0

0

0

0

0

0

0

0

0

ಈ ಲೇಖನದಲ್ಲಿ

ಸಾಕುಪ್ರಾಣಿಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಸಹಕಾರಿ
7

ಸಾಕುಪ್ರಾಣಿಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಸಹಕಾರಿ

ಸಾಕುಪ್ರಾಣಿ ಹೊಂದಿರುವುದು ಹೃದ್ರೋಗವಿರುವ ಜನರಲ್ಲಿ ಸಾವಿನ ಅಪಾಯ ಶೇಕಡಾ 65 ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಸಾಕುಪ್ರಾಣಿಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಸಹಕಾರಿ
ತಮ್ಮ ಸಾಕುಪ್ರಾಣಿಗಳಾದ ಬೆಲ್ಲಾ ಮತ್ತು ಮೋಟುವಿನೊಂದಿಗೆ ಗೀತಾಂಜಲಿ/ ಚಿತ್ರ: ಗೌತಮ್ ವಿ

ಹುಟ್ಟಿನಿಂದಲೇ ಹೃದಯ ವೈಫಲ್ಯದ ಸಮಸ್ಯೆ ಇರುವ ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತೆ ಗೀತಾಂಜಲಿ ಜೀವಾ ಸಿಂಗ್ (56), ತಮ್ಮ14 ವರ್ಷದ ಬಾರ್ಡರ್ ಕೋಲಿ, ಬೆಲ್ಲಾ, ಮತ್ತು ಎಂಟು ವರ್ಷದ ಲ್ಯಾಬ್ರಡಾರ್ ಸ್ಪಾರ್ಕಿ ಅಥವಾ ಮೋಟುಲು (ಹಾಗೆಂದು ಅದನ್ನು ಅವರು ಕರೆಯುತ್ತಾರೆ), ಹೃದಯ ಸ್ತಂಭನದ ಎಚ್ಚರಿಕೆ ನೀಡುವ ನಾಯಿಗಳ ಪಾತ್ರವನ್ನು ನಿರ್ವಹಿಸುತ್ತವೆ. ಸೇವಾ ನಾಯಿಗಳಾಗಿ ಅವುಗಳು ಅವುಗಳಿಗೆ ತರಬೇತಿ ನೀಡಿಲ್ಲವಾದರೂ, ಅವರು ಆತಂಕಕ್ಕೊಳಗಾದಾಗ ಮತ್ತು ಅವರ ಹೃದಯ ಬಡಿತ ಹೆಚ್ಚಾದಾಗ ಅವುಗಳು ಹೇಗೆ ಅವರನ್ನು ಎಚ್ಚರಿಸುತ್ತವೆ ಎಂಬ ಬಗ್ಗೆ ಅವರಿಗೆ ಆಗಾಗ ವಿಸ್ಮಯವಾಗುತ್ತದೆ.

ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಜನಪ್ರಿಯವಾಗಿರುವ ಹೃದಯ ಸ್ತಂಭನದ ಎಚ್ಚರಿಕೆ ನೀಡುವ ನಾಯಿಗಳಿಗೆ ತಮ್ಮ ನಿರ್ವಾಹಕರ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಆಗುವ ಯಾವುದೇ ಬದಲಾವಣೆಗಳನ್ನು ಗುರುತಿಸಲು ವಿಶೇಷವಾಗಿ ತರಬೇತಿ ನೀಡಲಾಗಿದೆ. ವಿಶ್ವದಾದ್ಯಂತ ಜನರಿಗೆ ಸೇವಾ ನಾಯಿಗಳ ತರಬೇತಿಯನ್ನು ಆನ್‌ಲೈನ್ ಮೂಲಕ ನೀಡುವ ಶಾಲೆಯಾದ, ಸರ್ವಿಸ್ ಡಾಗ್ಸ್ ಟ್ರೇಯ್ನಿಂಗ್ ಸ್ಕೂಲ್, ಪ್ರಕಾರ ಹೃದಯ ಸ್ತಂಭನದ ಎಚ್ಚರಿಕೆಯನ್ನು ನೀಡುವ ಸೇವಾ ನಾಯಿಗಳು ಈ ಬದಲಾವಣೆಗಳನ್ನು ಗುರುತಿಸಿ ನಿರ್ವಾಹಕರನ್ನು ತಮ್ಮ ಮುಂಗಾಲಿನ ಮಂಜದಿಂದ, ಮೂತಿಯಿಂದ ತಳ್ಳಿ, ಬೊಗಳಿ ಅಥವಾ ಇತರ ಕ್ರಿಯೆಗಳ ಮೂಲಕ ಎಚ್ಚರಿಸುತ್ತವೆ. ವಾಸನೆಯು ನಾಯಿಗಳಲ್ಲಿರುವ ಅತ್ಯಂತ ಪ್ರಮುಖ ಪ್ರಜ್ಞೆಯೆಂದು ಗೊತ್ತಿದ್ದು ಅದರ ಉಪಯೋಗ ಪಡೆದು ಅವುಗಳನ್ನು ಹೃದಯ ಸ್ತಂಭನದ ಸಮಯದಲ್ಲಿ ಹೃದಯ ಸ್ತಂಭನದ ಎಚ್ಚರಿಕೆ ನೀಡುವ ನಾಯಿಗಳಾಗಿ ತರಬೇತಿ ನೀಡಲಾಗುತ್ತದೆ.

