ಮೊದಲು ವೃತ್ತಿಯಲ್ಲಿ ಎಚ್‌ಆರ್ ಆಗಿದ್ದು ನಂತರ ತ್ವಚೆ ಆರೈಕೆ ಹಾಗೂ ಮೇಕಪ್ ಸಲಹೆಗಾರರಾಗಿ ಬದಲಾದ ಪರೋಮಿತಾ ದೇಬ್ ಅರೆಂಗ್ ಅವರು ಎಂದಿಗೂ ರಾಜಿ ಮಾಡಿಕೊಳ್ಳದ ಮೂರು ವಿಷಯಗಳೆಂದರೆ: ಸೇವಿಸುವ ಆಹಾರದ ಕುರಿತು ಎಚ್ಚರಿಕೆಯಿಂದ ಇರುವುದು, ದೇಹವನ್ನು ಸಾಕಷ್ಟು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವ ಏಳರಿಂದ ಎಂಟು ಗಂಟೆಗಳ ಕಾಲ ಉತ್ತಮವಾಗಿ ನಿದ್ರೆ ಮಾಡುವುದು. ಇದು ಅವರ ಆರೋಗ್ಯಕ್ಕೆ ಉತ್ತೇಜನ ನೀಡಿದ್ದಷ್ಟೇ ಅಲ್ಲ, ಅವರ ಉದ್ಯೋಗದಲ್ಲಿ ಗಮನಾರ್ಹವಾಗಿರುವ ಕಲೆ ಹಾಗೂ ಸುಕ್ಕುರಹಿತ ಚರ್ಮವನ್ನೂ ಒದಗಿಸಿದೆ.
“ಕೆಲವು ವರ್ಷಗಳ ಹಿಂದೆ, ಅಂದರೆ ನಾನು ಮೂವತ್ತರ ಆಸುಪಾಸಿನಲ್ಲಿದ್ದಾಗ, ನನ್ನ ಚರ್ಮವು ಡಲ್ ಆಗಿರುವುದನ್ನು ನಾನು ಗಮನಿಸಿದೆ, ಬಾಯಿಯ ಸುತ್ತಲೂ ಪಿಗ್ಮೆಂಟೇಷನ್ ಇತ್ತು ಹಾಗೂ ಡಾರ್ಕ್ ಸ್ಪಾಟ್‌ಗಳು ಅಲ್ಲಲ್ಲಿ ಕಂಡುಬಂದವು, ನನ್ನ ಅನಿಯಮಿತ ಜೀವನಶೈಲಿ, ಎಚ್‌ಆರ್ ವಿಭಾಗದಲ್ಲಿ ನನ್ನ ಕೆಲಸ ವೇಗದ ಗತಿಯ ಕಾರಣದಿಂದಾಗಿ ನಾನು ನನ್ನ ಚರ್ಮದ ಸೌಂದರ್ಯವನ್ನು ಕಳೆದುಕೊಂಡಿದ್ದೆ” ಎಂದು ಪರೋಮಿತಾ ಹೇಳುತ್ತಾರೆ.
ಪುಣೆಯ ಮೂಲದ 42-ವರ್ಷ-ವಯಸ್ಸಿನ ಇವರು, ಚರ್ಮ ಸುಕ್ಕಾಗುವಿಕೆ ಹಾಗೂ ನವ ಯೌವ್ವನ ಪಡೆಯುವುದರ ಕುರಿತು ಸಾಕಷ್ಟು ಸಂಶೋಧನೆಯನ್ನು ಮಾಡಿದರು ಮತ್ತು ತಮಗಾಗಿ ಸೌಂದರ್ಯ ದಿನಚರಿಯನ್ನು ಪ್ರಾರಂಭಿಸಿಕೊಂಡರು. ಇದು ಅವರ ಚರ್ಮದ ಒಟ್ಟಾರೆ ಅಂದವನ್ನು ಸಂಪೂರ್ಣವಾಗಿ ಬದಲಾಯಿಸಿತು. ಕಾಂತಿಯುಕ್ತ ಸೌಂದರ್ಯ ಪಡೆಯುವುದಕ್ಕಾಗಿ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದುವುದು ಅವರ ದಿನನಿತ್ಯದ ಮಂತ್ರವಾಯಿತು. ಈಗ ಅವರು ಕಾರ್ಪೊರೇಟ್ ಜಗತ್ತಿನಲ್ಲಿ ತ್ವಚೆ, ಗ್ರೂಮಿಂಗ್ ಮತ್ತು ಮೇಕಪ್ ಕುರಿತು ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ಮಹಿಳೆಯರಿಗೆ ಸಹಾಯ ಮಾಡುತ್ತಾರೆ.
