0

0

0

ಈ ಲೇಖನದಲ್ಲಿ

Pregnancy Weight Loss: ಬಾಣಂತಿಯರ ತೂಕ ಇಳಿಕೆಗೆ ಸಲಹೆಗಳು
23

Pregnancy Weight Loss: ಬಾಣಂತಿಯರ ತೂಕ ಇಳಿಕೆಗೆ ಸಲಹೆಗಳು

ಗರ್ಭಧಾರಣೆಯ ನಂತರ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವಾಗ ಜಾಗರೂಕರಾಗಿರಿ - ತಾಯಿ ಮತ್ತು ಮಗುವಿನ ಪೌಷ್ಟಿಕಾಂಶದ ಅವಶ್ಯಕತೆಗಳು ನೆನಪಿನಲ್ಲಿರಲಿ

ಬಾಣಂತಿಯರ ತೂಕ ಇಳಿಕೆಗೆ ಪರಿಗಣಿಸಬೇಕಾದ ಅಂಶಗಳು

ಬಾಣಂತಿಯರ ತೂಕ ಇಳಿಕೆಗೆ ಮುನ್ನ ಅನೇಕ ವಿಷಯಗಳನ್ನು ಪರಿಗಣಿಸಬೇಕು. ಗರ್ಭಧಾರಣೆಯ ನಂತರದ ತೂಕನಷ್ಟ ಕೆಲವು ಮಹಿಳೆಯರಿಗೆ ಮಹತ್ವದ್ದಾಗಿದೆ, ಆದರೆ ಎಲ್ಲರಿಗೂ ಸರಿಹೊಂದುವ ಒಂದೇ ವಿಧಾನವಿಲ್ಲ. “ಗರ್ಭಧಾರಣೆಯ ನಂತರದ ತೂಕ ನಷ್ಟವು ವ್ಯಕ್ತಿಯ ಆರೋಗ್ಯ, ಗರ್ಭಧಾರಣೆಯ ಪೂರ್ವ ಮತ್ತು ನಂತರದ ತೂಕ ಮತ್ತು ಒಟ್ಟಾರೆ ಸ್ವಾಸ್ಥ್ಯ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ” ಎಂದು ಬೆಂಗಳೂರಿನ ಅಪೋಲೋ ಕ್ಲಿನಿಕ್‌ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆಯಾಗಿರುವ ಡಾ. ಬಬಿತಾ ಮಾಥುರಿ ವಿವರಿಸುತ್ತಾರೆ. ಗರ್ಭಾವಸ್ಥೆಯಲ್ಲಿ ವ್ಯಕ್ತಿಯು ಶಿಫಾರಸು ಮಾಡಲಾದ ತೂಕಕ್ಕಿಂತ ಹೆಚ್ಚಿನ ತೂಕವನ್ನು ಪಡೆದುಕೊಂಡರೆ ಅಥವಾ ಅವರ ಗರ್ಭಧಾರಣೆಯ ನಂತರದ ತೂಕವು ಅನಾರೋಗ್ಯಕರ ಮಟ್ಟದಲ್ಲಿದ್ದರೆ, ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವುದು ಅವರ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳುತ್ತಾರೆ.

ಅಧಿಕ ತೂಕವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೆಚ್ಚುವರಿ ತೂಕ ಕೀಲುಗಳು ಮತ್ತು ಸ್ನಾಯುಗಳ ಮೇಲೆ ಒತ್ತಡವನ್ನು ಹೇರಿ ಅಸ್ವಸ್ಥತೆ, ವಿಶೇಷವಾಗಿ ಗರ್ಭಧಾರಣೆಯ ನಂತರದ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದ್ದರಿಂದ, ತೂಕವನ್ನು ಕಳೆದುಕೊಳ್ಳುವುದರಿಂದ ಈ ಕೆಲವು ಸಮಸ್ಯೆಗಳಿಗೆ ಪರಿಹಾರಪಡೆದುಕೊಳ್ಳಬಹುದಾಗಿದೆ.

