ಕರ್ನಾಟಕದ ಹುಬ್ಬಳ್ಳಿಯಲ್ಲಿ ನೆಲೆಸಿರುವ 31 ವರ್ಷ ವಯಸ್ಸಿನ ನಮ್ರತಾ ನಾಯಕ್ (ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ), ತಮ್ಮ ಸಹಪಾಠಿಯನ್ನು ಪ್ರೀತಿಸಿ, ತಮ್ಮ ಕುಟುಂಬದ ವಿರೋಧದ ನಡುವೆಯೂ ಅವರನ್ನು ಮದುವೆಯಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ದುಃಖಕರ ವಿಷಯವೆಂದರೆ, ಆರಂಭದಲ್ಲಿ ಅವರ ನಡುವೆಯಿದ್ದ ಪ್ರೀತಿಯು ಮದುವೆಯಾದ ಕೆಲವೇ ತಿಂಗಳುಗಳ ನಂತರ ವೈಮನಸ್ಯಕ್ಕೆ ತಿರುಗಿತು. ತಮ್ಮ ಪತಿ ಮದ್ಯವ್ಯಸನಿ ಎಂದು ನಾಯಕ್‌ಗೆ ಬಹಳ ಬೇಗ ತಿಳಿಯಿತು, ಇದರಿಂದಾಗಿ ಮನೆಯಲ್ಲಿ ಪದೇ ಪದೇ ಜಗಳವಾಗತೊಡಗಿತು.
ವಿಚಿತ್ರವೆಂದರೆ, ಅವರು ತಮ್ಮ ಪತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು ಮತ್ತು ಯಾರಾದರೂ ಅವರ ಆಯ್ಕೆಯನ್ನು ಟೀಕಿಸಿದಾಗ ಅಥವಾ ಪ್ರಶ್ನಿಸಿದಾಗ ಪತಿಯೊಂದಿಗೆ ತಮ್ಮ ಸಂಬಂಧ ಪರಿಪೂರ್ಣವಾಗಿದೆ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಕಾಲ ಕಳೆದಂತೆ, ಮನೆಯಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ನಾಯಕ್ ಅವರ ಪತಿಯನ್ನು ಪ್ರಶ್ನಿಸಿದಾಗ, ಅವರು ಆಕೆಯ ಅಸಡ್ಡೆ ಮತ್ತು ನಿರ್ಲಕ್ಷ್ಯದ ನಡವಳಿಕೆಯೇ ಇದಕ್ಕೆಲ್ಲಾ ಕಾರಣ ಎಂದು ದೂಷಿಸಿದರು.
“ನಾನು ಒಳ್ಳೆಯ ಹೆಂಡತಿಯಲ್ಲ ಎಂದುಕೊಂಡು ಖಿನ್ನತೆಗೆ ಕೂಡ ಒಳಗಾಗಿದ್ದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಎಂತದ್ದೇ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಪತಿಯನ್ನು ತೊರೆಯುವ ಬಗ್ಗೆ ಯೋಚಿಸಲಿಲ್ಲ ಮತ್ತು ಅವರನ್ನು ಮೆಚ್ಚಿಸಲು ಎಲ್ಲವನ್ನೂ ಮಾಡಿದರು.
ಸಂಗಾತಿಯ ಮೇಲಿನ ಅತಿ ಅವಲಂಬನೆ ಎಂದರೇನು?
ನಾಯಕ್ ಅವರ ಕಥೆಯು ಸಂಬಂಧದಲ್ಲಿ ಅತಿಯಾದ ಅವಲಂಬನೆಯ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಈ ಪದವು ವ್ಯಕ್ತಿಗಳು ತಮ್ಮ ಸ್ವಂತ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಿಂತ ಸಂಗಾತಿಯ ಸಂತೋಷ ಮತ್ತು ಯೋಗಕ್ಷೇಮದ ಮೇಲೆ ಹೆಚ್ಚು ಅವಲಂಬಿತವಾಗಿರುವ ಸ್ಥಿತಿಯನ್ನು ಸೂಚಿಸುತ್ತದೆ.
