0

0

0

ಈ ಲೇಖನದಲ್ಲಿ

ತ್ವಚೆಯ ಆರೈಕೆಗಾಗಿ ಜೇನುತುಪ್ಪ, ಮಧುರವಾದ ನೈಸರ್ಗಿಕ ಪರಿಹಾರ
24

ತ್ವಚೆಯ ಆರೈಕೆಗಾಗಿ ಜೇನುತುಪ್ಪ, ಮಧುರವಾದ ನೈಸರ್ಗಿಕ ಪರಿಹಾರ

 ತ್ವಚೆಯ ಆರೈಕೆಗಾಗಿ ಜೇನುತುಪ್ಪದ ಬಳಕೆಗೆ ಶತಮಾನಗಳ ಇತಿಹಾಸವಿದೆ. ಜೇನುತುಪ್ಪದ ಬಳಕೆಯಿಂದ ಉಂಟಾಗುವ ಪ್ರಯೋಜನಗಳು ಮತ್ತು ಬಳಕೆಗೆ ಮೊದಲು ಯಾವ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸಬೇಕು ಎಂಬ ಕುರಿತು ತಜ್ಞರು ಹಾಗೂ ಸಂಶೋಧಕರ ಸಲಹೆಯನ್ನು ಈ ಲೇಖನವು ತಿಳಿಸುತ್ತದೆ

ಜೇನುತುಪ್ಪ ಎಷ್ಟು ಸಮಯವಾದರೂ ಕೆಡದಿರುವ ಸತ್ವಭರಿತವಾದ ಅದ್ಭುತವಾದ ಆಹಾರವಾಗಿದೆ. “ಇದರಲ್ಲಿರುವ ಅಧಿಕ ಸಕ್ಕರೆಯ ಅಂಶ ಮತ್ತು ಕಡಿಮೆ ತೇವಾಂಶ ಮಟ್ಟವು ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣು ಜೀವಿಗಳು ಇದನ್ನು ಸುಲಭವಾಗಿ ಹಾಳುಗೆಡಹದಂತೆ ತಡೆಯುತ್ತದೆ” ಎಂದು ಸಿನ್ಸಿನಾಟಿ ವಿಶ್ವವಿದ್ಯಾಲದಲ್ಲಿ ಕಾಸ್ಮೆಟಿಕ್ ಕೆಮಿಸ್ಟ್ ಮತ್ತು ಪ್ರೊಫೆಸರ್ ಆಗಿರುವ ಕೆಲ್ಲಿ ಡೋಬೋಸ್ ಅವರು ಹೇಳುತ್ತಾರೆ.

ಅನೇಕ ಪ್ರಯೋಜನಗಳ ಜೊತೆಗೆ ಇದರಲ್ಲಿರುವ ಔಷಧೀಯ ಗುಣಗಳು ಜೇನುತುಪ್ಪವನ್ನು ಹೆಚ್ಚು ಬೇಡಿಕೆಯುಳ್ಳ ಪದಾರ್ಥವನ್ನಾಗಿ ಮಾಡಿದೆ. ಗಂಟಲು ನೋವಿನಿಂದ ಹಿಡಿದು ಗಾಯಗಳವರೆಗೂ ಅನೇಕ ಕಾಯಿಲೆಗಳ ಚಿಕಿತ್ಸೆಗಾಗಿ ಶತಮಾನಗಳಿಂದಲೂ ಜೇನುತುಪ್ಪವನ್ನು ಬಳಸಲಾಗುತ್ತಿದೆ.

