0

0

0

ಈ ಲೇಖನದಲ್ಲಿ

ಕಬ್ಬಿಣಾಂಶದ ಕೊರತೆ ಗಮನಕ್ಕೆ ಬಾರದಿರುವುದೇಕೆ?
49

ಕಬ್ಬಿಣಾಂಶದ ಕೊರತೆ ಗಮನಕ್ಕೆ ಬಾರದಿರುವುದೇಕೆ?

ಕಬ್ಬಿಣಾಂಶದ ಕೊರತೆ ಇರುವ ಜನರಲ್ಲಿ ಇದರ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದಿಲ್ಲ ,ವಾಡಿಕೆಯ ಪ್ರಯೋಗಾಲಯ ಪರೀಕ್ಷೆಯ ಸಮಯದಲ್ಲಿ ಈ ಕೊರತೆಯು ಪತ್ತೆಯಾಗುತ್ತದೆ.
ಕಬ್ಬಿಣಾಂಶದ ಕೊರತೆ ಗಮನಕ್ಕೆ ಬಾರದಿರುವುದೇಕೆ?
ಚಿತ್ರ: ಸುಯಶ್ ಚಂದ್ರ

ಕರ್ನಾಟಕದ ಮಂಗಳೂರು ನಗರದ ಮನೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಬೋಧಿಸುತ್ತಿರುವ ಶಿಲ್ಪಿ ಸಹಾ ಅವರು 2017 ರಲ್ಲಿ ಮೊದಲ ಬಾರಿ ಗರ್ಭವತಿಯಾದಾಗ, ಅವರು ರಕ್ತಹೀನತೆಯಿಂದ ಬಳಲುತ್ತಿದ್ದರು. 35ರ ಹರೆಯದ ಶಿಲ್ಪಿ ಸಹಾ, ತಮ್ಮ ಮೊದಲನೆಯ ಗರ್ಭಧಾರಣೆಯ ಅವಧಿಯಲ್ಲಿ ತಮ್ಮ ಹಿಮೋಗ್ಲೋಬಿನ್ ಮಟ್ಟವು 9 ಗ್ರಾಂ / ಡೆಸಿಲೀಟರ್‌ನಷ್ಟು ಕಡಿಮೆಯಾಗಿತ್ತು ಎಂದು ಹ್ಯಾಪಿಯೆಸ್ಟ್ ಹೆಲ್ತ್‌ಗೆ ತಿಳಿಸಿದರು.

ಪ್ರಮಾಣಿತ ಹಿಮೋಗ್ಲೋಬಿನ್ ವ್ಯಾಪ್ತಿಯನ್ನು ಸಾಮಾನ್ಯವಾಗಿ ಪುರುಷರಿಗೆ ಪ್ರತಿ ಡೆಸಿಲಿಟರ್ (dL) ರಕ್ತಕ್ಕೆ 13.2 ರಿಂದ 16.6 ಗ್ರಾಂ ಮತ್ತು ಮಹಿಳೆಯರಿಗೆ 11.6 ರಿಂದ 15 ಗ್ರಾಂ/ಡಿಎಲ್ ಎಂದು ವ್ಯಾಖ್ಯಾನಿಸಲಾಗಿದೆ. ಶಿಲ್ಪಿ ಸಹಾ ಗರ್ಭವತಿಯಾದಾಗಿನಿಂದಲೂ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಿಯೇ ಇದ್ದು ಅವರ ಎಂಟನೆಯ ತಿಂಗಳಿನವರೆಗೂ ಹೀಗೆಯೇ ಮುಂದುವರೆಯಿತು. ಅಕ್ಟೋಬರ್ 2017 ರಲ್ಲಿ ಸಹಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ವೈದ್ಯರು ಅವರಿಗೆ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆ ಉಂಟಾಗಿರುವುದನ್ನು ತಿಳಿಸಿದರು.

