0

0

0

ಈ ಲೇಖನದಲ್ಲಿ

ಗ್ಯಾಸ್ಟ್ರೈಟಿಸ್ – ಜಠರದುರಿತ : ರೋಗಲಕ್ಷಣಗಳು ಮತ್ತು ಚಿಕಿತ್ಸೆ 
4

ಗ್ಯಾಸ್ಟ್ರೈಟಿಸ್ – ಜಠರದುರಿತ : ರೋಗಲಕ್ಷಣಗಳು ಮತ್ತು ಚಿಕಿತ್ಸೆ 

ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 

ಹೊಟ್ಟೆಯ ಮೇಲ್ಭಾಗದಲ್ಲಿ ಕಿರಿಕಿರಿ, ವಾಕರಿಕೆ ಮತ್ತು ಊಟ ಮಾಡುವಾಗ ಹಾಗೂ ಊಟದ ನಂತರ ಹೊಟ್ಟೆ ತುಂಬಿದಂತೆ ಭಾಸವಾಗುವುದು, ಹಸಿವಾಗದಿರುವಿಕೆ ಇವುಗಳನ್ನು ಸಾಮಾನ್ಯವಾಗಿ ಡಿಸ್ಪೆಪ್ಸಿಯಾ (ಅಜೀರ್ಣ) ಮತ್ತು ಆಮ್ಲೀಯತೆ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಈ ಲಕ್ಷಣಗಳು ಒಟ್ಟಾಗಿ ನಾವು ಸಾಮಾನ್ಯವಾಗಿ ಕಡೆಗಣಿಸುವ ಗ್ಯಾಸ್ಟ್ರೈಟಿಸ್ ಎಂಬ ಸ್ಥಿತಿಯನ್ನು ಸೂಚಿಸುತ್ತದೆ. ಆದರೂ, ಗ್ಯಾಸ್ಟ್ರೈಟಿಸ್ ಹೊಟ್ಟೆಯ ಒಳಪದರದ ಮೇಲೆ ಪರಿಣಾಮ ಬೀರಿ ಅದರ ಉರಿಯೂತಕ್ಕೆ ಕಾರಣವಾಗುತ್ತದೆ(ಊತ ಮತ್ತು ಕೆಂಪಾಗುವಿಕೆ) ಎನ್ನುತ್ತದೆ ಯುಎಸ್ ಗವರ್ನಮೆಂಟ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಯಾಬಿಟಿಸ್ ಆಂಡ್ ಡೈಜೆಸ್ಟಿವ್ ಆಂಡ್ ಕಿಡ್ನಿ ಡಿಸೀಸಸ್ (NIDDK). “ಹೆಲಿಕೋಬ್ಯಾಕ್ಟರ್ ಪೈಲೊರಿ (H. ಪೈಲೊರಿ) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಗ್ಯಾಸ್ಟ್ರೈಟಿಸ್‌ಗೆ ಅತ್ಯಂತ ಸಾಮಾನ್ಯ ಕಾರಣ. ಈ ಬ್ಯಾಕ್ಟೀರಿಯಾವು ಸೋಂಕಿತ ವ್ಯಕ್ತಿಯ ವಾಂತಿ, ಮಲ, ಲಾಲಾರಸ, ಕಲುಷಿತ ಆಹಾರ ಮತ್ತು ನೀರಿನಿಂದ ಹರಡಬಹುದು ಎಂದು NIDDK ಹೇಳುತ್ತದೆ. 

 ಗ್ಯಾಸ್ಟ್ರೈಟಿಸ್‌ ಉಂಟಾಗಲು ಕಾರಣಗಳೇನು?

 “ಸಮಯಕ್ಕೆ ಸರಿಯಾಗಿ ಊಟಮಾಡದಿರುವುದು, ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಮತ್ತು ಸಂಸ್ಕರಿಸಿದ ಆಹಾರ ಸೇವಿಸುವುದು, ಮದ್ಯಪಾನ ಮತ್ತು ಧೂಮಪಾನ, ಹೊಟ್ಟೆಯಲ್ಲಿನ ಆಮ್ಲ ಸಾಂದ್ರತೆಯ ಮಟ್ಟವನ್ನು ಹೆಚ್ಚಿಸಿ ಉರಿಯೂತಕ್ಕೆ ಕಾರಣವಾಗುತ್ತದೆ,” ಎಂದು ಸೂರತ್‌ನ ಆನಂದ್ ಹಾಸ್ಪಿಟಲ್‌ನ ನೋಂದಾಯಿತ ವೈದ್ಯಾಧಿಕಾರಿಯಾಗಿರುವ ಡಾ. ಅಶೋಕ್ ಗೋಸ್ವಾಮಿಯವರು ಹೇಳುತ್ತಾರೆ. 