ಇಲ್ಲಿವೆ ಸಲಹೆಗಳು: 

ಬಾಣಂತಿಯರ ತೂಕ ಇಳಿಕೆಗೆ ಮುನ್ನ ಪೋಷಣೆ ಆದ್ಯತೆಯಾಗಿರಲಿ

ಹೆರಿಗೆಯ ನಂತರ ಚೇತರಿಕೆ ಮತ್ತು ಯೋಗಕ್ಷೇಮವನ್ನು ಹೊಂದುವುದಕ್ಕಾಗಿ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಪ್ರಮುಖವಾಗಿದೆ. ತಾಯಂದಿರು ಕಾರ್ಯನಿರತರಾಗಿರುವಾಗ ಅಥವಾ ದಣಿದಿರುವಾಗ ಕಡಿಮೆ ಪೌಷ್ಟಿಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು ಮುಂಚಿತವಾಗಿ ತಯಾರಿಸಿಟ್ಟುಕೊಳ್ಳಬಹುದು ಎಂದು ಡಾ. ಮಾಥುರಿ ಸಲಹೆ ನೀಡುತ್ತಾರೆ. “ಅವರು ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆಯುಕ್ತ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಬಾರದು” ಎಂದು ಕರ್ನಾಟಕದ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ  ಎಂಡೋಕ್ರೈನಾಲಜಿ ಸಲಹೆಗಾರರಾದ ಡಾ. ಶ್ರೀನಾಥ್ ಪಿ ಶೆಟ್ಟಿ ಅವರು ಹೇಳುತ್ತಾರೆ.

ಈಗಷ್ಟೇ ತಾಯಿಯಾಗಿರುವವರು ಕಡಿಮೆ ಪರ್ಯಾಪ್ತ ಕೊಬ್ಬಿನ ಪ್ರೋಟೀನ್‌ಗಳು, ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಆರೋಗ್ಯಕರ ಕೊಬ್ಬುಗಳು, ಕಡಿಮೆ-ಕೊಬ್ಬಿನ ಡೈರಿ ಉತ್ಪನ್ನಗಳು, ಕಬ್ಬಿಣ-ಸಮೃದ್ಧ ಆಹಾರ, ಫೈಬರ್-ಸಮೃದ್ಧ ಶುಲ್ಕ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಮೃದ್ಧವಾಗಿ ಹೊಂದಿರುವ ಆಹಾರವನ್ನು ಹೆಚ್ಚೆಚ್ಚು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಸಹ ಮುಖ್ಯವಾಗಿದೆ. “ಹೈಡ್ರೇಟೆಡ್ ಆಗಿರುವುದರಿಂದ ನಿಮ್ಮ ಚಯಾಪಚಯ ಉತ್ತಮವಾಗಿರುತ್ತದೆ ಹಾಗೂ ಸಂತೃಪ್ತ ಭಾವನೆ ನೀಡುತ್ತದೆ, ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ” ಎಂದು ಡಾ. ಮಾಥುರಿ ಹೇಳುತ್ತಾರೆ.

“ಅಧಿಕ ಕ್ಯಾಲೋರಿಯುಕ್ತ ಬಾಳೆಹಣ್ಣು ಅಥವಾ ಹಲಸಿನ ಹಣ್ಣನ್ನು ಹೊರತುಪಡಿಸಿ ಹಣ್ಣುಗಳು ಆಹಾರದ ಭಾಗವಾಗಿರಲಿ”. ನೆಲದಡಿಯಲ್ಲಿ ಬೆಳೆಯುವ ತರಕಾರಿಗಳಾದ ಕೆಸುವಿನಗೆಡ್ಡೆ, ಗೆಣಸು, ಆಲೂಗೆಡ್ಡೆ ಮತ್ತು ಮೂಲಂಗಿಯಲ್ಲಿ ಪಿಷ್ಟದ ಅಂಶ ಹೆಚ್ಚಿರುವುದರಿಂದ ಅವುಗಳ ಸೇವನೆಯನ್ನೂ ಕಡಿಮೆ ಮಾಡಬೇಕು ಎಂದು ಎಂದು ಡಾ. ಶೆಟ್ಟಿ ತಿಳಿಸುತ್ತಾರೆ.