“ಈ ನಾಯಿಗಳು ಸೇವಾ ನಾಯಿಗಳ ವರ್ಗಕ್ಕೆ ಸೇರುತ್ತವೆ. ಅದು ವಿದೇಶದಲ್ಲಿ ಬಹಳ ಸಾಮಾನ್ಯವಾಗಿದೆ. ಭಾರತದಲ್ಲಿ ಜನರಿಗೆ ಈ ವೈದ್ಯಕೀಯ ಸಾಧ್ಯತೆಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಅವು ಮುಖ್ಯವಾಗಿ ಮಾದಕವಸ್ತುಗಳ ಪತ್ತೆಹಚ್ಚುವಿಕೆಯಲ್ಲಿ ಕೆಲಸ ಮಾಡುತ್ತವೆ. ಆದರೆ, ನಾಯಿಗಳಿಗೆ ಎಲ್ಲಾ ಕಡೆಯಲ್ಲೂ ಪ್ರವೇಶಕ್ಕೆ ನಿರ್ಬಂಧಗಳಿರುವ ಕಾರಣ ಅವುಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸೇವಾ ನಾಯಿಗಳು ಎಲ್ಲಾ ಸಮಯದಲ್ಲೂ ಮಾನವರೊಂದಿಗೆ ಇರಬೇಕಾಗುತ್ತದೆ, ಆದರೆ ಭಾರತದಲ್ಲಿ, ಅನೇಕ ಸ್ಥಳಗಳಲ್ಲಿ ನಾಯಿಗಳು ಪ್ರವೇಶಿಸಲು ಬಿಡುವುದಿಲ್ಲ. ಈ ನಾಯಿಗಳ ತರಬೇತಿಯು ತುಂಬಾ ದುಬಾರಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವಂತದ್ದು. ಆದರೆ ಇದಕ್ಕೆ ಪೂರಕವಾಗಿರುವ ಪರಿಸರದ ವ್ಯವಸ್ಥೆ ಇಲ್ಲ.” ಎಂದು ಕೆಲಸದ ಸ್ಥಳಗಳು, ಶಾಲೆಗಳು ಮತ್ತಿತರ ಸಂಸ್ಥೆಗಳಲ್ಲಿ ಮನುಷ್ಯರು ಮತ್ತು ನಾಯಿಗಳ ನಡುವಣ ಸಂಬಂಧಗಳನ್ನು ಸುಧಾರಿಸುವ ಹ್ಯೂಮನ್ ಡಾಗ್ ಇಂಟರ್‍ಆಕ್ಷನ್ ಪ್ರೋಗ್ರಾಂ (ಮಾನವರು ಮತ್ತು ನಾಯಿಗಳ ನಡುವಿನ ಸಂಬಂಧವನ್ನು ಸುಧಾರಿಸುವ ಕಾರ್ಯಕ್ರಮ) ಆಯೋಜಿಸುತ್ತಿರುವ ಬೆಂಗಳೂರು ಮೂಲದ ರಾಜೇಶ್ವರಿ ಆರ್ ಹೇಳುತ್ತಾರೆ.

ಸೇವಾ ನಾಯಿಗಳು ಎಲ್ಲಾ ಸಮಯದಲ್ಲೂ ಎಚ್ಚರವಾಗಿರಬೇಕಾಗುತ್ತದೆ ಮತ್ತು ಅವುಗಳ ನಿರ್ವಾಹಕರು ಯಾವುದೇ ಕ್ಷಣದಲ್ಲಿ ಆರೋಗ್ಯ ಸಮಸ್ಯೆ ಎದುರಿಸಬಹುದಾದುದರಿಂದ ಯಾವುದೇ ಸಮಯದಲ್ಲೂ ಅವುಗಳ ಮನಸ್ಸು ಚಂಚಲವಾಗುವಂತಿಲ್ಲ. “ಸಾರ್ವಜನಿಕ ಪ್ರದೇಶದಲ್ಲಿ ಇತರರು ಈ ನಾಯಿಗಳನ್ನು ಮುದ್ದು ಮಾಡುವಂತಿಲ್ಲ. ಏಕೆಂದರೆ ಅವುಗಳು ಆಗ ಯಾವುದೇ ಆರೋಗ್ಯ ಸಮಸ್ಯೆಗಳ ಲಕ್ಷಣವನ್ನು ಗಮನಿಸದಿರಬಹುದಾದರಿಂದ, ಅದು ನಿರ್ವಾಹಕರಿಗೆ ಹಾನಿಕಾರಕವಾಗಬಹುದು,” ಎನ್ನುತ್ತಾರೆ ರಾಜೇಶ್ವರಿ.

ಶಾರೀರಿಕ ಭಾಷೆಯಲ್ಲಿನ ಮತ್ತು ವಾಸನೆಯ ಬದಲಾವಣೆಗಳು ನಾಯಿಗಳು ಪತ್ತೆಹಚ್ಚುವ ಮೊದಲ ವಿಷಯಗಳಾಗಿವೆ. ಅದರ ಆಧಾರದಲ್ಲಿ ನಿರ್ದಿಷ್ಟ ಸೂಚನೆ ನೀಡಲು ನಾಯಿಗಳಿಗೆ ತರಬೇತಿ ನೀಡಲಾಗುತ್ತದೆ. ಅವುಗಳು ನಿಮ್ಮ ಪಕ್ಕದಲ್ಲಿ ಮಲಗಬಹುದು, ಕುಳಿತುಕೊಳ್ಳಬಹುದು ಅಥವಾ ತಮ್ಮ ಪಂಜವನ್ನು ನಿಮಗೆ ಕೊಡಬಹುದು.” ಎಂದು ಮುಂಬೈನ ನಾಯಿ ತರಬೇತುಗಾರ್ತಿ ಮತ್ತು ನಡವಳಿಕೆ ತಜ್ಞೆ (ಬಿಹೇವಿಯರಿಸ್ಟ್‌) ಶಿರಿನ್ ಮರ್ಚೆಂಟ್ ಅವರು ಹೇಳುತ್ತಾರೆ