ಆರಂಭದಲ್ಲಿ, ಪ್ರಸೂತಿ ಮತ್ತು ಸ್ತ್ರೀರೋಗತಜ್ಞರು ಅವರಿಗೆ ಕಬ್ಬಿಣಾಂಶದ ಪೂರಕಗಳನ್ನು ನೀಡಿದರು. “ಆದರೆ, ಅದರಿಂದ ಪ್ರಯೋಜನವಾಗಲಿಲ್ಲ,  ಪೂರಕಗಳನ್ನು ತೆಗೆದುಕೊಂಡ ಕಾರಣದಿಂದಾಗಿ ನಾನು ಮಲಬದ್ಧತೆಯನ್ನು ಅನುಭವಿಸಿದೆ, ನಂತರ ನಾನು ಕೋಳಿಯ ಲಿವರ್ ಮತ್ತು ಕಬ್ಬಿಣದ ಸತ್ವದಿಂದ ಸಮೃದ್ಧವಾದ ತರಕಾರಿಗಳನ್ನು ತಿನ್ನಲು ಪ್ರಾರಂಭಿಸಿದೆ. ಇದು ಬಹಳಷ್ಟು ಸಹಾಯ ಮಾಡಿತು ಮತ್ತು ನನ್ನ ಹಿಮೋಗ್ಲೋಬಿನ್ ಮಟ್ಟವು 11g/dL ತಲುಪಿತು” ಎಂದು ಸಹಾ ಹೇಳಿದರು.

ಕಬ್ಬಿಣಾಂಶದ ಕೊರತೆಯ ರಕ್ತಹೀನತೆಗೆ ಕಾರಣಗಳು

ರಕ್ತಹೀನತೆಯನ್ನು ಉಂಟುಮಾಡುವ ಕಬ್ಬಿಣಾಂಶದ ಕೊರತೆಗೆ ಕಾರಣವಾಗುವ ಇತರ ಸಾಮಾನ್ಯ ಕಾರಣಗಳೊಂದಿಗೆ ಗರ್ಭಧಾರಣೆಯು ಕೂಡಾ ಒಂದು. “ಗರ್ಭಧಾರಣೆಯ ಜೊತೆಗೆ, ನಿಮ್ಮ ಆಹಾರದಲ್ಲಿ ಸಾಕಷ್ಟು ಕಬ್ಬಿಣಾಂಶ ಇಲ್ಲದಿರುವುದು, ದೀರ್ಘಾವಧಿಯ ರಕ್ತ ನಷ್ಟವಾಗುವಿಕೆ ಮತ್ತು ಅತಿಯಾದ ವ್ಯಾಯಾಮ ಇವು ಇತರ ಕಾರಣಗಳು. ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಾಧ್ಯವಾಗದಿದ್ದರೆ ಕೆಲವರು ಕಬ್ಬಿಣಾಂಶದ ಕೊರತೆಯನ್ನು ಅನುಭವಿಸುತ್ತಾರೆ” ಎಂದು ಬೆಂಗಳೂರಿನ ಆಸ್ಟರ್ CMI ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಸಮಾಲೋಚಕರಾದ ಡಾ ಬೃಂದಾ ಎಂಎಸ್ ಅವರು ಹೇಳುತ್ತಾರೆ.

