0

0

0

ಈ ಲೇಖನದಲ್ಲಿ

ಜಂಕ್ ಫುಡ್‌ ತ್ಯಜಿಸಿಬಿಡಿ: ಇಲ್ಲಿವೆ 10 ಉಪಾಯಗಳು
16

ಜಂಕ್ ಫುಡ್‌ ತ್ಯಜಿಸಿಬಿಡಿ: ಇಲ್ಲಿವೆ 10 ಉಪಾಯಗಳು

ಅತಿಯಾಗಿ ಸಂಸ್ಕರಿಸಿದ ಆಹಾರ ಸೇವನೆಯ ನಿಮ್ಮ ಬಯಕೆಯನ್ನು ನಿಯಂತ್ರಿಸಲು ಮತ್ತು ತತ್ಪರಿಣಾಮವಾಗಿ ಬೊಜ್ಜು, ಮಧುಮೇಹ ಮತ್ತು ಹೃದ್ರೋಗಗಳಂತಹ ಸಮಸ್ಯೆಗಳಿಂದ ದೂರವಿರಲು ತಜ್ಞರು ಕೆಲವು ಸರಳ ಉಪಾಯಗಳನ್ನು ನೀಡಿದ್ದಾರೆ.

ಜಂಕ್ ಫುಡ್‌ ತ್ಯಜಿಸಿಬಿಡಿ

ಜಂಕ್ ಫುಡ್ ನಲ್ಲಿರುವ ಅತಿಯಾದ ಟ್ರಾನ್ಸ್‌ ಫ್ಯಾಟ್‌ಗಳು ಮತ್ತು ಸಕ್ಕರೆಯನ್ನು ಹೊಂದಿರುವ ಕಾರಣ ಅವುಗಳಿಂದ ಮಧುಮೇಹ ಹಾಗೂ ಹೃದ್ರೋಗಗಳಂತಹ ಅನೇಕ ಆರೋಗ್ಯ ಸಮಸ್ಯೆಗಳಾಗಬಹುದು.
ಸುಲಭವಾಗಿ ದೊರೆಯುವ, ಆಕರ್ಷಕವಾಗಿ ಪ್ಯಾಕ್ ಮಾಡಲಾದ, ಭರದಿಂದ ಮಾರಾಟವಾಗುವ ಮತ್ತು ಅತ್ಯಲ್ಪ ಸಮಯದಲ್ಲೇ ತಯಾರಿಸಬಹುದಾದ, ಹೀಗೆ ಅನೇಕ ಕಾರಣಗಳಿಂದ ಅನಾರೋಗ್ಯಕರ ಜಂಕ್ ಆಹಾರ ಪದಾರ್ಥಗಳು ಎಲ್ಲಾ ವಯಸ್ಸಿನ ಜನರಿಗೂ ಅತ್ಯಂತ ಪ್ರಿಯವಾದ ತಿನಿಸುಗಳಾಗಿವೆ.
ಆಹಾರ ಪ್ಯಾಕೇಜ್‌ಗಳಲ್ಲಿರುವ ‘ಟೂ-ಮಿನಿಟ್’ ಕ್ಯಾಚ್‌ಲೈನ್‌ಗಳು ಆರೋಗ್ಯದ ಮೇಲೆ ಜೀವನಪರ್ಯಂತ ಪರಿಣಾಮಗಳನ್ನು ಬೀರುತ್ತದೆ. ಅಷ್ಟಲ್ಲದೇ, ತ್ವರಿತ ಡೆಲಿವರಿ ಮೊಬೈಲ್ ಆ್ಯಪ್‌ಗಳು ಕೂಡಾ ಜಂಕ್ ಫುಡ್‌ಗಳು ನಮಗೆ ಸುಲಭವಾಗಿ ಕೈಗೆಟುಕುವಂತೆ ಮಾಡಿದೆ.
“ಹಸಿವೆಯಾದ ಕೂಡಲೇ ಇಂತಹ ತ್ವರಿತ ಮತ್ತು ಅನಾರೋಗ್ಯಕರ ಆಹಾರಗಳನ್ನು ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಕ್ರಮೇಣ ಮಧುಮೇಹ, ಬೊಜ್ಜು ಮಾತ್ರವಲ್ಲದೇ ಹೃದ್ರೋಗದಂತಹ ಸಮಸ್ಯೆಗಳು ಎದುರಾಗುತ್ತವೆ” ಎಂದು ಬೆಂಗಳೂರು ಮೂಲದ ಮಧುಮೇಹ ತಜ್ಞರಾದ ಡಾ ಅಶ್ವಿತ ಶ್ರುತಿ ದಾಸ್ ಅವರು ಹೇಳುತ್ತಾರೆ.
ಫಾಸ್ಟ್‌ಫುಡ್‌ಗಳಲ್ಲಿರುವ ಸಕ್ಕರೆ, ಉಪ್ಪು ಮತ್ತು ಟ್ರಾನ್ಸ್ ಫ್ಯಾಟ್‌ಗಳು ಅದನ್ನು ಮತ್ತೆ ಮತ್ತೆ ತಿನ್ನಬೇಕೆಂಬ ಬಯಕೆ ಮೂಡಿಸಿ ಜಂಕ್ ಫುಡ್ ತ್ಯಜಿಸುವುದು ಕಷ್ಟಕರ ಎನಿಸುವಂತೆ ಮಾಡುತ್ತದೆ.
ಆದರೆ, ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವುದರ ಮೂಲಕ, ನಿಮ್ಮ ಜಂಕ್ ಫುಡ್ ಸೇವನೆಯ ಬಯಕೆಯನ್ನು ನಿಯಂತ್ರಿಸಬಹುದು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ತಜ್ಞರು ಹೇಳುತ್ತಾರೆ.
ಇದಕ್ಕಾಗಿ ತಜ್ಞರು ಕೆಲವು ಜಾಣ ಸಲಹೆಗಳನ್ನು ನೀಡಿದ್ದಾರೆ:

ಜಂಕ್ ಫುಡ್ ತಡೆಗಟ್ಟಲು 10 ಉಪಾಯಗಳು

1. ಖಾಲಿಹೊಟ್ಟೆಯಲ್ಲಿ ಮನೆಯಿಂದ ಹೊರಹೋಗದಿರಿ:

ದೀರ್ಘಕಾಲದ ತನಕ ಆಹಾರ ಸೇವಿಸದಿರುವುದು ಜನರು ಜಂಕ್ ಫುಡ್‌ನತ್ತ ವಾಲುವುದಕ್ಕೆ ಒಂದು ಮುಖ್ಯ ಕಾರಣ. ಕ್ರಮೇಣ ನಿಮಗೆ ಏನನ್ನಾದರೂ ತಿನ್ನಬೇಕೆಂಬ ತೀವ್ರ ಬಯಕೆ ಉಂಟಾಗಿ ಕೊನೆಗೆ ಸುಲಭವಾಗಿ ಲಭ್ಯವಾಗುವ ಜಂಕ್ ಫುಡ್ ಅನ್ನೇ ಅಧಿಕ ಪ್ರಮಾಣದಲ್ಲಿ ಸೇವಿಸಿಬಿಡುತ್ತಿರಿ ಎಂದು ಬೆಂಗಳೂರು ಮೂಲದ ಆಹಾರತಜ್ಞರಾದ ನಿಧಿ ನಿಗಮ್ ಅವರು ಹೇಳುತ್ತಾರೆ.
ನೀವು ಪಾರ್ಟಿ ಅಥವಾ ಸಮಾರಂಭಕ್ಕೆ ತೆರಳುತ್ತಿದ್ದರೂ, ಮನೆಯಿಂದ ಹೊರಡುವಾಗ ಒಂದು ಸಣ್ಣ ಬೌಲ್‌ನಷ್ಟು ಮೊಸರು, ಒಂದು ಹಣ್ಣು ಅಥವಾ ಒಂದು ಲೋಟ ಹಾಲು ಇತ್ಯಾದಿ ಏನನ್ನಾದರೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಸಾಕು. ಇದರಿಂದ ನೀವು ಪಾರ್ಟಿಯಲ್ಲಿ ಅನಾರೋಗ್ಯಕರ ಅಥವಾ ಜಿಡ್ಡಿನ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದು ತಪ್ಪುತ್ತದೆ.