ಆಸಕ್ತಿಕರ ವಿಷಯವೆಂದರೆ, ತ್ವಚೆಯ ಆರೈಕೆಯಲ್ಲಿ ಈಗ ಜೇನುತುಪ್ಪವು ಒಂದು ಅದ್ಭುತ ವಸ್ತುವಾಗಿ ಹೊರಹೊಮ್ಮುತ್ತಿದೆ. ಜೇನುತುಪ್ಪದಲ್ಲಿರುವ ಫೈಟೋಕೆಮಿಕಲ್ ವಸ್ತು, ಉರಿಯೂತ ನಿರೋಧಕ ಕಾರ್ಯಗಳು, ಸೂಕ್ಷ್ಮಾಣುಜೀವಿ ನಿರೋಧಕ ಗುಣಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ ಸಾಮರ್ಥ್ಯಗಳಿಂದಾಗಿ ಅದು ಅನೇಕ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಇರಾನ್‌ನ ನೈಶಬರ್ ಯೂನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ಸಂಶೋಧಕರಾಗಿರುವ ಸಯೀದ್ ಸಮರ್ಘಾಂಡಿಯನ್ ಅವರು 2017ರಲ್ಲಿ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊಂಡಿದೆ.

ಕ್ಲಿಯೋಪಾತ್ರಾಳಿಂದ ಶ್ರೀಸಾಮಾನ್ಯರ ತನಕ

ಇಟಲಿಯ ಯುನಿವರ್ಸಿಟಿ ಆಫ್ ಜೆನೋವಾದ ಪ್ರೊಫೆಸರ್ ಹಾಗೂ ಸಂಶೋಧಕರಾಗಿರುವ ಡಾ ಬ್ರುನೋ ಬರ್ಲ್ಯಾಂಡೋ ಅವರು ಜರ್ನಲ್ ಆಫ್ ಕಾಸ್ಮೆಟಿಕ್ ಡರ್ಮೆಟಾಲಜಿಯಲ್ಲಿ 2013ರಲ್ಲಿ ಪ್ರಕಟಿಸಿದ ಅಧ್ಯಯನವೊಂದರಲ್ಲಿ, ತ್ವಚೆಯ ಆರೈಕೆಯಲ್ಲಿ ಜೇನುತುಪ್ಪದ ಅತ್ಯಂತ ಪುರಾತನ ಕಾಲದ ಬಳಕೆಯ ಕುರಿತು ಅಧ್ಯಯನ ನಡೆಸಲಾಗಿತ್ತು. ಸುಮಾರು 4500 BCಯಲ್ಲಿ ಈಜಿಪ್ಟ್‌ನಲ್ಲಿ ರಾಜವಂಶದ ಆಳ್ವಿಕೆಗೂ ಮುನ್ನ ಅಲೆಮಾರಿ ಬುಡಕಟ್ಟು ಜನಾಂಗದವರು ಜೇನುತುಪ್ಪವನ್ನು ಕಣ್ಣಿನ ಸೌಂದರ್ಯವರ್ಧಕವಾಗಿ ಬಳಸುತ್ತಿದ್ದರು ಎಂಬುದನ್ನು ಪುರಾತತ್ವ ಶಾಸ್ತ್ರದ ಪುರಾವೆಗಳು ತೋರಿಸಿವೆ.  ಮಾತ್ರವಲ್ಲ, ಬೈಬಲ್, ಕುರಾನ್ ಮತ್ತು ತೋರಹ್‌ನಂತಹ ಸಾಂಸ್ಕೃತಿಕ ಗ್ರಂಥಗಳಲ್ಲಿಯೂ ಜೇನುತುಪ್ಪವನ್ನು ಸೌಂದರ್ಯವರ್ಧಕವಾಗಿ ಬಳಸಿರುವ ಉಲ್ಲೇಖ ಇದೆ. ಪೂರ್ವ ಏಷ್ಯಾದಲ್ಲಿ ಜಪಾನಿ ಮಹಿಳೆಯರು ಜೇನುತುಪ್ಪದ ದೈನಂದಿನ ಬಳಕೆಯಿಂದ ತಮ್ಮ ಕೈಗಳು ಸುಕ್ಕಾಗದಂತೆ ಕಾಪಾಡಿಕೊಳ್ಳುತ್ತಿದ್ದರು.