ದೇಹದಲ್ಲಿ ಕಬ್ಬಿಣಾಂಶದ ಬೇಡಿಕೆ ಹೆಚ್ಚಾಗಿ ಅದರ ಪೂರೈಕೆಯು ಕಡಿಮೆಯಾದಾಗ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. “ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಆಗುತ್ತಿರುತ್ತದೆ, ಈ ಸಂದರ್ಭದಲ್ಲಿ ದೇಹಕ್ಕೆ ಕಬ್ಬಿಣಾಂಶದ ಅಗತ್ಯವು ಹೆಚ್ಚಾಗುತ್ತದೆ. ಋತುಚಕ್ರದಂತಹ ಶಾರೀರಿಕ ರಕ್ತ ನಷ್ಟಗಳ ಸಮಯದಲ್ಲಿ, ದೇಹದಲ್ಲಿ ಕಬ್ಬಿಣಾಂಶದ ಬೇಡಿಕೆಯು ಹೆಚ್ಚಾಗುತ್ತದೆ. ಹೆಲ್ಮಿಂಥಿಕ್ ಸೋಂಕುಗಳಾದ ಕೊಕ್ಕೆಹುಳು ಅಥವಾ ದೀರ್ಘಕಾಲದ ಜಠರಗರುಳಿನ ರಕ್ತ ನಷ್ಟ, H ಪೈಲೋರಿ-ಸಂಬಂಧಿತ ದೀರ್ಘಕಾಲದ ಜಠರದ ಉರಿಯೂತ, ಆಸ್ಪಿರಿನ್, ಸ್ಟೀರಾಯ್ಡ್‌ಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಿರೋಧಕದಂತಹ ಕೆಲವು ಔಷಧಿಗಳ ಬಳಕೆ, ಜಠರಗರುಳಿನ ಮಾರಕ ಕಾಯಿಲೆಗಳು ಮತ್ತು ಸೀಲಿಯಾಕ್ ರೋಗದಂತಹ ಹೀರುವಿಕೆಯ ಅಸ್ವಸ್ಥತೆಗಳ (ಮಾಲ್ ಅಬ್ಸಾರ್ಪ್ಷನ್)  ಕಾರಣದಿಂದಲೂ ಕಬ್ಬಿಣಾಂಶ ಕೊರತೆಯ ರಕ್ತಹೀನತೆ ಬಾಧಿಸಬಹುದು” ಎಂದು ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್‌ನ ಇಂಟರ್ನಲ್ ಮೆಡಿಸಿನ್ ಅಸೋಸಿಯೇಟ್ ಸಮಾಲೋಚಕರಾದ ಡಾ.ರೂಪಶ್ರೀ ವೈ.ಪಿ. ಹೇಳುತ್ತಾರೆ.

ಯಾವುದೇ ವಯಸ್ಸಿನ ಪುರುಷರು ಮತ್ತು ಋತುಬಂಧವಾಗಿರುವ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯ ರಕ್ತಹೀನತೆಯನ್ನು ಕಂಡುಹಿಡಿಯಲು ವೈದ್ಯರು ಸಾಮಾನ್ಯವಾಗಿ ದೀರ್ಘಕಾಲ ರಕ್ತದ ನಷ್ಟವಾಗಿರುವ ವಿವರಗಳನ್ನು ಕೇಳುತ್ತಾರೆ.

“ಸೋಂಕು, ಉರಿಯೂತ ಮತ್ತು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುವ ಹೆಪ್ಸಿಡಿನ್‌ ಹೆಚ್ಚಳದಂತಹ ಯಕೃತ್ತಿನ ಅಸ್ವಸ್ಥತೆಗಳ ಕೆಲವು ಪರಿಸ್ಥಿತಿಗಳಲ್ಲಿ ಸಹ ಕಬ್ಬಿಣಾಂಶದ ಕೊರತೆಯನ್ನು ಕಾಣಬಹುದು” ಎಂದು ಡಾ ರೂಪಶ್ರೀ ಹೇಳಿದರು.

ಕಬ್ಬಿಣಾಂಶದ ಕೊರತೆ – ಕಂಡುಹಿಡಿಯುವುದು ಕಷ್ಟವೇ?

