ನಿದ್ರೆಯ ಬಗ್ಗೆ ಜಗತ್ತಿನಾದ್ಯಂತ ತಪ್ಪು ಕಲ್ಪನೆಗಳಿದ್ದು, ಇವುಗಳ ಬಗೆಗಿನ ನಿರ್ಲಕ್ಷ್ಯದ ಕುರಿತು ಜಾಗೃತಿ ಮೂಡಿಸಲು ಈ ತಪ್ಪುಕಲ್ಪನೆಗಳನ್ನು ಪರಿಹರಿಸುವುದು ಮುಖ್ಯ. ಹ್ಯಾಪಿಯೆಸ್ಟ್ ಹೆಲ್ತ್ ಇತ್ತೀಚಿಗೆ ಆಯೋಜಿಸಿದ ಎಡ್ಜ್ ಆಫ್ ನ್ಯೂಟ್ರಿಷನ್ ಸಮ್ಮಿಟ್ 2023 ರಲ್ಲಿ ನಿದ್ರೆಯ ಬಗೆಗಿನ ತಪ್ಪುಕಲ್ಪನೆಗಳು ಮತ್ತು ವಾಸ್ತವಾಂಶಗಳ ಬಗ್ಗೆ ತಿಳಿಸಲು ಮತ್ತು ತಪ್ಪುಕಲ್ಪನೆಗಳನ್ನು ತೊಡೆದುಹಾಕಲು ಮತ್ತು ವಾಸ್ತವಾಂಶವನ್ನು ತಿಳಿಸಲು ನಾವು ಕೆಲವು ತಜ್ಞರಲ್ಲಿ ಕೇಳಿಕೊಂಡೆವು.
ನಿದ್ರೆಯ ಬಗೆಗಿನ ಎಂಟು ತಪ್ಪುಕಲ್ಪನೆಗಳು ಮತ್ತು ವಾಸ್ತವಾಂಶಗಳು
-
ತಪ್ಪು ಕಲ್ಪನೆ: ಸ್ನೂಝ್ ಬಟನ್ ಒತ್ತುವುದರಿಂದ ನಿಮ್ಮ ನಿದ್ರೆಯನ್ನು ಹೆಚ್ಚಿಸಹುದು.
ವಾಸ್ತವ: ಇದರಿಂದ ಯಾವುದೇ ಪ್ರಯೋಜನವಿಲ್ಲ
ನಿಗದಿಪಡಿಸಿದ ಅಲರಾಂ ಸಮಯವನ್ನೇ ಅನುಸರಿಸುವುದು ಮತ್ತು ಅದೇ ಹೊತ್ತಿಗೆ ಏಳುವುದು ಸರಿಯಾದ ಅಭ್ಯಾಸವೇ ಹೊರತು ಸ್ನೂಝ್ ಬಟನ್ ಒತ್ತುವುದರಿಂದ ಹೆಚ್ಚು ನಿದ್ರೆ ಮಾಡಲಾಗದು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವಿಭಾಗದ ಮುಖ್ಯಸ್ಥರು ಮತ್ತು ಸಮಮಾಲೋಚಕರು, ಶ್ವಾಸಕೋಶ ತಜ್ಞರು, ಸ್ಲೀಪ್ ಮೆಡಿಸಿನ್ ಮತ್ತು ಶ್ವಾಸಕೋಶ ಕಸಿ ತಜ್ಞರಾದ ಡಾ ಸತ್ಯನಾರಾಯಣ್ ಮೈಸೂರು ಅವರು ಹೇಳುತ್ತಾರೆ.
“ನಾವು ಸ್ಲೀಪ್ ರೆಸ್ಟ್ರಿಕ್ಷನ್ ಥೆರಪಿಯನ್ನು ಹೊಂದಿದ್ದೇವೆ, ಇದರಲ್ಲಿ ನಾವು ನಿದ್ರಾ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಅನವಶ್ಯಕ ನಿದ್ರೆಯನ್ನು ತಡೆದಟ್ಟಲು ಹೇಳುತ್ತೇವೆ. ಯಾರಾದರೂ ನಿರ್ದಿಷ್ಟ ಸಮಯಕ್ಕೆ ಅಲರಾಂ ಅನ್ನು ಹೊಂದಿಸಿದ್ದರೆ, ಸ್ನೂಝ್ ಬಟನ್ ಒತ್ತದೇ ಆ ನಿಗದಿಪಡಿಸಿದ ಸಮಯಕ್ಕೇ ಏಳಬೇಕು” ಎಂದು ಡಾ ಸತ್ಯನಾರಾಯಣ ಹೇಳುತ್ತಾರೆ.
