
“ನಾನು ಕೆಳಗೆ ಬೀಳುತ್ತೇನೆ, ಆದರೂ ಮತ್ತೆ ಪುಟಿದೇಳುತ್ತೇನೆ. ನಾನು ಕೆಳಗೇ ಉಳಿಯುವಂತೆ ನೀವು ಎಂದಿಗೂ ಮಾಡಲಾರಿರಿ.” ಇದು 90ರ ದಶಕದ ಪ್ರಸಿದ್ಧ ಇಂಗ್ಲಿಷ್ ಆಲ್ಬಂ ಹಾಡು ಟಬ್ಥಂಪಿಂಗ್ನ ಪಲ್ಲವಿ. ಇದನ್ನು ಆತ್ಮಸ್ಥೈರ್ಯದ ಗೀತೆ ಎನ್ನಬಹುದು.
ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಿ ಮತ್ತೆ ಸಹಜವಾಗಿ ಜೀವನ ಸಾಗಿಸುವ ಸಾಮರ್ಥ್ಯವನ್ನೇ ಆತ್ಮಸ್ಥೈರ್ಯ ಎಂದು ಹೇಳುವುದು. ಹೇಳುವುದೇನೋ ಸುಲಭ. ಆದರೆ ಹಾಗೆ ಸಾಮರ್ಥ್ಯ ಒಗ್ಗೂಡಿಸಿಕೊಳ್ಳುವುದು ಅಷ್ಟೇನೂ ಸುಲಭದ ಕೆಲಸವಲ್ಲ.
ಭಾವನಾತ್ಮಕವಾಗಿ ಸಂಕಷ್ಟಗಳನ್ನು ಅನುಭವಿಸಿದವರು, ಅಂತಹ ಮನಃಸ್ಥಿತಿಯಿಂದ ಹೊರಬರಲು ಹಾಗೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಾಯ ಮಾಡುವುದು ಚಿಕಿತ್ಸೆಯ ಒಂದು ಭಾಗ ಎನ್ನುತ್ತಾರೆ ಮನಃಶಾಸ್ತ್ರಜ್ಞರು ಮತ್ತು ಆಪ್ತಸಲಹೆಗಾರರು. ಸೋಲು ಕಂಡವರು, ಮಾನಸಿಕವಾಗಿ ಅಥವಾ ದೈಹಿಕವಾಗಿ ನೋವು ಅನುಭವಿಸಿದವರು ಅದರಿಂದ ಚೇತರಿಸಿಕೊಂಡು ಜೀವನದಲ್ಲಿ ಮುಂದೆ ಸಾಗುವುದು ಹೇಗೆ ಎಂದು ಕಷ್ಟಪಡುತ್ತಿರುತ್ತಾರೆ. ಅಂತಹವರಿಗೆ ಚಿಕಿತ್ಸೆಯಿಂದ ನೆರವಾಗುತ್ತದೆ.
ಪ್ರತಿಕೂಲ ಸನ್ನಿವೇಶ ಎದುರಿಸುವ ರೀತಿ
ಕಗ್ಗತ್ತಲ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುತ್ತದೆ ಎಂದು ನಂಬುವುದನ್ನು ಸಕಾರಾತ್ಮಕ ಮನೋಭಾವ ಎಂದು ಹೇಳಲಾಗುತ್ತದೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದ ಮೂನ್ಮೂನ್ ಗುಹಾ 32ರ ವಯಸ್ಸಿನಲ್ಲಿ ಆಕಸ್ಮಿಕವಾಗಿ ಪತಿಯನ್ನು ಕಳೆದುಕೊಳ್ಳುತ್ತಾರೆ. ಆಗ ಮಗನಿಗೆ 5 ವರ್ಷ. ಪತಿಯ ನಿಧನದ ಆಘಾತ ಒಂದೆಡೆ, ಮತ್ತೊಂದು ಕಡೆಗೆ ಮಗನೊಂದಿಗೆ ಮುಂದೆ ಜೀವನ ಸಾಗಿಸುವುದು ಹೇಗೆ ಎಂದು ತಿಳಿಯದ ಸ್ಥಿತಿ. ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗುತ್ತಾರೆ.
