0

0

0

ಈ ಲೇಖನದಲ್ಲಿ

ಡೇಕೇರ್‌ – ನಿಮ್ಮ ಮಗುವನ್ನು ಯಾವಾಗ ಸೇರಿಸಬೇಕು?
13

ಡೇಕೇರ್‌ – ನಿಮ್ಮ ಮಗುವನ್ನು ಯಾವಾಗ ಸೇರಿಸಬೇಕು?

ಪೋಷಕರು ತಮ್ಮ ಮಕ್ಕಳಿಗಾಗಿ ಆಯ್ಕೆ ಮಾಡುವ ಡೇಕೇರ್ ಅವರಿಗೆ ಮನೆಯೆಂಬ ಭಾವನೆ ಮೂಡಿಸುವಂತಿರಬೇಕು. ಅಲ್ಲದೆ, ಮೂಲಭೂತ ವಾಕ್ಯಗಳು, ತಮ್ಮಷ್ಟಕ್ಕೆ ತಾವೇ ಆಹಾರ ಸೇವಿಸುವ ಕೌಶಲ್ಯ ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಅರಿವನ್ನು ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಸಿದ್ಧಪಡಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಡೇಕೇರ್‌ಗೆ ನಿಮ್ಮ ಮಗುವನ್ನು ಯಾವಾಗ ಸೇರಿಸಬೇಕು?

ಪೋಷಕರು ತಮ್ಮ ಮಕ್ಕಳಿಗಾಗಿ ಆಯ್ಕೆ ಮಾಡುವ ಡೇಕೇರ್ ಅವರಿಗೆ ಮನೆಯೆಂಬ ಭಾವನೆ ಮೂಡಿಸುವಂತಿರಬೇಕು. ಅಲ್ಲದೆ, ಮೂಲಭೂತ ವಾಕ್ಯಗಳು, ತಮ್ಮಷ್ಟಕ್ಕೆ ತಾವೇ ಆಹಾರ ಸೇವಿಸುವ ಕೌಶಲ್ಯ ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಅರಿವನ್ನು ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಸಿದ್ಧಪಡಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಮಗುವನ್ನು ಡೇಕೇರ್‌ಗೆ ಕಳಿಸುವುದೆಂದರೆ ಪೋಷಕರಿಗೆ ಅದು ಅಗ್ನಿಪರೀಕ್ಷೆ. ಬೆಂಗಳೂರಿನ ನಿವಾಸಿ ಪ್ರಿಯಾ ಸಹಾ (32) ಅವರಿಗೆ ಎರಡು ವರ್ಷಗಳ ವಿರಾಮದ ನಂತರ, ಕೆಲಸಕ್ಕೆ ಸೇರಲು ಡೇಕೇರ್ ಅನಿವಾರ್ಯವಾಗಿತ್ತು. ಜುಲೈ 19 ರಂದು ಅವರು ತಮ್ಮ 2 ವರ್ಷ ಮೂರು ತಿಂಗಳು ವಯಸ್ಸಿನ ಮಗಳನ್ನು ಡೇಕೇರ್‌ಗೆ ಸೇರಿಸಿದರು. “ಇದಕ್ಕಾಗಿ ಸಮಾರು ಮೂರು ತಿಂಗಳಿನಿಂದ ನಾನು ಅವಳನ್ನು ಸಿದ್ಧಪಡಿಸುತ್ತಿದ್ದೆ” ಎಂದು ಪ್ರಿಯಾ ಹೇಳುತ್ತಾರೆ. ಡೇಕೇರ್‌ಗೆ ಹೊಂದಿಕೊಳ್ಳಲು ಅವರ ಮಗುವಿಗೆ ಸುಮಾರು ಎರಡು ವಾರಗಳು ಬೇಕಾದವು.

