0

0

0

ಈ ಲೇಖನದಲ್ಲಿ

ತ್ವಚೆ ಆರೈಕೆಯ ಸರಳೋಪಾಯಗಳು, ಬ್ಯುಸಿಯಿದ್ದಾಗಲೂ ಪಾಲಿಸಬಹುದು
23

ತ್ವಚೆ ಆರೈಕೆಯ ಸರಳೋಪಾಯಗಳು, ಬ್ಯುಸಿಯಿದ್ದಾಗಲೂ ಪಾಲಿಸಬಹುದು

ಒತ್ತಡದ ಮಧ್ಯೆ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗಾಗಿ ಸರಳ ಮತ್ತು ಪರಿಣಾಮಕಾರಿ ತ್ವಚೆ ಆರೈಕೆಯ ಕುರಿತು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ

ಬೆಂಗಳೂರಿನ ಸೀಮಾ ಸಲೀಂ ಅವರಿಗೆ ತಮ್ಮ ದೈನಂದಿನ ತ್ವಚೆಯ ಆರೈಕೆಗಾಗಿ ಸಮಯವನ್ನು ಮೀಸಲಿಡುವುದು ಕಷ್ಟಕರವಾದ ಕೆಲಸವಾಗುತ್ತಿತ್ತು. ಫ್ಲಿಪ್‌ಕಾರ್ಟ್‌ ಎಂಬ ಇ-ಕಾಮರ್ಸ್ ಕಂಪನಿಯ ಹಬ್ ಮ್ಯಾನೇಜರ್ ಆಗಿರುವುದರ ಜೊತೆಗೆ ಮನೆಯಲ್ಲಿ ತಾಯಿಯಾಗಿ, ಬಿಡುವಿಲ್ಲದೆ ಎರಡೆರಡು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ 34ರ ಹರೆಯದ ಸಲೀಂ ಅವರಿಗೆ ತಮ್ಮ ಆದ್ಯತೆಯ ಪಟ್ಟಿಯಲ್ಲಿ ತ್ವಚೆಯ ಆರೈಕೆಗೆ ಸ್ಥಾನ ನೀಡಲು ಸಾಧ್ಯವಾಗುತ್ತಿರಲಿಲ್ಲ.

“ನನ್ನ ತ್ವಚೆಯ ಆರೈಕೆಯ ಬಗ್ಗೆ ನಾನು ಗಮನಹರಿಸುತ್ತಿಲ್ಲವೆಂಬುದು ಗೊತ್ತು, ಕೆಲವೊಂದು ದಿನ ಎಷ್ಟು ಬ್ಯುಸಿ ಆಗಿರುತ್ತೇನೆ ಎಂದರೆ, ನನ್ನ ತಲೆಗೂದಲನ್ನು ಸರಿಯಾಗಿ ಬಾಚುವುದಕ್ಕೂ ನನಗೆ ಸಮಯ ಸಿಗುವುದಿಲ್ಲ” ಎಂದು ಅವರು ಹೇಳಿಕೊಳ್ಳುತ್ತಾರೆ.

ಅವರ ಪರಿಸ್ಥಿತಿಯು, ಸಮಯ ಉಳಿಸಲು ಮಾರ್ಗ ಹುಡುಕುವ ಒತ್ತಡದ ಕೆಲಸಗಳಲ್ಲಿ ನಿರತರಾಗಿರುವ ಇತರ ಅನೇಕ ಮಹಿಳೆಯರಿಗಿಂತ ಭಿನ್ನವೇನಲ್ಲ.