 ಆಲ್ ಇಂಡಿಯಾ ಅಸೋಸಿಯೇಶನ್ ಆಫ್ ಅಡ್ವಾನ್ಸಿಂಗ್ ರಿಸರ್ಚ್ ಇನ್ ಒಬೆಸಿಟಿಯ ನೋಂದಾಯಿತ ಆಹಾರತಜ್ಞೆ ಮತ್ತು ಕಾರ್ಯದರ್ಶಿಗಳಾದ ಮುಂಬೈ ಮೂಲದವಾರದ ಶಿಲ್ಪಾ ಅವರು, ಜಠರದಲ್ಲಿ ಆಹಾರ ಖಾಲಿಯಾಗುವುದನ್ನು (ಗ್ಯಾಸ್ಟ್ರಿಕ್ ಎಂಪ್ಟೀಯಿಂಗ್) ವಿಳಂಬಗೊಳಿಸುವ ಮತ್ತು ಅತಿಯಾಗಿ ಹೊಟ್ಟೆ ತುಂಬಿಸುವ ಆಹಾರವು-ಉದಾಹರಣೆಗೆ, ಕೊಬ್ಬಿನಂಶ, ನಾರಿನಂಶ, ಉಪ್ಪು ಅಥವಾ ಸಕ್ಕರೆ ಹೆಚ್ಚಿರುವ ಆಹಾರ- ಆಮ್ಲದ ಸ್ರವಿಸುವಿಕೆಯನ್ನು ಹೆಚ್ಚಿಸಿ ಗ್ಯಾಸ್ಟ್ರೈಟಿಸ್ ಅನ್ನು ಪ್ರಚೋದಿಸುತ್ತದೆ ಎಂದು ಹೇಳುತ್ತಾರೆ. 

 NIDDK ಪ್ರಕಾರ, ಜಠರದಿಂದ ಸಣ್ಣ ಕರುಳಿನವರೆಗೆ ಆಹಾರದ ಚಲನೆಯನ್ನು ನಿಧಾನಗೊಳಿಸುವುದು- ಒಂದುವರೆ ಗಂಟೆಯಿಂದ ಎರಡು ಗಂಟೆಗಳ ತನಕ- ಇದನ್ನು ಗ್ಯಾಸ್ಟ್ರೋಪರೇಸಿಸ್ ಅಥವಾ ವಿಳಂಬಗೊಂಡ ಗ್ಯಾಸ್ಟ್ರಿಕ್ ಎಂಪ್ಟಿಯಿಂಗ್ ಎನ್ನಲಾಗುತ್ತದೆ. 

ದೀರ್ಘಕಾಲದ ಔಷಧಗಳು, ಒತ್ತಡ ಮತ್ತು ಕೆಲವು ಆಹಾರಗಳಿಗೆ ಅಸಹಿಷ್ಣುತೆ ಗ್ಯಾಸ್ಟ್ರೈಟಿಸ್‌ಗೆ ಕಾರಣವಾಗುತ್ತದೆ ಎಂದು ಮುಂಬೈನ ಹೋಮಿಯೋಪತಿ ವೈದ್ಯರಾದ ಡಾ ಮೋನಿಕಾ ಮತಾನಿ ಅವರು, ಹ್ಯಾಪಿಯೆಸ್ಟ್ ಹೆಲ್ತ್‌ಗೆ ಹೇಳುತ್ತಾರೆ.  

 ಮದ್ಯ, ಧೂಮಪಾನ ಮತ್ತು H.ಪೈಲರಿ 

ಮದ್ಯವನ್ನು ಸಾರಗುಂದಿಸಿದರೂ ಅದು ತೀವ್ರ ಗ್ಯಾಸ್ಟ್ರೈಟಿಸ್‌ಗೆ ಕಾರಣವಾಗುತ್ತದೆ, ಮದ್ಯಪಾನವು ಆಹಾರದ ಒಂದು ಭಾಗವಾಗಿರುವ ಅನೇಕ ದೇಶಗಳಲ್ಲಿ, ಲಘು ಆಹಾರದೊಂದಿಗೆ ಮದ್ಯವನ್ನು ಸೇವಿಸುವ ಮೂಲಕ ಸಮತೋಲನವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಜೋಶಿ ಅವರು ಹೇಳುತ್ತಾರೆ. 