ಹಲವು ಬಾರಿ ಆಪ್ತಸಮಾಲೋಚನೆಗೆ ಒಳಗಾಗುತ್ತಾರೆ. ಇದೇ ವೇಳೆಗೆ ಅವರ ಹಾಗೂ ಪತಿಯ ಕುಟುಂಬದ ನಿರಂತರ ಬೆಂಬಲದಿಂದ, ವಿಶೇಷವಾಗಿ ತನ್ನ ಸೋದರಿಯ ಬೆಂಬಲದಿಂದ ಗುಹಾ ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸುತ್ತಾರೆ. ಕೋಲ್ಕತ್ತಾದಲ್ಲಿ ಶಿಕ್ಷಕರ ತರಬೇತಿ ಕೋರ್ಸ್ಗೆ ನೋಂದಾಯಿಸಿಕೊಳ್ಳುತ್ತಾರೆ. ಬಹುಬೇಗನೆ ಖಾಸಗಿ ಶಾಲೆಯಲ್ಲಿ ಕೆಲಸ ಸಹ ದೊರಕುತ್ತದೆ.
ʼಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ನಮ್ಮ ಸಾಮರ್ಥ್ಯʼವೇ ಸಕಾರಾತ್ಮಕತೆ ಎನ್ನುತ್ತಾರೆ ಬೆಂಗಳೂರಿನ ಇನಾರಾ ಕಲೆಕ್ಟಿವ್ನಲ್ಲಿ ಮನಃಶಾಸ್ತ್ರಜ್ಞೆ ಆಗಿರುವ ಮೊನಿಶಾ ಶರ್ಮಾ ಅವರು. “ಒತ್ತಡದಲ್ಲಿರುವವರ ಮೇಲೆ ಆಗುತ್ತಿರುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಅವರಲ್ಲಿ ಸುಧಾರಣೆ ತರಲು ಚಿಕಿತ್ಸೆಯಿಂದ ಸಾಧ್ಯವಾಗುತ್ತದೆ. ಇದಕ್ಕಾಗಿ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ ಮತ್ತು ಕೌಶಲಗಳನ್ನು ಬಳಸಲಾಗುತ್ತದೆ” ಎನ್ನುತ್ತಾರೆ ಶರ್ಮಾ.
ಕಷ್ಟದಿಂದ ಚೇತರಿಸಿಕೊಳ್ಳುವ ಮಾರ್ಗ ಹಾಗೂ ಹಂತಗಳು:
-
ಕಷ್ಟಗಳಿಂದ ಹೊರಬರಲು ತಮ್ಮಲ್ಲಿ ಉಂಟಾಗುವ ಭಾವನೆಗಳನ್ನು ಒಪ್ಪಿಕೊಳ್ಳುವುದು ಮೊದಲನೆಯ ಹೆಜ್ಜೆ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಹಾಗೂ ಮುಂಬೈನ ಈಕ್ವಿಲಿಬ್ರಿಯೊ ಅಡ್ವೈಸರಿ ಎಲ್‌ಎಲ್‌ಪಿ ಸಹ ಸಂಸ್ಥಾಪಕಿ ಸಮೃತಿ ಮಕ್ಕರ್ ಮಿಧಾ. “ನಿರಾಸೆ, ಹತಾಶೆ, ದುಃಖ ಹೀಗೆ ತಮ್ಮಲ್ಲಿನ ಯಾವುದೇ ಭಾವನೆ ಇರಲಿ ಅದರಿಂದ ಹೊರಬರಲು ಹೋರಾಡುವುದಕ್ಕಿಂತ ಅದನ್ನು ಒಪ್ಪಿಕೊಳ್ಳುವುದು ಮುಖ್ಯ. ನಮ್ಮ ಅನುಭವಗಳನ್ನು ನಾವು ಗೌರವಿಸುವುದು ಅವಶ್ಯಕ” ಎನ್ನುತ್ತಾರೆ ಅವರು. “ಸಾಮಾನ್ಯವಾಗಿ ಕಠಿಣ ಪರಿಸ್ಥಿತಿ ಎದುರಿಸಿದಾಗ, ನಮ್ಮ ಅಹಿತ ಭಾವನೆಗಳನ್ನು ದೂರ ಮಾಡಿಕೊಳ್ಳುವ ಬದಲು ಅವುಗಳನ್ನು ಬಚ್ಚಿಡುತ್ತೇವೆ. ನಾವು ಎಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇವೆ ಎನ್ನುವ ಕುರಿತು ನಮಗೆ ಅರಿವು ಇರಬೇಕಾಗುತ್ತದೆ. ಮತ್ತು ನಮ್ಮ ಭಾವನೆಗಳಿಂದ ನಮಗೇ ತೊಂದರೆ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆʼ ಎಂದು ಮೊನಿಶಾ ಶರ್ಮಾ ಅವರು ಹೇಳುತ್ತಾರೆ.
