ಉದ್ವೇಗ(Anxiety) ಉಂಟುಮಾಡುವಂತ ಎಲ್ಲ ಮೂಲಗಳನ್ನು ಸಮಗ್ರ ರೂಪದಲ್ಲಿ ನಿಯಂತ್ರಿಸುವುದು ಆತಂಕ ತಡೆಗಟ್ಟುವ ಉತ್ತಮ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ಅನುಭವವಿಲ್ಲದ, ಅರಿಯದ ಅಥವಾ ಸವಾಲಿನಂಥ ಸನ್ನಿವೇಶಗಳಿಂದ ಒತ್ತಡ ಉಂಟಾಗುವುದು ಸಹಜ ಆದರೆ ನಿರಂತರ ಒತ್ತಡವು ದೈಹಿಕವಾಗಿ, ಮಾನಸಿಕವಾಗಿ ಪರಿಣಾಮ ಬೀರುವುದಲ್ಲದೆ ನಡೆನುಡಿಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಉದ್ವೇಗವನ್ನು ತಡೆಗಟ್ಟಲು ಸಮಗ್ರ . ವಿಧಾನಗಳನ್ನು ಅನುಸರಿಸುವಂತೆ ತಜ್ಞರು ಶಿಫಾರಸ್ಸು ಮಾಡುತ್ತಾರೆ.
ಉದ್ವೇಗವನ್ನು ಅರಿಯುವುದು
ಪರೀಕ್ಷೆ–ಎದುರಿಸುವ ಮೂಲಕ ಒತ್ತಡ ಮತ್ತು ಉದ್ವೇಗದ ನಡುವಿನ ವ್ಯತ್ಯಾಸವನ್ನು ತಿಳಿಯಬಹುದಾಗಿದೆ. ಪರೀಕ್ಷೆಗೆ ಸ್ವಲ್ಪ ಸಮಯದ ಮುಂಚೆ ಆತಂಕವಾಗುವುದು ಮತ್ತು ಜ್ಞಾಪಕ ಶಕ್ತಿ ಕುಂದಿದಂತೆ ಭಾಸವಾಗುವುದು ಒತ್ತಡದ ಕೆಲವು ಲಕ್ಷಣಗಳಾಗಿವೆ. ಆದಾಗ್ಯೂ, ಈ ಒತ್ತಡವು ತಿಂಗಳುಗಳು ಅಥವಾ ವರ್ಷಗಳಷ್ಟು ದೂರದಲ್ಲಿರುವ ಪರೀಕ್ಷೆಯ ಫಲಿತಾಂಶದ ಬಗ್ಗೆ ನಿರಂತರ ಚಿಂತೆಗೊಳಗಾಗುವಂತಹ ಮಾದರಿಗೆ ಪರಿವರ್ತನೆಗೊಂಡಾಗ, ಅದು ಆತಂಕವಾಗಿ ಮಾರ್ಪಾಡುಗೊಳ್ಳುತ್ತದೆ.