ಇದು ವ್ಯಕ್ತಿಯೊಬ್ಬರು ಇನ್ನೊಬ್ಬ ವ್ಯಕ್ತಿಯೊಂದಿಗೆ ತುಂಬಾ ಗಾಢವಾದ ಅಟ್ಯಾಚ್‌ಮೆಂಟ್ ಅನ್ನು ಹೊಂದಿದ್ದು, ಅವರ ಗೌರವವನ್ನು ಎತ್ತಿಹಿಡಿಯಲು ಮತ್ತು ಪ್ರೀತಿಯನ್ನು ಗಳಿಸಲು ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿರುವ ಸ್ಥಿತಿಯಾಗಿದೆ ಎಂದು ಬೆಂಗಳೂರಿನ ಬಂಜಾರ ಅಕಾಡೆಮಿಯ ಸಮಾಲೋಚನೆ ಕೇಂದ್ರದ ಸಲಹೆಗಾರ, ಅಂಕಣಕಾರ ಮತ್ತು ಜೀವನ ಕೌಶಲ್ಯ ತರಬೇತುದಾರರಾದ ಡಾ. ಅಲಿ ಖ್ವಾಜಾ ಅವರು ವಿವರಿಸುತ್ತಾರೆ.
ಇದು ನಿಸ್ಸಂದೇಹವಾಗಿ ಏಕಪಕ್ಷೀಯ ಸಂಬಂಧವಾಗುತ್ತದೆ, ಇದರಲ್ಲಿ ಅತಿಯಾಗಿ ಅವಲಂಬಿತರು ಎಲ್ಲಾ ಪ್ರೀತಿ ಮತ್ತು ರಕ್ಷಣೆಯನ್ನು ಒದಗಿಸುತ್ತಾರೆ ಮತ್ತು ಇನ್ನೊಬ್ಬರು ಯಾವುದೇ ರೀತಿಯಲ್ಲಿ ಕುಗ್ಗದಂತೆ ನೋಡಿಕೊಳ್ಳುತ್ತಾರೆ. “ಇದು ಆರೋಗ್ಯಕರ ಬಂಧವನ್ನುಂಟುಮಾಡುವುದು ತೀರಾ ಅಪರೂಪ” ಎಂದು ಅವರು ಹೇಳುತ್ತಾರೆ.
2022 ರಲ್ಲಿ ನಡೆಸಿದ “ಹೌ ಕೋಡಿಪೆಂಡೆನ್ಸಿ ಅಫೆಕ್ಟ್ಸ್ ಡೈಅಯಾಡಿಕ್ ಕೋಪಿಂಗ್, ರಿಲೇಷನ್‌ಶಿಪ್ ಪರ್ಸಪ್ಷನ್ ಅಂಡ್ ಲೈಫ್ ಸ್ಯಾಟಿಸ್‌ಫ್ಯಾಕ್ಷನ್” ಎಂಬ ಶೀರ್ಷಿಕೆಯ ಅಧ್ಯಯನದ ಮೂಲಕ, ಕ್ಲಿನಿಕಲ್ ಸೈಕಾಲಜಿಸ್ಟ್ ಝ್ಸುಜ್ಸಾ ಹ್ಯಾಪ್ ಮತ್ತು ಅವರ ತಂಡ ಉನ್ನತ ಮಟ್ಟದ ಅತಿ ಅವಲಂಬನೆ ಹೊಂದಿರುವ ವ್ಯಕ್ತಿಗಳು ತಮ್ಮಲ್ಲಿ ಮತ್ತು ತಮ್ಮ ಸಂಗಾತಿಯಲ್ಲಿ ಋಣಾತ್ಮಕ ನಿಭಾಯಿಸುವಿಕೆ ನಡವಳಿಕೆಗಳನ್ನು ಹೆಚ್ಚಾಗಿ ಗಮನಿಸುತ್ತಾರೆ, ಇದು ಅವರ ಬಾಂಧವ್ಯವನ್ನು ಹೆಚ್ಚು ಸಮಸ್ಯೆಗಳಿಗೆ ಗುರಿಯಾಗಿಸುತ್ತದೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದೆ.