ಸರಳ ಕ್ರಮ ಅನುಸರಿಸಿ

“ಆರೋಗ್ಯಕರ ತ್ವಚೆಗಾಗಿ ನಾವು ಅನುಸರಿಸುವ ವಿಧಾನವು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಇರಬೇಕು: ಕ್ಲೆನ್ಸ್, ಹೈಡ್ರೇಟ್, ಮಾಯಿಶ್ಚರೈಸ್ ಮತ್ತು ರಕ್ಷಣೆ, ಇದುವೇ ಅದರ ರಹಸ್ಯ” ಎಂದು ಬೆಂಗಳೂರು ಮೂಲದ ಕನ್ಸಲ್ಟಂಟ್ ಡರ್ಮೆಟಾಲಾಜಿಸ್ಟ್ ಮತ್ತು ಕಾಸ್ಮೆಟಾಲಾಜಿಸ್ಟ್ ಆಗಿರುವ ಡಾ ಶೋಭಾ ಸುದೀಪ್ ಅವರು ಹ್ಯಾಪಿಯೆಸ್ಟ್ ಹೆಲ್ತ್‌ಗೆ ಹೇಳುತ್ತಾರೆ.

ಡೇಟಾ ಸೈನ್ಸ್ ವಿದ್ಯಾರ್ಥಿನಿಯಾದ ಬೆಂಗಳೂರಿನ 24ರ ಹರೆಯದ ಕೋಮಲವಲ್ಲಿಯವರು ಕೂಡಾ ತ್ವಚೆ ಆರೈಕೆಗಾಗಿ ನಾವು ಅನುಸರಿಸುವ ವಿಧಾನ ಸರಳವಾಗಿರಬೇಕು ಎಂಬುದನ್ನು ನಂಬುತ್ತಾರೆ. “ಮುಖವನ್ನು ನೀರಿನಲ್ಲಿ ತೊಳೆಯುವುದು, ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದು ಮತ್ತು ಸಾಕಷ್ಟು ನೀರು ಕುಡಿಯುವುದು, ಇವುಗಳಷ್ಟೇ ತ್ವಚೆಯ ಆರೈಕೆಗಾಗಿ ನಾನು ಅನುಸರಿಸುವ ಸರಳ ಕ್ರಮಗಳು” ಎಂದು ಅವರು ಹೇಳುತ್ತಾರೆ.

ದಿನಕ್ಕೆ ಒಂದೆರಡು ಬಾರಿ ಮುಖಕ್ಕೆ ನೀರು ಚುಮುಕಿಸುವ ಮೂಲಕ ನೀವು ಕ್ಲೆನ್ಸಿಂಗ್ ಮಾಡಿದರೂ ಸಾಕಾಗುತ್ತದೆ. ಇದು ಮುಖದಲ್ಲಿ ಅಂಟಿಕೊಂಡಿರುವ ಕೊಳೆಯನ್ನು ತೊಡೆದುಹಾಕುತ್ತದೆ. ಮೈಗೆ ಹಚ್ಚುವ ಸಾಬೂನು ಅಥವಾ ಬಾಡಿ ವಾಶ್ ಬದಲಿಗೆ ರಾತ್ರಿ ಮಲಗುವುದಕ್ಕೆ ಮುನ್ನ ಕ್ಲೆನ್ಸಿಂಗ್ ಫೇಸ್‌ವಾಶ್ ಬಳಸಿ ಮುಖ ತೊಳೆಯಿರಿ ಎಂದು ಡಾ ಸುದೀಪ್ ಸಲಹೆ ನೀಡುತ್ತದೆ.