ಶಿಶು ದೌರ್ಜನ್ಯದಿಂದ ಪಾರಾದ ಮಕ್ಕಳೊಂದಿಗೆ ಕೆಲಸ ಮಾಡುವ ಬೆಂಗಳೂರು ಮೂಲದ ಎನ್ಫೋಲ್ಡ್ ಪ್ರೊಆಕ್ಟಿವ್ ಹೆಲ್ತ್ ಟ್ರಸ್ಟ್ ನ ಸಹ ನಿರ್ದೇಶಕರು ಮತ್ತು ಜೀವನ ಕೌಶಲ್ಯ ತರಬೇತುದಾರರೂ ಆಗಿರುವ ಸುಜಾ ಸುಕುಮಾರನ್ ಹೀಗೆ ಹೇಳುತ್ತಾರೆ ಆನುವಂಶಿಕ ಅಂಶಗಳು ಮತ್ತು ದ್ವಿವ್ಯಕ್ತಿ ಅಸ್ವಸ್ಥತೆ (bipolar disorder), ವ್ಯಕ್ತಿತ್ವದ ಅಸ್ವಸ್ಥತೆ ಲಘು ಲಕ್ಷಣಗಳಿರುವವರು(borderline personality disorder), ಕ್ಯಾನ್ಸರ್, ಆಘಾತದಿಂದಾದ ಉಂಟಾದ ಒತ್ತಡ (PTSD) ಅಥವಾ ಗೀಳು ಬೇನೆ (OCD) ಮುಂತಾದ ಆರೋಗ್ಯ ಪರಿಸ್ಥಿತಿಗಳು ಆತಂಕದ ಸಮಸ್ಯೆ ಉಂಟುಮಾಡುವ ಕೆಲವು ಕಾರಣಗಳಾಗಿವೆ. “ಆಯಾ ವ್ಯಕ್ತಿ ರೂಢಿಸಿಕೊಂಡಂತಹ ಅಭ್ಯಾಸಗಳಿಂದಾಗಿ ಆತಂಕ ಉಲ್ಬಣಿಸಬಹುದು ಅಥವಾ ವ್ಯಕ್ತಿತ್ವ ಆಧರಿತ ಕಾರಣಗಳಿಂದಾಗಿಯೂ ಆತಂಕ ಉಲ್ಬಣಗೊಳ್ಳಬಹುದಾಗಿದೆ.”
ಅನಿಯಮಿತವಾದ ನಿದ್ರಾ ಅಭ್ಯಾಸವು ಉದ್ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಸುಕುಮಾರನ್ ಹೇಳುತ್ತಾರೆ. “ವಾಸ್ತವವಾಗಿ ಇದು ಒಂದು ದೋಷಪೂರಿತ ಚಕ್ರವಾಗಿದೆ,” ಎಂದು ಅವರು ಹೇಳುತ್ತಾರೆ. ಚಿಂತೆಗಳಿಂದಾಗಿ ಜನರು ನಿದ್ರಿಸಲು ಕಷ್ಟ ಪಡಬಹುದು, ಅಥವಾ ನಿದ್ರಾಭಂಗಕ್ಕೆ ಒಳಗಾಗುತ್ತಾರೆ, ನಿದ್ರಾಹೀನತೆಯಿಂದ ದುರ್ಬಲಗೊಂಡು ಮರುದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವಲ್ಲಿ ವ್ಯತ್ಯಯ ಉಂಟಾಗುತ್ತದೆ ಮತ್ತು ಇದು ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ “ಮಾರನೇ ರಾತ್ರಿ, ನಿದ್ರಿಸಲು ಮತ್ತಷ್ಟು ತೊಂದರೆಯಾಗುತ್ತದೆ, ಏಕೆಂದರೆ ಅಂತಹ ವ್ಯಕ್ತಿಯು ಈಗ ಸರಿಯಾಗಿ ನಿದ್ರೆ ಮಾಡಲಾಗದಿರುವ ಬಗ್ಗೆ ಚಿಂತಿಸತೊಡಗುತ್ತಾನೆ. ಔಷಧಿಗಳ ಮೂಲಕ ಅಥವಾ ಗಾಢ ನಿದ್ರೆಯ ತಂತ್ರಗಳನ್ನು ಸಕ್ರಿಯವಾಗಿ ಅನುಸರಿಸಿ ಈ ನಿದ್ರಾಹೀನತೆಯ ಮಾದರಿಯನ್ನು ಬದಲಾಯಿಸುವವರೆಗೆ ಇದು ಹೀಗೆ ಮುಂದುವರಿಯುತ್ತದೆ, ”ಎಂದು ಅವರು ವಿವರಿಸುತ್ತಾರೆ.
