೆಲವು ಸಂಶೋಧನೆಗಳು ಈ ರಾಸಾಯನಿಕವನ್ನು ತ್ಯಾಜ್ಯ ಉತ್ಪನ್ನವೆಂದು ಹೇಳುತ್ತವೆ.
ಆದರೆ ಇದು ಅತಿಯಾಗಿ ಉತ್ಪತ್ತಿಯಾದರೆ ಏನು ಮಾಡಬಹುದು ಎಂಬ ವಿಷಯಕ್ಕೆ ಬಂದಾಗ ವೈದ್ಯಕೀಯ ಜಗತ್ತಿನಲ್ಲಿ ಒಮ್ಮತದ ಅಭಿಪ್ರಾಯ ಮೂಡುತ್ತದೆ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ, ಸಂಧಿವಾತ ಮಾತ್ರವಲ್ಲದೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲೂ ಇದು ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಪ್ಯೂರಿನ್ ಎಂಬ ರಾಸಾಯನಿಕ ಸಂಯುಕ್ತವು ಡಿಎನ್ಎ ಹಾಗೂ ಆರ್‌ಎನ್ಏ ಆಗಿ ವಿಘಟನೆ ಹೊಂದಿದಾಗ ದೊರೆಯುವ ಉಪ-ಉತ್ಪನ್ನವೇ ಈ ಯೂರಿಕ್ ಆಮ್ಲ. “ಯೂರಿಕ್ ಆಮ್ಲವು ರಕ್ತಕ್ಕೆ ಬಿಡುಗಡೆಯಾಗುತ್ತದೆ, ನಂತರ ಇದು ಮೂತ್ರಪಿಂಡದಲ್ಲಿ ಶೋಧಿಸಲ್ಪಡುತ್ತದೆ” ಎಂದು ಬೆಂಗಳೂರಿನ ಸಾಕ್ರಾ ಹಾಸ್ಪಿಟಲ್‌ನಲ್ಲಿ ನೆಫ್ರಾಲಾಜಿಸ್ಟ್ ಆಗಿರುವ ಡಾ ಸುಷ್ಮಾ ರಾಣಿ ರಾಜು ಅವರು ಹೇಳುತ್ತಾರೆ.
ಯೂರಿಕ್ ಆಮ್ಲ ಅಸಮತೋಲನಕ್ಕೆ ಕಾರಣವೇನು ಮತ್ತು ಇದರ ಪರಿಣಾಮವೇನು?
“ಯೂರಿಕ್ ಆಮ್ಲದ ಅಸಮತೋಲನವು ಪ್ರೊಟೀನ್‌ಭರಿತ ಆಹಾರದ ಅಧಿಕ ಸೇವನೆಯಿಂದ ಉಂಟಾಗಬಹುದು. ಅಲ್ಲದೆ ಹುಟ್ಟಿನಿಂದ ಬಂದಂತಹ ಚಯಾಪಚಯ ಅಸ್ವಸ್ಥತೆಗಳಂತಹ ಆರೋಗ್ಯ ಸ್ಥಿತಿಗಳಿಂದ ಮತ್ತು ಕಿಮೋಥೆರಪಿಗೆ ಒಳಗಾಗಿರುವ ವ್ಯಕ್ತಿಗಳಲ್ಲಿಯೂ ಕಾಣಿಸಿಕೊಳ್ಳಬಹುದು” ಎಂದು ಕೋಲ್ಕೋತಾದ, ಅಪೋಲೋ ಗ್ಲೆನಿಯೇಗಲ್ಸ್ ಹಾಸ್ಪಿಟಲ್ಸ್‌ನ ಯೂರೋಲಾಜಿಸ್ಟ್ ಮತ್ತು ಆಂಡ್ರಾಲಾಜಿಸ್ಟ್ ಆಗಿರುವ ಡಾ ಅತನು ಜಾನಾ ಹೇಳುತ್ತಾರೆ.