ಚರ್ಮಶಾಸ್ತ್ರದಲ್ಲಿ ಜೇನುತುಪ್ಪದ ಗುಣಲಕ್ಷಣ

ಜೇನುತುಪ್ಪದ ಸೂಕ್ಷ್ಮಾಣುನಿರೋಧಕ ಗುಣಲಕ್ಷಣ:

“ಜೇನುತುಪ್ಪದ ಕಿಣ್ವಕ ಗ್ಲೂಕೋಸ್ ಆಕ್ಸಿಡೇಶನ್ ಕ್ರಿಯೆಯಿಂದಾಗಿ ಅದು ಸೂಕ್ಷ್ಮಾಣುನಿರೋಧಕ ಗುಣಲಕ್ಷಣವನ್ನು ಹೊಂದಿದೆ. ಇದು ಅನೇಕ ವಿಧಗಳ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ರಾಜಸ್ಥಾನದ ಸರ್ದಾರ್ ಪಟೇಲ್ ವೈದ್ಯಕೀಯ ಕಾಲೇಜಿನ ಡ್ಯುಯಲ್ ಬೋರ್ಡ್-ಪ್ರಮಾಣೀಕೃತ ಚರ್ಮರೋಗ ತಜ್ಞರು ಮತ್ತು ಹಿರಿಯ ರೆಸಿಡೆಂಟ್ ಆಗಿರುವ ಡಾ ಅಲ್ಪನಾ ಮೊಹ್ತಾ ಹೇಳುತ್ತಾರೆ. “ಮೊಡವೆಯನ್ನು ಉಂಟುಮಾಡುವ ಚರ್ಮದ ಬ್ಯಾಕ್ಟೀರಿಯಾದ ಪ್ರಮಾಣವನ್ನು ತಗ್ಗಿಸುವಲ್ಲಿ ಇದು ನೆರವಾಗುತ್ತದೆ” ಎಂಬುದು ಚೆನ್ನೈಯ ಕ್ಯೂರ್‌ಸ್ಕಿನ್‌ನ ಸಹಸಂಸ್ಥಾಪಕರು ಮತ್ತು ಸಿಇಒ ಆಗಿರುವ ಗುಣ ಕಾಕುಲಾಪತಿ ಅವರ ಅಭಿಪ್ರಾಯ.

“ಮನುಕಾ ಜೇನುತುಪ್ಪವು ಅತ್ಯಂತ ಹೆಚ್ಚಿನ ಮಟ್ಟದ ಪೆರಾಕ್ಸೈಡ್-ರಹಿತ ಚಟುವಟಿಕೆಯನ್ನು ಹೊಂದಿದ್ದು, ಆ ಕಾರಣದಿಂದ ಅದರ ಸೂಕ್ಷ್ಮಾಣುನಿರೋಧಕ ಚಟುವಟಿಕೆ ಹೆಚ್ಚಾಗಿರುತ್ತದೆ” ಎನ್ನುತ್ತಾರೆ ಮೊಹ್ತಾ.

ಜೇನುತುಪ್ಪದ ಆ್ಯಂಟಿಆಕ್ಸಿಡೆಂಟ್ ಗುಣಲಕ್ಷಣ:

ಜೇನುತುಪ್ಪವು ಫಿನಾಲಿಕ್ ಸಂಯುಕ್ತಗಳಿಂದ(ಕೆಲವೊಂದು ಸಸ್ಯಗಳ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವಂತಹ ನೈಸರ್ಗಿಕ ರಾಸಾಯನಿಕಗಳು) ಸಮೃದ್ಧವಾಗಿದ್ದು, ಇವುಗಳಿಂದಾಗಿ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಜೇನುತುಪ್ಪವನ್ನು ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿ ಮಾಡಿದೆ. ಆ್ಯಂಟಿಆಕ್ಸಿಡೆಂಟ್‌ಗಳು ಅಕಾಲಿಕ ವೃದ್ಧಾಪ್ಯ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಲ್ಲ ಪರಿಸರದಲ್ಲಿರುವ ಹಾನಿಕಾರಕ, ಮುಕ್ತ ರ‍್ಯಾಡಿಕಲ್‌ಗಳಿಂದ ತ್ವಚೆಗೆ ರಕ್ಷಣೆ ನೀಡುತ್ತದೆ” ಎನ್ನುತ್ತಾರೆ ಡಾ ಮೊಹ್ತಾ.