 2001ರಲ್ಲಿ ಎಪಿಡೆಮಿಯಾಲಾಜಿ ಜರ್ನಲ್‌ನಲ್ಲಿ ಪ್ರಕಟಿಸಲಾದ ದಕ್ಷಿಣ ಜರ್ಮನಿಯ ಮೂರು ಆಧ್ಯಯನಗಳ ಸಂಗ್ರಹಿತ ವಿಶ್ಲೇಷಣೆಯು ಆಲ್ಕೋಹಾಲ್‌ಯುಕ್ತ ಪಾನೀಯಗಳು H. ಪೈಲರಿ ವಿರುದ್ಧ ಆ್ಯಂಟಿಮೈಕ್ರೋಬಿಯಲ್ ಪರಿಣಾಮಗಳನ್ನು ಹೊಂದಿದ್ದು, ಸಾಮಾನ್ಯ ಪ್ರಮಾಣದ ಆಲ್ಕೋಹಾಲ್ ಸೇವನೆಯು H. ಪೈಲರಿ ಸೋಂಕನ್ನು ಅಡಗಿಸಲು ಅಥವಾ ಕ್ರಮೇಣ ತೊಡೆದುಹಾಕುವಲ್ಲಿ ನೆರವಾಗುತ್ತದೆ ಎಂದು ಹೇಳಿದೆ. ಆದರೆ, ಅತಿ ಹೆಚ್ಚು ಮದ್ಯ ಸೇವನೆಯೊಂದಿಗೆ ಆಲ್ಕೋಹಾಲ್‌ಯುಕ್ತ ಪಾನೀಯಗಳ ಆ್ಯಂಟಿ ಮೈಕ್ರೋಬಿಯಲ್ ಪರಿಣಾಮಗಳು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು. 

 ಅದೇ ರೀತಿ, ಆಲ್ಕೋಹಾಲ್ ಆ್ಯಂಡ್ ಆಲ್ಕೋಹಾಲಿಸಂ ಎಂಬ ಜರ್ನಲ್‌ನಲ್ಲಿ 2010ರಲ್ಲಿ ಪ್ರಕಟವಾದ ಇನ್ನೊಂದು ಅಧ್ಯಯನವು, ಮದ್ಯ ಸೇವನೆಯು H. ಪೈಲೊರಿ ಸೋಂಕನ್ನು ಉತ್ತೇಜಿಸುತ್ತದೆ, ಇದು ಪ್ರಾಯಶಃ ಗ್ಯಾಸ್ಟ್ರಿಕ್ ಮ್ಯೂಕೋಸಾವನ್ನು ಹಾನಿಗೊಳಿಸಬಹುದು ಎಂಬುದನ್ನು ಬಹಿರಂಗಪಡಿಸಿದೆ. ಈ ಅಧ್ಯಯನವು ಧೂಮಪಾನ ಮಾಡದೇ ಇರುವವರೊಂದಿಗೆ ಹೋಲಿಸಿದರೆ ಧೂಮಪಾನ ಮಾಡುವವರಲ್ಲಿ H. ಪೈಲೊರಿ ಪಾಸಿಟಿವ್ ದರ ಹೆಚ್ಚಿದ್ದವು, ಆದರೆ ಈ ವ್ಯತ್ಯಾಸವು ಸಂಖ್ಯಾಶಾಸ್ತ್ರೀಯವಾಗಿ ಮಹತ್ವದ್ದಾಗಿರಲಿಲ್ಲ ಎಂದು ಹೇಳಿದೆ. 

 ಗ್ಯಾಸ್ಟ್ರೈಟಿಸ್ ಅನ್ನು ಯಾಕೆ ಕಡೆಗಣಿಸಬಾರದು? 

ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ 50.8 ಪ್ರತಿಶತದಷ್ಟು ಜನ ಗ್ಯಾಸ್ಟ್ರೈಟಿಸ್‌ನಿಂದ ಬಳಲುತ್ತಾರೆ. ಆದರೆ, “ ಗ್ಯಾಸ್ಟ್ರೈಟಿಸ್ ಎಂಬುದು ದೀರ್ಘಕಾಲಿಕವಾಗದ [ರೋಗಲಕ್ಷಣಗಳು ಒಂದು ತಿಂಗಳಿಗಿಂತಲೂ ಹೆಚ್ಚಿನ ಕಾಲ ಇರುವಾಗ] ಹೊರತು ಅಂತಹ ಗಂಭೀರ ಸಮಸ್ಯೆಯೇನಲ್ಲ ಎಂದು ಡಾ ಗೋಸ್ವಾಮಿ ಅವರು ಹೇಳುತ್ತಾರೆ. 

 ತೀವ್ರವಾದ ಮತ್ತು ದೀರ್ಘಕಾಲಿಕ ಗ್ಯಾಸ್ಟ್ರೈಟಿಸ್ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಾ ಡಾ ಮತಾನಿಯವರು, ರೋಗಲಕ್ಷಣಗಳ ಪ್ರಾರಂಭ ಮತ್ತು ತೀವ್ರತೆ (ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಮೈಕೈನೋವು ಹಾಗೂ ಜ್ವರ) ತೀವ್ರ ಗ್ಯಾಸ್ಟ್ರೈಟಿಸ್‌ನಲ್ಲಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ, ದೀರ್ಘಕಾಲಿಕ ಗ್ಯಾಸ್ಟ್ರೈಟಿಸ್ ಜ್ವರದ ಹೊರತಾಗಿ ದೀರ್ಘಕಾಲದವರೆಗೆ ಕಡಿಮೆ ತೀವ್ರತೆಯ ಲಕ್ಷಣವನ್ನು ಹೊಂದಿರುತ್ತದೆ ಎನ್ನುತ್ತಾರೆ.  