-
ತಪ್ಪು ಕಲ್ಪನೆ: ಮಲಗುವ ಮುನ್ನ ಹಾಲು ಕುಡಿಯಬಾರದು
ವಾಸ್ತವ: ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದು ಉತ್ತಮ ನಿದ್ರೆಗೆ ಸಹಕಾರಿ
ಅನೇಕರು ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ, ಆದರೆ ಕೆಲವರು ಇದನ್ನು ಮಾಡದಂತೆ ಸಲಹೆ ನೀಡುತ್ತಾರೆ. ಆದರೂ, ನಿದ್ರೆಯ ಬಗೆಗಿನ ವಾಸ್ತವಾಂಶವನ್ನು ತಿಳಿಸುತ್ತಾ ವೈದ್ಯರು, ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದು ಉತ್ತಮ ನಿದ್ರೆಗೆ ನೆರವಾಗುತ್ತದೆ ಎಂದು ಹೇಳುತ್ತಾರೆ.
“ಹಾಲಿನಲ್ಲಿ ಟ್ರಿಪ್ಟೋಫ್ಯಾನ್ ಎಂಬ ವಸ್ತು ಇದ್ದು, ಈ ಅಂಶವು ವ್ಯಕ್ತಿಯು ನಿದ್ರಿಸುವಂತೆ ಮಾಡುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಇದರಿಂದ ನಿದ್ರೆ ಬರುತ್ತದೆ ಎಂದೇನಲ್ಲ, ಆದರೆ ಹೆಚ್ಚಿನವರಿಗೆ ನಿದ್ರೆ ಬರುತ್ತದೆ. ಟ್ರಿಪ್ಟೋಫ್ಯಾನ್ ದೇಹದಲ್ಲಿನ ಸಿಕಾರ್ಡಿಯನ್ ಲಯವನ್ನು ನಿಯತ್ರಿಸುವ ಮೆಲಟೋನಿನ್ ಹಾರ್ಮೋನ್ ಅನ್ನು ಹೆಚ್ಚಿಸಿ ನಿದ್ರೆ ಬರಲು ಕಾರಣವಾಗುತ್ತದೆ,” ಎಂದು ಡಾ ಪ್ಯಾಡೆಗಲ್ ಅವರು ಹೇಳುತ್ತಾರೆ. ಅಲ್ಲದೇ ಅವರು ಜನರಿಗೆ ಮಲಗುವ ಮುನ್ನ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ.
-
ತಪ್ಪು ಕಲ್ಪನೆ: ನಿದ್ರೆ ಬಾರದಿದ್ದರೂ ಹಾಸಿಗೆಯಲ್ಲಿ ಕಣ್ಣು ಮುಚ್ಚಿ ಮಲಗುವುದು ಉತ್ತಮ
ವಾಸ್ತವ: ಕೇವಲ ಕಣ್ಣುಮುಚ್ಚಿ ಮಲಗುವುದರಿಂದ ನಿದ್ರೆ ಬರುವುದಿಲ್ಲ
ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ ಎಂದ ಮಾತ್ರಕ್ಕೆ ಕೇವಲ ಕಣ್ಣುಮುಚ್ಚಿ ಮಲಗುವುದರಿಂದ ನಿದ್ರೆ ಬರುವುದಿಲ್ಲ. “ನೀವು 20-30ನಿಮಿಷಗಳಿಂಗಿತಲೂ ಹೆಚ್ಚು ಸಮಯದಿಂದ ನಿದ್ರೆ ಮಾಡಲು ಪ್ರಯತ್ನಿಸಿ ಸಾಧ್ಯವಾಗುತ್ತಿಲ್ಲವೆಂದಾದರೆ, ನೀವು ಹಾಸಿಗೆಯಿಂದ ಎದ್ದು ವಿಶ್ರಾಂತಿ ಪಡೆಯಲು ಪ್ರಯತ್ನಿಸಬೇಕು,” ಎಂದು ಡಾ ಸತ್ಯನಾರಾಯಣ ಅವರು ಹೇಳುತ್ತಾರೆ.