- ನೆರವು ಪಡೆಯುವುದು: “ಕಷ್ಟದ ಪರಿಸ್ಥಿತಿಯಲ್ಲಿ ನೆರವು ಪಡೆಯಲು ಮುಂದಾಗಬೇಕು. ಸ್ನೇಹಿತರ, ಕುಟುಂಬದವರ ಅಥವಾ ಪಾಡ್‌ಕಾಸ್ಟ್‌ನ ನೆರವು ಸಹ ಅಂತಹವರಿಗೆ ತಾವು ಒಬ್ಬಂಟಿಯಲ್ಲ ಎನ್ನುವ ಧೈರ್ಯ ನೀಡಬಲ್ಲದು” ಎನ್ನುವುದು ಮಿಧಾ ಅವರ ಮಾತು.
“ಭಾವನಾತ್ಮಕ ಬಿಕ್ಕಟ್ಟಿನಿಂದ ಹೊರಬಂದು ಚೇತರಿಸಿಕೊಳ್ಳಲು ಆಪ್ತಸ್ನೇಹಿತ/ಸ್ನೇಹಿತೆ, ಕುಟುಂಬದ ಸದಸ್ಯರು ಅಥವಾ ಆಪ್ತಸಮಾಲೋಚಕರು ಸಹಾಯ ಮಾಡಬಲ್ಲರು. ಸಹಾಯವಾಣಿಗಳು, ಸಾಮಾಜಿಕ ಸಂಘಟನೆಗಳು, ಕಾನೂನಾತ್ಮಕ ವ್ಯವಸ್ಥೆ ಹಾಗೂ ನೆರೆಹೊರೆಯವರ ನೆರವಿನ ಕುರಿತು ಸಹ ನಮಗೆ ಅರಿವು ಇರಬೇಕಾಗುತ್ತದೆ” ಎಂದು ಶರ್ಮಾ ಹೇಳುತ್ತಾರೆ.
- ಮನಸ್ಸು ಆತಂಕಕ್ಕೆ ಒಳಗಾದಾಗ ಸಮಾಧಾನವಾಗಿ ನಮ್ಮ ಭಾವನೆ ಮೇಲೆ ಗಮನ ಇರಿಸುವುದು, ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವುದು, ಧ್ಯಾನದಂತಹ ತಂತ್ರಗಳು ಸಾಕಷ್ಟು ಉಪಯೋಗಕಾರಿ” ಎನ್ನುತ್ತಾರೆ ನಜರಿಸ್ ಆಂಡ್ ಕೊ. ದಲ್ಲಿ ತರಬೇತುದಾರರಾಗಿರುವ ನಜರಿಸ್ ಮನೋಹರನ್ ಅವರು.
ಬೌದ್ಧ ಧರ್ಮದ ಮೂಲಮಂತ್ರವಾದ ʼಪ್ರೀತಿ ದಯೆ ಧ್ಯಾನʼ ತಂತ್ರವನ್ನು ಅನುಸರಿಸುವುದು ಉದ್ವೇಗದಿಂದ ಹೊರಬರಲು ನೆರವಾಗುತ್ತದೆ ಎಂದೂ ಅವರು ಹೇಳುತ್ತಾರೆ.
- ಕೃತಜ್ಞತಾ ಮನೋಭಾವದಿಂದ ಸಕಾರಾತ್ಮಕತೆ ಮೂಡುತ್ತದೆ ಎನ್ನುವುದು ಸಾಬೀತಾಗಿದೆ. ಸಂತಸದಿಂದ ಇರುವುದಕ್ಕೆ ಕೃತಜ್ಞತಾ ಮನೋಭಾವ ಪ್ರಮುಖ ಅಗತ್ಯವಾಗಿದೆ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಸಂತಸದಿಂದ ಇರುವಂತೆ ಹಾಗೂ ಸಂತಸ ತರುವ ಯೋಚನೆಗಳನ್ನೇ ರೂಢಿಸಿಕೊಳ್ಳಲು ತರಬೇತಿ ಹಾಗೂ ಮನೋಧರ್ಮ ಪರಿವರ್ತನೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎನ್ನುತ್ತಾರೆ ಮನೋಹರನ್.