 ಕರ್ನಾಟಕದ ಶಿವಮೊಗ್ಗದಲ್ಲಿನ ನಂಜಪ್ಪ ಮಲ್ಟಿ-ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಸಮಾಲೋಚನಾ ವೈದ್ಯರಾಗಿರುವ ಡಾ ಎಂಆರ್ ಸತ್ಯನಾರಾಯಣ ಅವರು ಗ್ಯಾಸ್ಟ್ರೈಟಿಸ್ ಸಮಸ್ಯೆಯಲ್ಲಿ ಮರಣಕ್ಕೆ (ಸಾವು) ಹೋಲಿಸಿದರೆ, ರುಗ್ಣತೆಯೇ (ಸಂಕಟ) ಹೆಚ್ಚು; ಚಿಕಿತ್ಸೆ ಪಡೆಯದೇ ಇದ್ದರೆ, ಗ್ಯಾಸ್ಟ್ರೈಟಿಸ್ ಸಮಸ್ಯೆಯು ಗ್ಯಾಸ್ಟ್ರಿಕ್ ಮ್ಯೂಕಸ್ ಮೆಂಬ್ರೇನ್ (ರಕ್ಷಣಾತ್ಮಕ ಪದರ) ಅನ್ನು ಹಾನಿಗೊಳಿಸುತ್ತದೆ, ಇದರಿಂದ ಗ್ಯಾಸ್ಟ್ರಿಕ್ ಮ್ಯುಕೋಸಾ ಜಠರದಲ್ಲಿನ ಆಮ್ಲಕ್ಕೆ ಒಡ್ಡಿಕೊಳ್ಳುತ್ತದೆ. ಇದರಿಂದಾಗಿ ಅಲ್ಸರ್ (ಹುಣ್ಣು) ರಚನೆ ಅಥವಾ ರಕ್ತಸ್ರಾವದಂತಹ ತೊಡಕುಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ. 

 ಹೆಚ್ಚಿನ ಜನ ಗ್ಯಾಸ್ಟ್ರೈಟಿಸ್‌ ರೋಗಲಕ್ಷಣಗಳನ್ನು ಆ್ಯಸಿಡ್ ರಿಫ್ಲಕ್ಸ್(ಆಮ್ಲದ ಹಿಮ್ಮುಖ ಹರಿವು) ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಮತ್ತು ಪರಿಣಾಮವಾಗಿ ಚಿಕಿತ್ಸೆ ವಿಳಂಬವಾಗುತ್ತದೆ. ರೋಗನಿರ್ಣಯವಾಗದ ಗ್ಯಾಸ್ಟ್ರೈಟಿಸ್ ಜಠರದ ಹುಣ್ಣುಗಳಿಗೆ ಕಾರಣವಾಗಬಹುದು ಮತ್ತು ಅಪರೂಪದ ಪ್ರಕರಣಗಳಲ್ಲಿ ಜಠರದ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಡಾ ಗೋಸ್ವಾಮಿ ಹೇಳುತ್ತಾರೆ. 

 ಗ್ಯಾಸ್ಟ್ರೈಟಿಸ್ ರೋಗಲಕ್ಷಣಗಳು 

ಗ್ಯಾಸ್ಟ್ರೈಟಿಸ್‌ನ ರೋಗನಿರ್ಣಯವು ರೋಗಲಕ್ಷಣ-ಆಧಾರಿತವಾಗಿದೆ. ರೋಗಲಕ್ಷಣದ ಚಿಕಿತ್ಸೆಯ ನಾಲ್ಕು ಅಥವಾ ಐದು ದಿನಗಳ ನಂತರ ವ್ಯಕ್ತಿಗೆ ಸರಿಹೋಗದಿದ್ದರೆ, ಯೂರಿಕ್ ಆ್ಯಸಿಡ್ ಪರೀಕ್ಷೆ, ಉರಿಯೂತವನ್ನು ಪತ್ತೆಹಚ್ಚಲು ಎರಿಥ್ರೋಸೈಟ್ ಸೆಡಿಮೆಂಟೇಶನ್ ದರ ಮತ್ತು ರಕ್ತಹೀನತೆಗೆ ಸಂಪೂರ್ಣ ರಕ್ತದ ಕೌಂಟ್ ಮುಂತಾದ ಪರೀಕ್ಷೆಗಳನ್ನು ಸೂಚಿಸಲಾಗುತ್ತದೆ. ಎರಡು ತಿಂಗಳ ನಂತರವೂ ರೋಗಲಕ್ಷಣಗಳು ಕಡಿಮೆಯಾಗದಿದ್ದರೆ, ತಪಾಸಣೆಗಳು ನಾರ್ಮಲ್ ಆಗಿದ್ದರೆ, ಎಂಡೋಸ್ಕೋಪಿಯನ್ನು ಸೂಚಿಸಲಾಗುತ್ತದೆ ಎಂದು ಡಾ ಗೋಸ್ವಾಮಿ ಹೇಳುತ್ತಾರೆ. 

ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆ ಪ್ರಾಥಮಿಕ ರೋಗಲಕ್ಷಣಗಳನ್ನು ರೂಪಿಸುತ್ತವೆ ಎಂದು ಡಾ ಸತ್ಯನಾರಾಯಣ ಅವರು ಹೇಳುತ್ತಾರೆ. ರೋಗಲಕ್ಷಣಗಳು ಹಾಗೆಯೇ ಉಳಿದುಕೊಂಡರೆ, ಗ್ಯಾಸ್ಟ್ರೋಇಂಟಸ್ಟೈನಲ್ ಎಂಡೋಸ್ಕೋಪಿ (ಜಠರದೊಳಗೆ ಉರಿಯೂತದ ತೀವ್ರತೆಯನ್ನು ಪರಿಶೀಲಿಸಲು), ಬಯಾಪ್ಸಿ(ಮುಂದಿನ ಪರೀಕ್ಷೆಗಾಗಿ ಅಂಗಾಂಶ ಮಾದರಿಗಳನ್ನು ಸಂಗ್ರಹಿಸುವುದು), ಯೂರಿಯಾ ಬ್ರೆಥ್ ಪರೀಕ್ಷೆ, ಮಲ ಪರೀಕ್ಷೆ, ಸೆರಾಲಜಿ ಪರೀಕ್ಷೆ ಮತ್ತು ಆ್ಯಂಟಿಜೆನ್ ಪರೀಕ್ಷೆಯನ್ನು(H. ಪೈಲರಿ ಸೋಂಕನ್ನು ಪತ್ತೆಹಚ್ಚಲು) ನಡೆಸಲಾಗುತ್ತದೆ ಎಂದು ಅವರು ಹೇಳುತ್ತಾರೆ. 

 ಗ್ಯಾಸ್ಟ್ರೈಟಿಸ್ ಚಿಕಿತ್ಸೆ 

ಗ್ಯಾಸ್ಟ್ರೈಟಿಸ್ ಅನ್ನು ಗುಣಪಡಿಸಬಹುದು ಎಂದು ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗೆ ಮಾತನಾಡಿದ ತಜ್ಞರು ಸರ್ವಾನುಮತದಿಂದ ಒಪ್ಪಿಕೊಂಡರು. ಡಾ ಮತಾನಿ ಅವರು, ಹೋಮಿಯೋಪತಿ ಚಿಕಿತ್ಸೆಯು ಅಲ್ಸರ್‌ಗಳನ್ನು ಗುಣಪಡಿಸಿದೆ ಮತ್ತು ತೀವ್ರ ಅಲ್ಸರ್‌ಗಳಿಗೂ ಉತ್ತಮ ಫಲಿತಾಂಶವನ್ನು ತೋರಿಸಿದೆ ಎನ್ನುತ್ತಾರೆ. 

 ಗ್ಯಾಸ್ಟ್ರೈಟಿಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜಠರದಲ್ಲಿರುವ ಆಮ್ಲದ ಮಟ್ಟಗಳನ್ನು ಹೆಚ್ಚಿಸುವ ಪ್ರಚೋದಕಗಳನ್ನು ತೆಗೆದುಹಾಕುವುದು ಮೊದಲ ಹಂತವಾಗಿದೆ, ರೋಗಲಕ್ಷಣಗಳು ನಾಲ್ಕು ದಿನಗಳಿಗಿಂತಲೂ ಹೆಚ್ಚು ಇದ್ದರೆ ವೈದ್ಯರನ್ನು ಭೇಟಿ ಮಾಡಬೇಕು ಎಂದು ಡಾ ಗೋಸ್ವಾಮಿಯವರು ಹೇಳುತ್ತಾರೆ.  ಹೆಚ್ಚಿನವರು ದೀರ್ಘಕಾಲದ ತನಕ ಅಂಟಾಸಿಡ್‌ಗಳನ್ನು ತೆಗೆದುಕೊಳ್ಳುತ್ತಾರೆ, ಪತ್ತಹಚ್ಚಲಾಗದ ಯಾವುದೇ ಅಲ್ಸರ್ ಇದ್ದಲ್ಲಿ ಅದು ಅವರ ಆರೋಗ್ಯವನ್ನು ಅಪಾಯಕ್ಕೀಡುಮಾಡಬಹುದು, ಕೆಲವೊಂದು ಸಂದರ್ಭದಲ್ಲಿ ಇದು ಜಠರದಲ್ಲಿ ರಂಧ್ರಗಳು ಉಂಟಾಗಲು ಕಾರಣವಾಗಬಹುದು,” ಎಂದು ಗೋಸ್ವಾಮಿ ಹೇಳುತ್ತಾರೆ. 