”ದೇಹದ ಸಾಮಾನ್ಯ ವಾಸನೆ ಮತ್ತು ಬದಲಾವಣೆಗಳಾದಾಗಿನ ಸಮಯದ ವಾಸನೆ, ಉದಾಹರಣೆಗೆ ಅಪಸ್ಮಾರಕ್ಕೆ ಒಳಗಾದಾಗ, ನಡುವಣ ವ್ಯತ್ಯಾಸವನ್ನು ಗುರುತಿಸಲು ನಾಯಿಗಳಿಗೆ ತರಬೇತಿ ನೀಡಲಾಗುತ್ತದೆ. ಅವುಗಳಿಂದ ಸಿಗುವ ಮುನ್ಸೂಚನೆಯು ತಮ್ಮ ನಿರ್ವಾಹಕರ ಸುರಕ್ಷಿತತೆಗೆ ಹೋಗಲು ಅಥವಾ ಇತರರಿಗೆ ತಿಳಿಸಿ ಅವರು ಹೇಗೆ ನೆರವು ನೀಡಬಹುದು ಎಂಬುದನ್ನು ತಿಳಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ನಾಯಿ-ನೆರವಿನ ಚಿಕಿತ್ಸೆಯ ಪ್ರವರ್ತಕರಾಗಿರುವ ಅವರು, ಯಾವುದೇ ತಳಿಯ ನಾಯಿಗಳಿಗೆ ತರಬೇತಿ ನೀಡಬಹುದಾಗಿದ್ದರೂ. ಸಾರ್ವಜನಿಕ-ಸ್ನೇಹಿ ನಾಯಿಗಳೆಂದು ಪ್ರತೀತಿ ಪಡೆದಿರುವ ಲ್ಯಾಬ್ರಡಾರ್ ಮತ್ತು ಗೋಲ್ಡನ್ ರಿಟ್ರೀವರ್‌ನಂತಹ ತಳಿಗಳಿಗೆ ಆದ್ಯತೆ ನೀಡಲಾಗುತ್ತದೆ. “ವಾಸನೆಯ ಗ್ರಹಿಕೆಯಲ್ಲಿ ಸೂಕ್ಷ್ಮ ಸಂವೇದನೆಯುಳ್ಳ ಇಂಡಿ ನಾಯಿಗಳು (ಭಾರತೀಯ ಉಪಖಂಡದ ಸ್ಥಳೀಯ ನಾಯಿಗಳು) ಪತ್ತೆ ಕೆಲಸದಲ್ಲಿ ನಿಜವಾಗಿಯೂ ಉತ್ತಮವಾಗಿರುತ್ತವೆ,” ಎನ್ನುತ್ತಾರೆ ಶಿರಿನ್.‌ ಅಪಸ್ಮಾರ ಮತ್ತು ಮಧುಮೇಹವನ್ನು ಪತ್ತೆಹಚ್ಚಲು ನಾಯಿಗಳಿಗೆ ತರಬೇತಿ ನೀಡುವ ಚಳವಳಿಯನ್ನು ಭಾರತದಲ್ಲಿ ಪ್ರಾರಂಭಿಸಲು ಅವರು ಯೋಜಿಸುತ್ತಿದ್ದಾರೆ.

ಸಾಕುಪ್ರಾಣಿಗಳು ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತವೆಯೇ?

ಗೀತಾಂಜಲಿಯವರಿಗೆ 25 ವರ್ಷಗಳ ಹಿಂದೆಯೇ ಹೃದಯ ಸಂಬಂಧಿತ ಸಮಸ್ಯೆ ಇದೆ ಎಂದು ಪತ್ತೆ ಹಚ್ಚಲಾಗಿತ್ತು. ಆದರೆ 13ನೇ ವಯಸ್ಸಿನಿಂದಲೇ ಅವರು ಜನ್ಮಜಾತ ಹೃದ್ರೋಗದೊಂದಿಗೆ ಬಾಳುತ್ತಿದ್ದಾರೆ. ಶಾಲೆಯಲ್ಲಿ ಅವರು ಉತ್ತಮ ಓಟಗಾರ್ತಿಯಾಗಿದ್ದರು, ಆದರೆ ಅವರು ಓಟವನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದು, ಓಟದಲ್ಲಿ ಕೊನೆಯ ಸ್ಥಾನ ಪಡೆಯುತ್ತಿದ್ದರು. ಅವರು ಬಿಸಿಲಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದು, ಮೂರ್ಛೆಹೋಗುತ್ತಿದ್ದರು. ತಮ್ಮ ತಾಯಿಯೊಂದಿಗೆ ಹಲವಾರು ವೈದ್ಯರನ್ನು ಭೇಟಿ ಮಾಡಿದಾಗ ಅವರ ಹೃದಯದ ಸ್ನಾಯುಗಳು ದುರ್ಬಲವಾಗಿವೆ ಎಂಬುದನ್ನು ಗೊತ್ತಾಯಿತು. ಆದರೆ ಅವರ ಬಾಲ್ಯವು ಸಾಕುಪ್ರಾಣಿಗಳಿಂದ ಸುತ್ತುವರೆದಿತ್ತು ಮತ್ತು ಅದು ಆಶೀರ್ವಾದ ಎಂದು ಅವರು ನಂಬಿದ್ದರು. “ಅವುಗಳು ಕೌತುಕದ ಮತ್ತು ಸಂತಸದ ಮೂಲವಾಗಿವೆ. ಈ ಗೊಂದಲಮಯ ಜಗತ್ತಿನಲ್ಲಿ ನಿಮಗಾಗಿ ಕಾದಿರುವ ಪ್ರೀತಿಯ ನಾಯಿ ನಿಮ್ಮನ್ನು ಯಾವುದೇ ಪ್ರತಿಕ್ರಿಯೆ ತೋರಿಸದೆ ನೋಡುತ್ತಿರುವುದು ಬಹುದೊಡ್ಡ ನೆಮ್ಮದಿ,” ಎಂದು ಅವರು ಹೇಳುತ್ತಾರೆ.