ನಿಯಮಿತ ವ್ಯಾಯಾಮ

ದಿನಚರಿಯಲ್ಲಿ ವ್ಯಾಯಾಮವನ್ನು ಕ್ರಮೇಣವಾಗಿ ಸೇರಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಈಗಷ್ಟೇ ತಾಯಿಯಾಗಿರುವವರು ಪ್ರತಿದಿನ ಕನಿಷ್ಠ ಅರ್ಧ ಘಂಟೆಯವರೆಗೆ ನಡೆಯುವಂತಹ ಕಡಿಮೆ-ಪ್ರಭಾವದ ಚಟುವಟಿಕೆಗಳೊಂದಿಗೆ ಪ್ರಾರಂಭಿಸಬಹುದು. ಆರಂಭದಲ್ಲಿ ವ್ಯಾಯಾಮ ಮಾಡುವುದು ಸವಾಲಿನ ಕೆಲಸ ಎನಿಸಿದರೂ, ಆರು ತಿಂಗಳಿಂದ ಒಂದು ವರ್ಷದ ನಂತರ, ತಾಯಿ ಏರೋಬಿಕ್ ವ್ಯಾಯಾಮದಲ್ಲಿ ತೊಡಗಿಕೊಳ್ಳಬಹುದು ಮತ್ತು ನಂತರ ರೆಸಿಸ್ಟನ್ಸ್ ತರಬೇತಿಯನ್ನು ಪಡೆದುಕೊಳ್ಳಬಹುದು ಎಂದು ಡಾ. ಶೆಟ್ಟಿ ವಿವರಿಸುತ್ತಾರೆ. ದೇಹವು ಚೇತರಿಸಿಕೊಂಡಂತೆ, ಅವರು ವ್ಯಾಯಾಮದ ತೀವ್ರತೆ ಮತ್ತು ಅವಧಿಯನ್ನು ಹೆಚ್ಚಿಸಬಹುದು. ಇವುಗಳಲ್ಲಿ ಗರ್ಭಾವಸ್ಥೆ ಮತ್ತು ಹೆರಿಗೆಯಿಂದ ದುರ್ಬಲಗೊಳ್ಳಬಹುದಾದ ಕೋರ್ ಮತ್ತು ಪೆಲ್ವಿಕ್ ಫ್ಲೋರ್ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು ಸೇರಿರಬೇಕು ಎಂದು ಡಾ. ಮಾಥುರಿ ಹೈಲೈಟ್ ಮಾಡುತ್ತಾರೆ. ಆದ್ದರಿಂದ, ಪೆಲ್ವಿಕ್ ಟಿಲ್ಟ್‌ಗಳು, ಕೆಗೆಲ್ಸ್ ಮತ್ತು ಸೌಮ್ಯವಾದ ಕೋರ್ ವ್ಯಾಯಾಮಗಳಂತಹ ಚಟುವಟಿಕೆಗಳು ಪ್ರಯೋಜನಕಾರಿಯಾಗಿವೆ.

 ಸಾಕಷ್ಟು ನಿದ್ರೆ ಮಾಡಿ

ಸಾಕಷ್ಟು ನಿದ್ರೆಯನ್ನು ಮಾಡುವುದು ಅತ್ಯಗತ್ಯ, ಏಕೆಂದರೆ ನೀವು ಅತಿಯಾದ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿರುವುದರಿಂದ ಅಗತ್ಯವಾದ ವಿಶ್ರಾಂತಿ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಮಾತ್ರವಲ್ಲದೇ ಒಟ್ಟಾರೆ ಯೋಗಕ್ಷೇಮದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ನಿರಾಂತಕವಾಗಿ ನಿದ್ರಿಸಲು ಸಾಧ್ಯವಾಗದಿರುವುದರಿಂದ ಹೆಚ್ಚಿನ ಶಕ್ತಿಯ ನಷ್ಟವುಂಟಾಗುತ್ತದೆ, ಇದಕ್ಕೆ ಒಂದು ಕಾರಣವೆಂದರೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಅಧಿಕವಾಗಿ ಹೊಂದಿರುವ ಆಹಾರಗಳ ಸೇವನೆಯಾಗಿದೆ. “ಸಾಧ್ಯವಾದರೆ ನಿಮ್ಮ ಮಗು ನಿದ್ರಿಸುವಾಗ ಸಾಕಷ್ಟು ವಿಶ್ರಾಂತಿ ಪಡೆಯಲು ಮತ್ತು ನಿದ್ರಿಸಲು ಪ್ರಯತ್ನಿಸಿ” ಎಂದು ಡಾ. ಮಾಥುರಿ ಹೇಳುತ್ತಾರೆ.

ಆಹಾರ ನಿಯಂತ್ರಣ

ಅತಿಯಾಗಿ ತಿನ್ನುವುದನ್ನು ತಡೆಯಲು ಆಹಾರದ ಪ್ರಮಾಣದ ಮೇಲೆ ಗಮನ ಹರಿಸುವುದು ಮುಖ್ಯ. “ಆಹಾರದ ಪ್ರಮಾಣವನ್ನು ನಿಯಂತ್ರಿಸಲು ಸಣ್ಣ ಪ್ಲೇಟ್‌ಗಳು ಮತ್ತು ಬೌಲ್‌ಗಳನ್ನು ಬಳಸಿ” ಎಂದು ಡಾ ಮಾಥುರಿ ಸಲಹೆ ನೀಡುತ್ತಾರೆ. ಒಮ್ಮೆಗೇ ಅಧಿಕ ಪ್ರಮಾಣದ ಆಹಾರವನ್ನು ಸೇವಿಸುವ ಬದಲು, ಆಗಾಗ್ಗೆ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸುವುದು ಉತ್ತಮವಾಗಿದೆ ಎಂದು ಡಾ. ಶೆಟ್ಟಿ ಅಭಿಪ್ರಾಯಪಡುತ್ತಾರೆ.