ಆತ್ಮವಿಶ್ವಾಸದ ಸಾಧನೆ
- ಆತ್ಮಾವಲೋಕನ: “ಸಕಾರಾತ್ಮಕತೆ ಮೈಗೂಡಿಸಿಕೊಳ್ಳಲು ಪ್ರಯತ್ನಿಸುವಾಗ ನಮಗೆ ನಾವೇ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಸಮಸ್ಯೆ ಏನು? ಸಮಸ್ಯೆಗೆ ಕಾರಣಗಳೇನು? ಸಮಸ್ಯೆ ಹೆಚ್ಚಾಗಲು ಅಥವಾ ಕಡಿಮೆಯಾಗಲು ಕಾರಣಗಳೇನಿರಬಹುದು? ಪರಿಹಾರಗಳನ್ನು ಹೇಗೆ ಕಂಡುಕೊಳ್ಳಬಹುದು? ಯಾರ ಸಹಾಯ ಪಡೆಯುವುದು?” ಇವೇ ಆ ಪ್ರಶ್ನೆಗಳು ಎನ್ನುತ್ತಾರೆ ಶರ್ಮಾ.
ಈಗ ಮೂನ್ ಮೂನ್ ಗುಹಾ ಮಗ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾನೆ. ಮನೆಯಲ್ಲಿ ಒಂಟಿಯಾಗಿ ಇರಬೇಕಾಗಿರುವ ತನ್ನ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಅವರು ಯತ್ನಿಸುತ್ತಿದ್ದಾರೆ. “ಒಂಟಿಯಾಗಿ ಇರುವುದು ಸುಲಭವಲ್ಲ. ನನ್ನ ಆಸಕ್ತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾರ್ಯನಿರತಳಾಗಿರುತ್ತೇನೆ. ಒಂಟಿತನ ಅತಿಯಾಗಿ ಕಾಡಿದಾಗ ನನ್ನ ಬೆನ್ನೆಲುಬಾಗಿರುವ ಸಹೋದರಿಯ ಜತೆ ಮಾತಾಡುತ್ತೇನೆ. ಕುಟುಂಬದವರು ಹಾಗೂ ಸ್ನೇಹಿತರ ಜತೆ ಕಾಲ ಕಳೆಯುತ್ತೇನೆ.” ಎನ್ನುತ್ತಾರೆ ಗುಹಾ.
- ಸ್ವಕಾಳಜಿ: ‘ನಮ್ಮ ಜೀವನದಲ್ಲಿ ಬದಲಾವಣೆಗಳಾದಾಗ ದಿನಚರಿಯಲ್ಲೂ ಬದಲಾವಣೆಗಳಾಗುತ್ತವೆ. ‘ಮೊದಲಿನ ದಿನಚರಿ ಪಾಲಿಸುವುದು ಉತ್ತಮ. ಅದರಿಂದಾಗಿ ನಮ್ಮ ಮೇಲೆ ನಾವು ನಿಯಂತ್ರಣ ಹೊಂದಿರುವ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ವ್ಯಾಯಾಮ, ಅಡುಗೆ ಮಾಡುವುದು, ನಮ್ಮ ಬೇರೆ ಹವ್ಯಾಸ ಹೀಗೆ ದಿನಚರಿಯನ್ನು ಪುನಃ ಆರಂಭಿಸಬೇಕು. ಇಲ್ಲವಾದರೆ ನಮ್ಮ ಬಗ್ಗೆ ನಮಗೆ ಅಸಹಾಯಕ ಭಾವನೆ ಉಂಟಾಗಬಹುದು.‘ ಎನ್ನುತ್ತಾರೆ ಮಿಧಾ.
ಸಾಕಷ್ಟು ವಿಶ್ರಾಂತಿ ಪಡೆಯುವುದು, ಉತ‌್ತಮ ಆಹಾರ ಸೇವಿಸುವುದು, ದೈಹಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದು ಸಹ ಮುಖ್ಯವಾಗಿವೆ.