ಗೀತಾಂಜಲಿ ಅವರು ಸಮಾಜ ಸೇವಕಿಯಾಗಿ ಸಮಾಲೋಚನೆ ಮಾಡುವಾಗ ನಾಗರಿಕ ಕ್ಷೋಭೆಗೊಳಗಾಗಿದ್ದ ದೇಶವೊಂದರಲ್ಲಿ ಸಿಲುಕಿಕೊಂಡಿರುವ ಮಗಳ ತಾಯಿಯನ್ನು ಭೇಟಿಯಾದ ಇತ್ತೀಚಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಆ ಮಹಿಳೆ ತನ್ನ ತಳಮಳವನ್ನು ವಿವರಿಸುತ್ತಾ ಅಳಲು ಪ್ರಾರಂಭಿಸಿದರು. ಈ ಪ್ರಸಂಗವು ಗೀತಾಂಜಲಿ ಅವರಿಗೂ ಬೇಸರವನ್ನು ಉಂಟುಮಾಡಿತು; ಅವರ ಹೃದಯ ಬಡಿತವೂ ಏರಿತು ಮತ್ತು ಅವರು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು. “ಬೆಲ್ಲಾ ಬಂದು, ನನ್ನ ಕಣ್ಣನ್ನು ನೋಡಿದಳು ಮತ್ತು ಗಂಭೀರವಾಗಿ ನನ್ನನ್ನು ದಿಟ್ಟಿಸಿದಳು. ಅವಳು ನನ್ನ ಗಮನವನ್ನು ಸೆಳೆದಾಗ, ತನ್ನ ಕಣ್ಣುಗಳ ಮೂಲಕ ಬಹಳಷ್ಟು ವಿಚಾರಗಳನ್ನು ನನಗೆ ರವಾನಿಸಿದಳು ಮತ್ತು ನಾನು ಶಾಂತಳಾದೆ. ನಿಟ್ಟುಸಿರು ಬಿಟ್ಟೆ. ನಂತರ ಅವಳು ಹೊರಟುಹೋದಳು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಪ್ರತಿದಿನ ಎಂಬಂತೆ ಗೀತಾಂಜಲಿ ಅವರು ಮೂರ್ಛೆ ಬೀಳುತ್ತಾರೆ, ತಮ್ಮ ಚಲನೆಗಳಲ್ಲಿ, ನಡೆಯಲ್ಲಿ ಗೊಂದಲ ಅನುಭವಿಸುತ್ತಾರೆ, ವಾಕರಿಕೆ ಬಂದಂತೆ ಆಗುತ್ತದೆ ಮತ್ತು ಆಯಾಸಗೊಳ್ಳುತ್ತಾರೆ; ಅವರ ಸಾಕುಪ್ರಾಣಿಗಳು ಈ ಲಕ್ಷಣಗಳನ್ನು ಚೆನ್ನಾಗಿಯೇ ಅರ್ಥಮಾಡಿಕೊಳ್ಳುತ್ತವೆ. “ಬೆಲ್ಲಾ ಅಸಾಮಾನ್ಯಳು ಮತ್ತು ನನ್ನನ್ನು ಅವಳು ತುಂಬಾ ಚೆನ್ನಾಗಿ ಕಾಪಾಡುತ್ತಾಳೆ. ನನ್ನ ಧ್ವನಿಯನ್ನು ಆಲಿಸುತ್ತಿದ್ದಂತೆ ನಾನು ದಣಿದಿದ್ದೇನೆಯೇ ಎಂಬುದನ್ನು ಅವಳು ತಿಳಿದುಕೊಳ್ಳುತ್ತಾಳೆ. ಆಗ ಅವಳು ತನ್ನ ಮಾನವ ಸೋದರನನ್ನೂ(ನನ್ನ ಮಗ) ಸೇರಿದಂತೆ ಯಾರನ್ನೂ ನನ್ನ ಕೋಣೆಯೊಳಗೆ ಬರಲು ಬಿಡುವುದಿಲ್ಲ. ನಾನು ಚೇತರಿಸಿಕೊಂಡ ನಂತರವೇ ಜನರನ್ನು ಒಳಗೆ ಬಿಡುತ್ತಾಳೆ,” ಎಂದು ಅವರು ಹೇಳುತ್ತಾರೆ.