“ಮನೆಯ ವಾತಾವರಣವನ್ನೇ ಹೋಲುವ ಡೇಕೇರ್ ಸೆಂಟರ್ ಅನ್ನು ಆಯ್ಕೆ ಮಾಡಿ,” ಎಂದು ಕರ್ನಾಟಕ ಪ್ರೀಸ್ಕೂಲ್ ಕೌನ್ಸಿಲ್‌ನ ಕಾರ್ಯದರ್ಶಿ ಮತ್ತು ಅನುಭವಿ ಶಿಕ್ಷಣ ತಜ್ಞರಾದ ಪೃಥ್ವಿ ಬನವಾಸಿ ಅವರು ಸಲಹೆ ನೀಡುತ್ತಾರೆ. ಡೇಕೇರ್‌ಗೆ ಸೇರುವ ತನಕ ಶಿಶುಗಳಿಗೆ ತಮ್ಮ ಪೋಷಕರು ಮತ್ತು ಅಜ್ಜ-ಅಜ್ಜಿಯರನ್ನು ಮಾತ್ರವೇ ನೋಡಿ ಅಭ್ಯಾಸವಾಗಿರುತ್ತದೆ, ಆದ್ದರಿಂದ ಅವರಲ್ಲಿ ನಯವಾದ ಪರಿವರ್ತನೆ ಮಾಡಬೇಕೆಂದರೆ, ಡೇಕೇರ್ ಎಂಬುದು ಮನೆಯಂತೆ ಇದ್ದು ಸಿಬ್ಬಂದಿ ಮನೆಯವರಂತೆ ವರ್ತಿಸಬೇಕಾಗುತ್ತದೆ.

ಈ ಮಾತನ್ನು ಅಂಗೀಕರಿಸುವ ಮಹಾರಾಷ್ಟ್ರದ ನಗ್ಪುರದಲ್ಲಿನ ಪೋಷಕರ ತಜ್ಞರು ಮತ್ತು ಕುಟುಂಬ ಸಲಹೆಗಾರರಾದ ಹಿಮಾನಿ ಗುಪ್ತೆ ಅವರು, “ಪರಿಸರ, ಸಂಪನ್ಮೂಲಗಳು ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯು ಮಗುವನ್ನು ನೋಡಿಕೊಳ್ಳಲು ಅರ್ಹರಾಗಿದ್ದಾರೆ ಎಂಬುದನ್ನು ಪೋಷಕರು ಖಾತ್ರಿಪಡಿಸಿಕೊಳ್ಳಬೇಕು. ಡೇಕೇರ್ ಎಂಬುದು ಶಾಲೆಗೆ ಪೂರಕವಾಗಿದೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳಿಗೆ ಡೇಕೇರ್ ಆಯ್ಕೆ ಮಾಡುವಾಗ ಸಾಮಾಜಿಕ ಪರಿಸರದೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು” ಎಂದು ಹೇಳುತ್ತಾರೆ.

ನಿಮ್ಮ ಮಗುವನ್ನು ಡೇಕೇರ್‌ಗೆ ಯಾವಾಗ ಸೇರಿಸಬೇಕು?

ಡೇಕೇರ್‌ಗೆ ಹೋಗುವ ಮಕ್ಕಳ ವಯಸ್ಸು, ಆರು ತಿಂಗಳಿನಿಂದ 12 ಅಥವಾ 14 ವರ್ಷಗಳ ತನಕ (ಅಪರೂಪದ ಪ್ರಕರಣಗಳಲ್ಲಿ) ಇರಬಹುದು. ದೊಡ್ಡ ಮಕ್ಕಳಿಗೆ ಹೋಲಿಸಿದರೆ ಎರಡು ವರ್ಷದ ಒಳಗಿನ ಮಕ್ಕಳು ಡೇಕೇರ್‌ನಲ್ಲಿ ಕಳೆಯುವ ಸಮಯ ಸಾಮಾನ್ಯವಾಗಿ ಕಡಿಮೆ ಇರುತ್ತದೆ. “ಡೇಕೇರ್‌ಗೆ ದಾಖಲಾಗುವ ಮುನ್ನ ಮಗುವು ಮೂಲಭೂತ ಸಂವಹನವನ್ನು ತಿಳಿದಿರಬೇಕು” ಎಂದು ಗುಪ್ತಾ ಅವರು ಹೇಳುತ್ತಾರೆ.

ಲಾರಾ ಅವಿಸ್ (43) ಎಂಬ UKಯ ನಾರ್ವಿಚ್‌ನ ಗೃಹಿಣಿಯೊಬ್ಬರು, 2021ರಲ್ಲಿ ತಮ್ಮ 2 ವರ್ಷದ ಮಗನನ್ನು ಡೇಕೇರ್‌ಗೆ ಸೇರಿಸಿದರು. ಆ ದಿನಗಳನ್ನು ನೆನಪಿಸಿಕೊಳ್ಳುವ ಅವರು, “ನನ್ನ ಮಗ ಕ್ರಮೇಣ ಡೇಕೇರ್‌ಗೆ ಹೊಂದಿಕೊಂಡ. ಆರಂಭದಲ್ಲಿ ಒಂದು ಅಥವಾ ಎರಡು ಗಂಟೆ ಇರುತ್ತಿದ್ದವ, ನಿಧಾನಕ್ಕೆ ಇಡೀ ದಿನ ಅಲ್ಲಿ ಕಳೆಯಲು ಅಭ್ಯಾಸವಾಯಿತು” ಎಂದು ಹೇಳುತ್ತಾರೆ.