ಅಧ್ಯಯನದ ಅಂಕಿಅಂಶಗಳ ಮಾದರಿಯು ಅತಿಯಾಗಿ ಅವಲಂಬಿಸುವುದು, ಋಣಾತ್ಮಕ ನಿಭಾಯಿಸುವಿಕೆ ನಡವಳಿಕೆಗಳು ಮತ್ತು ಸಂಬಂಧದ ಸಮಸ್ಯೆಗಳು ಜೀವನ ಸಂತೃಪ್ತಿಯಲ್ಲಿ ಕುಂಠಿತಕ್ಕೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ. ಒಟ್ಟಾರೆಯಾಗಿ, ಅವಲಂಬನೆ ಅತಿಯಾದಷ್ಟೂ, ವ್ಯಕ್ತಿಗಳು ತಮ್ಮ ಸಂಗಾತಿಯಲ್ಲಿ ಋಣಾತ್ಮಕ ನಡವಳಿಕೆಗಳನ್ನು ಗಮನಿಸುವ ಸಾಧ್ಯತೆ ಅಧಿಕವಾಗುತ್ತದೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಬಾಂಧವ್ಯದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ ಎಂದು ಅಧ್ಯಯನವು ಸೂಚಿಸುತ್ತದೆ.
ಸಮಸ್ಯೆಯ ತೀವ್ರತೆಯನ್ನು ಗುರುತಿಸುವುದು
ಈ ಸ್ಥಿತಿಯಲ್ಲಿ ಯಾವುದೇ ಪೀಡಿತರು, ಪೀಡಕರು ಅಥವಾ ರಕ್ಷಕರು ಇಲ್ಲದಿರುವುದರಿಂದ ಅತಿಯಾಗಿ ಅವಲಂಬಿತವಾದ ಬಾಂಧವ್ಯವನ್ನು ಗುರುತಿಸುವುದು ಕಠಿಣವಾಗಿದೆ. “ಅವರು ತಮ್ಮ ಸಂಗಾತಿಯು ನೋವನ್ನುಂಟುಮಾಡುತ್ತಾರೆ ಎಂದು ತಿಳಿದಿದ್ದರೂ ಸಹ ಅವರು ಸಂಬಂಧವನ್ನು ಕಡಿದುಕೊಳ್ಳಲು ಬಯಸುವುದಿಲ್ಲ” ಎಂದು ಬೆಂಗಳೂರಿನ ಆನ್‌ಲೈನ್ ಕೌನ್ಸೆಲಿಂಗ್ ಮತ್ತು ಭಾವನಾತ್ಮಕ ಸ್ವಾಸ್ಥ್ಯ ಪ್ಲಾಟ್‌ಫಾರ್ಮ್ ಯುವರ್‌ದೋಸ್ತ್‌ನ ಮನಶ್ಶಾಸ್ತ್ರಜ್ಞರಾದ ರಕ್ಷಿತಾ ಘಾಡ್ಗೆ ಹೇಳುತ್ತಾರೆ.
ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ:
- ಸ್ವ-ಆರೈಕೆಗಾಗಿ ಸಮಯವನ್ನು ವ್ಯಯಿಸುವುದು ಸ್ವಾರ್ಥಿ ಎಂಬ ಭಾವನೆಯನ್ನು ಉಂಟುಮಾಡುವುದು.
- ಸಂಬಂಧದ ಬಗ್ಗೆ ನಿರಂತರ ಭರವಸೆಯ ಅಗತ್ಯವಿರುವುದು
- ಸಂಬಂಧದ ಬಗ್ಗೆ ತಮ್ಮ ಭಾವನೆಯನ್ನು ವಿವರಿಸಲು ಕಷ್ಟವಾಗುವುದು.
- ಒಬ್ಬಂಟಿಯಾಗಿರಲು ಅಥವಾ ಸಂಗಾತಿಯನ್ನು ಹೊರತುಪಡಿಸಿ ಬೇರೆ ಯಾರೊಂದಿಗೂ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗದಿರುವುದು.
- ಸಂಗಾತಿಯೊಂದಿಗೆ ಸಮಯ ಕಳೆಯುವ ಯೋಜನೆಗಳನ್ನು ರದ್ದುಗೊಳಿಸುವುದು.
- ಇನ್ನೊಬ್ಬರು ಬಯಸಿದ್ದನ್ನು ಮಾಡಲು ತಮ್ಮ ನೈತಿಕತೆ ಅಥವಾ ಆತ್ಮಸಾಕ್ಷಿಯನ್ನು ನಿರ್ಲಕ್ಷಿಸುವುದು.