ವ್ಯಕ್ತಿಯು ಸಂಗೀತ ಕೇಳಬಹುದು, ಏಕಾಗ್ರತೆಯನ್ನು ಹೊಂದಬಹುದು, ಮೊಬೈಲ್, ಇತರ ಗ್ಯಾಜೆಟ್‌ಗಳು ಅಥವಾ ಯಾವುದೇ ಇತರ ತೀಕ್ಷ್ಣ ಬೆಳಕಿಗೆ ಒಡ್ಡಿಕೊಳ್ಳಬಾರದು. ಮಂದ ಬೆಳಕಿನಲ್ಲಿ ಓದುವುದು ಸಹಕಾರಿಯಾಗಬಹುದು. ಈ ರೀತಿಯ ಕಲಸಗಳನ್ನು ಮಾಡಿದ ನಂತರ ಅವರು ನಿದ್ರಿಸಲು ಪ್ರಯತ್ನಿಸಬಹುದು ಎಂದು ಅವರು ಹೇಳುತ್ತಾರೆ.
-
ತಪ್ಪು ಕಲ್ಪನೆ: ಮಧ್ಯರಾತ್ರಿ ಸ್ನ್ಯಾಕ್ಸ್ ತಿನ್ನಬಹುದು
ವಾಸ್ತವ: ಮಧ್ಯರಾತ್ರಿ ಸ್ನ್ಯಾಕ್ಸ್ ತಿನ್ನಬಾರದು
ಮಧ್ಯರಾತ್ರಿ ತಿನ್ನುವುದು ಉತ್ತಮ ಅಭ್ಯಾಸವಲ್ಲ, ಸಾಮಾನ್ಯವಾಗಿ, ಮಧ್ಯರಾತ್ರಿಯಲ್ಲಿ ಎದ್ದು ಸ್ನ್ಯಾಕ್ಸ್ ಅನ್ನು ತಿನ್ನುವುದು ರೋಗದ ಸೂಚನೆಯಾಗಿರಬಹುದು. ಇದು ಮಧುಮೇಹ ಅಥವಾ ತಿನ್ನುವ ಅಸ್ವಸ್ಥತೆಯ ಚಿಹ್ನೆಯಾಗಿರಬಹುದು ಎಂದು ಡಾ ಪ್ಯಾಡೆಗಲ್ ಅವರು ಹೇಳುತ್ತಾರೆ.
ಸಾಮಾನ್ಯವಾಗಿ ರಾತ್ರಿ 10 ಗಂಟೆಯೊಳಗೆ ನಾವು ಏನನ್ನು ತೆಗೆದುಕೊಳ್ಳುತ್ತೇವೋ ಅದರಲ್ಲಿ ತೃಪ್ತಿ ಹೊಂದಬೇಕು ಹಾಗೂ ಮಧ್ಯರಾತ್ರಿಯಲ್ಲಿ ತಿನ್ನುವುದಕ್ಕೆಂದು ಮತ್ತೆ ಏಳಬಾರದು. ಇದು ರೋಗವನ್ನಷ್ಟೇ ಸೂಚಿಸುವುದಲ್ಲ, ಇದು ಅತ್ಯಂತ ಅನಾರೋಗ್ಯಕರ ಮತ್ತು ಇದು ನಿದ್ರೆಯ ನಮೂನೆಗಳನ್ನು (ಸ್ಲೀಪ್ ಪ್ಯಾಟರ್ನ್) ಅಡ್ಡಿಪಡಿಸುತ್ತದೆ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ ಎಂದು ಡಾ ಪ್ಯಾಡೆಗಲ್ ಅವರು ಹೇಳುತ್ತಾರೆ. ಇದು ನಿಯಮಿತವಾಗಿ ನಡೆಯುತ್ತಿದ್ದರೆ ಇದರ ಬಗ್ಗೆ ಗಮನಹರಿಸುವುದು ಅವಶ್ಯ ಎಂದು ಅವರು ಎಚ್ಚರಿಸುತ್ತಾರೆ.
