ವಯಸ್ಸಾಗುತ್ತಿದ್ದಂತೆ ಜನರಿಗೆ ನಿದ್ರಿಸಲು ತುಂಬಾ ಕಷ್ಟವಾಗಬಹುದು ಅಥವಾ ಪ್ರತಿ ರಾತ್ರಿ 7-8 ಬಾರಿ ಎಚ್ಚರವಾಗಬಹುದು, ವಿಶೇಷವಾಗಿ, ವಯಸ್ಸಾದವರು ರಾತ್ರಿ ಸಮಯದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗಾಗಿ ಏಳುತ್ತಿದ್ದರೆ, ಅದನ್ನು ನೋಕ್ಟುರಿಯಾ ಎನ್ನುತ್ತಾರೆ.
ವಯಸ್ಸಾದವರಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಪೂರ್ಣಗೊಳಿಸಲಾಗದಷ್ಟು ಸುಸ್ತು ಮತ್ತು ಹಗಲಿನಲ್ಲಿ ಅತಿಯಾದ ನಿದ್ರೆಯ ಅನುಭವವಾದಾಗ ಈ ಸ್ಥಿತಿ ಇರುವುದು ಸ್ಪಷ್ಟವಾಗುತ್ತದೆ. ಈ ಸ್ಥಿತಿಯು ಕೇವಲ ಗುಣಮಟ್ಟದ ನಿದ್ರೆಯ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೇ ಅಧಿಕ ರಕ್ತದೊತ್ತಡ, ಹೃದಯದ ಅನಾರೋಗ್ಯ, ಬೀಳುವುದು ಮತ್ತು ಗಾಯಗೊಳ್ಳುವ ಅಪಾಯಗಳೊಂದಿಗೆ ಶಕ್ತಿಯ ನಷ್ಟಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಅಲ್ಲದೇ ನೋಕ್ಟುರಿಯಾದಿಂದ ಗುಣಮಟ್ಟದ ಜೀವನಶೈಲಿಯಲ್ಲಿ ಉಂಟಾದ ಬದಲಾವಣೆಯಿಂದಾಗಿ ವೃದ್ಧರು ಸಾಮಾಜಿಕ ಪ್ರತ್ಯೇಕತೆ ಮತ್ತು ಖಿನ್ನತೆಯನ್ನು ಅನುಭವಿಸಬಹುದು.
ಯುಎಸ್-ಆಧಾರಿತ ಅಧ್ಯಯನವೊಂದರಲ್ಲಿ, ಪರೀಕ್ಷೆಗೆ ಒಳಪಟ್ಟ 65ರಿಂದ 85ರ (ಪುರುಷರು ಮತ್ತು ಮಹಿಳೆಯರು) ನಡುವಿನ 49.7 ಪ್ರತಿಶತ ವ್ಯಕ್ತಿಗಳಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಮುಂತಾದ ಅಪಾಯಕಾರಿ ಅಂಶಗಳೊಂದಿಗೆ ನೋಕ್ಟುರಿಯಾ ಇರುವುದು ಕಂಡುಬಂದಿದೆ.
ನೋಕ್ಟುರಿಯಾಗೆ ಕಾರಣಗಳು
- ಪ್ರೋಸ್ಟೇಟ್ ಹಿಗ್ಗುವಿಕೆ (ಪ್ರೊಸ್ಟಾಟಿಕ್ ಬಿನೈನ್ ಹೈಪರ್‌ಪ್ಲೇಸಿಯಾ ಎಂದೂ ಕರೆಯಲಾಗುತ್ತದೆ)
- ಮೂತ್ರನಾಳದ ಸೋಂಕುಗಳು
- ಮೂತ್ರಕೋಶದ ಸಾಮರ್ಥ್ಯ ಕುಂದುವುದು ಅಥವಾ ಹಾರ್ಮೋನಲ್ ಬದಲಾವಣೆಗಳಂತಹ ವೃದ್ಧಾಪ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು
- ಮೂತ್ರಪಿಂಡದ ಸ್ಥಿತಿಗಳು
- ಮಲಗುವ ಸಮಯದಲ್ಲಿ ಡೈಯುರೆಟಿಕ್ಸ್ ಬಳಕೆ. ಡೈಯುರೆಟಿಕ್ಸ್ ಎಂಬುದು ಸಾಮಾನ್ಯವಾಗಿ ಅಧಿಕ ರಕ್ತದೊತ್ತಡಕ್ಕೆ ಶಿಫಾರಸು ಮಾಡಲಾದ ಮಾತ್ರೆಯಾಗಿದ್ದು ಇದು ದೇಹದಿಂದ ಹೆಚ್ಚಿನ ನೀರು ಮತ್ತು ಸೋಡಿಯಂ ಅನ್ನು ಹೊರಹಾಕುತ್ತದೆ.