ಉತ್ತೇಜಕದಿಂದ ಆಕಳಿಕೆಯನ್ನು ನಿಗ್ರಹಿಸುವುದು
ಮಾನಸಿಕವಾಗಿ ಎಚ್ಚರದಿಂದಿರಲು ಅನೇಕ ಜನರು ದಿನಕ್ಕೆ ಹಲವಾರು ಕಪ್ ಕಾಫಿ ಕುಡಿಯುವ ಅಭ್ಯಾಸಕ್ಕೆ ಒಗ್ಗಿಕೊಂಡಿರುತ್ತಾರೆ, ಆದರೆ ಹೆಚ್ಚಿನ ಪ್ರಮಾಣದ ಕೆಫೀನ್ ಸೇವನೆ ಆತಂಕವನ್ನು ಮತ್ತಷ್ಟು ಉಲ್ಬಣಗೊಳಿಸಬಹುದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. 1970 ರ ದಶಕದಿಂದೀಚೆಗೆ ನಡೆಸಿದ ಹಲವಾರು ಅಧ್ಯಯನಗಳಿಂದ, ಡಿಸೆಂಬರ್ 2015 ರಲ್ಲಿ ಗರೆಥ್ ರಿಚರ್ಡ್ಸ್ ಮತ್ತು ಆಂಡ್ರ್ಯೂ ಸ್ಮಿತ್ ಅವರು ಜರ್ನಲ್ ಆಫ್ ಸೈಕೋಫಾರ್ಮಕಾಲಜಿಯಲ್ಲಿ ವಿಮರ್ಶಿಸಿದ ಹಲವಾರು ಅಧ್ಯಯನಗಳಿಂದ ಕೆಫೀನ್ ಸೇವನೆ ಮತ್ತು ಮಾನವನ ಆರೋಗ್ಯದ ಮಧ್ಯದ ಸಂಬಂಧವನ್ನು ಪರಿಶೀಲಿಸಲಾಗಿದೆ. ಇದರ ಪ್ರಕಾರ ಅಲ್ಪ ಪ್ರಮಾಣದ ಕೆಫೀನ್ (<400mg per day) ಸೇವನೆ ಮನಃಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಕಂಡುಬಂದಿದೆ. ಕೆಫೀನ್ ಅನ್ನು ಒಳಗೊಂಡಿರುವ ಎನರ್ಜಿ ಡ್ರಿಂಕ್ಸ್ ಮತ್ತು ಕೋಲಾ ಆಧಾರಿತ ಪಾನೀಯಗಳು ಇಂತಹ ಪಾನೀಯಗಳೆನಿಸಿವೆ. ಆತಂಕದ ಸಮಸ್ಯೆ ಎದುರಿಸುತ್ತಿರುವವರಿಗೆ, ಕೆಫೀನ್ ಅಗತ್ಯ ಸ್ನೇಹಿತನಂತೆ ಇರಬೇಕು – ಪ್ರತಿದಿನ ಒಂದು ಕಪ್ ಅಥವಾ ಎರಡು ಕಪ್ ಸೇವನೆ ಮಾಡಬಹುದು, ಆದರೆ ಮಲಗುವ ಸಮಯಕ್ಕೆ ಮುಂಚೆ ಸೇವಿಸಬಾರದು.