ನಮ್ಮ ತ್ವಚೆಗೆ ಸೂಕ್ಷ್ಮಾಣುಜೀವಿಗಳು, ವಿಷಕಾರಿ ವಸ್ತುಗಳು ಮತ್ತು ಕೊಳೆ ಪ್ರತಿನಿತ್ಯ ಅಂಟಿಕೊಂಡಿರುತ್ತದೆ. ವ್ಯಕ್ತಿಯು ತನ್ನ ಚರ್ಮಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಕ್ಲೆನ್ಸರ್ ಅನ್ನು ಬಳಸಬೇಕು. ಮೊಡವೆ ಪ್ರವೃತ್ತಿಯ ತ್ವಚೆಯುಳ್ಳವರು ಸ್ಯಾಲಿಸಿಲಿಕ್ ಆಸಿಡ್ ಹೊಂದಿರುವ ಫೇಸ್‌ವಾಶ್ ಬಳಸಬೇಕು, ಹಾಗೆಯೇ, ಸೂಕ್ಷ್ಮ ತ್ವಚೆಯನ್ನು ಹೊಂದಿದವರು ಸೌಮ್ಯ ಕ್ಲೆನ್ಸರ್ ಅನ್ನು ಬಳಸಬೇಕು. ಸಾಮಾನ್ಯವಾಗಿ ದಿನಕ್ಕೆರಡು ಬಾರಿ ಕ್ಲೆನ್ಸ್ ಮಾಡಿದರೆ ಸಾಕಾಗುತ್ತದೆ; ಅತಿಯಾಗಿ ಕ್ಲೆನ್ಸ್ ಮಾಡುವುದರಿಂದ ತ್ವಚೆಯಲ್ಲಿನ ನೈಸರ್ಗಿಕ ಎಣ್ಣೆಯಂಶ ನಷ್ಟವಾಗಿ ಮುಖವು ಕಳೆಗುಂದುತ್ತದೆ.

ಎಕ್ಸ್‌ಫೋಲಿಯೇಶನ್ ಎಂಬುದು ಇನ್ನೊಂದು ಕ್ಲೆನ್ಸಿಂಗ್ ವಿಧಾನ, ಇದನ್ನು ವಾರಕ್ಕೊಮ್ಮೆ ಮಾಡಬಹುದು. ಎಕ್ಸ್‌ಫೋಲಿಯೇಶನ್ ಎಂದರೆ ತ್ವಚೆಯಲ್ಲಿನ ಸತ್ತ ಕೋಶಗಳು ಮತ್ತು ಕೊಳೆಯನ್ನು ತೆಗೆದುಹಾಕುವ ಆಳವಾದ ಸ್ವಚ್ಛಗೊಳಿಸುವ ಪ್ರಕ್ರಿಯೆಯಾಗಿದೆ. ಆದರೆ, ಇದರಲ್ಲಿ ಬಳಸಲಾದ ಪದಾರ್ಥಗಳು ವ್ಯಕ್ತಿಯ ತ್ವಚೆಗೆ ಹೊಂದುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮಾತ್ರವಲ್ಲ, ಹೈಡ್ರೋಕ್ವಿನಾನ್ ಅಥವಾ ಸ್ಟಿರಾಯ್ಡ್‌ಗಳನ್ನು ಬಳಸಿ ತಯಾರಿಸಿದವುಗಳನ್ನು ಉಪಯೋಗಿಸಬಾರದು.

ಮುಂದಿನ ಹಂತ, ಹೈಡ್ರೇಶನ್‌ನಲ್ಲಿ, ಟೋನರ್ ಅಥವಾ ಮಾಯಿಶ್ಚರೈಸರ್ ಅನ್ನು ಬಳಸಬಹುದು. ಟೋನಿಂಗ್‌ಗಿಂತಲೂ ಮಾಯಿಶ್ಚರೈಸ್ ಮಾಡುವುದು ಉತ್ತಮ. ನಿಮ್ಮ ಚರ್ಮಕ್ಕೆ ಹೊಂದುವಂತಹ ಮಾಯಿಶ್ಚರೈಸರ್ ಅನ್ನೇ ಆರಿಸಿ. ಮೊಡವೆ ಪ್ರವೃತ್ತಿಯ ತ್ವಚೆಯನ್ನು ಹೊಂದಿರವರು ದಪ್ಪನೆಯ ಮಾಯಿಶ್ಚರೈಸರ್ ಬಳಸಿದರೆ, ತ್ವಚೆಯ ರಂಧ್ರಗಳು ಮುಚ್ಚಿ ಮೊಡವೆಯು ಉಲ್ಬಣಗೊಳ್ಳಬಹುದು, ಆದ್ದರಿಂದ ಎಚ್ಚರಿಕೆಯಿಂದ ಬಳಸಿ ಎಂದು ಡಾ ಸುದೀಪ್ ಹೇಳುತ್ತಾರೆ.