ಅವರ ಇನ್ನೊಂದು ನಾಯಿ ಮೋಟುಲು ಅವರು ಮೂರ್ಛೆ ಬೀಳುವಂತಿದ್ದರೆ ಅಥವಾ ಕುಳಿತುಕೊಂಡಾಗ, ತನ್ನ ಸುತ್ತಲಿನ ಪರಿಸ್ಥಿತಿ ಅಥವಾ ಶಕ್ತಿಯನ್ನು ಗ್ರಹಿಸಿಕೊಳ್ಳುತ್ತದೆ. ಆಗ ಅವರ ಬಳಿ ಹೋಗಿ ತನ್ನ ತಲೆಯನ್ನು ಅವರ ಮೊಣಕಾಲಿನ ಮೇಲೆ ಇಡುತ್ತದೆ. “ಅವನ ಗಾತ್ರವನ್ನು ಪರಿಗಣಿಸಿದರೆ ಭಾರವೆನಿದರೂ, ಅದು ಅವನು ನನಗೆ ಆರಾಮ ನೀಡಲು ಅನುಸರಿಸುವ ವಿಧಾನ,” ಎಂದು ಅವರು ಹೇಳುತ್ತಾರೆ.

ಸಾಕುಪ್ರಾಣಿಗಳೊಂದಿಗಿನ ಸಂಬಂಧಗಳು ವಿಶೇಷ ಮತ್ತು ಸುಂದರವಾಗಿವೆ. ಅವು ನಮಗೆ ಸಂತೋಷದಿಂದ ಮಾತ್ರವಲ್ಲದೆ ಆರೋಗ್ಯಕರವಾಗಿ ಬಾಳಲು ಸಹಾಯ ಮಾಡುತ್ತವೆ. ಮನೆಯಲ್ಲಿ ಸಾಕುಪ್ರಾಣಿಗಳ ಪ್ರಯೋಜನಗಳು ಮತ್ತು ಅವುಗಳು ಹೃದಯದ ಆರೋಗ್ಯ ಸುಧಾರಿಸಲು ಹೇಗೆ ಸಹಾಯ ಮಾಡುತ್ತವೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಹೃದಯ ಸಮಸ್ಯೆಗಳಿರುವ ಜನರು ಮನೆಯಲ್ಲಿ ನಾಯಿಯನ್ನು ಸಾಕಿಕೊಂಡಿದ್ದರೆ, ಅದು ಸಾವಿನ ಅಪಾಯವನ್ನು ಶೇಕಡಾ 65 ರಷ್ಟು ಕಡಿಮೆ ಮಾಡುತ್ತದೆ. ನಾಯಿ ಸಾಕದವರಿಗೆ ಹೋಲಿಸಿದರೆ ನಾಯಿ ಸಾಕುವವರು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಸಾಯುವ ಸಾಧ್ಯತೆ ಶೇಕಡಾ 31 ರಷ್ಟು ಕಡಿಮೆ.

ಸಾಕುಪ್ರಾಣಿಗಳು ಮತ್ತು ಹೃದ್ರೋಗದ ಕಡಿಮೆ ಅಪಾಯ

ಅಮೆರಿಕದ ಪೋರ್ಟ್‌ಲ್ಯಾಂಡ್‌ನ ಒರೆಗಾನ್ ಸ್ವಾಸ್ಥ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಹೆಲ್ತ್ ಮತ್ತು ಸಾಯೆನ್ಸ್ ಯೂನಿವರ್ಸಿಟಿ), ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಸುವೆನ್ ಕುಮಾರ್ ಹೇಳುವ ಪ್ರಕಾರ, ಸಾಕುಪ್ರಾಣಿಗಳನ್ನು ಹೊಂದಿರುವುದು ನಿಜಕ್ಕೂ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. “ಅನೇಕ ಅಧ್ಯಯನಗಳು ಮನೆಯಲ್ಲಿ ಸಾಕುಪ್ರಾಣಿ ಇರುವುದರ ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರಯೋಜನಗಳನ್ನು ತೋರಿಸುತ್ತವೆ. ಹೃದಯರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವೆಂದರೆ ಒತ್ತಡ. ಸಾಕುಪ್ರಾಣಿಗಳು ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ನೀವು ದೈಹಿಕವಾಗಿಯೂ ಸಕ್ರಿಯರಾಗಿರಲು ಸಹಾಯ ಮಾಡುತ್ತವೆ. ನೀವು ಸಾಕುಪ್ರಾಣಿಯನ್ನು ಹೊಂದಿದ್ದರೆ, ಪ್ರತಿದಿನ ಕನಿಷ್ಠ ಎರಡು ಬಾರಿಯಾದರೂ ಹೊರಗೆ ಹೋಗಬೇಕಾಗುತ್ತದೆ. ಇದು ನಿಮ್ಮನ್ನು ಜಡ ಜೀವನಶೈಲಿಯಿಂದ ದೂರವಿರಿಸುತ್ತದೆ. ಅವು ಆಕ್ಸಿಟೋಸಿನ್ ಅಥವಾ ಪ್ರೀತಿಯ ಹಾರ್ಮೋನುಗಳು ಎಂದು ಕರೆಯಲ್ಪಡುವ ಅಂಶಗಳನ್ನು ಸುಧಾರಿಸುತ್ತವೆ,” ಎಂದು ಅವರು ಹೇಳುತ್ತಾರೆ. ಅಲ್ಲದೆ ಸಾಕುಪ್ರಾಣಿಯೊಂದಿಗಿನ ಬಂಧವು ತೃಪ್ತಿಕರವಾಗಿರುತ್ತದೆ. ಅವುಗಳ ಪ್ರೀತಿ ಅನಿರ್ಬಂಧಿತವಾಗಿದೆ ಮತ್ತು ಅವುಗಳಿಗೆ ಯಾವುದೇ ನಿರೀಕ್ಷೆಗಳಿರುವುದಿಲ್ಲ “ನಾಯಿಗಳು ನಿಮ್ಮ ಶಕ್ತಿಯನ್ನು ಗ್ರಹಿಸುತ್ತವೆ. ಆದ್ದರಿಂದ, ನೀವು ಒತ್ತಡದಲ್ಲಿದ್ದರೆ, ಅವುಗಳು ಕೂಡಾ ಒತ್ತಡಕ್ಕೆ ಒಳಗಾಗಬಹುದು,” ಎಂದು ಅವರು ಹೇಳುತ್ತಾರೆ.