“ಮಗುವನ್ನು ಡೇಕೇರ್‌ಗೆ ಸೇರಿಸುವ ಮೊದಲೇ ಒಂದು ಬಾರಿ ಆ ಸ್ಥಳಕ್ಕೆ ಕರೆದೊಯ್ಯುವುದರಿಂದ ಮಗುವು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ನೆರವಾಗುತ್ತದೆ ಮತ್ತು ಈ ರೀತಿಯಾದ ಪೂರ್ವಸಿದ್ಧತೆಯು ಮಗುವಿಗೆ ಅಪರಿಚಿತ ಸ್ಥಳದಲ್ಲಿ ಉಂಟಾಗುವ ಆಘಾತವನ್ನು ತಪ್ಪಿಸಬಹುದು. ಪೋಷಕರನ್ನು ಬಿಟ್ಟು ಇರಬೇಕಾದ ಅನಿವಾರ್ಯತೆಯನ್ನು ನಿಧಾನವಾಗಿ ಮಗುವಿನ ಮನಸ್ಸಿಗೆ ತರಬೇಕು” ಎಂದು ಗೋವಾದ ಕ್ಯಾನಕೋನದ ಸ್ತ್ರೀರೋಗತಜ್ಞರು, ಮಕ್ಕಳ ಮಾನಸಿಕ ತಜ್ಞರು ಹಾಗೂ ಹೆಲ್ತ್ ಆಂಡ್ ಇಮೋಷನ್‌ನ ಸಂಸ್ಥಾಪಕರಾದ ಡಾ ರಾಜಲಕ್ಷ್ಮಿಯವರು ಹೇಳುತ್ತಾರೆ.

ಡೇಕೇರ್‌ನಲ್ಲಿ ಶಿಶು: ಬದಲಾವಣೆ ಸುಲಭವಲ್ಲ

ಡೇಕೇರ್‌ಗೆ ಹೊಂದಿಕೊಳ್ಳುವುದು ಮಗುವಿಗೆ ಸವಾಲಾಗಬಹುದು, ಕ್ರಮೇಣ ಅವುಗಳು ಹೊಸ ಪರಿಸರಕ್ಕೆ ಒಗ್ಗಿಕೊಳ್ಳುತ್ತವೆ. “ಬದಲಾದ ಪರಿಸರಕ್ಕೆ ಮಗುವಿನ ಸನ್ನದ್ಧತೆ ಮತ್ತು ನಿರಾತಂಕವಾಗಿರುವಿಕೆ ಇಲ್ಲಿ ಪ್ರಮುಖವಾಗುತ್ತದೆ. ಮೊದಮೊದಲಿಗೆ ನನ್ನ ಮಗ, ನಾನೂ ಆತನೊಂದಿಗೆ ಇರಬೇಕೆಂದು ಒತ್ತಾಯಿಸುತ್ತಿದ್ದ. ಆದರೆ, ಕ್ರಮೇಣ ಆತ ಹೊಸ ಅಭ್ಯಾಸಗಳಿಗೆ ಹೊಂದಿಕೊಳ್ಳುತ್ತಾನೆ, ಚಿಂತಿಸಬೇಡಿ ಎಂದು ಡೇಕೇರ್ ಸೆಂಟರ್‌ನವರು ನನಗೆ ಭರವಸೆ ನೀಡಿದರು”ಎಂದು ಅವಿಸ್ ಅವರು ಹ್ಯಾಪಿಯೆಸ್ಟ್ ಹೆಲ್ತ್‌ಗೆ ಹೇಳಿದರು.