ತಲೆಮಾರುಗಳಿಂದ, ಅಜ್ಜಿಯಂದಿರು ಕಾಂತಿಯುಕ್ತ ಚರ್ಮ ಮತ್ತು ಆರೋಗ್ಯಕರ ಕೂದಲಿನ ಹಿಂದಿನ ರಹಸ್ಯವನ್ನು ಹೇಳುತ್ತಲೇ ಬಂದಿದ್ದಾರೆ: ಉತ್ತಮವಾದುದನ್ನು ಸೇವಿಸಿ, ಮತ್ತು ಗುಣಮಟ್ಟದ ನಿದ್ರೆ ಮಾಡಿ. ಒಟ್ಟಾರೆ ಆರೋಗ್ಯಕ್ಕಾಗಿ ಮತ್ತು ಚರ್ಮದ ಅಂದಕ್ಕಾಗಿ ರಾತ್ರಿಯ ಸಿಹಿ ನಿದ್ರೆ ಎಷ್ಟು ಮುಖ್ಯ ಎಂಬುದನ್ನು ಸಾಕಷ್ಟು ಒತ್ತಿ ಹೇಳಲಾಗುವುದಿಲ್ಲ.
ನಿದ್ರಾಹೀನತೆಯು ಮುಖದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ
ವಿಜ್ಞಾನಿಗಳು ಮತ್ತು ವೈದ್ಯಕೀಯ ತಜ್ಞರು ದೈಹಿಕ ಮತ್ತು ಮಾನಸಿಕ ಕಾರ್ಯಗಳ ಮೇಲೆ ಹಾಗೂ ವ್ಯಕ್ತಿಯ ನೋಟದ ಮೇಲೆ ನಿದ್ರೆಯ ಅಭಾವದ ಋಣಾತ್ಮಕ ಪರಿಣಾಮಗಳನ್ನು ದೀರ್ಘಕಾಲದಿಂದ ಒತ್ತಿ ಹೇಳಿದ್ದಾರೆ. ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ಪ್ರಕಾರ, ಗುಣಮಟ್ಟದ ನಿದ್ರೆಯ ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಟೈಪ್-2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ; ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ; ಒತ್ತಡವನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಸಿರ್ಕಾಡಿಯನ್ ರಿದಮ್ ನಿದ್ರೆ ಮತ್ತು ಎಚ್ಚರ, ಹಾರ್ಮೋನುಗಳ ಬಿಡುಗಡೆ ಮತ್ತು ದೇಹದ ಉಷ್ಣಾಂಶದಂತಹ ವಿಭಿನ್ನ ಚಕ್ರಗಳನ್ನು ಒಳಗೊಂಡಿದೆ. ಈ ಚಕ್ರಕ್ಕೆ ಯಾವುದೇ ರೀತಿಯ ಅಡ್ಡಿಯುಂಟಾದರೂ ಅದು ದೈಹಿಕ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಅದು ಚರ್ಮ ಹಾಗೂ ಕೂದಲಿನ ಆರೋಗ್ಯದ ಮೇಲೆಯೂ ಪ್ರತಿಫಲಿಸುತ್ತದೆ ಎಂದು ಬೆಂಗಳೂರಿನ ಅಬ್ರಹಾಮ್ಸ್ ಸ್ಕಿನ್ ಮತ್ತು ಹೇರ್ ಕ್ಲಿನಿಕ್‌ನ ಚರ್ಮರೋಗ ತಜ್ಞ ಮತ್ತು ಟ್ರೈಕಾಲಜಿಸ್ಟ್ ಡಾ. ಅನಿಲ್ ಅಬ್ರಹಾಂ ಹೇಳುತ್ತಾರೆ.
“ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಾಕಷ್ಟು ನಿದ್ರೆಯನ್ನು ಮಾಡದಿದ್ದರೆ, ಆಯಾಸ, ಚರ್ಮ ಸುಕ್ಕುಗಟ್ಟುವಿಕೆ ಮತ್ತು ಪೇಲವಗೊಂಡ ತ್ವಚೆ ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಉತ್ತಮ ನಿದ್ರೆಯ ಪರಿಕಲ್ಪನೆಯು ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುವುದು ಸಂಪ್ರದಾಯವನ್ನು ಆಧರಿಸಿದ್ದು ಮಾತ್ರವಲ್ಲದೇ ವಿಜ್ಞಾನದಲ್ಲಿ ಭದ್ರ ಬುನಾದಿಯನ್ನು ಹೊಂದಿದೆ” ಎಂದು ಅವರು ಹೇಳುತ್ತಾರೆ.
ಉತ್ತಮ ನಿದ್ರೆಯ ಹಿಂದಿನ ವಿಜ್ಞಾನ
ನಿದ್ರೆಯ ಸಮಯದಲ್ಲಿ ದೇಹ ಮತ್ತು ಮನಸ್ಸು ವಿಶ್ರಾಂತಿ ಸ್ಥಿತಿಯಲ್ಲಿರುತ್ತದೆ. ದೇಹವು ಜೀವಕೋಶಗಳ ಪುನರುಜ್ಜೀವನಗೊಳಿಸುವಿಕೆ ಮತ್ತು ದುರಸ್ತಿ, ಟಾಕ್ಸಿನ್‌ಗಳ ನಿರ್ಮೂಲನೆ, ಹಾರ್ಮೋನು ನಿಯಂತ್ರಣದಂತಹ ಪ್ರಕ್ರಿಯೆಗಳು ಈ ಸಮಯದಲ್ಲಿ ನಡೆಯುತ್ತದೆ.
“ರಾತ್ರಿಯ ಸಮಯದಲ್ಲಿ ಚರ್ಮದ ವಿವಿಧ ಪದರಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ, ಇದು ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ಚರ್ಮವು ಕಾಂತಿಯುತಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ, ಕೊಲ್ಲಾಜೆನ್ ಮತ್ತು ಎಲಾಸ್ಟಿನ್ (ದೇಹದಲ್ಲಿನ ಪ್ರೋಟಿನ್‌ಗಳು) ಚರ್ಮದ ಹೈಡ್ರೇಷನ್ ಮತ್ತು ಎಲಾಸ್ಟಿಸಿಟಿ (ಸ್ಥಿತಿಸ್ಥಾಪಕತ್ವ) ಯನ್ನು ಕಾಪಾಡಿಕೊಳ್ಳಲು ಮತ್ತು ಪೇಲವಗೊಳ್ಳುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ” ಎಂದು ಬೆಂಗಳೂರಿನ ಚರ್ಮರೋಗ ತಜ್ಞೆ ಮತ್ತು ಕಾಸ್ಮೆಟಾಲಜಿಸ್ಟ್ ಆಗಿರುವ ಹಾಗೂ ಕೊಸ್ಮೊಡರ್ಮಾ ಕ್ಲಿನಿಕ್‌ನ ಸಂಸ್ಥಾಪಕರಾದ ಡಾ. ಚೈತ್ರಾ ವಿ ಆನಂದ್ ಹೇಳುತ್ತಾರೆ.
“ಬೆಳವಣಿಗೆಯ ಹಾರ್ಮೋನುಗಳ ಉತ್ಪಾದನೆಯು ಚರ್ಮ ಅಥವಾ ಗಾಯಗಳು ವಾಸಿಗೊಳ್ಳುವಿಕೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ಹಾರ್ಮೋನ್ ಮೆಲಟೋನಿನ್ ಹೆಚ್ಚಳವು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ. ನಾವು ನಿದ್ರಿಸುವಾಗ ದುಗ್ಧರಸ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ, ಇದು ದೇಹದಿಂದ ವಿಷ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ,
ನಿದ್ರೆಯ ಕೊರತೆಯು ಗುಣಪಡಿಸುವಿಕೆ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಮತ್ತು ಚರ್ಮವು ಸುಕ್ಕುಗೊಳ್ಳುವಿಕೆಗೆ ಕಾರಣವಾಗುತ್ತದೆ, ಹಾಗೂ ವ್ಯಕ್ತಿಯು ಮಂಕಾಗಿ ಮತ್ತು ದಣಿದಂತೆ ಕಾಣುವಂತೆ ಮಾಡುತ್ತದೆ. ಡಾರ್ಕ್ ಸರ್ಕಲ್‌ಗಳು ಕಾಣಿಸಿಕೊಳ್ಳಬಹುದು ಹಾಗೂ ಕಣ್ಣು ಮತ್ತು ಬಾಯಿಯ ಸುತ್ತಲಿನ ಗೆರೆಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ”ಎಂದು ಡಾ. ಚೈತ್ರಾ ಹೇಳುತ್ತಾರೆ.