ಹಸಿವು ಮತ್ತು ಹೊಟ್ಟೆತುಂಬಿದ ಸೂಚನೆಗಳಿಗೆ ಗಮನ ಕೊಡುವ ಮೂಲಕ ಎಚ್ಚರಿಕೆಯಿಂದ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಮಗೆ ಹಸಿವಿಲ್ಲದಿರುವಾಗ ತಿನ್ನಬೇಡಿ ಮತ್ತು ನಿಮಗೆ ಹೊಟ್ಟೆತುಂಬಿದ ಅನುಭವವಾದ ಕೂಡಲೇ ತಿನ್ನುವುದನ್ನು ನಿಲ್ಲಿಸಿ, ಅತಿಯಾಗಿ ತುಂಬುವವರೆಗೂ ತಿನ್ನುವ ಅಗತ್ಯವಿಲ್ಲ  ಎಂದು ಡಾ. ಮಾಥುರಿ ವಿವರಿಸುತ್ತಾರೆ.

ಬಾಣಂತಿಯರ ತೂಕ ಇಳಿಕೆಗೆ ಮುನ್ನ ವಾಸ್ತವಿಕ ಗುರಿಗಳನ್ನು ಹೊಂದಿಸಿ

ಗರ್ಭಧಾರಣೆಯ ನಂತರದ ತೂಕ ಇಳಿಸುವ ಪ್ರಕ್ರಿಯೆಯು ನಿಧಾನ ಮತ್ತು ಸ್ಥಿರವಾದ ಪ್ರಕ್ರಿಯೆಯಾಗಿರಬೇಕು ಎಂದು ಬೆಂಗಳೂರಿನ ರೈನ್‌ಬೋ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಬರ್ತ್‌ರೈಟ್‌ನ ಪ್ರಸೂತಿ ಮತ್ತು ಗೈನಕಾಲಜಿಯ ಸಲಹೆಗಾರರಾಗಿರುವ ಡಾ. ಶ್ರೀವಿದ್ಯಾ ಗುಡ್ಡೆತಿ ರೆಡ್ಡಿ ಅವರು ಹಂಚಿಕೊಳ್ಳುತ್ತಾರೆ. ನಿಮ್ಮ ದೇಹವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ ಎಂದು ನೆನಪಿಟ್ಟುಕೊಳ್ಳಿ ಎಂದು ತಜ್ಞರು ಹೇಳುತ್ತಾರೆ – ಆದ್ದರಿಂದ, ಅದನ್ನು ಸರಿಪಡಿಸಲು ಮತ್ತು ಸರಿಹೊಂದಿಸಲು ಸಮಯ ಬೇಕಾಗುತ್ತದೆ. ಒಂಬತ್ತು ತಿಂಗಳ ಗರ್ಭಾವಸ್ಥೆಯಲ್ಲಿ ಹೆಚ್ಚಿದ ತೂಕವನ್ನು ಹೆರಿಗೆಯ ನಂತರ ತಕ್ಷಣವೇ ಕಳೆದುಕೊಳ್ಳಲು ಸಾಧ್ಯವಿಲ್ಲ, ಇದಕ್ಕೆ ಆರು ತಿಂಗಳಿಂದ ಒಂದು ವರ್ಷ ಕಾಲಾವಧಿ ಬೇಕಾಗಬಹುದು. ಕ್ರಮೇಣ ತೂಕ ಇಳಿಸುವ ಗುರಿಯ ಅಗತ್ಯವನ್ನು ಡಾ. ಮಾಥುರಿ ಒತ್ತಿ ಹೇಳುತ್ತಾರೆ.

ಆರೋಗ್ಯ ಸೇವಾದಾತರನ್ನು ಸಂಪರ್ಕಿಸಿ

ನಿಮ್ಮ ಆಹಾರಕ್ರಮ ಅಥವಾ ವ್ಯಾಯಾಮವನ್ನು ಬದಲಾಯಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. “ಅವರು ನಿಮ್ಮ ವೈಯಕ್ತಿಕ ಪರಿಸ್ಥಿತಿಯನ್ನು ತಿಳಿದುಕೊಂಡು ನೀವು ದೈಹಿಕ ಚಟುವಟಿಕೆಗೆ ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಂಡು ವೈಯಕ್ತೀಕರಿಸಿದ ಸಲಹೆಯನ್ನು ನೀಡುತ್ತಾರೆ” ಎಂದು ಡಾ. ಮಾಥುರಿ ವಿವರಿಸುತ್ತಾರೆ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

three × five =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