ಜೇನುತುಪ್ಪದ ಉರಿಯೂತ ನಿರೋಧಕ ಗುಣಲಕ್ಷಣಗಳು:

 ಒಮೊಟಾಯೋ ಓ ಎರೆಜುವಾ ಅವರು 2014 ರಲ್ಲಿ ನಡೆಸಿದ ಅಧ್ಯಯನವು ಜೇನುತುಪ್ಪದ ಉರಿಯೂತ ನಿರೋಧಕ ಸಾಮರ್ಥ್ಯಕ್ಕೆ ಸಾಕಷ್ಟು ಪುರಾವೆಯನ್ನು ನೀಡುತ್ತದೆ. ಹಾಗಾಗಿ ಜೇನುತುಪ್ಪವನ್ನು ಸ್ತನ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್, ಕೋಲೋರೆಕ್ಟಲ್ ಕ್ಯಾನ್ಸರ್ ಕೋಶಗಳು ಮುಂತಾದ ಅನೇಕ ವಿಧಗಳ ಕ್ಯಾನ್ಸರ್‌ಗೆ ಸಮರ್ಥ ಚಿಕಿತ್ಸಾ ಆಯ್ಕೆಯಾಗಿ ಪರಿಗಣಿಸಲಾಗಿದೆ.  “ಜೇನುತುಪ್ಪವು ಕ್ಯಾನ್ಸರ್ ಕೋಶಗಳಲ್ಲಿ ಅಪೋಪ್ಟೋಸಿಸ್ (ಅನಪೇಕ್ಷಿತ ಜೀವಕೋಶಗಳನ್ನು ತೆಗೆದು ಹಾಕುವ ಪ್ರಕ್ರಿಯೆ) ಅನ್ನು ಪ್ರೇರೇಪಿಸುತ್ತದೆ, ಇದು ಆಕ್ಸಿಡೇಟಿವ್ ಒತ್ತಡಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳಿಗೆ ಸಮರ್ಥ ಚಿಕಿತ್ಸಾ ಆಯ್ಕೆಯನ್ನಾಗಿ ಮಾಡುತ್ತದೆ” ಎಂಬುದು ಡಾ ಮೊಹ್ತಾ ಅವರ ಅಭಿಪ್ರಾಯ.

ತ್ವಚೆಗೆ ಪ್ರಯೋಜನಕಾರಿಯಾದ ಜೇನುತುಪ್ಪದ ಗುಣಲಕ್ಷಣಗಳು

ಡಾ ಮೊಹ್ತಾ ಮತ್ತು ಕಾಕುಲಾಪತಿಯವರು ಜೇನುತುಪ್ಪದ ಅನೇಕ ಪ್ರಯೋಜನಗಳು ಮತ್ತು ಬಳಕೆಗಳನ್ನು ಪಟ್ಟಿ ಮಾಡುತ್ತಾರೆ:

ಜೇನುತುಪ್ಪವು ಸುಟ್ಟಗಾಯಗಳನ್ನು ಗುಣಪಡಿಸಲು ಪರಿಣಾಮಕಾರಿ ಔಷಧವಾಗಿದೆ. ಇದು ಸೋಂಕುಗಳನ್ನು ತಡೆಗಟ್ಟುತ್ತದೆ ಮತ್ತು ಹೊಸ ಅಂಗಾಶದ ಬೆಳವಣಿಗೆಯನ್ನು ಉತ್ತೇಜಿಸಿ, ಆ ಮೂಲಕ ಚೇತರಿಕೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ತನ್ನ ಮಾಯಿಶ್ಚರೈಸಿಂಗ್ ಗುಣಲಕ್ಷಣಗಳಿಂದಾಗಿ ಜೇನುತುಪ್ಪವು ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ ಮತ್ತು ತ್ವಚೆಯಲ್ಲಿನ ಕಿರಿಕಿರಿ ಮತ್ತು ಶುಷ್ಕತೆಯನ್ನು ತಡೆಗಟ್ಟುತ್ತದೆ.