ವ್ಯಾಯಾಮದಿಂದ ತಪ್ಪಿಸಿಕೊಳ್ಳುವುದು
ಎಂಡಾರ್ಫಿನ್ ಗಳು ನಮ್ಮ ದೇಹದ ನೈಸರ್ಗಿಕ ನೋವು ನಿವಾರಕಗಳಾಗಿವೆ, ಇವು ನಮ್ಮ ಮನಹಸ್ಥಿತಿಯನ್ನೂ ಸುಧಾರಿಸುತ್ತವೆ. ನಾವು ವ್ಯಾಯಾಮ ಮಾಡಿದಾಗ ಎಂಡಾರ್ಫಿನ್ ಬಿಡುಗಡೆಯಾಗುತ್ತವೆ. ಆದರೂ ಜನರು ವ್ಯಾಯಾಮ ಮಾಡುವ ಬದಲು ಒತ್ತಡ ನಿವಾರಣೆಗೆ ಚಾಕೋಲೇಟ್, ಕ್ಯಾಫಿನ್ ಗಾಗಿ ಚಹಾ/ಕಾಫಿ, ಸಿಗರೇಟ್ ನಿಂದ ನಿಕೋಟಿನ್, ಆಲ್ಕೋಹಾಲ್ ಮತ್ತು ಇಂತಹ ಇತರ ಮಾರ್ಗಗಳನ್ನು ಅನುಸರಿಸುತ್ತಾರೆ. ಏಕೆ ಹೀಗೆ ಎಂದು ಊಹಿಸುವುದು ತುಂಬಾ ಕಷ್ಟ. ಏಕೆಂದರೆ ವ್ಯಾಯಾಮ ಮಾಡುವುದ ಕಷ್ಟದ ಕೆಲಸ! ಆದರೆ ಭಾರ ಎತ್ತುವುದು ಅಥವಾ ಮ್ಯಾರಥಾನ್ ನಲ್ಲಿ ಓದುವುದಕ್ಕೆ ಹೋಲಿಸಿದರೆ ಕಾಫಿ ಅಥವಾ ಆಲ್ಕೋಹಾಲ್ ಸವಿಯುವುದು ಅಥವಾ ಧೂಮಪಾನ ಸುಲಭ ಸಾಧ್ಯ. ಆದರೆ ವ್ಯಾಯಾಮ ಮಾಡುವುಡು ಶಿಕ್ಷೆಯಂತಾಗಬಾರದು. ನೀವು ಬೆಳಗಿನ ಜಾವ ಉದ್ಯಾನದಲ್ಲಿ ವಾಕಿಂಗ್ ಹೋಗಬಹುದು ಅಥವಾ ನಿಮ್ಮ ಒತ್ತಡ ನಿವಾರಣೆಗೆ ಕೆಲಸದ ನಂತರ ಬ್ಯಾಡ್ಮಿಂಟನ್ ಆಡಬಹುದು. ಯಾರು ಆತಂಕಕ್ಕೆ ಹೆಚ್ಚು ಗುರಿಯಾಗುತ್ತಾರೋ ಅವರಿಗೆ ಯಾವುದೇ ರೀತಿಯ ವ್ಯಾಯಾಮವಾಗಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಅದು ಅವರ ವಯಸ್ಸು, ನಮ್ಯತೆ ಮತ್ತು ಅವರಿಗೆ ಲಭ್ಯವಿರುವ ಸಮಯವನ್ನು ಆಧರಿಸಿರುತ್ತದೆ. ದೇಹವನ್ನು ಚಟುವಟಿಕೆಯುಕ್ತವಾಗಿಡುವುದು ಮೂಲ ಉದ್ದೇಶ. ಇದರಿಂದ ಮನಸ್ಸು ಒತ್ತಡಮುಕ್ತವಾಗಿರುತ್ತದೆ.
ಫಲಿತಾಂಶಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು
ಅಭ್ಯಾಸ ಬಲದಿಂದ ಜೀವನದ ಪ್ರತಿಯೊಂದು ಫಲಿತಾಂಶವನ್ನು ನಿಯಂತ್ರಿಸಲು ಪ್ರಯತ್ನಿಸುವ ಜನರು, ಎಲ್ಲವೂ ತಮ್ಮ ನಿಯಂತ್ರಣದಲ್ಲಿಲ್ಲ ಎಂದು ಒಪ್ಪಿಕೊಳ್ಳುವವರಿಗಿಂತ ಹೆಚ್ಚು ಚಿಂತೆ ಮಾಡುತ್ತಾರೆ. ತನಗೆ ಯಾರೂ ಪರಿಚಯವಿರದ ಹೊಸ ನಗರದಲ್ಲಿ ತನ್ನ ಜೀವನವು ಹೇಗೆ ರೂಪುಗೊಳ್ಳಬಹುದು ಎಂಬುದರ ಅರಿವೂ ಇಲ್ಲದೆ ಹೊಸದಾಗಿ ಇಂಜಿನಿಯರಿಂಗ್ ಪದವೀಧರರಾಗಿದ್ದ ಉಮೇಶ್ ಕುಮಾರ್ ಬಿಹಾರದ ದರ್ಬಂಗಾದಿಂದ ಕೊಲ್ಕತ್ತಾಗೆ ತೆರಳಿದ್ದರು. 72 ವರ್ಷ ವಯೋಮಾನದ ಉದ್ಯಮಿಯಾಗಿ ತಮ್ಮ ಜೀವನದ ಪಾಠಗಳನ್ನು ಅವರು ಹೀಗೆ ಹಂಚಿಕೊಳ್ಳುತ್ತಾರೆ, “ನಾನು ಉತ್ತುಂಗದ ಪರಾಕಾಷ್ಟೆ ಮತ್ತು ಅಧಃಪತನ ಎರಡನ್ನೂ ಕಂಡಿದ್ದೇನೆ, ಆದರೆ ನಾನು ಎಂದಿಗೂ ಅದರಿಂದ ದೂರ ಓಡಲಿಲ್ಲ ಏಕೆಂದರೆ ಅಂತಿಮವಾಗಿ ನೀವು ಮಾತ್ರ ನಿಮ್ಮ ಕಾರ್ಯಗಳನ್ನು ನಿಯಂತ್ರಿಸಬಹುದು.” ಫಲಿತಾಂಶಗಳು ಮತ್ತು ಯಶಸ್ಸನ್ನು ಎಂದಿಗೂ ನಿರೀಕ್ಷಿಸಲಾಗುವುದಿಲ್ಲ. “ನಿಮ್ಮ ಇಷ್ಟದಂತೆಯೇ ಸಂಗತಿಗಳು ಜರುಗುವಂತೆ ಮಾಡುವ ಯಾವುದೇ ಮ್ಯಾಜಿಕ್ ಸೂತ್ರವಿದೆಯೇ? ಅತ್ಯುತ್ತಮ ಚೆಸ್ ಆಟಗಾರರು ಸಹ ಕೆಲವೊಮ್ಮೆ ಸೋಲುತ್ತಾರೆ, ” ಎಂದು ಅವರು ನೆನಪು ಮಾಡಿಕೊಳ್ಳುತ್ತಾರೆ.
ಅತಿಯಾಗಿ ವಾರ್ತೆಗಳ ಆಲಿಕೆ
ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಲು ಸುಕುಮಾರನ್ ಅವರ ಬಳಿಗೆ ಬರುವ ಹಲವಾರು ಜನರು ಸುದ್ದಿ ಮಾಧ್ಯಮಕ್ಕೆ ಬಹಳ ಒಗ್ಗಿಕೊಂಡಿರುತ್ತಾರೆ. “ಹೊಸ ವಿಷಯಗಳನ್ನು ಅರಿತುಕೊಂಡು ಅಪ್ ಡೇಟ್ ಆಗಿರುವುದು ಉತ್ತಮ ಅಭ್ಯಾಸ ಆದರೆ ವಾರ್ತೆಗಳ ಅತಿಯಾದ ಆಲಿಕೆ ಮತ್ತು ವರದಿಯಾದ ಘಟನೆಗಳ ಭಯಾನಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವುದು ಕೆಲವು ಜನರಲ್ಲಿ ಚಿಂತೆ ಮತ್ತು ಹೃದಯ ಬಡಿತದಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು” ಎಂದು ಅವರು ವಿವರಿಸುತ್ತಾರೆ.