ಸಹಾ ಅವರು ಗರ್ಭಾವಸ್ಥೆಗೆ ಸಂಬಂಧಿಸಿದ ಕೆಲವು ಪರೀಕ್ಷೆಗಳಿಗೆ ಒಳಗಾದ ನಂತರವೇ ಅವರಿಗೆ ಕಬ್ಬಿಣಾಂಶದ ಕೊರತೆಯ ರಕ್ತಹೀನತೆ ಇದೆ ಎಂಬುದು ತಿಳಿಯಿತು, ಹೆಚ್ಚಿನ ಪ್ರಕರಣದಲ್ಲಿ ಹೀಗೆಯೇ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ. “ಕಬ್ಬಿಣಾಂಶದ ಕೊರತೆಯಿರುವ ಹೆಚ್ಚಿನ ಜನರಲ್ಲಿ ಇದರ ಲಕ್ಷಣಗಳು ಕಂಡುಬರುವುದಿಲ್ಲ ಮತ್ತು ವಾಡಿಕೆಯ ಪ್ರಯೋಗಾಲಯ ಪರೀಕ್ಷೆಯ ಸಮಯದಲ್ಲಿ ಮಾತ್ರ ಇದು ಪತ್ತೆಯಾಗುತ್ತದೆ” ಎಂದು ಡಾ ರೂಪಶ್ರೀ ಹೇಳುತ್ತಾರೆ.

ಕಬ್ಬಿಣಾಂಶದ ಕೊರತೆಯಲ್ಲಿ ಮೂರು ಹಂತಗಳಿವೆ. ಮೊದಲನೆಯದು ಕಬ್ಬಿಣಾಂಶದ ಸಂಗ್ರಹಣೆ ಖಾಲಿಯಾಗುವುದು. ಎರಡನೆಯದು ಕಬ್ಬಿಣಾಂಶದ ಕೊರತೆಯ ಎರಿಥ್ರೋಪೊಯಿಸಿಸ್ ಅಥವಾ ಸಂಪೂರ್ಣ ಕಬ್ಬಿಣಾಂಶ ಕೊರತೆಯ ರಕ್ತಹೀನತೆ – ಸಂಪೂರ್ಣ ರಕ್ತ ಕಣಗಳ ಎಣಿಕೆ ಅಥವಾ ಹೆಮೋಗ್ರಾಮ್ ಮೂಲಕ ಮಾತ್ರವೇ ಇದನ್ನು ಪತ್ತಹಚ್ಚಬಹದುದಷ್ಟೇ ವಿನಃ ವಾಡಿಕೆಯ ಪರೀಕ್ಷೆಗಳಲ್ಲಿ ಇದು ಪತ್ತೆಯಾಗುವುದಿಲ್ಲ. ಕಬ್ಬಿಣಾಂಶದ ಕೊರತೆಯ ರಕ್ತಹೀನತೆಯ ಮೂರನೇ ಮತ್ತು ಅಂತಿಮ ಹಂತವೆಂದರೆ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುವುದು. ಅನೇಕ ಯುವ ರೋಗಿಗಳಲ್ಲಿ ರಕ್ತಹೀನತೆ ತೀವ್ರವಾಗುವವರೆಗೂ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ.

ಕಬ್ಬಿಣಾಂಶದ ಕೊರತೆಯ ಲಕ್ಷಣಗಳು

ಆದರೂ ಹಲವಾರು ಚಿಹ್ನೆಗಳು ಮತ್ತು ಲಕ್ಷಣಗಳು ಕಬ್ಬಿಣಾಂಶದ ಕೊರತೆಯನ್ನು ಸೂಚಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ:

  • ವಿಪರೀತ ಆಯಾಸ
  • ನಿಶ್ಯಕ್ತಿ
  • ಕಿರಿಕಿರಿ
  • ಚರ್ಮ ಕಳೆಗುಂದುವುದು
  • ಎದೆ ನೋವು, ಹೃದಯ ಬಡಿತ ಹೆಚ್ಚಾಗುವುದು ಅಥವಾ ಉಸಿರಾಟದ ತೊಂದರೆ
  • ತಲೆನೋವು, ತಲೆತಿರುಗುವುದು ಅಥವಾ ತಲೆಭಾರವಾಗುವುದು
  • ಕೈಗಳು ಮತ್ತು ಪಾದಗಳು ತಣ್ಣಗಾಗುವುದು
  • ನಾಲಿಗೆಯ ಉರಿಯೂತ ಅಥವಾ ಹುಣ್ಣು
  • ಉಗುರುಗಳು ಮುರಿಯುವುದು