ಎಚ್‌ಆರ್ ವೃತ್ತಿಪರರಾದ ಪರೋಮಿತಾ ಅವರು, “ನಮ್ಮ ಇಪ್ಪತ್ತರ ವಯಸ್ಸಿನಲ್ಲಿ, ಪುನರುತ್ಪಾದನೆಯು ವೇಗವಾಗಿ ಸಂಭವಿಸುತ್ತದೆ ಮತ್ತು ಕೆಲವು ದಿನಗಳ ನಿದ್ರೆಯ ಕೊರತೆಯು ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಹಂತವು ಸಮೀಪಿಸುತ್ತಿದ್ದಂತೆ ನಿದ್ರೆಯ ಅಭಾವವು ಡಾರ್ಕ್ ಸರ್ಕಲ್‌ಗಳು, ಉಬ್ಬಿದ ಕಣ್ಣುಗಳು ಉಂಟಾಗುತ್ತವೆ ಹಾಗೂ ಚರ್ಮದ ಸರಿಪಡಿಸುವಿಕೆ ನಿಧಾನವಾಗುವುದರಿಂದ ಚರ್ಮ ಮತ್ತು ಕಣ್ಣುಗಳು ಆಯಾಸಗೊಂಡಂತೆ ಕಾಣುತ್ತವೆ” ಎಂದು ಹೇಳುತ್ತಾರೆ.
ಆದ್ದರಿಂದ ಉತ್ತಮ ನಿದ್ರೆಯ ಪ್ರಯೋಜನವನ್ನು ಗರಿಷ್ಠವಾಗಿ ಪಡೆದುಕೊಳ್ಳಲು ಅವರು ರಾತ್ರಿಯ ಸಮಯದಲ್ಲಿ ಚರ್ಮವು ಹೈಡ್ರೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಒಳ್ಳೆಯ ವೃದ್ಧಾಪ್ಯ ನಿರೋಧಕ ಉತ್ಪನ್ನಗಳು ಹೈಡ್ರೇಟಿಂಗ್ ಕ್ರೀಮ್‌ಗಳನ್ನು ಬಳಸುತ್ತಾರೆ.
ಉತ್ತಮ ನಿದ್ರೆಯನ್ನು ಅಧಿಕಗೊಳಿಸುವುದು
ಡಾ. ಆನಂದ್ ಅವರು ಕಾಂತಿಯುತ ಚರ್ಮವನ್ನು ಪಡೆಯಲು ಈ ಕೆಳಗಿನ ಸಲಹೆಯನ್ನು ನೀಡುತ್ತಾರೆ:
- ಮಲಗುವ ಮುನ್ನ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ಕೊಳೆ, ಕಶ್ಮಲ ಮತ್ತು ಮೇಕಪ್ ಅನ್ನು ತೆಗೆಯಿರಿ.
- ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಧನಾತ್ಮಕ ಆಲೋಚನೆಗಳೊಂದಿಗೆ ಶಾಂತ ಹಾಗೂ ಸಮಾಧಾನದ ವಾತಾವರಣದಲ್ಲಿ ನಿದ್ರಿಸಿ.
- ಪ್ರತಿದಿನ ಸಾಕಷ್ಟು ಪ್ರಮಾಣ ನೀರನ್ನು ಕುಡಿಯಿರಿ.
- ನಿಮ್ಮ ತ್ವಚೆಯನ್ನು ಹೈಡ್ರೇಟೆಡ್ ಆಗಿರಿಸಿಕೊಳ್ಳಿ ಮತ್ತು ರಾತ್ರಿಯಲ್ಲಿ ತ್ವಚೆಯನ್ನು ಮರುಯೌವ್ವನಗೊಳಿಸಿಕೊಳ್ಳಲು ಸರಳ ತ್ವಚೆಯ ಆರೈಕೆಯನ್ನು ಅನುಸರಿಸಿ.
- ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ.
- ನಿಯಮಿತವಾಗಿ ವ್ಯಾಯಾಮ ಮಾಡಿ, ಉತ್ತಮ ಪೋಷಣೆಯನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಒಟ್ಟಾರೆ ಆರೋಗ್ಯದ ಮೇಲೆ ಗಮನವಿರಿಸಿ.
- ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮೆಗ್ನೀಸಿಯಂ ಮತ್ತು ಮೆಲಟೋನಿನ್ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಿ.
ಉತ್ತಮವಾಗಿ ನಿದ್ರಿಸುವವರು vs ಉತ್ತಮವಾಗಿ ನಿದ್ರಿಸದವರು
2015 ರ ಅಧ್ಯಯನದಲ್ಲಿ, ಜರ್ನಲ್ ಕ್ಲಿನಿಕಲ್ ಮತ್ತು ಎಕ್ಸ್‌ಪೆರಿಮೆಂಟಲ್ ಡರ್ಮಟಾಲಜಿಯಲ್ಲಿ ಪ್ರಕಟವಾದ ‘ಡಸ್ ಪೂರ್ ಸ್ಲೀಪ್ ಕ್ವಾಲಿಟಿ ಅಫೆಕ್ಟ್ ಸ್ಕಿನ್ ಏಜಿಂಗ್?’ ಎಂಬ ವರದಿಯಲ್ಲಿ ಸಂಶೋಧಕರು ವಯಸ್ಸಾದಾಗ ಗೋಚರಿಸುವ ಚರ್ಮದ ಚಿಹ್ನೆಗಳಿಗಾಗಿ ಮೌಲ್ಯೀಕರಿಸಿದ ಕ್ಲಿನಿಕಲ್ ಉಪಕರಣಗಳನ್ನು ಬಳಸಿಕೊಂಡು ಕಳಪೆ ಗುಣಮಟ್ಟದ ನಿದ್ರೆ ಪಡೆಯುವವರು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯುವವರು ಎಂದು ವರ್ಗೀಕರಿಸಿದ್ದಾರೆ.
ಕಳಪೆ ಗುಣಮಟ್ಟದ ನಿದ್ರೆ ಹೊಂದಿರುವ ವ್ಯಕ್ತಿಗಳಿಗೆ ಹೋಲಿಸಿದರೆ ಉತ್ತಮವಾಗಿ ನಿದ್ರಿಸುವವರು ಕಡಿಮೆ ಚರ್ಮದ ಸುಕ್ಕುಗಟ್ಟುವಿಕೆಯನ್ನು ಹಾಗೂ ಅಧಿಕ ಚರ್ಮದ ತಡೆಗೋಡೆ ಚೇತರಿಕೆಯನ್ನು ಹೊಂದಿದ್ದಾರೆ ಹಾಗೂ ಕಳಪೆ ಗುಣಮಟ್ಟದ ನಿದ್ರೆ ಹೊಂದುರವವರು ಅಧಿಕ ಮಟ್ಟದ ಟ್ರಾನ್ಸ್-ಎಪಿಡರ್ಮಲ್ ನೀರಿನ ನಷ್ಟವನ್ನು ಹೊಂದಿದ್ದಾರೆ ಎಂದು ಅವರು ಕಂಡುಕೊಂಡಿದ್ದಾರೆ.
ಸಾರಾಂಶ
ಪ್ರತಿಯೊಬ್ಬ ವ್ಯಕ್ತಿಗೆ, ರಾತ್ರಿಯಲ್ಲಿನ ಉತ್ತಮ ಗುಣಮಟ್ಟದ ನಿದ್ರೆಯು ಕಾಂತಿಯುಕ್ತ ಚರ್ಮವನ್ನು ಒದಿಸುತ್ತದೆ. ಉತ್ತಮ ನಿದ್ರೆಯನ್ನು ಪಡೆಯುವುದು ಚರ್ಮವು ಮರುಯೌವ್ವನಗೊಳ್ಳಲು ಮತ್ತು ಹೊಳೆಯಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನಿದ್ರಾಹೀನತೆಯು ನಿಮ್ಮ ಚರ್ಮವನ್ನು ಕುಗ್ಗುವಿಕೆ, ಪೇಲವ ಮತ್ತು ನಿರ್ಜಲೀಕರಣಗೊಳಿಸಬಹುದು. ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಕೊಳೆ, ಕಶ್ಮಲ ಮತ್ತು ಮೇಕಪ್ ಅನ್ನು ತೆಗೆದುಹಾಕಿ. ನಿದ್ರೆಯ ಉತ್ತಮ ಅಭ್ಯಾಸವನ್ನು ರೂಢಿಸಿಕೊಳ್ಳಿ ಮತ್ತು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.