ದಣಿದ ನಾಯಿ ಸಂತೋಷದ ನಾಯಿ ಎಂದು ಹೇಳಲಾಗುತ್ತದೆ. ಸಾಕುಪ್ರಾಣಿಯ ಪೋಷಕರು ತಮ್ಮ ಸಾಕುಪ್ರಾಣಿಗಳು ದೈಹಿಕವಾಗಿ ಸಕ್ರಿಯವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು, ಎಂದು ಡಾ. ಸುವೆನ್ ಸಲಹೆ ನೀಡುತ್ತಾರೆ. “ನೀವು ಅವುಗಳನ್ನು ಆಡಿಸಲು, ನಡೆಯಲು ಮತ್ತು ಓಟಗಳಿಗಾಗಿ ಹೊರಗೆ ಕರೆದೊಯ್ಯುವಾಗ, ನೀವು ಕೂಡಾ ದೈಹಿಕವಾಗಿ ಸಕ್ರಿಯರಾಗುತ್ತೀರಿ. ನಾಯಿಗಳು ಸಕ್ರಿಯವಾಗಿಲ್ಲದಿದ್ದರೆ ಒತ್ತಡಕ್ಕೆ ಒಳಗಾಗಬಹುದು ಎಂದು ಅಮೆರಿಕಾದ ಜನರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ, ಅವುಗಳು ಸಕ್ರಿಯವಾಗಿರುವಂತೆ ಅವರು ನೋಡಿಕೊಳ್ಳುತ್ತಾರೆ,” ಎಂದು ಅವರು ಹೇಳುತ್ತಾರೆ.

ಸಾಕುಪ್ರಾಣಿಗಳು ಹೃದಯದ ಆರೋಗ್ಯ ಪ್ರಯೋಜನಗಳನ್ನು ನೀಡಬಹುದು ಎಂದು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಹಿರಿಯ ಸಲಹೆಗಾರ ಆಗಿರುವ ಡಾ. ಪ್ರದೀಪ್ ಕುಮಾರ್ ಡಿ. ಅವರು ಹೇಳುತ್ತಾರೆ. “ಮನೆಯಲ್ಲಿ ಸಾಕುಪ್ರಾಣಿಗಳು ಹೊಂದಿರುವುದರ ಆರೋಗ್ಯ ಪ್ರಯೋಜನಗಳ ಬಗ್ಗೆ ಚಿಕ್ಕ ಅಧ್ಯಯನಗಳು ನಡೆದಿವೆ, ಆದರೆ ದೀರ್ಘಾಯುಷ್ಯ ಅಥವಾ ಉತ್ತಮ ಹೃದಯದ ಆರೋಗ್ಯಕ್ಕೆ ಸಾಕುಪ್ರಾಣಿಗಳೇ ಕಾರಣ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸಾಕುಪ್ರಾಣಿಗಳಿರುವ ಜನರು ಸಂತೋಷವಾಗಿರುತ್ತಾರೆ, ಕಡಿಮೆ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಕಡಿಮೆ ಒತ್ತಡಕ್ಕೆ ಒಳಗಾಗುತ್ತಾರೆ. ಹೆಚ್ಚಿನ ಒತ್ತಡದ ಮಟ್ಟಗಳನ್ನು ಹೊಂದಿರುವ ಜನರು ಖಂಡಿತವಾಗಿಯೂ ಹೃದಯಾಘಾತ ಹೊಂದುವ ಸಾಧ್ಯತೆ ಹೆಚ್ಚು,” ಎನ್ನುತ್ತಾರೆ ಡಾ. ಪ್ರದೀಪ್‌.

ದಿ ಅಮೇರಿಕನ್ ಜರ್ನಲ್ ಆಫ್ ಕಾರ್ಡಿಯಾಲಜಿಯಲ್ಲಿ 2020ರಲ್ಲಿ ಪ್ರಕಟವಾದ ‘ಯುಎಸ್‌ನ ಸಾಮಾನ್ಯ ಜನರಲ್ಲಿನ ಸಾಕುಪ್ರಾಣಿ ಮಾಲೀಕತ್ವ ಮತ್ತು ಹೃದಯರಕ್ತನಾಳದ ಆರೋಗ್ಯ’ ಎಂಬ ಲೇಖನದ ಪ್ರಕಾರ, ಸಾಕುಪ್ರಾಣಿ ಮಾಲೀಕರು ಹೆಚ್ಚಿನ ಹಿಮೋಗ್ಲೋಬಿನ್, ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಮತ್ತು ಮಧುಮೇಹ ಮೆಲ್ಲಿಟಸ್ (ಡಿಎಂ), ಸಾಮಾನ್ಯ ಹೈಪರ್‌ಟೆನ್‌ಶನ್‌/ಅಧಿಕ ರಕ್ತದೊತ್ತಡ (ಎಸ್ಎಚ್) ಹೊಂದಿದ್ದು ಮತ್ತು ಪಾರ್ಶ್ವವಾಯುವಿಗೆ ಈಡಾಗುವ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ.