ಮಗುವು ಮನೆಯಿಂದ ಚೈಲ್ಡ್‌ ಕೇರ್‌ಪರಿಸರಕ್ಕೆ ಹೊಂದಿಕೊಳ್ಳುವಾಗ ಹೆಚ್ಚಿನ ಮಟ್ಟದ ಕಾರಿಸ್ಟೋಲ್ (ಒತ್ತಡ ಹಾರ್ಮೋನ್‌) ಉತ್ಪತ್ತಿಯಾಗುತ್ತದೆ. ತಮ್ಮ ಪೋಷಕರಿಂದ ಬೇರ್ಪಡುವಾಗ ಈ ಒತ್ತಡವು ಅತ್ಯಂತ ಹೆಚ್ಚಿರುತ್ತದೆ ಮತ್ತು ಸಂಜೆಯಾಗುತ್ತಿದ್ದಂತೆ ಮತ್ತೆ ಅವರು ಪೋಷಕರನ್ನು ಸೇರುವ ಸಮಯ ಬಂದಾಗ ಇದು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ನಾರ್ವೆಯ ಆಸ್ಲೋದ ಸಂಶೋಧಕರು 2021ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಪ್ರಿಯಾ ಅವರು ಸುಮಾರು ಒಂದು ವಾರದ ತನಕ ತಮ್ಮ ಮಗಳನ್ನು ಬಿಟ್ಟು ಬರುವಾಗ ಅವಳು ಸ್ವಲ್ಪ ಹೊತ್ತು ಅಳುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. “ಆದರೆ, ಹದಿನೈದು ದಿನಗಳ ಬಳಿಕ ಆಕೆ ಖುಷಿಯಿಂದ ಬೀಳ್ಕೊಡುತ್ತಿದ್ದಳು. ಇದು ನನಗೆ ನೆಮ್ಮದಿ ನೀಡುತ್ತಿತ್ತು” ಎಂದು ಅವರು ಹೇಳುತ್ತಾರೆ.

ಇದರೊಂದಿಗೆ, ಮಕ್ಕಳನ್ನು ಡೇಕೇರ್‌ಗೆ ಕಳುಹಿಸುವುದು ಪೋಷಕರಿಗೂ ಭಾವನಾತ್ಮಕವಾಗಿ ಕಠಿಣವಾದ ಕೆಲಸ. ಲಾರಾ ಅವರು ತಮ್ಮ ಮಗ ಸ್ವಾವಲಂಬಿಯಾಗಬೇಕು ಹಾಗೂ ಗೆಳೆಯರೊಂದಿಗೆ ಬೆರೆತು ಶಾಲೆಯ ಪರಿಸರಕ್ಕೆ ಹೊಂದಿಕೊಳ್ಳಬೇಕು ಮತ್ತು ಡೇಕೇರ್‌ನಲ್ಲಿ ಕೆಲವು ಸಾಮಾಜಿಕ ಕೌಶಲ್ಯಗಳನ್ನು (ಹಂಚುವುದು, ಕಾಳಜಿವಹಿಸುವುದು ಇತ್ಯಾದಿ) ಕಲಿಯಬೇಕು ಎಂದು ಬಯಸಿದ್ದರು. “ಆದರೆ ಅವನು ಬಾಗಿಲ ಬಳಿ ಬಂದು ಅಳುವಾಗ ಬೇಸರಗೊಳ್ಳದೇ ಇರಲು ಕಷ್ಟವಾಗುತ್ತಿತ್ತು. ನನಗೆ ದಿನವಿಡೀ

ಮೆಸೇಜ್‌ಗಳು ಮತ್ತು ಫೋಟೋಗಳನ್ನು ಕಳುಹಿಸುವ ಭರವಸೆ ನೀಡುತ್ತಾ ಡೇಕೇರ್ ಸಿಬ್ಬಂದಿ ನನ್ನನ್ನು ಕಳುಹಿಸುತ್ತಿದ್ದರು. ಇದರಿಂದ ನನಗೆ ತುಂಬಾ ಸಹಾಯವಾಯಿತು” ಎಂದು ಹೇಳುತ್ತಾರೆ.

ಮಗುವನ್ನು ಡೇಕೇರ್‌ಗೆ ಸಿದ್ಧಗೊಳಿಸುವುದು ಹೇಗೆ?