ಕೋವಿಡ್– 19 ಸಾಂಕ್ರಾಮಿಕದ ಮೊದಲ ವರ್ಷದಲ್ಲಿ ಆತಂಕ ಮತ್ತು ಖಿನ್ನತೆಯ ಸಂಭಾವ್ಯತೆಯ ಪ್ರಮಾಣ ಜಾಗತಿಕವಾಗಿ 25 ಪ್ರತಿಶತದಷ್ಟು ವೃದ್ಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (WHO) ಮಾರ್ಚ್ 2022 ರಲ್ಲಿ ಬಿಡುಗಡೆ ಮಾಡಿದ ವೈಜ್ಞಾನಿಕ ಸಂಕ್ಷಿಪ್ತ ಮಾಹಿತಿಯಲ್ಲಿ ವರದಿ ಮಾಡಿದೆ ಹಾಗೂ ವೈರಾಣು ಸೋಂಕಿನ ಭಯ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಲ್ಲಿ ಈ ಬೃಹತ್ ಏರಿಕೆಯ ಹಲವು ಕಾರಣಗಳಲ್ಲಿ ಒಂದಾಗಿದೆ.”2020 ರಲ್ಲಿ ನಾವು ಬೇರೆ ಯಾವುದೇ ಸುದ್ದಿಯನ್ನು ವೀಕ್ಷಿಸಿದ್ದೇ ಇಲ್ಲ. ನಮ್ಮ ಮನೆಯನ್ನು ಒಳಗಿನಿಂದ ಮುಚ್ಚಲಾಗಿತ್ತು. ವೈರಸ್ ಗಾಳಿಯ ಮೂಲಕ ಚಲಿಸಬಹುದು ಎಂದು ವರದಿ ಮಾಡಿದ್ದರಿಂದ ನಾವು ಮನೆಯ ನಮ್ಮ ಕಿಟಕಿಗಳನ್ನು ಸಹ ತೆರೆಯುವಂತಿರಲಿಲ್ಲ. ಆದರೂ, ನಮ್ಮಲ್ಲಿ ಯಾರೋ ಒಬ್ಬರಿಗೆ ಸೋಂಕು ತಗುಲುತ್ತದೆ ಮತ್ತು ಇತರರಿಗೆ ಹರಡುತ್ತದೆ ಎಂದು ನಾವು ನಿರಂತರವಾಗಿ ಚಿಂತೆಗೀಡಾಗಿದ್ದೆವು. ಪರಿಣಾಮಗಳ ಬಗ್ಗೆ ಯೋಚಿಸುವಾಗ ನನ್ನ ಹೃದಯ ಬಡಿತ ಹೆಚ್ಚಾಗುತ್ತಿತ್ತು”ಎಂದು ದೆಹಲಿಯಲ್ಲಿ ತನ್ನ ಪತಿ, ಮಗ ಮತ್ತು ಅವರ ಕುಟುಂಬದೊಂದಿಗೆ ವಾಸಿಸುವ ಗೃಹಿಣಿ ಸಂಧ್ಯಾ ದತ್ತಾ (76) ಹೇಳುತ್ತಾರೆ.
ಉದ್ವೇಗವನ್ನು ಉಲ್ಬಣಗೊಳಿಸಬಹುದಾದ ಇತರ ಅಭ್ಯಾಸಗಳು ಮತ್ತು ಲಕ್ಷಣಗಳು:
ಜೀವನದೆಡೆಗೆ ನಕಾರಾತ್ಮಕ ಧೋರಣೆ – ಸಂಬಂಧಗಳೇ ಆಗಿರಲಿ, ಅಪಾಯಕಾರಿ ಆರ್ಥಿಕ ನಿರ್ಧಾರಗಳು ಅಥವಾ ಹೊಸ ಅನ್ವೇಷಣೆಗಳಾಗಿರಲಿ – ಎಲ್ಲವೂ ತಪ್ಪಾಗುತ್ತದೆ ಎಂದು ದೀರ್ಘಕಾಲದವರೆಗೆ ನಂಬುವವರು ಜೀವನದ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿರುತ್ತಾರೆ
ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆ – ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲನೆ ನಡೆಸುತ್ತಾರೆ. ಇಂಥವರು, ಯಾರು ಸಂತೃಪ್ತ ಜೀವನ ನಡೆಸುತ್ತಿರುವುದಾಗಿ ಕಾಣಿಸಿಕೊಳ್ಳುತ್ತಾರೋ ಅದು ಸಾಮಾಜಿಕ ಮಾಧ್ಯಮಕ್ಕೆ ಮಾತ್ರವೇ ಸೀಮಿತವಾಗಿದ್ದರೂ – ಅಂಥವರೊಂದಿಗೆ ತಮ್ಮನ್ನು ತಾವು ಹೋಲಿಸಿಕೊಂಡು ತಮ್ಮ ಸ್ವಂತ ಜೀವನದ ಬಗ್ಗೆ ನಿರಾಶೆ ಹೊಂದುತ್ತಾರೆ ಮತ್ತು ಅತೃಪ್ತರಾಗುತ್ತಾರೆ.