ಹೃದ್ರೋಗದಿಂದ ಬಳಲುತ್ತಿರುವವರಿಗೆ ಸಾಕುಪ್ರಾಣಿಗಳು ಹೇಗೆ ಸಹಾಯ ಮಾಡುತ್ತವೆ?

  • ಸಾಕುಪ್ರಾಣಿಗಳ ಆರೈಕೆಯ ಕೆಲವು ಪ್ರಯೋಜನಗಳು ಇಲ್ಲಿವೆ:
  • ಅವುಗಳು ನಿಮ್ಮನ್ನು ಸಂತೋಷಕರ ಮತ್ತು ಆರೋಗ್ಯಕರವಾಗಿರಿಸುತ್ತವೆ
  • ಒಂಟಿತನ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತವೆ
  • ಅವುಗಳ ಸಾಂತ್ವನದಾಯಕ ಮತ್ತು ಶಾಂತಗೊಳಿಸುವ ಸ್ವಭಾವದಿಂದ ಆತಂಕವನ್ನು ಕಡಿಮೆ ಮಾಡುತ್ತವೆ
  • ಬೇಸರವನ್ನು ಕಡಿಮೆಗೊಳಿಸುತ್ತವೆ
  • ದೈಹಿಕವಾಗಿ ಸಕ್ರಿಯವಾಗಿರಲು ನಿಮಗೆ ಸಹಾಯ ಮಾಡುತ್ತವೆ
  • ಸಾಮಾಜಿಕವಾಗಿ ಬೆರೆಯಲು ಮತ್ತು ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ

ಡಾ. ಸುವೆನ್‌ ಹೇಳುವ ಪ್ರಕಾರ, ಮನೆಯಲ್ಲಿ ಸಾಕುಪ್ರಾಣಿ ಇರುವುದು ಅಮೆರಿಕಾ ಸಂಸ್ಕೃತಿಯ ಒಂದು ಭಾಗವಾಗಿದೆ. ಸಾಕುಪ್ರಾಣಿಗಳಿಲ್ಲದ ಕುಟುಂಬ ಕಾಣಸಿಗುವುದೇ ಬಹಳ ಅಪರೂಪ. “ಜನರು ಮೊದಲಿನಿಂದಲೂ ಅವುಗಳ ಮೇಲೆ ಒಲವನ್ನು ಹೊಂದಿದ್ದಾರೆ. ಕಿರಿಯ ವಯಸ್ಸಿನ ನನ್ನ ಸ್ನೇಹಿತನೊಬ್ಬ ತನ್ನ ವೈದ್ಯಕೀಯ ತರಬೇತಿಯ ಸಮಯದಲ್ಲಿ ಒತ್ತಡಕ್ಕೊಳಗಾಗಿದ್ದ. ನಾನು ಅವನಿಗೆ ಸಾಕುಪ್ರಾಣಿಯನ್ನು ಸಾಕಲು ಸೂಚಿಸಿದೆ. ನಂತರ ಅವನ ಜೀವನವು ಸುಧಾರಿಸಿತು. ಅವನು ಸಂತೋಷವಾಗಿರುವುದು ಹಾಗೂ ಕಡಿಮೆ ಒತ್ತಡದಲ್ಲಿರುವುದನ್ನು ನಾನು ನೋಡಿದ್ದೇನೆ. ಪ್ರತಿಯೊಂದು ಕೆಲಸದಲ್ಲೂ ಒತ್ತಡವಿರುತ್ತದೆ ಆದರೆ ಮನೆಯಲ್ಲಿ ನಿಮ್ಮ ಹಿಂದಿರುಗುವಿಕೆಯನ್ನು ಎದುರು ನೋಡುತ್ತಿರುವ ಸಾಕುಪ್ರಾಣಿ ಇರುವಾಗ, ಒತ್ತಡವು ಮನೆಯಲ್ಲಿ ಮಾಯವಾಗುತ್ತದೆ,” ಎನ್ನುತ್ತಾರೆ ಡಾ ಸುವೆನ್‌.