ಕಬ್ಬಿಣಾಂಶ ಮತ್ತು ಅದರ ಪ್ರಾಮುಖ್ಯತೆ

ದೇಹಕ್ಕೆ ಸಾಕಷ್ಟು ಪ್ರಮಾಣದ ಕಬ್ಬಿಣಾಂಶವನ್ನು ಮರುಪೂರಣಗೊಳಿಸಲು, ಕಬ್ಬಿಣಾಂಶ ಮತ್ತು ಅದರ ವಿವಿಧ ಘಟಕಗಳನ್ನು ಅರ್ಥಮಾಡಿಕೊಳ್ಳುವುದು ಆವಶ್ಯಕ.

“ಕಬ್ಬಿಣಾಂಶವು ದೇಹದ ಬೆಳವಣಿಗೆ ಮತ್ತು ವಿಕಸನಕ್ಕೆ ಅಗತ್ಯವಾದ ಖನಿಜಾಂಶವಾಗಿದೆ. ಶ್ವಾಸಕೋಶದಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳಲ್ಲಿರುವ ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ಮತ್ತು ಸ್ನಾಯುಗಳಿಗೆ ಆಮ್ಲಜನಕವನ್ನು ಒದಗಿಸುವ ಮಯೋಗ್ಲೋಬಿನ್ ಎಂಬ ಪ್ರೋಟೀನ್ – ಈ ಪ್ರೋಟೀನ್‌ಗಳ ಉತ್ಪಾದನೆಗೆ ಕಬ್ಬಿಣಾಂಶ ಬೇಕು. ಅಲ್ಲದೇ, ನಮ್ಮ ದೇಹದಲ್ಲಿನ ಕೆಲವು ಹಾರ್ಮೋನ್‌ಗಳ ಉತ್ಪಾದನೆಗೂ ಕಬ್ಬಿಣದ ಅಂಶವು ಅತ್ಯವಶ್ಯಕವಾಗಿದೆ ಎಂದು ಡಾ.ಬೃಂದಾ ಹೇಳುತ್ತಾರೆ.

“ಕಬ್ಬಿಣದ ಅಂಶದ ಕೊರತೆಯಿರುವಾಗ, ಆಮ್ಲಜನಕವನ್ನು ಸಾಗಿಸುವ ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪತ್ತಿ ಮಾಡಲು ನಮ್ಮ ದೇಹಕ್ಕೆ ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಸಾಕಷ್ಟು ಕಬ್ಬಿಣಾಂಶವಿಲ್ಲದಿದ್ದರೆ, ಆಮ್ಲಜನಕವನ್ನು ಸಾಗಿಸಲು ದೇಹದಲ್ಲಿ ಕೆಂಪು ರಕ್ತ ಕಣಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದಿಲ್ಲ, ಇದರಿಂದ ರಕ್ತಹೀನತೆ ಉಂಟಾಗಬಹುದು. ಇದರಿಂದ ಸುಸ್ತು, ಆಯಾಸ ಉಂಟಾಗುತ್ತದೆ.

ಕಬ್ಬಿಣಾಂಶದ ಆಹಾರ ಮೂಲಗಳು

ಸರಿಯಾದ ಆಹಾರವನ್ನು ಸೇವಿಸುವುದು ಕಬ್ಬಿಣಾಂಶದ  ಕೊರತೆ ತಡೆಗಟ್ಟುವಿಕೆಯ ಪ್ರಮುಖ ಅಂಶವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಹಿಮೋಗ್ಲೋಬಿನ್ ಹೊಂದಿರುವ ಕಬ್ಬಿಣಾಂಶ ಸಮೃದ್ಧವಾಗಿರುವ ಪ್ರಾಣಿಜನ್ಯ ಆಹಾರಗಳೆಂದರೆ, ಕೆಂಪು ಮಾಂಸ, ಮೀನು ಮತ್ತು ಕೋಳಿ. ಪ್ರಾಣಿ ಮೂಲದ ಕಬ್ಬಿಣವನ್ನು ಹೀಮ್ ಎಂದು ಕರೆಯಲಾಗುತ್ತದೆ ಮತ್ತು ಸಸ್ಯಗಳಿಂದ ಬರುವ ಕಬ್ಬಿಣವನ್ನು ನಾನ್-ಹೀಮ್ ಎಂದು ಕರೆಯಲಾಗುತ್ತದೆ.