ಅತಿ ಅವಲಂಬನೆ, ಮಾನಸಿಕ ಮತ್ತು ಭಾವನಾತ್ಮಕ ಅಂಶಗಳು
ಆತ್ಮಗೌರವದ ಕೊರತೆ, ಭಾವನಾತ್ಮಕ ನಿರ್ಲಕ್ಷ್ಯ ಮತ್ತು ತಮ್ಮದೇ ಸಾಮರ್ಥ್ಯ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ವಿಶ್ವಾಸದ ಕೊರತೆಯೊಂದಿಗೆ ಬೆಳೆದವರು ಭಾವನಾತ್ಮಕವಾಗಿ ಅವಲಂಬಿತರಾಗಬಹುದು ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಲು ಯಾವಮಟ್ಟಕ್ಕೂ ಹೋಗಬಹುದು. ಇನ್ನೊಂದು ಸಾಧ್ಯತೆಯೆಂದರೆ, ಇನ್ನೊಬ್ಬರು ತಮ್ಮನ್ನು ತೊರೆದುಹೋಗಬಹುದು ಎಂಬ ಚಿಂತೆ. ಹಾಗೆಯೇ, ಅತಿ ಅವಲಂಬಿತ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಅನಪೇಕ್ಷಿತ ವರ್ತನೆಗೆ ಕಾರಣವಾಗಬಹುದು ಎಂದು ಖ್ವಾಜಾ ಅವರು ಅಭಿಪ್ರಾಯಪಡುತ್ತಾರೆ.
ಅತಿ ಅವಲಂಬಿತ ಸಂಬಂಧಗಳನ್ನು ಉತ್ತೇಜಿಸುವ ಪ್ರಮುಖ ಅಂಶಗಳ ಬಗ್ಗೆ ಘಾಡ್ಗೆ ವಿವರಿಸುತ್ತಾರೆ:
- ಮದ್ಯಪಾನ ಅಥವಾ ಇತರ ಚಟಗಳ ಕೌಟುಂಬಿಕ ಇತಿಹಾಸ ಹೊಂದಿರುವ ವ್ಯಕ್ತಿಗಳು
- ಮದ್ಯ ಅಥವಾ ಅಂತಹ ಇತರ ವ್ಯಸನಗಳನ್ನು ದೂಷಿಸುವ ಸಂಗಾತಿಯನ್ನು ಹೊಂದಿರುವವರು
- ದುರ್ವರ್ತನೆಯ ಕೌಟುಂಬಿಕ ಇತಿಹಾಸ ಹೊಂದಿರುವವರು
- ಸಂಗಾತಿಯಿಂದ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟವರು
ಅತಿಯಾದ ಅವಲಂಬನೆಯಿಂದ ಮುಕ್ತಿಪಡೆಯುವುದು
ಅತಿಯಾದ ಅವಲಂಬನೆಯ ವಿಷವರ್ತುಲದಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು, ಇತರರ ಸಮಸ್ಯೆಗಳಿಂದ ತನ್ನನ್ನು ದೂರವಿರಿಸಿಕೊಳ್ಳುವುದು ಮತ್ತು ಸ್ವಂತ ಮಾನಸಿಕ ಆರೋಗ್ಯದ ಕಾಳಜಿ ವಹಿಸುವುದನ್ನು ಕಲಿಯುವುದು ಅತ್ಯಗತ್ಯವಾಗಿದೆ. “ನಿರ್ಲಿಪ್ತತೆ/ ಅಂಟಿಕೊಳ್ಳದಿರುವಿಕೆ ಎಂದರೆ ನಾವು ಕಾಳಜಿ ವಹಿಸದಿರುವುದು ಎಂದು ಅರ್ಥವಲ್ಲ, ಬದಲಿಗೆ ಈ ಪ್ರಕ್ರಿಯೆಯಲ್ಲಿ ನಮ್ಮತನವನ್ನು ಕಳೆದುಕೊಳ್ಳದೆಯೇ ನಮ್ಮ ಸಂಗಾತಿಯನ್ನು ಪ್ರೀತಿಸಲು ಮತ್ತು ಕಾಳಜಿ ವಹಿಸಲು ಕಲಿಯುವುದಾಗಿದೆ” ಎಂದು ಅಮೆರಿಕದ ಬರಹಗಾರ್ತಿ ಮತ್ತು ಸಂಶೋಧಕಿಯಾಗಿರುವ ಮೆಲೊಡಿ ಬೀಟಿ ತಮ್ಮ ಪುಸ್ತಕ ಕೋಡಿಪೆಂಡೆಂಟ್ ನೋ ಮೋರ್‌ನಲ್ಲಿ ಹೇಳಿದ್ದಾರೆ.