ಸ್ಕ್ರೀನ್‌ ಚಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ

ಈ ಸಂಶೋಧನಾ ಅಧ್ಯಯನಗಳು ಪಾಶ್ಚಿಮಾತ್ಯ ಜನರಿಗೆ ಹೆಚ್ಚು ಪ್ರಸ್ತುತವಾಗಿವೆ ಎಂದು ಡಾ. ಪ್ರವೀಣ್ ಭಾವಿಸುತ್ತಾರೆ. “ಭಾರತದಲ್ಲಿ, ಜನರು ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದಾರೆ. ವಯಸ್ಸಾದವರು ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳೊಂದಿಗೆ ವಾಸಿಸುತ್ತಾರೆ. ಹಾಗಾಗಿ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ ಅವರಿಗೆ ಜನರ ಬೆಂಬಲ ಮತ್ತು ಒಡನಾಟವಿದೆ. ವಿದೇಶಗಳಲ್ಲಿ ಜನರು ಏಕಾಂಗಿಯಾಗಿ ವಾಸಿಸುತ್ತಾರೆ ಮತ್ತು ತಮ್ಮ ಒಡನಾಟಕ್ಕಾಗಿ ಸಾಕುಪ್ರಾಣಿಗಳನ್ನು ಸಾಕುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಚ್ಚು ಸಂವಾದಾತ್ಮಕವಾದ ಮತ್ತು ಒತ್ತಡ ನಿವಾರಕ ಎಂದು ಪರಿಗಣಿಸಲ್ಪಡುವ ನಾಯಿಗಳನ್ನು ಹೆಚ್ಚಾಗಿ ಸಾಕುತ್ತಾರೆ,” ಎಂದು ಅವರು ಹೇಳುತ್ತಾರೆ.

ಆದರೆ ಡಾ. ಸುವೆನ್ ಅಭಿಪ್ರಾಯ ಇದಕ್ಕೆ ತದ್ವಿರುದ್ಧವಾಗಿದೆ. ಭಾರತದಲ್ಲಿ ವಯಸ್ಸಾದವರಿಗೆ ಕುಟುಂಬದ ಬೆಂಬಲವಿರಬಹುದು, ಆದರೆ ಅವರು ಸಾಕುಪ್ರಾಣಿಗಳನ್ನು ಸಾಕುವ ಪೋಷಕರಷ್ಟು ದೈಹಿಕವಾಗಿ ಸಕ್ರಿಯವಾಗಿಲ್ಲ. “ಭಾರತದಲ್ಲಿ, ವಯಸ್ಸಾದವರು ತಮ್ಮ ಮಕ್ಕಳೊಂದಿಗೆ ಇರುತ್ತಾರೆ ಮತ್ತು ಅವರ ಪ್ರೀತಿ ಮತ್ತು ಬೆಂಬಲವನ್ನು ಹೊಂದಿದ್ದರೂ, ದೈಹಿಕವಾಗಿ ಸಕ್ರಿಯವಾಗಿರುವುದಿಲ್ಲ. ಮಕ್ಕಳು ಮತ್ತು ವಯಸ್ಸಾದವರು ತಮ್ಮ ಫೋನ್‌ಗಳಿಗೆ ಅಂಟಿಕೊಂಡಿರುವುದನ್ನು ನೀವು ನೋಡಿರುತ್ತೀರಿ. ಆದರೆ ಮಕ್ಕಳಿದ್ದ ಮತ್ತು ನಾಯಿಗಳನ್ನು ಹೊಂದಿರುವ ಕುಟುಂಬದಲ್ಲಿ, ಮಕ್ಕಳು ದೈಹಿಕವಾಗಿ ಸಕ್ರಿಯರಾಗಿರುವುದನ್ನೂ ಮತ್ತು ತಾಂತ್ರಿಕ ಉಪಕರಣಗಳೊಂದಿಗೆ (ಗ್ಯಾಜೆಟ್‌) ಹೆಚ್ಚಿನ ಸಮಯವನ್ನು ಕಳೆಯದಿರುವುದನ್ನು ನೀವು ಗಮನಿಸಬಹುದು. ಆದರೆ ಸಾಕುಪ್ರಾಣಿಯನ್ನು ಹೊಂದಿದ್ದರೆ, ನೀವು ಅದಕ್ಕೆ ನ್ಯಾಯ ಒದಗಿಸಬೇಕು. ನೀವು ಅವುಗಳಿಗೆ ಸೂಕ್ತ ಆರೈಕೆ ಮತ್ತು ತರಬೇತಿಯನ್ನೂ ನೀಡಬೇಕು,” ಎಂದು ಅವರು ಹೇಳುತ್ತಾರೆ.

ಮೋಟುಲು ಬಹಳಷ್ಟು ಹೆಸರುವಾಸಿಯಾಗಿದ್ದು ಇತರ ನಾಯಿಗಳು ಮತ್ತು ಮಕ್ಕಳ ಗಮನವನ್ನು ತನ್ನೆಡೆಗೆ ಸೆಳೆಯುತ್ತದೆ ಎಂದು ಗೀತಾಂಜಲಿ ಹೇಳುತ್ತಾರೆ. ಹದಿಹರೆಯದವರು ತಮ್ಮ ಪರೀಕ್ಷಾ ಒತ್ತಡದಿಂದ ಪಾರಾಗಲಿಕ್ಕಾಗಿ ಮೋಟುಲುವಿನೊಂದಿಗೆ ಆಟವಾಡಲು ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಾರೆ. “ಅವರು ಬಂದು, ಅವನ ಮುದ್ದಾದ ದಪ್ಪನೆಯ ರೋಮಭರಿತ ಮೈ ಮೇಲೆ ತಮ್ಮ ತಲೆಗಳನ್ನಿಟ್ಟು ಅವನೊಂದಿಗೆ ಚಕ್ಕಂದವಾಡುತ್ತಾ ನಗುತ್ತಾ ಹಿಂತಿರುಗುತ್ತಾರೆ. ಅವನು ಚಿಕಿತ್ಸಕ (ಥೆರಪಿ) ನಾಯಿ,” ಎನ್ನುತ್ತಾರೆ ಗೀತಾಂಜಲಿ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