ನಾನ್-ಹೀಮ್ ಕಬ್ಬಿಣಾಂಶವಿರುವ ಮುಖ್ಯ ಆಹಾರದ ಮೂಲಗಳು ದಟ್ಟ ಹಸುರು ಸೊಪ್ಪು ತರಕಾರಿಗಳು, ಬೀನ್ಸ್, ಕಾಳುಗಳು ಟೋಫು ಮತ್ತು ಸಾರವರ್ಧಿತ ಉಪಹಾರ ಧಾನ್ಯಗಳು.

“ಹೀಮ್ ಕಬ್ಬಿಣಾಂಶವು ನಾನ್ ಹೀಮ್‌ಗಿಂತ ಹೆಚ್ಚಿನ ಜೈವಿಕ ಲಭ್ಯತೆಯನ್ನು ಹೊಂದಿದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳು ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಕೆಲವು ತರಕಾರಿಗಳಲ್ಲಿರುವ ಫೈಟೇಟ್ ಮತ್ತು ಫಾಸ್ಫೇಟ್ ಅಂಶಗಳು, ಟೀ, ಕಾಫಿಯಲ್ಲಿರುವ ಟ್ಯಾನಿನ್ ಅಂಶಗಳು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ” ಎಂದು ಡಾ ರೂಪಶ್ರೀ ಹೇಳುತ್ತಾರೆ.

ಸಸ್ಯಾಹಾರಿಗಳು, ಕಬ್ಬಿಣಾಂಶವಿರುವ ಕೋಡುಗಳು (ಬೀನ್ಸ್ ಮತ್ತು ಬಟಾಣಿ), ಟೋಫು, ಸೋಯಾಬೀನ್, ಬೀಜಗಳು (ಕುಂಬಳಕಾಯಿ, ಎಳ್ಳು, ಅಗಸೆಬೀಜಗಳು, ಗೋಡಂಬಿ ಮತ್ತು ಪೈನ್ ಬೀಜಗಳು), ತರಕಾರಿಗಳು (ಪಾಲಕ್ ಸೊಪ್ಪು ಮತ್ತು ಹರಿವೆ-ಬಸಳೆ ಸೊಪ್ಪು ಅಥವಾ ಎಲೆಕೋಸು ಮುಂತಾದವು), ಟೊಮೆಟೊ, ಆಲೂಗಡ್ಡೆ, ಅಣಬೆಗಳು, ಹಣ್ಣುಗಳು (ಪ್ರೂನ್ಸ್, ಆಲಿವ್ಗಳು, ಮಲ್ಬೆರಿಗಳು), ಧಾನ್ಯಗಳು (ಓಟ್ಸ್ ನಂತಹ) ಮತ್ತು ತೆಂಗಿನ ಹಾಲು ಇತ್ಯಾದಿಗಳನ್ನು ಸೇವಿಸಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.

ವೈದ್ಯರನ್ನು ಯಾವಾಗ ಕಾಣಬೇಕು?