ಇನ್ನೊಬ್ಬರನ್ನು ರಕ್ಷಿಸುವುದು ಇಬ್ಬರಿಗೂ ತೊಂದರೆಯನ್ನುಂಟುಮಾಡುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು. ನಿಮ್ಮದೇ ಆದ ಗುರುತನ್ನು ಹೊಂದಲು ಪ್ರಯತ್ನಿಸಿ; ಇತರರ ಕೃತ್ಯಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿಸಿಕೊಳ್ಳುವುದನ್ನು ನಿಲ್ಲಿಸಿ. ತಪ್ಪಿತಸ್ಥ ಭಾವನೆ ಅಥವಾ ಇನ್ನೊಬ್ಬರ ಯೋಗಕ್ಷೇಮಕ್ಕೆ ನಿಮ್ಮನ್ನು ಹೊಣೆಯಾಗಿಸಿಕೊಳ್ಳುವುದನ್ನು ನಿಲ್ಲಿಸಲು ಧೈರ್ಯದ ನಿರ್ಧಾರವನ್ನು ತೆಗೆದುಕೊಳ್ಳದ ಹೊರತು ಇತರರು ಅವರ ಹೊಣೆಗಾರಿಯನ್ನು ನಿಮಗೆ ಹೊರಿಸುವುದನ್ನು, ದೋಷಾರೋಪಣೆ ಮಾಡುವುದನ್ನು ಮತ್ತು ಅತಿಯಾಗಿ ಅವಲಂಬಿಸಿರುವವರನ್ನು ಕೀಳಾಗಿ ನೋಡುವುದನ್ನು ಮುಂದುವರಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಖ್ವಾಜಾ ಹೇಳುತ್ತಾರೆ.
ಅತಿಯಾಗಿ ಅವಲಂಬಿಸುವ ಸ್ಥಿತಿಯಿಂದ ಹೊರಬರಲು ಘಾಡ್ಗೆಯವರ ಸಲಹೆಗಳು:
ಆರೋಗ್ಯಕರ ಗಡಿಗಳನ್ನು ಹೊಂದಿಸಿ: ನಿಮ್ಮ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಸ್ಪಷ್ಟವಾಗಿ ಮತ್ತು ಗೌರವಯುತವಾಗಿ ಹಂಚಿಕೊಳ್ಳಿ ಮತ್ತು ನಿಮ್ಮ ಸಂಗಾತಿಗೂ ಹಂಚಿಕೊಳ್ಳಲು ಪ್ರೋತ್ಸಾಹಿಸಿ. ಇದು ಸಂಬಂಧದಲ್ಲಿ ಆರೋಗ್ಯಕರ ಸಮತೋಲನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ನಿಮ್ಮ ಆಸಕ್ತಿಗಳನ್ನು ಅನುಸರಿಸಿ: ನಿಮಗೆ ಸಂತೋಷ ಮತ್ತು ತೃಪ್ತಿಯನ್ನುಂಟುಮಾಡುವ ಹವ್ಯಾಸಗಳು, ಸ್ನೇಹಿತರು ಮತ್ತು ಚಟುವಟಿಕೆಗಳಿಗೆ ಸಮಯವನ್ನು ಮೀಸಲಿರಿಸಿ. ಇದು ನಿಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀವನವು ನಿಮ್ಮ ಸಂಗಾತಿಯ ಸುತ್ತ ಮಾತ್ರ ಸುತ್ತುವುದನ್ನು ತಡೆಯುತ್ತದೆ.
ಸ್ವಯಂ ಕಾಳಜಿಯನ್ನು ಅಭ್ಯಾಸ ಮಾಡಿಕೊಳ್ಳಿ: ನಿಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಕಾಳಜಿವಹಿಸಿ. ಇದು ಸಾಕಷ್ಟು ನಿದ್ದೆ ಮಾಡುವುದು, ಚೆನ್ನಾಗಿ ತಿನ್ನುವುದು, ವ್ಯಾಯಾಮ ಮಾಡುವುದು ಮತ್ತು ಸ್ವಮನನ ಮತ್ತು ಸ್ವಸುಧಾರಣೆಯನ್ನು ಒಳಗೊಂಡಿದೆ.