2. ನಿಮ್ಮ ವಾರದ ದಿನಸಿಯನ್ನು ಮೊದಲೇ ಯೋಜಿಸಿ

ಜಂಕ್ ಫುಡ್‌ಗಳನ್ನು ಆರ್ಡರ್ ಮಾಡುವುದು ಅಥವಾ ಖರೀದಿಸುವುದನ್ನು ತಪ್ಪಿಸಲು ನಿಮ್ಮ ವಾರದ ರಜೆಯಲ್ಲಿ ನಿಮ್ಮ ದಿನಸಿಯನ್ನು ಯೋಜಿಸುವುದು ಉತ್ತಮ. ಮಾತ್ರವಲ್ಲ, ಒಂದು ವಾರದ ತನಕದ ನಿಮ್ಮ ದಿನನಿತ್ಯದ ಊಟವನ್ನೂ ಮೊದಲೇ ಯೋಜಿಸಿ ಅದಕ್ಕೆ ತಕ್ಕಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುವುದು ಇನ್ನೂ ಉತ್ತಮ. ಇದರೊಂದಿಗೆ, ಶಾಪಿಂಗ್ ಹೋಗುವಾಗ ತಾಜಾ ಆಹಾರ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಮಾತ್ರ ಪಟ್ಟಿಗೆ ಸೇರಿಸಿ ಅದನ್ನು ಮಾತ್ರ ಖರೀದಿಸಿ ಎಂದು ನಿಗಮ್ ಅವರು ಹೇಳುತ್ತಾರೆ.
ಒಂದು ವೇಳೆ ನೀವು ಒಂದು ದಿನ ಪಾಸ್ತಾ ಮಾಡುವ ಯೋಜನೆ ಹೊಂದಿದ್ದರೆ, ರೆಡಿಮೇಡ್ ಪಾಸ್ತಾ ಸಾಸ್ ಖರೀದಿಸುವ ಬದಲಿಗೆ ನೀವು ಹೆಚ್ಚಿನ ಟೊಮೆಟೊಗಳನ್ನು ಖರೀದಿಸಿ ಮನೆಯಲ್ಲೇ ಸಾಸ್ ತಯಾರಿಸಿ. ರೆಡಿಮೇಡ್ ಆಹಾರದ ಬದಲಿಗೆ ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನು ಸೇವಿಸಬೇಕು ಎಂಬುದು ನಿಗಮ್ ಅವರ ಸಲಹೆ.

3. ನಿಷೇಧಿತ ಆಹಾರ ಸೇವನೆ ವಿಧಾನವನ್ನು ಆಯ್ಕೆ ಮಾಡಬೇಡಿ

ದೆಹಲಿ ಮೂಲದ ಆಹಾರ ತಜ್ಞರಾದ ಖೋಸ್ಲಾ ಅವರ ಪ್ರಕಾರ, ನೀವು ಇಂತಹ ಆಹಾರವನ್ನು ಸೇವಿಸುವುದೇ ಇಲ್ಲವೆಂದು ಘೋಷಿಸಿದರೆ, ನೀವು ನಿಯಮವನ್ನು ಉಲ್ಲಂಘಿಸಿ ಅದನ್ನು ಸೇವಿಸುವ ಸಂಭವವೇ ಹೆಚ್ಚು. ಅದಕ್ಕಿಂತ ವಾರಕ್ಕೆ ಒಂದು ದಿನವನ್ನು ನೀವು ಚೀಟ್ ಡೇ ಎಂದು ಪರಿಗಣಿಸಿ ಉಳಿದ ದಿನಗಳಂದು ಆರೋಗ್ಯಕರ ಆಹಾರ ಸೇವಿಸುವುದನ್ನೇ ಅಭ್ಯಾಸ ಮಾಡುವುದು ಒಳ್ಳೆಯದು.

4. ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಿ

ಜಂಕ್ ಫುಡ್ ಅನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಿಕೊಂಡು ಬರುವುದು ಆರೋಗ್ಯಕರ ಆಹಾರಸೇವನೆಗೆ ಪ್ರಮುಖವಾದುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. “ಸಂಪೂರ್ಣವಾಗಿ ಸಿಹಿತಿಂಡಿಯಿಂದಲೇ ಹೊಟ್ಟೆ ತುಂಬಿಸುವ ಬದಲಿಗೆ, ಅದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ, ಇದರಿಂದ ನಿಮ್ಮ ಆಹಾರಕ್ರಮದ ಮೇಲೆ ಅಂತಹ ದುಷ್ಪರಿಣಾಮ ಉಂಟಾಗುವುದಿಲ್ಲ” ಎನ್ನುತ್ತಾರೆ ಖೋಸ್ಲಾ.
ಜಂಕ್ ಫುಡ್ ಸೇವನೆಯ ಬಯಕೆ ಉಳ್ಳವರು ಕೆಲವು ಸರಳ ವಿಧಾನಗಳನ್ನು ಅನುಸರಿಸಿ ಇದರ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಉದಾಹರಣೆಗೆ, ನೀವು ಬರ್ಗರ್ ಸೇವಿಸುತ್ತಿದ್ದರೆ, ಅದರ ಮೇಲಿನ ತುಂಡನ್ನು ತೆಗೆದುಹಾಕಬಹುದು. ಇದರಿಂದ ಸ್ವಲ್ಪ ಪ್ರಮಾಣದ ಮೈದಾ ನಿಮ್ಮ ಹೊಟ್ಟೆಗೆ ಹೋಗುವುದು ತಪ್ಪುತ್ತದೆ. ಅದೇ ರೀತಿ ನೀವು ಪಿಜ್ಜಾ ಸೇವಿಸುತ್ತಿದ್ದರೆ, ಅದರ ಜೊತೆಗೆ ರೋಸ್ಟ್ ಮಾಡಿದ ತರಕಾರಿಗಳು, ಪನೀರ್ ಕ್ಯೂಬ್‌ಗಳು ಅಥವಾ ಚಿಕನ್ ತುಣುಕುಗಳನ್ನು ಸೇರಿಸಿ ಸೇವಿಸಬಹುದು ಎಂದು ನಿಗಮ್ ಅವರು ಹೇಳುತ್ತಾರೆ.

5. ಸರಿಯಾದ ಸ್ಟಾರ್ಟರ್‌ಗಳನ್ನು ಆಯ್ಕೆ ಮಾಡಿ

ನೀವು ಹೊರಗಡೆ ತಿನ್ನುವುದಾದರೆ, ಯಾವಾಗಲೂ ಆರೋಗ್ಯಕರ ಮತ್ತು ಹೊಟ್ಟೆ ತುಂಬುವ ಸ್ಟಾರ್ಟರ್‌ಗಳಾದ ತರಕಾರಿ ಪಲ್ಯಗಳು ಅಥವಾ ಮಶ್ರೂಮ್ ಅಥವಾ ಚಿಕನ್‌ನಿಂದ ತಯಾರಿಸಿದವುಗಳನ್ನು ಸೇವಿಸಿ. ಇದರಿಂದ ನೀವು ಮುಖ್ಯ ಆಹಾರವನ್ನು ಅತಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ. ನೀರಿನಂತಹ ಸೂಪ್‌ಗಳಾದ ನಿಂಬೆ ಕೊತ್ತಂಬರಿ ಸೂಪ್ ಅಥವಾ ಚಿಕನ್ ಸೂಪ್‌ಗಳು ಕಾರ್ನ್ ಸ್ಟಾರ್ಚ್ ಅನ್ನು ಹೊಂದಿರುವುದಿಲ್ಲ, ಆದ್ದರಿಂದ ಇವುಗಳು ಉತ್ತಮ ಆಯ್ಕೆಗಳಾಗುತ್ತವೆ ಎಂದು ನಿಗಮ್ ಅವರು ಹೇಳುತ್ತಾರೆ.
ಗ್ರಿಲ್ ಮಾಡಿದ ಪ್ರೊಟೀನ್ ಸ್ಟಾರ್ಟರ್‌ಗಳು (ಪನೀರ್, ಮೀನು ಅಥವಾ ಚಿಕನ್ ಟಿಕ್ಕಾ) ಕೂಡಾ ಉತ್ತಮ ಸ್ಟಾರ್ಟರ್‌ಗಳು, ಇದರಿಂದ ನೀವು ಸಂಸ್ಕರಿತ ಕಾರ್ಬೋಹೈಡ್ರೇಟ್‌ಯುಕ್ತ ಆಹಾರವನ್ನು ಅತಿಯಾಗಿ ಸೇವಿಸುವುದು ತಪ್ಪುತ್ತದೆ.