ವೃತ್ತಿ -ಜೀವನ ಅಸಮತೋಲನೆ – ಕೆಲಸದಲ್ಲಿರುವಾಗ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಲಾಗುತ್ತಿಲ್ಲ ಎಂಬ ಬಗ್ಗೆ ಚಿಂತಿಸುವುದು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವಾಗ ಮರುದಿನದ ಕೆಲಸದ ವೇಳಾಪಟ್ಟಿಯ ಬಗ್ಗೆ ಯೋಚಿಸುವುದು ನಿರಂತರ ಚಿಂತೆಯ ವ್ಯೂಹವನ್ನು ಸೃಷ್ಟಿಸುತ್ತದೆ, ಜೊತೆಗೆ ಅಂತಹ ವ್ಯಕ್ತಿ ಬಳಲಿ ಬೆಂಡಾಗುವಂತೆ ಮಾಡುತ್ತದೆ.
ವಿವಾದಗಳಿಂದ ದೂರ ಉಳಿಯುವ ಪ್ರಯತ್ನ – ಕೆಲವು ಜನರು ತಮ್ಮ ಎಲ್ಲಾ ಸಂವಹನಗಳಲ್ಲಿ ಸಮತೋಲನವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವ ಮೂಲಕ ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಸೌಹಾರ್ದಯುತವಾಗಿ ಯೋಚಿಸಲು ಬಯಸುವ ತಮ್ಮ ವ್ಯಕ್ತಿತ್ವದ ಬಗೆಗಿನ ಕಾಳಜಿಯ ಕಾರಣದಿಂದಾಗಿ ಅವರು ಹಾಗೆ ವರ್ತಿಸಬಹುದು. ತಮ್ಮನ್ನು ಹೇಗೆ ಗ್ರಹಿಸಲಾಗುತ್ತಿದೆ ಎಂಬುದರ ಬಗ್ಗೆ ಅನಗತ್ಯ ಚಿಂತೆಗೆ ಇದು ಎಡೆಮಾಡಿಕೊಡುತ್ತದೆ.
ಅವಾಸ್ತವಿಕ ಅಥವಾ ಉದಾತ್ತ ಗುರಿಗಳು – ಇವು ಶೈಕ್ಷಣಿಕ, ವೃತ್ತಿಪರ, ಆರ್ಥಿಕ, ಸಾಮಾಜಿಕ, ಅಥವಾ ಆಂತರಿಕ ಗುರಿಗಳಾಗಿರಬಹುದು ಮತ್ತು ಇವು ನಿರಂತರವಾಗಿ ಸ್ವಯಂ–ಪ್ರೇರಿತ ಒತ್ತಡದ ಸ್ಥಿತಿಯಲ್ಲಿ ಜೀವಿಸಲು ಎಡೆಮಾಡಿಕೊಡಬಹುದು, ಇಂಥ ಸ್ಥಿತಿಯನ್ನು ಗಮನಿಸದೇ, ಚಿಕಿತ್ಸೆ ನೀಡದೇ ಬಿಟ್ಟರೆ ದೀರ್ಘಕಾಲಿಕ ರೋಗವಾಗಿ ಉಲ್ಬಣಿಸಬಹುದು.