ಒಬ್ಬ ವ್ಯಕ್ತಿಯು ಕಾರಣವಿಲ್ಲದೇ ಆಯಾಸ, ತಲೆತಿರುಗುವಿಕೆ, ನಿಶ್ಯಕ್ತಿ ಅಥವಾ ಇತರ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಅವರು ವೈದ್ಯರ ಸಲಹೆಯನ್ನು ಪಡೆಯಬೇಕು. “ವ್ಯಕ್ತಿಗೆ ರಕ್ತಹೀನತೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ವೈದ್ಯರು ಅದರ ಮೂಲ ಕಾರಣವನ್ನು ಹುಡುಕುತ್ತಾರೆ ಮತ್ತು ಅದು ಸಂಭವಿಸದಂತೆ ತಡೆಯುವ ಮಾರ್ಗಗಳನ್ನು ಸೂಚಿಸುತ್ತಾರೆ “ಎಂದು ಡಾ ಬೃಂದಾ ಹೇಳುತ್ತಾರೆ. “ಕಬ್ಬಿಣಾಂಶದ ಕೊರತೆಯ ರಕ್ತಹೀನತೆಗೆ ಚಿಕಿತ್ಸೆ ನೀಡಲು, ವೈದ್ಯರು ಸಾಮಾನ್ಯವಾಗಿ ಕಬ್ಬಿಣಾಂಶದ ಪೂರಕಗಳನ್ನು, ಅಂದರೆ ಖಾಲಿ ಹೊಟ್ಟೆಯಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಮತ್ತು ವಿಟಮಿನ್ ಸಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತಾರೆ.”

ಹೆಚ್ಚಿನ ಪ್ರಮಾಣದ ಕಬ್ಬಿಣಾಂಶಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ಮತ್ತು ಪೂರಕಗಳನ್ನು ಸೇವಿಸುವ ಮೂಲಕ ಕಬ್ಬಿಣಾಂಶದ ಕೊರತೆಯನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳುತ್ತಾರೆ. ” ಊಟದ ನಡುವೆ ಕಬ್ಬಿಣಾಂಶದ ಪೂರಕಗಳನ್ನು ಸೇವಿಸುವುದರಿಂದ ಅವು ಉತ್ತಮವಾಗಿ ಹೀರಿಕೊಳ್ಳಲ್ಪಡುತ್ತವೆ. ಕಬ್ಬಿಣಾಂಶ ಸಂಗ್ರಹಣೆ ಮರುಪೂರಣಗೊಳ್ಳುವವರೆಗೆ ಚಿಕಿತ್ಸೆಯನ್ನು ಮುಂದುವರೆಸಬೇಕು, ಇದು ಆರರಿಂದ ಒಂಬತ್ತು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಚಿಕಿತ್ಸೆಯನ್ನು ಅನುಸರಿಸುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಗೆ ಮೌಖಿಕವಾಗಿ ಕಬ್ಬಿಣಾಂಶವನ್ನು ಸೇವಿಸಲು ಸಾಧ್ಯವಾಗದಿದ್ದಾಗ ಅಥವಾ ಹೀರುವಿಕೆಯ ಅಸ್ವಸ್ಥತೆಯನ್ನು (ಮಾಲ್ ಅಬ್ಸಾರ್ಪ್ಶನ್) ಹೊಂದಿರುವಾಗ – ಇಂಟ್ರಾವೀನಸ್ ಐರನ್ ಇನ್ಫ್ಯೂಷನ್ ವಿಧಾನದ ಮೂಲಕ – ಅಂದರೆ ರಕ್ತನಾಳಗಳಿಗೆ ಇಂಜೆಕ್ಷನ್ ಮೂಲಕ ಕಬ್ಬಿಣಾಂಶವನ್ನು ತಲುಪಿಸುವ ವಿಧಾನದ ಮೂಲಕ ನೀಡಲಾಗುತ್ತದೆ. ತೀವ್ರವಾಗಿ ರಕ್ತಹೀನತೆ ಹೊಂದಿರುವ ಜನರಲ್ಲಿ ರಕ್ತ ವರ್ಗಾವಣೆಯ  ಅಗತ್ಯವಿರುತ್ತದೆ” ಎಂದು ಡಾ ರೂಪಶ್ರೀ ಹೇಳುತ್ತಾರೆ.

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

eighteen − ten =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