ಮೊಡವೆ ಕಲೆಗಳ ಮೇಲೆ ಜೇನುತುಪ್ಪ ಹಚ್ಚುವುದರಿಂದ ತುರಿಕೆ ಮತ್ತು ಕೆಂಪಾಗುವಿಕೆ ಕಡಿಮೆಯಾಗುತ್ತದೆ. ಅಲ್ಲದೇ ಇದು ಕಲೆಗಳನ್ನು ನಿವಾರಿಸಿ ಹೊಸ ಚರ್ಮ ಮೂಡಲು ಉತ್ತೇಜಿಸುತ್ತದೆ.

ಜೇನುತುಪ್ಪವು ಸೌಮ್ಯ ಎಕ್ಸ್‌ಫೋಲಿಯೆಂಟ್‌ನಂತೆ ವರ್ತಿಸುತ್ತದೆ, ಅಂದರೆ ಸತ್ತ ಚರ್ಮದ ಕೋಶವನ್ನು ತೆಗೆದು ಹಾಕಿ, ಚರ್ಮದಲ್ಲಿ ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಡವೆ ಮತ್ತು ಚರ್ಮದ ಇತರ ಸಮಸ್ಯೆಗಳಿಗೆ ಜೇನುತುಪ್ಪವು ನೈಸರ್ಗಿಕ ಪರಿಹಾರವಾಗಬಲ್ಲದೇ?

ಡಾ ಮೊಹ್ತಾ, ಕಾಕುಲಾಪತಿ ಮತ್ತು ಡೋಬೋಸ್ ಅವರು ಹೇಳುವ ಪ್ರಕಾರ, ಮೊಡವೆ ಮತ್ತು ಚರ್ಮದ ಇತರ ಸಮಸ್ಯೆಗಳಿಗೆ ಜೇನುತುಪ್ಪವು ಪರಿಹಾರವಾಗಬಲ್ಲದು. ಆದರೆ, ಪರಿಸ್ಥಿತಿಯ ತೀವ್ರತೆಯನ್ನು ಪರಿಗಣಿಸಬೇಕು ಮತ್ತು ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳುತ್ತಾರೆ. ಜೇನುತುಪ್ಪವನ್ನು ಎಲ್ಲಾ ನೈಸರ್ಗಿಕ ತ್ವಚೆ ಆರೈಕೆ ಉತ್ಪನ್ನಗಳಲ್ಲಿ ಬಳಸಲಾಗುತ್ತಿದ್ದರೂ, ಎಲ್ಲರಿಗೂ ಇದು ಪರಿಣಾಮಕಾರಿ ಎಂದು ಹೇಳಲಾಗದು. ಮೊಡವೆ ಸಮಸ್ಯೆಯು ತೀವ್ರವಾಗಿದ್ದರೆ ಮತ್ತು ಚರ್ಮದ ಇತರೆ ಸಮಸ್ಯೆಗಳಿಗೆ ಚರ್ಮಶಾಸ್ತ್ರಜ್ಞರನ್ನು ಕಾಣಬೇಕು. ಮೊಡವೆಗಳಂತಹ ಸಮಸ್ಯೆಗಳ ಚಿಕಿತ್ಸೆಯಲ್ಲಿ, ಸರಿಯಾಗಿ ಸೂತ್ರೀಕರಿಸಲಾದ ಸೌಂದರ್ಯವರ್ಧಕವನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಶಿಫಾರಸುರಹಿತ ಔಷಧಗಳಿಂದ ಫಲಿತಾಂಶ ದೊರೆಯದೇ ಹೋದಲ್ಲಿ ವೃತ್ತಿಪರರ ನೆರವು ಪಡೆಯಿರಿ.