  “ಪಥ್ಯದ ಚಿಕಿತ್ಸೆಯನ್ನು ಅತ್ಯಂತ ವೈಯುಕ್ತೀಕರಿಸಲಾಗಿದ್ದು, ಯಾವುದು ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆಯೋ ಅಂತಹವುಗಳನ್ನು ಬಳಸಬಾರದು. ನನ್ನ 80 ಪ್ರತಿಶತ ಕ್ಲೈಂಟ್‌ಗಳಿಗೆ ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳು, ರೆಡಿ-ಮೇಡ್ ಮಸಾಲೆಗಳು, ಹುದುಗು ಬರಿಸಿದ ಭಾರತೀಯ ಆಹಾರಗಳು (ದೋಸೆ,ಇಡ್ಲಿ), ಕಪ್ಪು ಮಸೂರ, ಹಳದಿ ಮಸೂರ (ತೊಗರಿ ಬೇಳೆ ಮುಂತಾದವು), ಚಹಾ, ಕಾಫಿ ಮತ್ತು ಮಾಂಸಾಹಾರಗಳು, ಇವೆಲ್ಲವೂ ಗ್ಯಾಸ್ಟ್ರೈಟಿಸ್ ಪ್ರಚೋದಕಗಳು ಎಂದು ಶಿಲ್ಪಾ ಜೋಶಿ ಹೇಳುತ್ತಾರೆ. ಅಲ್ಲದೇ ಲಘು ಆಹಾರವನ್ನು ಅನೇಕ ಬಾರಿ ತಗೆದುಕೊಳ್ಳುವುದು, ಊಟವಾಗಿ ಒಂದು ಗಂಟೆಗೆಯ ಒಳಗೆ ಮಲಗದಿರುವುದು ಮತ್ತು ಯಾವುದೇ ಔಷಧಗಳನ್ನು ಊಟದ ನಂತರ ತೆಗೆದುಕೊಳ್ಳುಬೇಕು (ವೈದ್ಯರು ದೃಢೀಕರಿಸಿದ ನಂತರ) ಎಂದು ಜೋಶಿಯವರು ಸೂಚಿಸುತ್ತಾರೆ.  

 ಡಾ ಸತ್ಯನಾರಾಯಣ ಹೇಳುವಂತೆ, ಪಥ್ಯ, ನಿಯಮಿತ ವ್ಯಾಯಾಮ, ಸರಿಯಾದ ಪ್ರಮಾಣದಲ್ಲಿ ದ್ರವಾಹಾರ ಸೇವನೆ, ಸಾಕಷ್ಟು ನಿದ್ದೆ ಮತ್ತು ಔಷಧಿಗಳಾದ ಅಂಟಾಸಿಡ್‌ಗಳು, ಆಂಟಿಬಯೋಟಿಕ್‌ಗಳು, ಪ್ರೋಟಾನ್ ಪಂಪ್ ಇನ್‌ಹಿಬಿಟರ್‌ಗಳು (PPI, ಪ್ರೋಟಾನ್ ಪಂಪ್ ಎಂಬ ಜಠರದಲ್ಲಿರುವ ಗ್ಯಾಸ್ಟ್ರಿಕ್ ಆಮ್ಲವನ್ನು ಸ್ರವಿಸುವ ಪೊರೆಯನ್ನು ಮುಚ್ಚುವ ಔಷಧಗಳು), H2 ರಿಸೆಪ್ಟರ್ ಬ್ಲಾಕರ್‌ಗಳು (ಗ್ಯಾಸ್ಟ್ರಿಕ್ ಆಮ್ಲವನ್ನು ಉತ್ತೇಜಿಸುವ ಹಿಸ್ಟಮೈನ್ ಅನ್ನು ನಿರ್ಬಂಧಿಸುವ ಔಷಧಗಳು)-ಇವುಗಳು ಜಠರದಲ್ಲಿನ ಆಮ್ಲದ ಮಟ್ಟವನ್ನು ಕಡಿಮೆಗೊಳಿಸಿ ಗ್ಯಾಸ್ಟ್ರೈಟಿಸ್ ಚಿಕಿತ್ಸೆ ಪರಿಣಾಮಕಾರಿಯಾಗಲು ನೆರವಾಗುತ್ತವೆ.  