- ವರ್ತಮಾನ ಕಾಲದಲ್ಲಿ ಜೀವನ ನಡೆಸುವುದು ಮುಖ್ಯವಾಗಿದೆ. ಭವಿಷ್ಯದ ಕುರಿತು ಯೋಚಿಸುವುದರಿಂದ ಉದ್ವೇಗ, ಭೂತಕಾಲದ ಕುರಿತು ಯೋಚಿಸುವುದರಿಂದ ಖಿನ್ನತೆ ಉಂಟಾಗಬಹುದು. ನಮ್ಮ ಮನಸ್ಸು ಚಂಚಲವಾಗಿರಲು ಹಾತೊರೆಯುತ್ತದೆ. ಆದ್ದರಿಂದ ವರ್ತಮಾನದಲ್ಲಿ, ಈ ಕ್ಷಣದ ಕುರಿತು ಗಮನ ವಹಿಸಿ ಜೀವಿಸುವುದು ಮುಖ್ಯ ಎನ್ನುತ್ತಾರೆ ಮನೋಹರನ್.
- ಸಣ್ಣ ವಿಷಯಗಳೂ ಪ್ರಮುಖ: ‘ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವಾಗ, ದೊಡ್ಡ ಗುರಿಗಳ ಕುರಿತು ಮಾತ್ರ ಗಮನವಹಿಸುವುದು ಸುಲಭ. ಆದರೆ ನಮ್ಮ ಸ್ವಸಾಮರ್ಥ್ಯ ರೂಪಿಸಲು ಸಹಾಯ ಮಾಡುವ ಸಣ್ಣ ಸಣ್ಣ ಸಂಗತಿಗಳನ್ನು ಕಡೆಗಾಣಿಸುತ್ತೇವೆ. ‘ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಭಿನ್ನವಾದದ್ದು. ಕೆಲವರ ಪಾಲಿಗೆ ಕೆಲವೇ ತಿಂಗಳಲ್ಲಿ ಯಶಸ್ವಿಯಾದ ಯೋಜನೆ ಇನ್ನು ಕೆಲವರಿಗೆ ವರ್ಷಗಳ ಬಳಿಕ ಯಶಸ್ವಿಯಾಗಬಹುದು. ಆದರೆ ಚಿಕಿತ್ಸೆ ಪಡೆಯಲು ಮುಂದಾಗುವುದು ಸೇರಿದಂತೆ ಚಿಕ್ಕ ಚಿಕ್ಕ ಸಂಗತಿಗಳನ್ನು ಅನುಸರಿಸುವುದು ಉತ್ತಮ ದಾರಿ‘ ಎಂದು ಮಿಧಾ ಸಲಹೆ ನೀಡುತ್ತಾರೆ.
ಈ 18 ವರ್ಷಗಳಲ್ಲಿ ಧೈರ್ಯಗೆಡಿಸುವ ಹಲವು ಸವಾಲುಗಳು ನನಗೆ ಎದುರಾಗಿವೆ. ಆದರೆ ಕಷ್ಟದಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ನನಗಿದೆ ಎಂದು ನನಗೇ ಅರಿವಾದ ಬಳಿಕ ಸವಾಲುಗಳನ್ನು ದೃಢ ಮನಸ್ಸಿನಿಂದ ಎದುರಿಸಲು ಕಲಿತೆ’ ಎನ್ನುತ್ತಾರೆ ಮೂನ್ ಮೂನ್ ಗುಹಾ. ಕಷ್ಟಗಳಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆ ಸುದೀರ್ಘವಾಗಿರಬಹುದು. ಹತಾಶೆಯನ್ನೂ ಉಂಟುಮಾಡಬಹುದು. ಸೋತು ಕೈಚೆಲ್ಲುವಂತಹ ಕ್ಷಣಗಳು ಎದುರಾಗಬಹುದು. ಆದರೆ ಇಂತಹ ಕ್ಷಣಗಳಲ್ಲೇ ನಮ್ಮನ್ನು ಹಾಗೂ ನಮ್ಮ ಪ್ರಪಂಚವನ್ನು ಮೊದಲಿಗಿಂತ ಕೊಂಚ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ನಾವು ಮುಂದೆ ಸಾಗಲು ಇದು ಒಳ್ಳೆಯ ಸಮಯ.