ಬಳಕೆಗೂ ಮುನ್ನ ಈ ಅಂಶಗಳ ಬಗ್ಗೆ ಗಮನಹರಿಸಿ

ಕ್ಸಿಯಾಒಟೆಂಗ್ ಝೌ ಎಂಬ ಸಂಶೋಧಕರು 2018ರಲ್ಲಿ ನಡೆಸಿದ ಅಧ್ಯಯನದಲ್ಲಿ, ಜೇನುತುಪ್ಪವು ಜಗತ್ತಿನಲ್ಲಿ ಮೂರನೇ ಅತಿಹೆಚ್ಚು ಕೆಲಬೆರಕೆಯಾಗುವ ಆಹಾರಪದಾರ್ಥ ಎಂಬುದಾಗಿ ಉಲ್ಲೇಖಿಸಲಾಗಿದೆ. ಕಿರಾಣಿ ಅಂಗಡಿಗಳಿಂದ ಖರೀದಿಸುವ ಜೇನುತುಪ್ಪಕ್ಕೆ ಜೋಳದ ಸಿರಪ್ ಅಥವಾ ಸಕ್ಕರೆಯನ್ನು ಸೇರಿಸಿ ಕೆಲಬೆರಕೆ ಮಾಡಬಹುದು. ಸಮಯಕಳೆದಂತೆ ಇದು ಹರಳುಗಟ್ಟಿ, ಇದರ ಗುಣವು ಬದಲಾಗಬಹುದು. ಕಚ್ಚಾ ಹಾಗೂ ಸಂಸ್ಕರಿಸದ ಜೇನುತುಪ್ಪವು ಜೇನುಹುಳದ ಭಾಗಗಳು ಮತ್ತು ಮೋಲ್ಡ್ ತುಣುಕುಗಳಂತಹ ಬೇಡದ ಪದಾರ್ಥಗಳನ್ನು ಒಳಗೊಂಡಿರಬಹುದು ಎಂದು ಡೋಬೋಸ್ ಅವರು ಎಚ್ಚರಿಸುತ್ತಾರೆ. ಟಾಪಿಕಲ್ ಬಳಕೆಗಾಗಿ (ದೇಹದ ಹೊರಮೈ ಮತ್ತು ಬಾಯಿಯ ಒಳಗೆ ಹಚ್ಚಲು) ಉತ್ಕೃಷ್ಟ ಗುಣಮಟ್ಟದ, ಪರಿಶುದ್ಧ ಹಾಗೂ ಕಚ್ಚಾ ಜೇನುತುಪ್ಪವನ್ನೇ ಬಳಸಬೇಕು. ಸಂಭಾವ್ಯ ತುರಿಕೆ ಹಾಗೂ ಅಲರ್ಜಿಯನ್ನು ತಡೆಗಟ್ಟಲು ಕೃತಕ ಪದಾರ್ಥಗಳು ಮತ್ತು ಸಂರಕ್ಷಕಗಳಿಂದ ಮುಕ್ತವಾದ ಶುದ್ಧ ಜೇನುತುಪವನ್ನು ಬಳಸಬೇಕು ಎಂದು ಡಾ ಮೊಹ್ತಾ ಮತ್ತು ಕಾಕುಲಪತಿಯವರು ಹೇಳುತ್ತಾರೆ.

ಫೇಸ್ ಮಾಸ್ಕ್ ಆಗಿ ಬಳಸುವುದಕ್ಕೆ ಮೊದಲು ಸಣ್ಣ ಪ್ರಮಾಣದ ಜೇನುತುಪ್ಪವನ್ನು ಇತರೆಡೆಗೆ ಹಚ್ಚಿ ಯಾವುದೇ ಅಡ್ಡಪರಿಣಾಮವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಗರಿಷ್ಠ ಪ್ರಯೋಜನ ಪಡೆಯಲು ಮೂಲವನ್ನು ಪರಿಗಣಿಸಿ ಮತ್ತು ಕಚ್ಚಾ ಹಾಗೂ ಸಾವಯವ ಜೇನುತುಪ್ಪವನ್ನೇ ಬಳಸಿ.

ವಿವಿಧ ವಿಧದ ಜೇನುತುಪ್ಪವು ಬೇರೆ ಬೇರೆ ಗುಣಲಕ್ಷಣ ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ.

ಇದರ ಪ್ರಯೋಜನಕಾರಿ ಗುಣಲಕ್ಷಣವನ್ನು ಕಾಯ್ದುಕೊಳ್ಳಲು ಸೂರ್ಯನ ಬಿಸಿಲು ತಾಗದಂತೆ ಕೋಣೆಯ ತಾಪಮಾನದಲ್ಲಿ ಶೇಖರಿಸಿಡಿ.

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

17 − seven =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