- ಸಂಜೆಯ ನಂತರ ಮತ್ತು ಮಲಗುವ ಸಮಯದಲ್ಲಿ ಅತಿಯಾಗಿ ನೀರು ಕುಡಿಯುವುದು.
ನೋಕ್ಟುರಿಯಾ ಉಂಟಾಗಲು ಹಿಗ್ಗಿದ ಪ್ರಾಸ್ಟೇಟ್ ಅತ್ಯಂತ ಸಾಮಾನ್ಯ ಕಾರಣವಾಗಿದೆ; ಮೂತ್ರ ನಾಳದ ಸೋಂಕು, ಅಧಿಕ ರಕ್ತದ ಸಕ್ಕರೆಯ ಮಟ್ಟಗಳು ಮತ್ತು ಮೂತ್ರಪಿಂಡದ ಸಮಸ್ಯೆಗಳು ಮುಂತಾದ ಕಾಯಿಲೆಗಳೂ ರಾತ್ರಿಯ ಹೊತ್ತು ಅಧಿಕ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.
“ಕೆಲವರಲ್ಲಿ ನೋಕ್ಟುರಿಯಾ ಜೊತೆಗೆ ಇತರ ರೋಗಲಕ್ಷಣಗಳಾದ ಮೂತ್ರ ವಿಸರ್ಜನೆಗೆ ಅವಸರವಾಗುವುದು, ಮೂತ್ರವನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಮುಂತಾದವೂ ಇರಬಹುದು. ಅನಾರೋಗ್ಯದ ಕಾರಣಗಳಿಂದಾಗಿ ಕೆಲವು ವೃದ್ಧರು ರಾತ್ರಿ ಊಟವಾದ ನಂತರ ಹೆಚ್ಚು ನೀರು ಕುಡಿಯಬಹುದು, ಇದರಿಂದಾಗಿ ಮೂತ್ರ ವಿಸರ್ಜನೆಯು ಹೆಚ್ಚಾಗಿ ರಾತ್ರಿಯಲ್ಲಿ ನೊಕ್ಟೂರಿಯಾಗೆ ಕಾರಣವಾಗಬಹುದು ಎಂದು ಪುಣೆಯ ನೋಬಲ್ ಹಾಸ್ಪಿಟಲ್‌ನ ಹಿರಿಯ ಸಲಹೆಗಾರ ಮೂತ್ರಪಿಂಡಶಾಸ್ತ್ರಜ್ಞರು, ಕಸಿ ವೈದ್ಯರು ಮತ್ತು ಮೂತ್ರಪಿಂಡಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ ಅವಿನಾಶ್ ಇಗ್ನೇಶಿಯಸ್ ಅವರು ಹೇಳುತ್ತಾರೆ.
ಜನರಿಗೆ ವಯಸ್ಸಾದಂತೆ, ಮೂತ್ರಪಿಂಡ ದುರ್ಬಲವಾಗುತ್ತದೆ ಮತ್ತು ಹಾರ್ಮೋನಿನಲ್ಲಿ ಬದಲಾವಣೆ ಉಂಟಾಗುತ್ತದೆ, ಇದರ ಪರಿಣಾಮ ಮೂತ್ರ ವಿಸರ್ಜನೆಯ ಮೇಲೆ ಉಂಟಾಗುತ್ತದೆ.