 ಹೋಮಿಯೋಪತಿ ಮತ್ತು ಗ್ಯಾಸ್ಟ್ರೈಟಿಸ್ 

ಅಲೋಪತಿಗಿಂತ ಭಿನ್ನವಾಗಿ ಹೋಮಿಯೋಪತಿಯು ಖಾಯಿಲೆಯ ಮೂಲ ಕಾರಣವನ್ನು ಮೀರಿ, ಚಿಕಿತ್ಸೆಗೆ ವ್ಯಕ್ತಿಯ ಸಂಪೂರ್ಣ ದೈಹಿಕ ಮತ್ತು ಮಾನಸಿಕ ರೂಪುರೇಷೆಗಳನ್ನು ಪರಿಗಣಿಸುತ್ತದೆ. ಆದ್ದರಿಂದ, ಹೋಮಿಯೋಪತಿಯಲ್ಲಿ ಒಂದೇ ಸ್ಥಿತಿಯನ್ನು ಹೊಂದಿರುವ ಅನೇಕ ರೋಗಿಗಳು ಬೇರೆ ಬೇರೆ ಔಷಧಗಳನ್ನು ಸ್ವೀಕರಿಸುತ್ತಾರೆ. ತೀವ್ರ ಗ್ಯಾಸ್ಟ್ರೈಟಿಸ್‌ನಿಂದ ಬಳಲುವವರು ಒಂದು ಅಥವಾ ಎರಡು ಡೋಸ್‌ಗಳಲ್ಲೇ ಗಮನಾರ್ಹ ಸುಧಾರಣೆ ಕಂಡಿದ್ದಾರೆ ಹಾಗೂ ಹೋಮಿಯೋಪತಿ ನಿಧನವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ತಪ್ಪುಕಲ್ಪನೆಯನ್ನು ಇದು ತಳ್ಳಿಹಾಕುತ್ತದೆ ಎಂದು ಡಾ ಮತಾನಿಯವರು ಹೇಳುತ್ತಾರೆ. 

 ದೀರ್ಘಕಾಲಿಕ ಗ್ಯಾಸ್ಟ್ರೈಟಿಸ್‌ಗೆ, ರೋಗಲಕ್ಷಣಗಳನ್ನು ತಗ್ಗಿಸಲು ಚಿಕಿತ್ಸೆ ನೀಡುವ ಬದಲು ಮೂಲ ಮಟ್ಟದಲ್ಲಿ ಸಮಸ್ಯೆಯನ್ನು ನಿವಾರಿಸಲು ಚಿಕಿತ್ಸೆಯನ್ನು ನೀಡಲಾಗುತ್ತದೆ. ದೇಹದಿಂದ ಗ್ಯಾಸ್ಟ್ರೈಟಿಸ್‌ನ ಪ್ರವೃತ್ತಿಯನ್ನು ತೆಗೆದುಹಾಕಲು ರೋಗಲಕ್ಷಣಗಳು ವಾಸಿಯಾದರೂ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ ಎಂದು ಡಾ ಮತಾನಿ ಹೇಳುತ್ತಾರೆ. 

 ಹೋಮಿಯೋಪತಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವೃತ್ತಿಪರರಿಗೆ ಅಂತರರಾಷ್ಟ್ರೀಯ ವೇದಿಕೆಯಾದ ಹೋಮಿಯೋಬುಕ್‌ನಿಂದ 2021 ರ ತೀವ್ರ ಗ್ಯಾಸ್ಟ್ರೈಟಿಸ್ ಪ್ರಕರಣವೊಂದರ ವರದಿಯನ್ನು ಪ್ರಕಟಿಸಲಾಗಿದೆ. ಇದು ಏಳು ದಿನಗಳ ಗ್ಯಾಸ್ಟ್ರಿಕ್ ಇತಿಹಾಸವನ್ನು ಹೊಂದಿರುವ 21-ವರ್ಷದ ವ್ಯಕ್ತಿಯು ಆಂಟಿಬಯಾಟಿಕ್ಸ್‌ಗೆ ಹೋಲಿಸಿದರೆ ಮೂರು ದಿನಗಳ ಹೋಮಿಯೋಪತಿ ಚಿಕಿತ್ಸೆಗೆ ಗಮನಾರ್ಹ ಸುಧಾರಣೆ ತೋರಿಸಿರುವುದು ಕಂಡುಬಂದಿದೆ.  

 ಒತ್ತಡವು ಗ್ಯಾಸ್ಟ್ರೈಟಿಸ್‌ಗೆ ಪ್ರಮುಖ ಕಾರಣ, ಹಾಗೆಂದು ವ್ಯಕ್ತಿಯು ಒತ್ತಡರಹಿತ ಜೀವನವನ್ನು ನಡೆಸಲು ಸಾಧ್ಯವಿಲ್ಲ, ಆದರೂ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ಜೋಶಿ ಹೇಳುತ್ತಾರೆ. 