5.ತಪ್ಪು ಕಲ್ಪನೆ: ಮಲಗುವಾಗ ಬೆಳಕು ಇದ್ದರೆ ತೊಂದರೆ ಇಲ್ಲ
ವಾಸ್ತವ: ಬೆಳಕು ನಿದ್ರೆಗೆ ಅಡ್ಡಿಪಡಿಸಬಹುದು
ಬೆಳಕಿಲ್ಲದ ಕತ್ತಲ ಕೋಣೆ ನಿದ್ರೆಗೆ ಅತ್ಯುತ್ತಮ ಎಂದು ತಜ್ಞರು ಹೇಳುತ್ತಾರೆ. ಕೋಣೆಯನ್ನು ಆವರಿಸಿರುವ ಬೆಳಕು ಕನಿಷ್ಠವಾಗಿರಬೇಕು ಅಥವಾ ಕೋಣೆಯು ಸಂಪೂರ್ಣ ಕತ್ತಲಾಗಿರಬೇಕು. ಬೆಳಕು ದೇಹದ ಜಾಗೃತ ಕೇಂದ್ರಗಳನ್ನು ಉತ್ತೇಜಿಸುತ್ತದೆ, ಆದ್ದರಿಂದ ಲೈಟ್‌ಗಳು ಆನ್ ಆಗಿರುವಾಗ ಮಲಗಬಹುದು ಎಂಬುದು ತಪ್ಪು ಕಲ್ಪನೆ, ಆದರೆ ಕನಿಷ್ಠ ಬೆಳಕಿನಲ್ಲಿ ನಿದ್ರಿಸಬಹುದೆಂಬ ಇನ್ನೊಂದು ಅಂಶವನ್ನೂ ವೈದ್ಯಕೀಯವಾಗಿ ಶಿಫಾರಸು ಮಾಡಲಾಗಿದೆ ಎಂದು ಡಾ ಸತ್ಯನಾರಾಯಣ ಅವರು ಹೇಳುತ್ತಾರೆ.
6. ತಪ್ಪು ಕಲ್ಪನೆ: ಮಲಗುವುದಕ್ಕೆ ಮೊದಲು ಹೊಟ್ಟೆ ತುಂಬಾ ಊಟ ಮಾಡಿ
ವಾಸ್ತವ: ಮಲಗುವ ಮೊದಲು ಕಡಿಮೆ ಆಹಾರ ಸೇವಿಸಿ
ಬೆಳಗಿನ ತಿಂಡಿಯನ್ನು ರಾಜನಂತೆ ಮಾಡು, ರಾತ್ರಿಯ ಊಟವನ್ನು ಭಿಕ್ಷುಕನಂತೆ ಮಾಡು ಎಂಬ ಮಾತೊಂದಿದೆ. ನಿದ್ರೆಯ ವಿಚಾರಕ್ಕೆ ಈ ಮಾತು ತುಂಬಾ ಅರ್ಥಪೂರ್ಣವಾಗಿದೆ, ಯಾಕೆಂದರೆ ರಾತ್ರಿಯ ಹೊತ್ತಿನಲ್ಲಿ ಎಣ್ಣೆಯುಕ್ತ, ಜಿಡ್ಡಿನ ಆಹಾರವನ್ನು ಅಥವಾ ಆರೋಗ್ಯಕರ ಪೂರ್ಣ ಊಟವನ್ನು ಸೇವಿಸಿದರೂ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಇದು ನಿದ್ರೆಗೆ ಒಳ್ಳೆಯದಲ್ಲ ಎಂದು ಡಾ ಪ್ಯಾಡೆಗಲ್ ಅವರು ಹೇಳುತ್ತಾರೆ.
ರಾತ್ರಿಯಲ್ಲಿ ಲಘು ಆಹಾರ ಸೇವಿಸುವುದು ಮತ್ತು ಊಟ ಹಾಗೂ ನಿದ್ರೆಯ ನಡುವೆ ಸಾಕಷ್ಟು ಅಂತರವನ್ನು ನೀಡುವುದು ಆರೋಗ್ಯಕರ ಅಭ್ಯಾಸ. ಭಾರತದಲ್ಲಿ ನಾವು ಮಾಡುವಂತೆ ರಾತ್ರಿಯಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಕೂಡಲೇ ಮಲಗುವುದು ಆರೋಗ್ಯಕರ ಅಭ್ಯಾಸವಲ್ಲ ಎಂದು ಡಾ ಪ್ಯಾಡೆಗಲ್ ಹೇಳುತ್ತಾರೆ.