ರಕ್ತದಲ್ಲಿನ ಅಧಿಕ ಯೂರಿಕ್ ಆಮ್ಲಕ್ಕೆ ಹೈಪರ್‌ಯುರಿಸೇಮಿಯಾ ಎಂದೂ, ಮೂತ್ರದಲ್ಲಿನ ಅಧಿಕ ಯೂರಿಕ್ ಆಮ್ಲಕ್ಕೆ ಹೈಪರ್‌ಯೂರಿಕೋಸೂರಿಯ ಎಂದೂ ಕರೆಯಲಾಗುತ್ತದೆ. “ದೇಹದಲ್ಲಿನ (ರಕ್ತ ಮತ್ತು ಮೂತ್ರ) ಈ ಅಧಿಕ ಯೂರಿಕ್ ಆಮ್ಲವು ಹರಳಿನಂತಹ ರಚನೆಯಾಗಿ ಪರಿವರ್ತನೆಯಾಗುತ್ತದೆ. ಈ ಹರಳುಗಳು ಸಂಧಿಗಳು, ಟೆಂಡನ್‌ಗಳು, ಲಿಗಮೆಂಟ್‌ಗಳು ಮತ್ತು ಮೂತ್ರಪಿಂಡಗಳಲ್ಲಿ ಸಂಗ್ರಹಣೆಯಾಗುತ್ತದೆ. ಇವುಗಳಿಂದ ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲು ಉಂಟಾಗಬಹುದು” ಎಂದು ಡಾ ರಾಜು ಅವರು ಹೇಳುತ್ತಾರೆ.
ಅಧಿಕ ಯೂರಿಕ್ ಆಮ್ಲ ಹೊಂದಿರುವವರು ಹೃದ್ರೋಗ, ಮೂತ್ರಪಿಂಡ ಮತ್ತು ಚಯಾಪಯ ರೋಗಕ್ಕೆ ತುತ್ತಾಗುವ ಅಪಾಯಗಳು ಹೆಚ್ಚು ಎಂದು ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಮಾಲೆಕ್ಯುಲಾರ್ ಸೈನ್ಸಸ್‌ನಲ್ಲಿ ಪ್ರಕಟಿಸಲಾದ ಒಂದು ಲೇಖನವು ಹೇಳುತ್ತದೆ.
ದೇಹದಲ್ಲಿನ ಅಧಿಕ ಯೂರಿಕ್ ಆಮ್ಲವನ್ನು ಕಡಿಮೆಗೊಳಿಸುವುದು ಹೇಗೆ?
ಡಾ ಜಾನಾ ಮತ್ತು ಡಾ ರಾಜು ಅವರು ಹೇಳುವಂತೆ, ವ್ಯಕ್ತಿಯು ಈ ಕೆಳಗಿನವುಗಳನ್ನು ಗಮನದಲ್ಲಿಟ್ಟುಕೊಂಡರೆ, ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು:
- ಸಾಕಷ್ಟು ಹಣ್ಣು ತರಕಾರಿಗಳನ್ನು ಸೇವಿಸುವುದು.
- ಕೌಟುಂಬಿಕ ಹಿನ್ನಲೆ ಇದ್ದರೆ, ಪ್ಯೂರಿನ್‌ಗಳು ಅಧಿಕವಾಗಿರುವ ಕೆಂಪು ಮಾಂಸ, ಮೀನು ಮತ್ತು ಮದ್ಯಸೇವನೆಯನ್ನು ತ್ಯಜಿಸುವುದು.
- ಬೊಜ್ಜನ್ನು ನಿಯಂತ್ರಿಸಿ. ಅಧಿಕ BMI ಯೂರಿಕ್ ಆಮ್ಲದ ಮಟ್ಟ ಹೆಚ್ಚಾಗಲು ಕಾರಣವಾಗಬಹುದು. ಉತ್ತಮ ತೂಕ ನಿರ್ವಹಣೆಗಾಗಿ ಪ್ರತಿದಿನ ವ್ಯಾಯಾಮ ಮಾಡಿ ಮತ್ತು ಆರೋಗ್ಯಕರ ಆಹಾರ ಸೇವಿಸಿ.
- ಸಾಕಷ್ಟು ದ್ರವಾಹಾರ ಮತ್ತು ನೀರನ್ನು ಸೇವಿಸುವುದು.
- ಮೂತ್ರಪಿಂಡದಲ್ಲಿ ಕಲ್ಲುಗಳನ್ನು ತಡೆಗಟ್ಟಲು ಸಾಕಷ್ಟು ಬಾರಿ ಮೂತ್ರವಿಸರ್ಜನೆಯಾಗುವಂತೆ (>2,000 ml ದಿನಕ್ಕೆ) ನೋಡಿಕೊಳ್ಳುವುದು ಉತ್ತಮ.
- ಉರಿಯೂತ ಮತ್ತು ಸಂಧಿಗಳಲ್ಲಿ ತೀವ್ರ ನೋವು ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ.
ಸಾರಾಂಶ
ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾದರೆ, ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ದ್ರವಾಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ದೇಹದಲ್ಲಿ ಅಧಿಕ ಯೂರಿಕ್ ಆಮ್ಲದ ಶೇಖರಣೆಯನ್ನು ತಡೆಗಟ್ಟಬಹುದು.