“ಯುವಕರಲ್ಲಿ, ವಾಸೋಪ್ರೆಸಿನ್ ಎಂಬ ಹಾರ್ಮೋನಿನ ಕಾರ್ಯದಿಂದಾಗಿ ಹಗಲು ಹೊತ್ತಿಗೆ ಹೋಲಿಸಿದರೆ, ರಾತ್ರಿ ಹೊತ್ತಿನಲ್ಲಿ ಮೂತ್ರ ಉತ್ಪತ್ತಿಯು ಕಡಿಮೆ ಇರುತ್ತದೆ. ವಯಸ್ಸಾದವರಲ್ಲಿ, ಈ ಹಾರ್ಮೋನು ಉತ್ಪಾದನೆ ಕಡಿಮೆಯಾಗುತ್ತದೆ, ಅದರಿಂದಾಗಿ ರಾತ್ರಿ ಹೊತ್ತು ಆಗಾಗ್ಗೆ ಬಾತ್‌ರೂಮ್‌ಗೆ ಹೋಗಬೇಕಾಗಬಹುದು,” ಎಂದು ಡಾ ಇಗ್ನೇಶಿಯಸ್ ಹೇಳುತ್ತಾರೆ.
ನೋಕ್ಟುರಿಯಾ – ಕಾರಣವಾಗಬಹುದಾದ ಆರೋಗ್ಯ ಸಮಸ್ಯೆಗಳು
ಈ ಕೆಲವು ಅಸ್ವಸ್ಥತೆಗಳು ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಹೆಚ್ಚಾಗುವುದಕ್ಕೆ ಕಾರಣವಾಗಬಹುದು. ಮೂತ್ರಪಿಂಡದ ಸಮಸ್ಯೆ ಹಾಗೂ ಹೃದ್ರೋಗ ಇರುವ ಕೆಲವು ವಯಸ್ಕರಲ್ಲಿ ಹಗಲಿನ ವೇಳೆ ತಮ್ಮ ಚಟುವಟಿಕೆಗಳನ್ನು ನಿರ್ವಹಿಸುವುದರಿಂದಾಗಿ ಕಾಲುಗಳಲ್ಲಿ ದ್ರವದ ಸಂಗ್ರಹಣೆಯಾಗುತ್ತದೆ.
“ಯುವಕರಲ್ಲಿ, ಈ ದ್ರವವು ಪರಿಚಲನೆಯಾಗುತ್ತದೆ ಮತ್ತು ದೇಹವು ಅದನ್ನು ಹೀರಿಕೊಳ್ಳುತ್ತದೆ, ಆದರೆ ವಯಸ್ಕರಲ್ಲಿ, ರಾತ್ರಿ ಹೊತ್ತಿನಲ್ಲಿ ಅವರು ಮಲಗುವ ಭಂಗಿಯಲ್ಲಿರುವಾಗ ಸಂಗ್ರಹಣೆಯಾದ ಈ ದ್ರವವು ಹೆಚ್ಚಾಗುತ್ತದೆ ಮತ್ತು ಇದನ್ನು ಮೂತ್ರದ ಮೂಲಕ ದೇಹದಿಂದ ಹೊರಹಾಕಬೇಕಾಗುತ್ತದೆ” ಎಂದು ಬೆಂಗಳೂರಿನ ಎಸ್ಟರ್ ಸಿಎಂಐ ಹಾಸ್ಪಿಟಲ್‌ನ ಯುರಾಲಜಿ ಮತ್ತು ಯುರೋ ಆಂಕಾಲಜಿಯ ಪ್ರಮುಖ ಕನ್ಸಲ್ಟೆಂಟ್, ಡಾ ಗೋವರ್ಧನ್ ರೆಡ್ಡಿ ಹೇಳುತ್ತಾರೆ.
ನೋಕ್ಟುರಿಯಾ – ರಾತ್ರಿಯಲ್ಲಿ ಮೂತ್ರ ವಿಸರ್ಜನೆ ವ್ಯಕ್ತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ?
ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಿದಾಗ, ಸುಸ್ತಾಗುವುದು ಹಾಗೂ ಸಾಕಷ್ಟು ವಿಶ್ರಾಂತಿ ದೊರೆಯದೇ ಇರುವುದರಿಂದ ಹಗಲು ಹೊತ್ತಿನಲ್ಲಿ ಅತಿಯಾದ ನಿದ್ರೆಗೆ ಕಾರಣವಾಗುತ್ತದೆ. ನಿದ್ರೆಯ ಕೊರತೆಯು ಅಧಿಕ ರಕ್ತದೊತ್ತಡ, ರಕ್ತದ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ಮತ್ತು ಬೀಳುವುದು, ಗಾಯಗಳು ಉಂಟಾಗುವುದು ಸಂಭವಿಸುತ್ತದೆ.
“ಕೆಲವು ಸಂದರ್ಭಗಳಲ್ಲಿ ನೋಕ್ಟುರಿಯಾ ಹಗಲು ಹೊತ್ತಿನಲ್ಲೂ ಆಗಾಗ್ಗೆ ಮೂತ್ರ ವಿಸರ್ಜನೆಯಾಗಲು ಕಾರಣವಾಗಬಹುದು; ಇದರಿಂದಾಗಿ ವ್ಯಕ್ತಿಯು ಸಾಮಾಜಿಕ ಪ್ರತ್ಯೇಕತೆ ಮತ್ತು ಖಿನ್ನತೆಗೆ ಒಳಗಾಗಬಹುದು. ಸಮಸ್ಯೆಯು ತೀವ್ರವಾಗಿದ್ದಲ್ಲಿ, ವ್ಯಕ್ತಿಯು ರಾತ್ರಿಹೊತ್ತಿನಲ್ಲಿ ವಯಸ್ಕರ ಡಯಾಪರ್ ಅನ್ನು ಬಳಸಬೇಕಾಗಬಹುದು, ಇದು ಅವರಲ್ಲಿ ಮಾನಸಿಕವಾಗಿ ಪರಿಣಾಮ ಬೀರಬಹುದು” ಎಂದು ಡಾ ಇಗ್ನೇಷಿಯಸ್ ಹೇಳುತ್ತಾರೆ.
ಸಂಪೂರ್ಣ ವೈದ್ಯಕೀಯ ಇತಿಹಾಸ ಮತ್ತು ಈ ಕೆಳಗಿನ ದೈನಂದಿನ ಅಭ್ಯಾಸಗಳ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ನೋಕ್ಟುರಿಯಾ ರೋಗನಿರ್ಣಯವನ್ನು ಪ್ರಾರಂಭಿಸಬೇಕು, ಅವುಗಳೆಂದರೆ:
- ವ್ಯಕ್ತಿಯು ಎಷ್ಟು ಮೂತ್ರ ಮಾಡುತ್ತಾರೆ?
- ರಾತ್ರಿ ಹೊತ್ತಿನಲ್ಲಿ ಅವರು ಎಷ್ಟುಬಾರಿ ಏಳುತ್ತಾರೆ?
- ನೊಕ್ಟೂರಿಯಾ ಹೊರತಾಗಿ ಅವರು ಇತರ ರೋಗಲಕ್ಷಣಗಳನ್ನು ಹೊಂದಿದ್ದಾರೆಯೇ?
- ಮೂತ್ರವಿಸರ್ಜಿಸಲು ಅಥವಾ ಬಾತ್‌ರೂಂಗೆ ತೆರಳುವ ಮುನ್ನ ಅವರಿಗೆ ಮೂತ್ರವನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆಯೇ?