ಕೊನೆಯದಾಗಿ, ಚರ್ಮದ ಆರೈಕೆ ವಿಧಾನದಲ್ಲಿ ಅತ್ಯಂತ ಮುಖ್ಯ ಹಂತವೇ ಸನ್‌ಸ್ಕ್ರೀನ್‌ನಿಂದ ತ್ವಚೆಯ ರಕ್ಷಣೆ. “ಸನ್‌ಸ್ಕ್ರೀನ್ ಅನ್ನು ಮನೆಯ ಒಳಗೆ ಮತ್ತು ಬಿಸಿಲು ಇಲ್ಲದಿರುವಾಗಲೂ ಬಳಸಬೇಕು. ಇದು ತ್ವಚೆ ಸುಕ್ಕಾಗುವುದನ್ನು ನಿಧಾನಗೊಳಿಸುತ್ತದೆ, ಮತ್ತು ಹಾನಿಕಾರಕ ಯುವಿ(ಅತಿನೇರಳೆ) ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ” ಎಂದು ಡಾ ಸುದೀಪ್ ಅವರು ಅದರ ಮಹತ್ವವನ್ನು ತಿಳಿಸುತ್ತಾರೆ.

SPF30 – SPF50ನ ಸನ್‌ಸ್ಕ್ರೀನ್ ಸಾಮಾನ್ಯವಾಗಿ ತ್ವಚೆಯನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಚರ್ಮರೋಗಗಳು ಮತ್ತು ಅವಧಿಪೂರ್ವ ವೃದ್ಧಾಪ್ಯವನ್ನು ತಡೆಯುತ್ತದೆ. ಬಿಸಿಲಿಗೆ ಒಡ್ಡಿಕೊಳ್ಳುವ ದೇಹದ ಭಾಗಗಳಾದ ಮುಖ, ಕುತ್ತಿಗೆ, ತೋಳುಗಳು ಮತ್ತು ಕಾಲುಗಳಿಗೆ ಸನ್‌ಸ್ಕ್ರೀನ್ ಅನ್ನು ಹಚ್ಚಬೇಕು.

ಇದು ಕೇವಲ ದಿನಚರಿಯಲ್ಲ

ಡಾ ಸುದೀಪ್ ಅವರು ಈ ಕೆಳಗಿನ ಸಲಹೆಗಳನ್ನು ನೀಡುತ್ತಾರೆ:

  • ಆರೋಗ್ಯಕರ ಆಹಾರ ಸೇವಿಸಿ: ತ್ವಚೆಯ ಆರೈಕೆಯಲ್ಲಿ ಇದು ಮೊದಲನೆ ಹಂತವಾಗಿದ್ದು, ಆಹಾರ ಕ್ರಮ ಸರಿಯಾಗಿಲ್ಲದಿದ್ದರೂ ಚರ್ಮದ ಸಮಸ್ಯೆಗಳು ಕಾಡಬಹುದು. ತರಕಾರಿಗಳು, ಹಣ್ಣು ಹಂಪಲುಗಳು, ಸೂಕ್ತ ಫ್ಯಾಟಿ ಆಮ್ಲಗಳು, ಆ್ಯಂಟಿಆಕ್ಸಿಡೆಂಟ್‌-ಭರಿತ ಆಹಾರ ಮತ್ತು ವಿಟಮಿನ್ ಸಿ ಅನ್ನು ಸೇವಿಸುವ ಮೂಲಕ ತ್ವಚೆಯನ್ನು ಆಂತರಿಕ ಆರೈಕೆಗೆ ಆದ್ಯತೆ ನೀಡಿ.
  • ಸಾಕಷ್ಟು ನೀರು ಕುಡಿಯಿರಿ: ತ್ವಚೆ ಮತ್ತು ಇತರ ಅಂಗಾಗಗಳ ಒಟ್ಟಾರೆ ಸುಧಾರಣೆಗೆ ಸಾಕಷ್ಟು ನೀರು ಕುಡಿಯಿರಿ.
  • ವ್ಯಾಯಾಮ: ನಿಯಮಿತ ವ್ಯಾಯಾಮವು ತ್ವಚೆಯ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ನಿಮ್ಮ ವ್ಯಾಯಾಮ ದಿನಚರಿಯಲ್ಲಿ ಮುಖದ ಯೋಗವನ್ನು ಸೇರಿಸುವುದರಿಂದ ಮುಖವು ಕಾಂತಿಯುಕ್ತ ಮತ್ತು ಆರೋಗ್ಯಕರವಾಗಿ ಕಾಣುತ್ತದೆ.
  • ರಾತ್ರಿ ಸಾಕಷ್ಟು ಪ್ರಮಾಣದ ನಿದ್ರೆ ಮಾಡುವುದರಿಂದ ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ, ಇದರಿಂದಾಗಿ ವೃದ್ಧಾಪ್ಯವು ಮುಂದೂಡಲ್ಪಟ್ಟು ತ್ವಚೆಯ ನೋಟ ಸುಧಾರಿಸುತ್ತದೆ.

ಸಾಮಾಜಿಕ ಜಾಲತಾಣ ಟ್ರೆಂಡ್‌ಗಳು

ತಮ್ಮ ಪದವಿಪೂರ್ವ ದಿನಗಳನ್ನು ನೆನಪಿಸಿಕೊಳ್ಳುವ ಕೋಮಲವಲ್ಲಿಯವರು, “ನಾನು  ಹಿಂದೆ ಮುಂದೆ ಯೋಚಿಸದೆ ಎಲ್ಲಾ ರೀತಿಯ ಮನೆಮದ್ದುಗಳನ್ನು ಮಾಡಿದೆ. ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡಲು ತರಿತರಿಯಾದ ಕಡಲೆ ಹಿಟ್ಟು ಮತ್ತು ಜಿಲ್ಯಾಟಿನ್ ಮಾಸ್ಕ್ ಅನ್ನು ಅತಿಯಾಗಿ ಬಳಸಿದೆ. ಇದು ನನ್ನ ಮೊಡವೆ ಸಮಸ್ಯೆಯನ್ನು ಉಲ್ಬಣಗೊಳಿಸಿತು” ಎಂದು ಹೇಳುತ್ತಾರೆ. ಈಗ ಅವರು ತಮ್ಮ ತ್ವಚೆಯ ಆರೈಕೆಯನ್ನು ಸರಳವಾಗಿ ಮಾಡುತ್ತಾರೆ.

ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರುವ ಅನೇಕ ತ್ವಚೆ ಆರೈಕೆ ವಿಧಾನಗಳನ್ನು ನೋಡಿಕೊಂಡು ಅದರಲ್ಲಿ ಯಾವುದೋ ಒಂದನ್ನು ಅನುಸರಿಸುವುದರಿಂದ ಆಗುವ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚು. ತ್ವಚೆ ಆರೈಕೆ ಉತ್ಪನ್ನಗಳನ್ನು ಬಳಸುವ ಮೊದಲು ಅದರಲ್ಲಿರುವ ಪದಾರ್ಥಗಳು ಸುರಕ್ಷಿತ ಮತ್ತು ಪ್ರಯೋಜನವಾಗುವಂಥದ್ದೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಚರ್ಮರೋಗತಜ್ಞರು ಹೇಳುತ್ತಾರೆ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

eight + one =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