 ಯೋಗ ಮತ್ತು ಗ್ಯಾಸ್ಟ್ರೈಟಿಸ್ 

ಪ್ರಾಣಾಯಾಮ ಮತ್ತು ಆಸನಗಳು ಎಂಡೋಕ್ರೈನ್ ಗ್ರಂಥಿ (ಹಾರ್ಮೋನ್ ಉತ್ಪಾದಿಸುವ ಗ್ರಂಥಿ) ಮತ್ತು ಹೈಪೋಥಲಾಮಸ್ (ನಿದ್ರೆ ಮತ್ತು ಭಾವನಾತ್ಮಕ ಚಟುವಟಿಕೆಯನ್ನು ನಿಯಂತ್ರಿಸುವ ಮಿದುಳಿನ ಭಾಗ) ಅನ್ನು ಉತ್ತೇಜಿಸುತ್ತದೆ, ಇದು ಮಿದುಳಿನಲ್ಲಿ ಮೂಡ್  ಅನ್ನು ಉತ್ತಮಗೊಳಿಸುವ ರಾಸಾಯನಿಕಗಳಾದ ಸಿರೋಟಿನ್ ಮತ್ತು ನೋರೆಪಿನೆಫ್ರನ್ ಅನ್ನು ಹೆಚ್ಚಿಸುತ್ತದೆ ಮತ್ತು ಕಾರ್ಟಿಸಾಲ್‌ನಂತಹ ಒತ್ತಡದ ಹಾರ್ಮೋನ್ ಅನ್ನು ಕಡಿಮೆಗೊಳಿಸುತ್ತದೆ ಎಂದು ಬೆಂಗಳೂರು ಮೂಲದ ಯೋಗ ಚಿಕಿತ್ಸಕರಾದ ಉಮ್ಮೆ ಇಮೆನ್ ಝೋಯೆಬ್ ಅವರು ಹೇಳುತ್ತಾರೆ. 

 ಜಠರದ ಒಳಪದರದ ಉರಿಯೂತಕ್ಕೆ ಕಾರಣವಾಗುವ ಗ್ಯಾಸ್ಟ್ರೈಟಿಸ್‌ನ ಚಿಕಿತ್ಸೆಗೆ ನೆರವಾಗುವ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಸೇರಿದಂತೆ ಯೋಗದ ಸಮಗ್ರ  ವಿಧಾನವು ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವುದು ದಾಖಲಾಗಿದೆ ಎಂದು ಚೆನ್ನೈನ ಸರ್ಕಾರಿ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜಿನ ಯೋಗ ವಿಭಾಗದ ಸಹಾಯಕ ವೈದ್ಯಾಧಿಕಾರಿ ಮತ್ತು ಉಪನ್ಯಾಸಕರಾದ ಡಾ ವಿ ವೇಣುಗೋಪಾಲ್ ಅವರು ಹೇಳುತ್ತಾರೆ. 

 2017ರಲ್ಲಿ ಫ್ರಾಂಟಿಯರ್ಸ್ ಆಫ್ ಇಮ್ಯುನಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾದ ವ್ಯವಸ್ಥಿತ ವಿಮರ್ಶೆಯು, ಧ್ಯಾನದಂತಹ ಮನಸ್ಸು ಹಾಗೂ ದೇಹಕ್ಕೆ ಸಂಬಂಧಿಸಿದ ಅಭ್ಯಾಸಗಳು, ಕೆಲವು ಪ್ರೋ-ಇನ್‌ಫ್ಲಾಮೇಟರಿ ಜೀನ್‌ಗಳ (NF-κB ಜೀನ್‌ಗಳು) ಚಟುವಟಿಕೆಯನ್ನು ತಗ್ಗಿಸಿ ಒತ್ತಡದಿಂದ ಉಂಟಾಗುವ ಮಾಲಿಕ್ಯುಲರ್ ಡ್ಯಾಮೇಜ್ ಅನ್ನು ಹಿಮ್ಮೆಟ್ಟಿಸುತ್ತದೆ ಎಂದು ಹೇಳುತ್ತದೆ. 

ಶೀತಲೀ ಪ್ರಾಣಾಯಾಮ (ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವ ಉಸಿರಾಟದ ಅಭ್ಯಾಸ), ಶೀತ್ಕಾರಿ ಪ್ರಾಣಾಯಾಮ (ದೇಹವನ್ನು ತಂಪಾಗುಸುವ ಉಸಿರಾಟ ಪ್ರಕ್ರಿಯೆ), ಸದಂತ (ಮನಸ್ಸನ್ನು ಶಾಂತವಾಗಿಸಲು ನಿಯಂತ್ರಿತ ಉಸಿರಾಟದ ಅಭ್ಯಾಸ ಮತ್ತು ಬ್ರಾಹ್ಮರಿ ಪ್ರಾಣಾಯಾಮ (ನರಮಂಡಲಕ್ಕೆ ಹಿತಕಾರಿಯಾದ ಉಸಿರಾಟ ಅಭ್ಯಾಸ) ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಈ ಪ್ಯಾರಸಿಂಥೆಟಿಕ್ ನರಮಂಡಲವು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ, ರಕ್ತನಾಳಗಳನ್ನು ಹಿಗ್ಗಿಸುತ್ತದೆ, ಪ್ಯೂಪಿಲ್ ಗಾತ್ರವನ್ನು ಕುಗ್ಗಿಸುತ್ತದೆ, ಜೀರ್ಣರಸಗಳನ್ನು ಹೆಚ್ಚಿಸುತ್ತದೆ ಮತ್ತು ಗ್ಯಾಸ್ಟ್ರೋಇಂಟಸ್ಟೈನಲ್ ಟ್ರ್ಯಾಕ್ಟ್‌ನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಪರಿಣಾಮವಾಗಿ ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂದು ಡಾ ವೇಣುಗೋಪಾಲ್ ಹೇಳುತ್ತಾರೆ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

1 × 2 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