6. ಸಿಹಿತಿಂಡಿಗಳನ್ನು ಊಟದ ನಡುವೆ ಸೇವಿಸಿ

ಸಿಹಿತಿಂಡಿಗಳ ವಿಷಯದಲ್ಲಿ ಸಾಮಾನ್ಯವಾಗಿ ಜನರು ತಮ್ಮ ನಿಯಮಗಳನ್ನು ಸಡಿಲಿಸಿಬಿಡುತ್ತಾರೆ. ಆದ್ದರಿಂದ ಅವುಗಳನ್ನು ಆರಂಭದಲ್ಲೇ ತಿನ್ನದೆ, ಊಟದ ಮಧ್ಯೆ ಸೇವಿಸುವುದು ಉತ್ತಮ. ಇದರಿಂದ ನೀವು ಸಿಹಿತಿಂಡಿಗಳನ್ನು ಆನಂದಿಸಬಹುದು ಮತ್ತು ಭೂರಿ ಭೋಜನವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು ಎನ್ನುತ್ತಾರೆ ನಿಗಮ್.

7. ಮನೆಯಲ್ಲೇ ಸ್ನ್ಯಾಕ್ಸ್ ಸೇವಿಸುವುದು ಉತ್ತಮ

ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಸ್ನ್ಯಾಕ್ಸ್ ತಯಾರಿಸಿ ಸೇವಿಸುವುದು ಉತ್ತಮ ಎಂದು ನಿಗಮ್ ಅವರು ಹೇಳುತ್ತಾರೆ. ಉದಾಹರಣೆಗೆ ಹುರಿದ ಕಡಲೆ ಅತ್ಯುತ್ತಮ ಸ್ನ್ಯಾಕ್ ಆಗಬಲ್ಲುದು ಯಾಕೆಂದರೆ, ಇದು ನಾರಿನಂಶಭರಿತವಾಗಿದ್ದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಅಲ್ಲದೇ ಸುಟ್ಟ ಹಪ್ಪಳಕ್ಕೆ ಕತ್ತರಿಸಿದ ಈರುಳ್ಳಿ, ಟೊಮೆಟೋ ಮತ್ತು ರೋಟಿ ಕ್ವೆಸಡೆಲ್ಲ (ಮೆಕ್ಸಿಕೋ ರೊಟ್ಟಿ) ಜೊತೆಗೆ ಉಳಿದಂತಹ ರೊಟ್ಟಿಯ ಮೇಲೆ ಮನೆಯಲ್ಲಿ ತಯಾರಿಸಿದ ಸಾಲ್ಸಾ, ಬೀನ್ಸ್ ಮತ್ತು ಸಂಸ್ಕರಿಸದ ಚೀಸ್ ಸೇರಿಸಿ ತಯಾರಿಸಿದ ಸ್ನ್ಯಾಕ್ಸ್ ಸೇವಿಸಬಹುದು ಎನ್ನುತ್ತಾರೆ.