ದುರ್ನಡತೆಗಳನ್ನು ಕ್ಷಮಿಸದಿರಿ: ನಿಮ್ಮ ಸಂಗಾತಿಯ ಋಣಾತ್ಮಕ ನಡವಳಿಕೆಗಳು ಅಥವಾ ಕ್ರಿಯೆಗಳನ್ನು ಕ್ಷಮಿಸದಿರಿ ಮತ್ತು ಅವರ ಸಮಸ್ಯೆಗಳು ಅಥವಾ ಭಾವನೆಗಳ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಡಿ.
ವೃತ್ತಿಪರ ಸಹಾಯವನ್ನು ಪಡೆಯಿರಿ: ನೀವು ಅತಿಅವಲಂಬನೆಯಿಂದ ಮುಕ್ತರಾಗಲು ಹೆಣಗಾಡುತ್ತಿದ್ದರೆ, ಅತಿಯಾಗಿ ಅವಲಂಬಿಸುವ ಸ್ಥಿತಿಯ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಚಿಕಿತ್ಸಕರು ಅಥವಾ ಸಲಹೆಗಾರರ ಸಹಾಯವನ್ನು ಪಡೆಕೊಳ್ಳುವುದು ಉತ್ತಮವಾಗಿದೆ.
ಧೃಡವಾದ ಸಂಬಂಧಕ್ಕಾಗಿ ಗಡಿಗಳನ್ನು ರೂಪಿಸುವುದು
ಬದಲಾವಣೆ ಸುಲಭವಲ್ಲ ಮತ್ತು ಅದಕ್ಕೆ ಸಮಯ ಬೇಕಾಗುತ್ತದೆ, ಆದರೆ ಅತಿ ಅವಲಂಬಿಸುವ ಸ್ಥಿತಿಯಿಂದ ಹೊರಬರುವುದು ಅಸಾಧ್ಯವಲ್ಲ ಎಂದು ಬೆಂಗಳೂರು ಮೂಲದ ಚಿಕಿತ್ಸಕರು ಮತ್ತು ಮನಶ್ಶಾಸ್ತ್ರಜ್ಞರಾದ ಎಸ್ ಉಷಾ ರಾಣಿ ಹೇಳುತ್ತಾರೆ. ಪ್ರತಿಯೊಬ್ಬರೂ ಅವರಿಗೆ ಆನಂದವನ್ನುಂಟುಮಾಡುವ ಕೆಲಸಗಳನ್ನು ಮಾಡುವುದನ್ನು ಮುಂದುವರಿಸಲು ಅವರು ಸೂಚಿಸುತ್ತಾರೆ. ಅತಿಯಾದ ಅವಲಂಬಿತರು ಇತರರೊಂದಿಗೆ ಬೆರೆಯುವುದಿಲ್ಲ. ಆದ್ದರಿಂದ, ಅವರು ದೂರ ಮಾಡಿಕೊಂಡಿರುವ ವ್ಯಕ್ತಿಗಳು ಅವರೊಂದಿಗೆ ತಮ್ಮ ಸಂಬಂಧಗಳನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಬೇಕು.
ಮೊದಲು ಸ್ವಂತ ಗುರುತನ್ನು ಕಟ್ಟಿಕೊಳ್ಳುವುದು ಮಹತ್ವದ್ದಾಗಿದೆ ಎನ್ನುತ್ತಾರೆ ಖ್ವಾಜಾ. ಇದು ಇತರರು ವಯಸ್ಕರಾಗಿರುವುದರಿಂದ ಅವನ ಅಥವಾ ಅವಳ ಸ್ವಂತ ಕ್ರಿಯೆಗಳಿಗೆ ಅವರೇ ಜವಾಬ್ದಾರರೆಂದು ಗುರುತಿಸುವ ತಿಳಿವಳಿಕೆಯನ್ನು ಮೂಡಿಸಲು ನೆರವಾಗುತ್ತದೆ ಮತ್ತು ಅವರಿಗೆ ನಿರಂತರ ಬೆಂಬಲವನ್ನು ನೀಡದಿರುವುದು ಅವರು ಸ್ವತಂತ್ರರಾಗಲು ಕಲಿಯಲು ಸಹಾಯ ಮಾಡುತ್ತದೆ. “ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನಾನು ನಿನ್ನನ್ನು ಲಘುವಾಗಿ ಪರಿಗಣಿಸುವುದಿಲ್ಲ. ನಾನು ನಿನ್ನೊಂದಿಗೇ ಇರಲು ಪರಸ್ಪರ ಸ್ಪಂದಿಸುವ ಸಂಬಂಧವನ್ನು ಹೊಂದೋಣ” ಎಂದು ಸಂಗಾತಿಗೆ ವಿವರಿಸಿ ಎಂದು ಅವರು ಹೇಳುತ್ತಾರೆ.