“ಪೋಷಕರು ತಮ್ಮ ಮಕ್ಕಳಿಗೆ, ಸರಳವಾದ ವಾಕ್ಯಗಳನ್ನು ಮಾತನಾಡಲು, ಸ್ವತಃ ಆಹಾರ ಸೇವಿಸಲು ಮತ್ತು ಟಾಯ್ಲೆಟ್‌ಗೆ ಹೋಗಲು ಕಲಿಸಬೇಕು” ಎಂದು ಗುಪ್ತೆ ಹೇಳುತ್ತಾರೆ. ಪ್ರಿಯಾ ಅವರಿಗೆ, ತಮ್ಮ ಮಗಳು ಮಾತೃಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾಳೆ, ಡೇಕೇರ್‌ನಲ್ಲಿ ಮಾತನಾಡುವ ಹೊಸ ಭಾಷೆ ಅರ್ಥವಾಗಬಹುದೇ ಎಂಬ ಚಿಂತೆಯಿತ್ತು. “ಆಶ್ಚರ್ಯವೆಂದರೆ ನನ್ನ ಮಗಳು ಹೊಸ ಹೊಸ ಇಂಗ್ಲಿಷ್ ಮತ್ತು ಕನ್ನಡ ಪದಗಳನ್ನು ಕಲಿತುಕೊಂಡು ಬರುತ್ತಿದ್ದಳು” ಎಂದು ಅವರು ಹೇಳುತ್ತಾರೆ.

ಬಹುತೇಕ ಪೋಷಕರು ಸ್ವಚ್ಛತೆ ಮತ್ತು ಸಂಪನ್ಮೂಲಗಳ ಕುರಿತಾಗಿ ಚಿಂತಿಸುತ್ತಾರೆ. “ನಾನು ಅವಳಿಗೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಟಿಫಿನ್ ಬಾಕ್ಸ್‌ನಿಂದ ಊಟ ಮಾಡಿಕೊಳ್ಳಲು ಇತ್ಯಾದಿಗಳನ್ನು ಒಂದು ತಿಂಗಳ ಮೊದಲೇ ಕಲಿಸಿದ್ದೆ. ಆದರೆ ಅವಳು ತಿನ್ನುವ ವಿಷಯದಲ್ಲಿ ತುಂಬಾ ಚ್ಯೂಸಿ ಆಗಿರುವುದರಿಂದ ಅವಳ ತಿನ್ನುವ ಕ್ರಮವನ್ನು ಡೇಕೇರ್ ಸಿಬ್ಬಂದಿ ಹತ್ತಿರದಿಂದ ಗಮನಿಸಬೇಕೆಂದು ನಾನು ಬಯಸುತ್ತಿದ್ದೆ” ಎಂದು ಪ್ರಿಯಾ ಹೇಳುತ್ತಾರೆ.

ನಿಮ್ಮ ಮಕ್ಕಳಿಗೆ ತಮ್ಮ ವಸ್ತುಗಳಾದ ಬ್ಯಾಗು, ನೀರಿನ ಬಾಟಲಿ ಮತ್ತು ಟಿಫಿನ್ ಬಾಕ್ಸ್ ಅನ್ನು ಜೋಪಾನವಾಗಿಟ್ಟುಕೊಳ್ಳಲು ಕಲಿಸಿ. ಇದು ಅವರಲ್ಲಿ ಸ್ವಾಯತ್ತತೆ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಗುಪ್ತೆ ಹೇಳುತ್ತಾರೆ.

ಮಗುವಿಗೆ ಮನೆಯಂತೆ ಮತ್ತು ಸುರಕ್ಷಿತ ಭಾವ ಮೂಡಬೇಕು

ಮಗುವು ಹೊಸ ಪರಿಸರವನ್ನು ಸ್ವಾಗತಿಸುವಂತೆ ಇರಬೇಕು. ಡೇಕೇರ್ ಅನೌಪಚಾರಿಕವಾಗಿರಬೇಕು, ಹೇಗೆಂದರೆ, ಮಗುವು ಇತರ ಮಕ್ಕಳೊಡನೆ ಆಡಲು ತನ್ನ ಸ್ನೇಹಿತರ ಮನೆಗೆ ಭೇಟಿ ನೀಡಿದಂತೆ ಅನ್ನಿಸಬೇಕು. ಅಷ್ಟೇ ಅಲ್ಲ, ಡೇಕೇರ್ ಸಿಬ್ಬಂದಿಯು ಪ್ರತಿ ಮಗುವಿನಲ್ಲಿನ ನಿರ್ದಿಷ್ಟ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವುದು ತುಂಬಾ ಮುಖ್ಯ ಎಂದು ಬನವಾಸಿ ಅವರು ಹೇಳುತ್ತಾರೆ.