ಚಿಕಿತ್ಸೆ
ರೋಗಿಯು ಕನಿಷ್ಠ 4-5ಗಂಟೆಗಳ ಕಾಲ ಗುಣಮಟ್ಟದ ನಿದ್ರೆಯನ್ನು ಪಡೆಯುತ್ತಾರೆ ಮತ್ತು ಸಾಮಾನ್ಯವಾಗಿ ಕಾರ್ಯನಿರ್ವಹಿಸಬಹುದು ಎಂದು ಖಾತ್ರಿಪಡಿಸುವುದು ನೋಕ್ಟುರಿಯಾಗೆ ಚಿಕಿತ್ಸೆಯ ಪ್ರಾಥಮಿಕ ಗುರಿಯಾಗಿದೆ.
“ಅವರು ರಾತ್ರಿ ಹೊತ್ತಿನಲ್ಲಿ ಹೆಚ್ಚು ನೀರು ಕುಡಿಯುತ್ತಿದ್ದಾರೆಯೇ ಎಂದು ನಾವು ಪರಿಶೀಲಿಸಬೇಕು. ಪ್ರೊಸ್ಟೇಟ್ ಕ್ಯಾನ್ಸರ್, ಮೂತ್ರಪಿಂಡ ಅಥವಾ ಹೃದ್ರೋಗ ಸಮಸ್ಯೆಗಳು, ಮಧುಮೇಹ ಇತ್ಯಾದಿಗಳು ಇಲ್ಲವೆಂದು ಖಾತ್ರಿಪಡಿಸಲು ಪರೀಕ್ಷೆಗಳು ಮತ್ತು ತಪಾಸಣೆಗಳನ್ನು ಮಾಡಬೇಕು. ಹೆಚ್ಚಿನ ಕಾಯಿಲೆಗಳಿಗೆ ಔಷಧಿ ಮತ್ತು ಜೀವನಶೈಲಿಯ ಬದಲಾವಣೆಯ ಮೂಲಕ ಚಿಕಿತ್ಸೆ ನೀಡಬಹುದು,” ಎಂದು ಡಾ ರೆಡ್ಡಿ ಹೇಳುತ್ತಾರೆ.
ತೀವ್ರ ನೋಕ್ಟುರಿಯಾ ಹೊಂದಿರುವ ಕೆಲವು ರೋಗಿಗಳಿಗೆ ಮೂತ್ರ ಹೊರಹಾಕುವಿಕೆಯನ್ನು ಕಡಿಮೆಗೊಳಿಸಲು ಡೆಸ್ಮೋಪ್ರೆಸ್ಸಿನ್ ಎಂಬ ಔಷಧವನ್ನು ಶಿಫಾರಸು ಮಾಡಬಹುದು. ಆದರೆ ಈ ಔಷಧಿಯು ಸೋಡಿಯಂ ಮಟ್ಟವನ್ನು ಕಡಿಮೆಗೊಳಿಸುವ ಕಾರಣ ಎಚ್ಚರಿಕೆಯಿಂದ ಸೇವಿಸಬೇಕು ಎಂದು ಡಾ ರೆಡ್ಡಿ ಹೇಳುತ್ತಾರೆ.
ಸಾರಾಂಶ
- ವ್ಯಕ್ತಿಯು ಮೂತ್ರವಿಸರ್ಜನೆಗಾಗಿ ಅನೇಕ ಬಾರಿ ಏಳುವ ಸ್ಥಿತಿಗೆ ನೋಕ್ಟುರಿಯಾ ಎನ್ನಲಾಗುತ್ತದೆ. 2-3 ಕ್ಕಿಂತ ಹೆಚ್ಚು ಬಾರಿ ಏಳಬೇಕಾಗುವ ಈ ಸ್ಥಿತಿಯು ವೃದ್ಧರಲ್ಲಿ ಗಂಭೀರ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗಬಹುದು.
- ಈ ಸ್ಥಿತಿಗೆ ವಯಸ್ಸಿಗೆ ಸಂಬಂಧಿಸಿದ ಅನೇಕ ಕಾರಣಗಳು ಇದ್ದು, ಕೂಡಲೇ ವೈದ್ಯಕೀಯ ಸಲಹೆ ಪಡೆದು ನಿರ್ದಿಷ್ಟ ಜೀವನಶೈಲಿ ಬದಲಾವಣೆಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ಗೆಲ್ಲಬಹುದು.