ತಪ್ಪು ಕಲ್ಪನೆ: ಮಲಗುವ ಕೋಣೆಯು ಬೆಚ್ಚಗಿದ್ದರೆ ನಿದ್ರೆಗೆ ಒಳ್ಳೆಯದು
ವಾಸ್ತವ: ಬೆಚ್ಚಗಿನ ಮಲಗುವ ಕೋಣೆಯ ತಾಪಮಾನವು ನಿಮ್ಮ ನಿದ್ರೆಗೆ ಸಹಕಾರಿಯಾಗದು
ಮಲಗುವ ಕೋಣೆಯ ತಾಪಮಾನವು ಹೊರಗಿನ ತಾಪಮಾನಕ್ಕಿಂತ ತುಸು ತಂಪಾಗಿದ್ದರೆ ಚೆನ್ನಾಗಿ ನಿದ್ರೆ ಮಾಡಬಹುದು. ತಾಪಮಾನವು ಹೊರಗೆ ಆವರಿಸಿರುವ ವಾತಾವರಣಕ್ಕಿಂತ 1 ರಿಂದ 2 ಡಿಗ್ರಿಗಳಷ್ಟು ಕಡಿಮೆ ಇರಬೇಕು. ಇದರಿಂದ ಉತ್ತಮವಾಗಿ ನಿದ್ರಿಸಬಹುದು. ಇದೊಂದು ಸಾಬೀತುಪಡಿಸಲಾದ ಪರಿಕಲ್ಪನೆ ಮತ್ತು ಉತ್ತಮ ನಿದ್ರೆಯ ಭಾಗವಾಗಿದೆ ಎಂದು ಡಾ ಸತ್ಯನಾರಾಯಣ ಅವರು ಹೇಳುತ್ತಾರೆ.
-
ತಪ್ಪು ಕಲ್ಪನೆ: ಮಲಗುವ ಮುನ್ನ ಮದ್ಯಪಾನ ಮಾಡುವುದು ನಿದ್ರೆಗೆ ತೊಂದರೆಯಾಗುವುದಿಲ್ಲ.
ವಾಸ್ತವ: ಮಲಗುವ ಮುನ್ನ ಮದ್ಯಸೇವನೆಯು ನಿದ್ರೆಗೆ ತೊಂದರೆ ಮಾಡಬಹುದು
ಮದ್ಯವು ಪ್ರಾರಂಭದಲ್ಲಿ ಮತ್ತು ಬರಿಸಬಹುದು ಹಾಗೂ ಇದನ್ನು ಸೇವಿದಾಗ ನಿದ್ರೆ ಬಂದಂತೆ ಅನಿಸಬಹುದು, ಆದರೆ ಮಲಗಿದ ನಂತರ ಇದು ಉತ್ತೇಜಕವಾಗಿ ವರ್ತಿಸಿ ವ್ಯಕ್ತಿಯು ಸರಿಯಾಗಿ ನಿದ್ರಿಸದಂತೆ ಮಾಡುತ್ತದೆ ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾಗರು ಮತ್ತು ಪಲ್ಮನರಿ ಮತ್ತು ಸ್ಲೀಪ್ ಮೆಡಿಸಿನ್‌ನ ನಿರ್ದೇಶಕರಾದ ಡಾ ವಿವೇಕ್ ಪ್ಯಾಡೆಗಲ್ ಅವರು ಹೇಳುತ್ತಾರೆ.
ಪ್ರಾರಂಭದಲ್ಲಿ ಅವರಿಗೆ ನಿದ್ರೆ ಬರುತ್ತದೆ ಆದರೆ ಅವರು ಉತ್ತಮ ನಿದ್ರೆಯನ್ನು ಹೊಂದುವುದಿಲ್ಲ. ಸ್ವಲ್ಪ ಕುಡಿದ ನಂತರ ಯಾರಾದರೂ ನಿದ್ರೆ ಮಾಡಿದರೆ, ಅವರು ಉಲ್ಲಾಸದಿಂದ ಏಳುವುದಿಲ್ಲ. ಯಾಕೆಂದರೆ, ಮದ್ಯವು ಮತ್ತು ಬರಿಸಲು ಪ್ರಾರಂಭಿಸುತ್ತದೆ ಮತ್ತು ನಂತರ ಉತ್ತೇಜಕದಂತೆ ಕೆಲಸ ಮಾಡುತ್ತದೆ. ನೀವು ನಿದ್ರೆಯ ಸಮಸ್ಯೆ ಉಳ್ಳವರಾದರೆ, ಮದ್ಯವನ್ನು ತ್ಯಜಿಸುವುದು ಅವಶ್ಯಕ ಎಂದು ಡಾ ಪ್ಯಾಡೆಗಲ್ ಹೇಳುತ್ತಾರೆ.