“ಪೋಷಕರು ತಮ್ಮ ಮಕ್ಕಳ ಉಡುಪು ಹಾಗೂ ಆಹಾರದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಈ ವಯಸ್ಸಿಲ್ಲಿ ಮಕ್ಕಳ ಕುತೂಹಲವು ತುಂಬಾ ಹೆಚ್ಚಿರುವುದರಿಂದ, ಸುರಕ್ಷತೆಯ ನಿಟ್ಟಿನಲ್ಲಿ ಅವರಿಗೆ ಆರಾಮದಾಯಕ ಉಡುಪುಗಳು (ಪ್ಯಾಂಟು, ಚಡ್ಡಿ ಅಥವಾ ಟೀ-ಶರ್ಟ್‌ಮುಂತಾದವು) ಮತ್ತು ಕನಿಷ್ಠ ಆಭರಣಗಳನ್ನು ತೊಡಿಸಬೇಕು. ಇದರೊಂದಿಗೆ ಮಕ್ಕಳ ರೋಗನಿರೋಧಕತೆಯನ್ನು ಹೆಚ್ಚಿಸಲು ಮತ್ತು ಕರುಳಿನ ಸೋಂಕನ್ನು ತಡೆಗಟ್ಟಲು, ಪೋಷಕರು ಆರೋಗ್ಯಕರ, ಹೊಸತಾಗಿ ತಯಾರಿಸಿದ ಆಹಾರದೊಂದಿಗೆ ತಮ್ಮ ಮಕ್ಕಳ ಬಾಕ್ಸ್ ಅನ್ನು ತುಂಬಬೇಕು” ಎಂದು ಅವರು ಹೇಳುತ್ತಾರೆ.

ನಿಮ್ಮ ಮಗುವನ್ನು ಡೇಕೇರ್‌ಗೆ ಸೇರಿಸುವ ಮೊದಲು, ಮಗುವಿಗೆ ಸುರಕ್ಷತೆಯ ಮತ್ತು ಅಸುರಕ್ಷತೆಯ ಸ್ಪರ್ಶವನ್ನು ಕಲಿಸುವುದು, ಸೀಮಿತ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಮತ್ತು ಬೆದರಿಸುವುದನ್ನು ತಡೆಗಟ್ಟಲು ಕ್ಯಾಮರಾ ಅಳವಡಿಸಿರುವ ಡೇಕೇರ್ ಅನ್ನು ಆಯ್ಕೆ ಮಾಡುವುದು ಇತ್ಯಾದಿ ಕೆಲವೊಂದು ಅಂಶಗಳನ್ನು ಗಮನಿಸಬೇಕು ಎಂದು ಗುಪ್ತೆ ಹೇಳುತ್ತಾರೆ.

ಸಾರಾಂಶ

· ಪೋಷಕರು ತಮ್ಮ ಮಕ್ಕಳಿಗೆ ಮನೆಯ ವಾತಾವರಣವನ್ನು ನೆನಪಿಸುವಂಥ ಡೇಕೇರ್ ಅನ್ನು ಆಯ್ಕೆ ಮಾಡಬೇಕು. ಇದರೊಂದಿಗೆ ಪರಿಸರ, ಸಂಪನ್ಮೂಲಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯು ತಮ್ಮ ಮಗುವನ್ನು ನೋಡಿಕೊಳ್ಳಲು ಅರ್ಹರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

· ಪೋಷಕರು ತಮ್ಮ ಮಕ್ಕಳಿಗೆ ಮೂಲಭೂತ ವಾಕ್ಯಗಳನ್ನು ಮಾತನಾಡಲು, ತಮ್ಮಷ್ಟಕ್ಕೆ ತಿಂದುಕೊಳ್ಳಲು ಮತ್ತು ಟಾಯ್ಲೆಟ್‌ಗೆ ಹೋಗಲು ಅಭ್ಯಾಸ ಮಾಡಿಸಬೇಕು.

· ಪೋಷಕರು ತಮ್ಮ ಮಗುವಿನ ಉಡುಪು ಮತ್ತು ಆಹಾರದ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳು ಆರಾಮದಾಯಕ ಉಡುಪನ್ನು ಧರಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಅವರಿಗೆ ಆರೋಗ್ಯಕರವಾದ, ಹೊಸತಾಗಿ ತಯಾರಿಸಿದ ಆಹಾರವನ್ನು ಬಾಕ್ಸ್‌ಗೆ ಹಾಕಿ ಕಳುಹಿಸಬೇಕು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

3 + 6 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