ಸಂಬಂಧದಲ್ಲಿ ಹಿತಕರ ವ್ಯಕ್ತಿಯ ಗುಣಲಕ್ಷಣಗಳು
“ಸಂಬಂಧದಲ್ಲಿ ಅತಿಯಾಗಿ ಅವಲಂಬಿಸುವುದು ಕೆಟ್ಟದಲ್ಲವಾದರೂ ಸಂಬಂಧದಲ್ಲಿ ತನ್ನತನವನ್ನು ಕಳೆದುಕೊಳ್ಳುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ಉತ್ತರ ದೆಹಲಿಯ ಎಕ್ಸ್‌ಪ್ರೆಸ್‌ಇಟ್ ಮೆಂಟಲ್ ಹೆಲ್ತ್ ಸರ್ವಿಸಸ್‌ನಲ್ಲಿ ಮದುವೆ ಮತ್ತು ಕೌಟುಂಬಿಕ ಸಲಹೆಗಾರ್ತಿ ಮತ್ತು ಪ್ರಮಾಣೀಕೃತ ಆಘಾತ ಚಿಕಿತ್ಸಕಿ ಆಗಿರುವ ಅದಿತಿ ತುಲ್ಶ್ಯಾನ್ ಹೇಳುತ್ತಾರೆ. ಸಂಬಂಧದಲ್ಲಿ ಹಿತಕರ ವ್ಯಕ್ತಿಯು ಪ್ರಬಲ ಆತ್ಮಗೌರವವನ್ನು ಹೊಂದಿರುವ ಮತ್ತು ಕಾಪಾಡಿಕೊಳ್ಳುವ ವ್ಯಕ್ತಿ ಆಗಿದ್ದು, ಸ್ವಯಂ ಅವಲೋಕನ ಮಾಡಿಕೊಳ್ಳುವ ಮೂಲಕ ಸಂಬಂಧವನ್ನು ದೃಢವಾಗಿ ಕಾಯ್ದುಕೊಳ್ಳುತ್ತಾರೆ.
ನಾಯಕ್ ಅವರು ಮಾಡಿದ್ದು ಅದೇ ಕೆಲಸ. ತಮ್ಮ ವಿಕೃತ ನಂಬಿಕೆಗಳಿಂದ ಹೊರಬರಲು ಮತ್ತು ದೃಢವಾಗಿ ಹೇಳಲು ಅವರು ಕೌನ್ಸೆಲಿಂಗ್ ಮೊರೆಹೋದರು. ತಮ್ಮ ಆತ್ಮವಿಶ್ವಾಸವನ್ನು ಮರಳಿ ಗಳಿಸುವ ಮೂಲಕ, ಅವರು ತಮ್ಮ ಪತಿಯೊಂದಿಗೆ ಗಡಿಗಳನ್ನು ರೂಪಿಸಿಕೊಂಡರು. ಅವರ ಪತಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡರು, ಅದಕ್ಕಾಗಿ ಕ್ಷಮೆಯಾಚಿಸಿದರು ಮತ್ತು ಸಹಾಯವನ್ನು ಕೋರಿದರು. ಜೊತೆಗೂಡಿ, ಅವರು ಮರುಕಳಿಸುವಿಕೆಯನ್ನು ತಡೆಗಟ್ಟಲು ಆರೋಗ್ಯಕರ ಚಟುವಟಿಕೆಗಳನ್ನು ಬೆಳೆಸಿಕೊಂಡರು ಮತ್ತು ನಾಯಕ್ ಅವರ ಪತಿ ಆ ಬಳಿಕ ಮದ್ಯಪಾನ ಚಟದಿಂದ ದೂರವಿದ್ದಾರೆ.