8. ಹಣ್ಣುಗಳು ಮತ್ತು ಬೀಜಗಳನ್ನು ಹೆಚ್ಚಾಗಿ ಸೇವಿಸಿ

ಮನೆಯಲ್ಲಿ ಹಣ್ಣುಗಳು ಮತ್ತು ಬೀಜಗಳನ್ನು ಸಂಗ್ರಹಿಸಿಡುವುದರಿಂದ ನಿಮ್ಮ ಜಂಕ್ ಫುಡ್ ತಿನ್ನುವ ಬಯಕೆಗೆ ಬ್ರೇಕ್ ಹಾಕಬಹುದು. ಇವುಗಳು ನಿಮ್ಮ ಕೈಗೆ ಸಿಗುವಂತಿರಬೇಕು ಮತ್ತು ಇವುಗಳನ್ನು ಡೈನಿಂಗ್ ಟೇಬಲ್ ಮೇಲೆ ಇರಿಸಿದರೆ ಮಕ್ಕಳಿಂದ ಹಿಡಿದು ಮನೆಯವರೆಲ್ಲರೂ ರೆಡಿಮೇಡ್ ಆಹಾರದ ಬದಲಿಗೆ ಇದನ್ನು ಸೇವಿಸಬಹುದು ಎಂದು ನಿಗಮ್ ಅವರು ಹೇಳುತ್ತಾರೆ.

9. ಸಮತೋಲನದ ತತ್ವ

ಖೋಸ್ಲಾ ಅವರು ಹೇಳುವ ಪ್ರಕಾರ, ಕೆಲವೊಂದು ದಿನ ಮಿತಸೇವನೆ ಅಥವಾ ಭಾಗಶಃ ನಿಯಂತ್ರಣ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಆಹಾರವನ್ನು ಸಮತೋಲನಗೊಳಿಸುವುದರಿಂದ ಹಾನಿಯನ್ನು ತಡೆಗಟ್ಟಬಹುದು. ಅಂದರೆ, ನೀವು ಅತಿಯಾಗಿ ಊಟ ಮಾಡಿದ್ದರೆ, ಮುಂದಿನ ಊಟವನ್ನು ಲಘುವಾಗಿ ಸೇವಿಸಬೇಕು, ಇದರಿಂದ ನಿಮ್ಮ ಗುರಿಗೆ ಯಾವ ತೊಂದರೆ ಉಂಟಾಗುವುದಿಲ್ಲ ಎಂದು ಅವರು ಹೇಳುತ್ತಾರೆ.ಅಲ್ಲದೇ, ದೈಹಿಕ ಚಟುವಟಿಕೆಯ ಮೂಲಕವೂ ಸಮತೋಲನವನ್ನು ಕಾಯ್ದುಕೊಳ್ಳಬಹುದು. ತೂಕ ನಿರ್ವಹಣೆಗಾಗಿ ಚೀಟ್ ದಿನಗಳಲ್ಲಿ 15 ನಿಮಿಷಗಳ ಕಾಲ ಹೆಚ್ಚು ವಾಕ್ ಮಾಡಿ ಎಂದು ಡಾ ದಾಸ್ ಹೇಳುತ್ತಾರೆ.

10. ಆರೋಗ್ಯಕರ ಪೇಯಗಳು

ಸೋಡಾಯುಕ್ತ ಪಾನಿಯಗಳಲ್ಲಿರುವ ಸಂಸ್ಕರಿಸಿದ ಸಕ್ಕರೆಯು ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದಕ್ಕೆ ಬದಲಾಗಿ ಉಪಯುಕ್ತ ಮಸಾಲೆಗಳನ್ನು ಬಳಸಿ ತಯಾರಿಸಿದ ತಾಜಾ ಮತ್ತು ಆರೋಗ್ಯಕರ ಪೇಯಗಳ ಸೇವನೆಯನ್ನು ಆಯ್ಕೆ ಮಾಡಬೇಕು. ಚಾಟ್ ಮಸಾಲಾ, ಸೈಂದವ ಲವಣ, ನಿಂಬೆರಸ ಮತ್ತು ನೀರಿನಿಂದ ಮನೆಯಲ್ಲೇ ತಯಾರಿಸಿದ ಜಲ್‌ಜೀರಾ ಸೇವಿಸಿ ಎಂದು ಅವರು ಹೇಳುತ್ತಾರೆ.
ಅವರು ಸೂಚಿಸುವ ಇನ್ನೊಂದು ಪೇಯವೆಂದರೆ ಮಸಾಲೆ ಮಜ್ಜಿಗೆ, ಇವುಗಳಿಂದ ಹೊಟ್ಟೆ ತುಂಬುತ್ತದೆ ಮತ್ತು ಎರಡು ಊಟದ ನಡುವೆ ಇದನ್ನು ಸೇವಿಸುವುದು ಆರೋಗ್ಯಕರ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